ಕಾಂಗ್ರೆಸ್‌ನ ವಕ್ತಾರರಾಗಿದ್ದ ಕವಿತಾ ರೆಡ್ಡಿ ಅವರನ್ನು ಪಕ್ಷದಿಂದ ಅಮಾನತುಗೊಳಿಸಿ ಕಾಂಗ್ರೆಸ್ ಶಿಸ್ತುಪಾಲನಾ ಸಮಿತಿ ಆದೇಶ ಹೊರಡಿಸಿದೆ. ಕೆಪಿಸಿಸಿ ಮಹಿಳಾ ಘಟಕಕ್ಕೆ ಸೌಮ್ಯಾರೆಡ್ಡಿ ನೇಮಕ ಹಾಗೂ ಸಚಿವರ ಮಕ್ಕಳಿಗೆ ಲೋಕಸಭೆ ಟಿಕೆಟ್ ಸೇರಿದಂತೆ, ಪಕ್ಷದ ಕೆಲ ಆಂತರಿಕ ವಿಚಾರಗಳ ಬಗ್ಗೆ ಕವಿತಾ ರೆಡ್ಡಿ ಅವರು ಕೆಲ ದಿನಗಳ ಹಿಂದೆ ಬಹಿರಂಗವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದರು.
ಈ ಬಗ್ಗೆ ಕವಿತಾ ರೆಡ್ಡಿ ಅವರಿಗೆ ರಾಜ್ಯ ಕಾಂಗ್ರೆಸ್ ಶಿಸ್ತು ಪಾಲನಾ ಸಮಿತಿ ನೋಟಿಸ್ ನೀಡಿತ್ತು. “ಕವಿತಾ ರಡ್ಡಿ ಅವರನ್ನು ಅಮಾನತುಗೊಳಿಸಲಾಗಿದ್ದು, ಅವರು ಪಕ್ಷದಲ್ಲಿ ಹೊಂದಿರುವ ಎಲ್ಲಾ ಹುದ್ದೆಗಳನ್ನು ಅಮಾನತ್ತಿನಲ್ಲಿಡಲಾಗಿದೆ” ಎಂದು ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಪತ್ರದಲ್ಲಿ ಆದೇಶದಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ‘ನಾನುಗೌರಿ.ಕಾಮ್’ ಜತೆಗೆ ಮಾತನಾಡಿದ ಕವಿತಾ ರೆಡ್ಡಿ, “ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಅಧ್ಯಕ್ಷರಾದಾಗಿನಿಂದಲೂ ನನಗೆ ಪಕ್ಷದಲ್ಲಿ ನ್ಯಾಯ ಸಿಕ್ಕಿಲ್ಲ; ನನಗೆ ಬಹಳಷ್ಟು ಅನ್ಯಾಯವಾಗಿದೆ, ಅದಕ್ಕೆ ನ್ಯಾಯ ಸಿಕ್ಕಿಲ್ಲ ಎನ್ನುವುದು ಅವರಿಗೂ ಗೊತ್ತಿದೆ. ನನಗೆ ನೋಟಿಸ್ ಯಾಕೆ ಕಳಿಸಿದ್ದಾರೆ ಎಂಬುದು ಪಕ್ಷದ ಶಿಸ್ತು ಪಾಲನಾ ಸಮಿತಿಗೆ ಗೊತ್ತಿಲ್ಲ. ನಾನು ಕಳಿಸಿರುವ 32 ಪುಟಗಳ ಸ್ಪಷ್ಟನೆಗೆ ಅವರಿಂದ ಯಾವುದೇ ಉತ್ತರ ಬಂದಿಲ್ಲ” ಎಂದರು.
“ನನಗೆ ನೋಟಿಸ್ ಕೊಟ್ಟಿರುವ ಉದ್ದೇಶ ಸ್ಪಷ್ಟವಾಗಿದೆ; ಮೊದಲೆನೆಯದಾಗಿ ನಾನು ಪರಿಶಿಷ್ಟ ಪಂಗಡದ ಹೆಣ್ಣು ಮಗಳಾದ ಭವ್ಯಾ ಸಿಂಗ್ ಪರವಾಗಿ ನಿಂತಿದ್ದು. ಮತ್ತೊಂದು, ರಾಮಲಿಂಗಾ ರೆಡ್ಡಿ ಅವರನ್ನು ವಿರೋಧಿಸಿದ್ದು. ನನ್ನ ಮೇಲಿನ ಕ್ರಮಕ್ಕೆ ಇವೇ ಪ್ರಮುಖ ಕರಾಣಗಳು. ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಕಳೆದ ಎರಡು ವರ್ಷಗಳಿಂದ ಕಾಯುತ್ತಿದ್ದಾರೆ. ‘ರಾಮಲಿಂಗಾ ರೆಡ್ಡಿ ಅವರ ಮಗಳು ಸೌಮ್ಯಾ ರೆಡ್ಡಿ ಖಿನ್ನತೆಗೆ ಒಳಗಾಗಿದ್ದಾರೆ; ಅವರು ಅದರಿಂದ ಹೊರಗಡೆ ಬರಬೇಕಾದರೆ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಬೇಕು’ ಎಂದು ಹೇಳಿ, ತರಾತುರಿಯಲ್ಲಿ ನಿರ್ಧರಿಸಿದರೆ ನಾವು ಏನು ಮಾಡುವುದಕ್ಕೆ ಸಾಧ್ಯ” ಎಂದು ಪ್ರಶ್ನಿಸಿದರು.
ನಿಮ್ಮ ನೇರ ಆರೋಪ ಯಾರ ಮೇಲೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಪಕ್ಷದ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ನಿರ್ಧಾರ ತೆಗೆದುಕೊಂಡಿದ್ದಾರೆ. ನಾವು ಇನ್ಯಾರ ಮೇಲೆ ಆರೋಪ ಮಾಡುವುದು? ರಾಮಲಿಂಗಾರೆಡ್ಡಿ ತಮಗಿರುವ ಅಧಿಕಾರ ಬಳಸಿಕೊಂಡು ಅವರ ಮಗಳನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ; ನಮ್ಮ ಹಿಂದೆ ಯಾರಿದ್ದಾರೆ? ಪಕ್ಷದ ಅಧ್ಯಕ್ಷರು ನಮ್ಮ ಪರವಾಗಿ ನಿಲ್ಲಬೇಕಿತ್ತು. ನನಗೆ ಅನ್ಯಾಯ ಆಗಿದೆ ಎಂಬುದು ಅಧ್ಯಕ್ಷರಿಗೂ ಗೊತ್ತಿದೆ” ಎಂದರು.
ಈ ಬೆಳವಣಿಗೆಯನ್ನು ಕುಟುಂಬ ರಾಜಕೀಯದ ಪರಿಣಾಮ ಎಂದು ಭಾವಿಸುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕವಿತಾ, “ಖಂಡಿತಾ.. ಕುಟುಂಬ ರಾಜಕಾರಣವಲ್ಲದೆ ಮತ್ತಿನ್ನೇನು? ನಾಲ್ಕೈದು ಜನ ಮಹಿಳಾ ಕಾರ್ಯಕರ್ತರು ಆಕಾಂಕ್ಷಿಗಳಾಗಿದ್ದರು. ಕಮಲಾಕ್ಷಿ ರಾಜಣ್ಣ, ವೀಣಾ ಕಾಶಪ್ಪನವರ್ ಅಥವಾ ಬೇರೊಬ್ಬರಿಗೆ ಕೊಟ್ಟಿದ್ದರೆ ಸಾಮಾಜಿಕ ನ್ಯಾಯ ಎಂದು ನಾವು ಒಪ್ಪಿಕೊಳ್ಳುತ್ತಿದ್ದೆವು. ಆದರೆ, ಇವರು ಕೊಟ್ಟಿರುವುದು ಯಾರಿಗೆ? ಏನೂ ಕೆಲಸ ಮಾಡದೇ ಇರುವ ರಾಮಲಿಂಗಾರೆಡ್ಡಿ ಅವರ ಮಗಳನ್ನು ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ. ಪಕ್ಷದ ಯಾವಯಾವ ಹುದ್ದೆಯಲ್ಲಿ ಅವರು ಕೆಲಸ ಮಾಡಿದ್ದಾರೆ. ನನ್ನ ಜೊತೆಯಲ್ಲಿ ಸೌಮ್ಯಾ ಅವರನ್ನೂ ವಕ್ತಾರರನ್ನಾಗಿ ಮಾಡಿದ್ದರು. ಆದರೆ, ಆಕೆ ಮಾಡಿದ್ದೇನು? ಈವರೆಗೆ ಒಂದೇ ಒಂದು ಚರ್ಚೆಯಲ್ಲಿ ಪಾಲ್ಗೊಂಡಿಲ್ಲ. ಇತ್ತೀಚೆಗಷ್ಟೇ ಅವರನ್ನು ಪ್ರಧಾನ ಕಾರ್ಯದರ್ಶಿ ಮಾಡಲಾಗಿತ್ತು; ಈಗ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ, ಇದಕ್ಕೆಲ್ಲಾ ಅನುಸರಿಸಿದ ಮಾನದಂಡ ಯಾವುದು” ಎಂದು ಅವರು ಬೇಸರ ಹೊರಹಾಕಿದರು.
“ಪಕ್ಷದ ಕಾರ್ಯಕರ್ತೆಯಾಗಿ ನನಗೆ ಕೇಳುವ ಅಧಿಕಾರ ಇದೆ.. ಅದಕ್ಕಾಗಿ ಪ್ರಶ್ನೆ ಮಾಡುತ್ತೇನೆ. ಪಕ್ಷ ಎಲ್ಲರಿಗೂ ಸೇರಿದ್ದು; ಇಂತಹ ಒಂದು ಕಾರಣಕ್ಕೆ ನಾವು ಅವರನ್ನು (ಸೌಮ್ಯಾ ರೆಡ್ಡಿ) ಅಧ್ಯಕ್ಷರನ್ನಾಗಿ ಮಾಡುತ್ತಿದ್ದೇವೆ ಎಂದು ನಮಗೆ ಪಕ್ಷದ ಅಧ್ಯಕ್ಷರು ಕರೆದು ಹೇಳಬಹುದಿತ್ತು. ದುಡ್ಡಿನ ಕಾರಣಕ್ಕೆ, ರಾಜಕೀಯ ಕಾರಣಕ್ಕೆ ಅಥವಾ ಅವರ ಅಪ್ಪನನ್ನು ಓಲೈಕೆ ಮಾಡುವುದಕ್ಕೆ ಸ್ಥಾನ ಕೊಡುತ್ತಿದ್ದೇವೆ ಎಂದು ಹೇಳಿದ್ದಿದ್ದರೆ, ರಾಜಕಾರಣಿಯಾಗಿ ನಾನೂ ಅರ್ಥ ಮಾಡಿಕೊಳ್ಳುತ್ತಿದ್ದೆ” ಎಂದು ಅವರು ಆಕ್ರೋಶ ಹೊರಹಾಕಿದರು.
ನಿಮ್ಮ ಮುಂದಿನ ನಡೆ ಏನು ಎಂಬ ಪ್ರಶ್ನೆಗೆ, “ನ್ಯಾಯ ಸಿಗದೇ ಇದ್ದರೆ ಮುಂದಿನ ನಡೆ ಏನಿರುತ್ತೆ..? ನನ್ನ ಹೋರಾಟ ಮುಂದುವರಿಯುತ್ತದೆ. ಅನ್ಯಾಯ ಮತ್ತು ಮಹಿಳಾ ಶೋಷಣೆ ವಿರುದ್ಧ ಮಾತನಾಡುವುದನ್ನು ಮುಂದುವರಿಸುತ್ತೇನೆ. ಹಲವು ದಶಕಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಕೆಲಸ ಮಾಡಿರುವ ನಾನು ಸಿದ್ಧಾಂತದಲ್ಲಿ ಎಷ್ಟು ಕಮಿಟೆಡ್ ಎಂಬುದು ಹಲವರಿಗೆ ಗೊತ್ತಿದೆ. ನನ್ನಂತವರಿಗೆ ಇಷ್ಟು ಕಿರುಕುಳ ನೀಡುತ್ತಿದ್ದಾರೆ. ಇನ್ನು ಸಾಮಾನ್ಯ ಕಾರ್ಯಕರ್ತರಿಗೆ ಪಕ್ಷದಲ್ಲಿ ಜಾಗ ಎಲ್ಲಿ ಸಿಗುತ್ತದೆ” ಎಂದು ಕವಿತಾ ಭಾವುಕರಾದರು.
“ನನಗೆ ನ್ಯಾಯ ಸಿಗುವುದಿಲ್ಲ ಎಂಬುದು ಅವರ ನಡೆಯಿಂದಲೇ ಸ್ಪಷ್ಟವಾಗಿದೆ. ಶಿಸ್ತು ಕ್ರಮ ನನಗೆ ಮಾತ್ರ ಯಾಕೆ..? ಪಕ್ಷ ಮತ್ತು ಅಧ್ಯಕ್ಷರ ವಿರುದ್ಧ ಹಲವು ಸಚಿವರು, ಶಾಸಕರು ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಪಕ್ಷ ವಿರೋಧಿ ಹೇಳಿಕೆ ನೀಡಿದ್ದಾರೆ. ಅವರಿಗೆಲ್ಲಾ ನೋಟಿಸ್ ನೀಡಿ ಅಮಾನತು ಮಾಡಿಲ್ಲ ಯಾಕೆ? ನಾನು ಹೆಣ್ಣು ಮಗಳು ಎಂಬ ಕಾರಣಕ್ಕೆ ಅಮಾನತು ಮಾಡಿದ್ದಾರೆ” ಎಂದು ಅವರು ಹೇಳಿದರು.
ಇದನ್ನೂ ಓದಿ; ತಮ್ಮ ಮೇಲಿನ ಹಿಂಸಾಚಾರ, ಜಾತಿ ದೌರ್ಜನ್ಯ ಖಂಡಿಸಿ ಸಿಡಿದೆದ್ದ ಪೌರಕಾರ್ಮಿಕರು; ಪಾಲಿಕೆ ಕೇಂದ್ರ ಕಚೇರಿ ಮುಂದೆ ಪ್ರತಿಭಟನೆ


