ಉತ್ತರಾಖಂಡದ ಕೇದಾರನಾಥದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗುತ್ತಿದೆ ಎಂದು ಆರೋಪಿಸಿ, ಪ್ರದೇಶಕ್ಕೆ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸಬೇಕೆಂದು ಬಿಜೆಪಿ ನಾಯಕಿ ಆಶಾ ನೌಟಿಯಾಲ್ ಭಾನುವಾರ ಕರೆ ನೀಡಿದ್ದಾರೆ. ಅವರ ಈ ಹೇಳಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಆಕ್ರೋಶ ಭುಗಿಲೆದ್ದಿದೆ.
“ನಾನು ಸ್ಥಳೀಯರೊಂದಿಗೆ ಸಭೆ ನಡೆಸಿದೆ. ಹಿಂದೂಯೇತರರು ಅಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ ಎಂದು ಅವರು ನನಗೆ ತಿಳಿಸಿದರು” ಎಂದು ಕೇದಾರನಾಥ ಶಾಸಕಿ ಪಿಟಿಐಗೆ ತಿಳಿಸಿದ್ದಾರೆ.
“ಪ್ರಪಂಚದಾದ್ಯಂತ ಜನರು ಬಾಬಾ ಕೇದಾರನನ್ನು ಪೂಜಿಸಲು ಹೋಗುತ್ತಾರೆ, ಆದ್ದರಿಂದ ಆ ಜನರು [ಹಿಂದೂಯೇತರರು] ಅಲ್ಲಿಗೆ ಹೋಗುವುದನ್ನು ನಿಷೇಧಿಸಬೇಕು. ಸ್ಥಳೀಯ ಉದ್ಯಮಿಗಳು ಸಹ ಅಂತಹ ವಿಷಯಗಳನ್ನು ನಿರುತ್ಸಾಹಗೊಳಿಸಬೇಕು ಎಂದು ಒತ್ತಾಯಿಸಿದರು.” ಎಂದು ಅವರು ಹೇಳಿದ್ದಾರೆ. ಕೇದಾರನಾಥದಲ್ಲಿ
ಹಿಂದೂ ಧಾರ್ಮಿಕ ಸ್ಥಳದ ಬಳಿ ಮಾಂಸ ಮತ್ತು ಮದ್ಯ ಮಾರಾಟದ ಆರೋಪದ ಕುರಿತು ವರದಿಗಾರರು ಕೇಳಿದ ಪ್ರಶ್ನೆಗೆ ನೌಟಿಯಾಲ್ ಅವರ ಈ ಹೇಳಿಕೆ ನೀಡಿದ್ದಾರೆ. ಶಿವನಿಗೆ ಸಮರ್ಪಿತವಾದ ಕೇದಾರನಾಥ ದೇವಾಲಯವು ಉತ್ತರಾಖಂಡದ ನಾಲ್ಕು ಪ್ರಮುಖ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ರುದ್ರಪ್ರಯಾಗ ಜಿಲ್ಲೆಯಲ್ಲಿದೆ.
VIDEO | Demanding no entry of non-Hindus trying to hurt the sentiments of pilgrims, Kedarnath MLA Asha Nautiyal says, "I had conducted a meeting with local businessmen, they said that non-Hindus are doing activities which are hurting the sentiments of Hindu pilgrims. They are… pic.twitter.com/782fPGgTJA
— Press Trust of India (@PTI_News) March 16, 2025
ಚಾರ್ ಧಾಮ್ ಯಾತ್ರೆಯ ಭಾಗವಾಗಿರುವ ಎಲ್ಲಾ ಸ್ಥಳಗಳಿಂದ ಹಿಂದೂಯೇತರರನ್ನು ನಿಷೇಧಿಸಬೇಕು ಎಂದು ನೌಟಿಯಾಲ್ ಅವರು ಹೇಳಿದ್ದಾರೆ. “ನಾನು ಶಾಸಕಿಯಾಗಿರುವುದರಿಂದ, ಈ ವಿಚಾರವನ್ನು ಎತ್ತುವ ಜವಾಬ್ದಾರಿ ನನ್ನ ಮೇಲಿದೆ. ಯಾತ್ರಿಕರು ತಾವು ಬರುವ ನಂಬಿಕೆಯೊಂದಿಗೆ ಚಾರ್ ಧಾಮ್‌ನಿಂದ ಹಿಂತಿರುಗಬೇಕು.” ಎಂದು ನೌಟಿಯಾಲ್ ಹೇಳಿರುವುದಾಗಿ ಪಿಟಿಐ ಉಲ್ಲೇಖಿಸಿದೆ.
ಚಾರ್ ಧಾಮ್ ಯಾತ್ರೆಯು ಕೇದಾರನಾಥ, ಬದರಿನಾಥ, ಗಂಗೋತ್ರಿ ಮತ್ತು ಯಮುನೋತ್ರಿ ಎಂಬ ನಾಲ್ಕು ದೇವಾಲಯಗಳ ಹಿಂದೂ ತೀರ್ಥಯಾತ್ರೆಯಾಗಿದ್ದು, ಇವೆಲ್ಲವೂ ಉತ್ತರಾಖಂಡದಲ್ಲಿದೆ. ಏಪ್ರಿಲ್ 30 ರಂದು ಗಂಗೋತ್ರಿ ಮತ್ತು ಯಮುನೋತ್ರಿ ತೆರೆಯುವ ಸಮಯದಲ್ಲಿ ಯಾತ್ರೆ ಪ್ರಾರಂಭವಾಗುತ್ತದೆ, ನಂತರ ಮೇ 2 ರಂದು ಕೇದಾರನಾಥ ಮತ್ತು ಮೇ 4 ರಂದು ಬದರಿನಾಥ ತೆರೆಯಲಿದೆ. ಹಿಮಪಾತದಿಂದಾಗಿ ಚಳಿಗಾಲದಲ್ಲಿ ಈ ಸ್ಥಳಗಳನ್ನು ಪ್ರವೇಶಿಸುವುದು ಕಷ್ಟಕರವಾಗಿದೆ.
ನೌಟಿಯಾಲ್ ಅವರ ಹೇಳಿಕೆ ದ್ವೇಷ ಹರಡುವ ಪ್ರಯತ್ನ ಎಂದು ವಿರೋಧ ಪಕ್ಷ ಕಾಂಗ್ರೆಸ್ ಹೇಳಿದೆ ಎಂದು ಪಿಟಿಐ ವರದಿ ಮಾಡಿದೆ. ಕಾಂಗ್ರೆಸ್ ರಾಜ್ಯ ಘಟಕದ ಉಪಾಧ್ಯಕ್ಷ ಸೂರ್ಯಕಾಂತ್ ಧಸ್ಮಾನಾ ಮಾತನಾಡಿ, “ಮಹಾ ಕುಂಭ, ಹೋಳಿ, ಜುಮ್ಮೆ ಕಿ ನಮಾಜ್ ಅಥವಾ ಚಾರ್ ಧಾಮ್ ಯಾತ್ರೆ ಇರಲಿ, ಕೋಮು ಸಾಮರಸ್ಯವನ್ನು ಹಾಳು ಮಾಡಲು ಬಿಜೆಪಿ ಪದೇ ಪದೇ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡಿದೆ. ಇದು ಅವರ ರಾಷ್ಟ್ರೀಯ ಕಾರ್ಯಸೂಚಿಯಾಗಿದೆ.” ಎಂದು ಹೇಳಿದೆ.
ನಿರುದ್ಯೋಗ ಮತ್ತು ಹಣದುಬ್ಬರದಂತಹ ವಿಷಯಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಬಿಜೆಪಿ ಎಲ್ಲವನ್ನೂ ಧರ್ಮದೊಂದಿಗೆ ಜೋಡಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
“ಅಸೂಕ್ಷ್ಮ ಹೇಳಿಕೆಗಳನ್ನು ನೀಡುವುದು ಬಿಜೆಪಿ ನಾಯಕರ ಅಭ್ಯಾಸ. ಉತ್ತರಾಖಂಡ ದೇವಭೂಮಿಯಾಗಿದ್ದು, ನೀವು ಎಲ್ಲಿಯವರೆಗೆ ಎಲ್ಲವನ್ನೂ ಧರ್ಮದೊಂದಿಗೆ ಜೋಡಿಸುತ್ತೀರಿ? ಬಿಜೆಪಿಗೆ ಜನರೊಂದಿಗೆ ಹೇಳಲು ಏನೂ ಇಲ್ಲದ ಕಾರಣ ಅವರು ಇದನ್ನು ಮಾಡುತ್ತಿದ್ದಾರೆ.” ಎಂದು ಅವರು ಹೇಳಿದ್ದಾರೆ.
ಬಿಜೆಪಿ ಉತ್ತರಾಖಂಡ ಘಟಕದ ಮಾಧ್ಯಮ ಉಸ್ತುವಾರಿ ಮನ್ವೀರ್ ಸಿಂಗ್ ಚೌಹಾಣ್ ಅವರು ನೌಟಿಯಾಲ್ ಅವರ ಹೇಳಿಕೆಯನ್ನು ಬೆಂಬಲಿಸಿದ್ದು, ಇದು ಹಿಂದೂ ಧರ್ಮದ ಭಾವನೆಗಳಿಗೆ ಸಂಬಂಧಿಸಿದೆ ಎಂದು ಹೇಳಿದ್ದಾರೆ. “ಈ ನಾಲ್ಕು ತೀರ್ಥಯಾತ್ರೆಗಳು ಸನಾತನ ಧರ್ಮದಲ್ಲಿ ಮುಖ್ಯವಾಗಿವೆ. ಪ್ರತಿ ವರ್ಷ ಲಕ್ಷಾಂತರ ಜನರು ಈ ಯಾತ್ರೆಗೆ ಹೋಗುತ್ತಾರೆ” ಎಂದು ಅವರು ಹೇಳಿದ್ದಾರೆ.
ಕೇದಾರನಾಥದ ವ್ಯಾಪಾರಿಗಳು ಮುಸ್ಲಿಮರು ಈ ಪ್ರದೇಶದಲ್ಲಿ ಮಾಂಸ ಮತ್ತು ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು ಎಂದು ಚೌಹಾಣ್ ಹೇಳಿದ್ದಾರೆ. “ಈ ಪವಿತ್ರ ಧಾಮದಲ್ಲಿ ಅಂತಹ ವ್ಯವಹಾರಗಳನ್ನು ನಡೆಸುವುದು ತಪ್ಪು. ಇತರ ವ್ಯವಹಾರಗಳ ಸೋಗಿನಲ್ಲಿ ಮದ್ಯದ ಅಂಗಡಿಗಳು ಸಹ ಇವೆ.” ಎಂದು ಅವರು ಆರೋಪಿಸಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಉನ್ನಾವೊ: ಹೋಳಿಯ ಬಣ್ಣ ಬಳಿಯುವುದನ್ನು ವಿರೋಧಿಸಿದಕ್ಕಾಗಿ ಮುಸ್ಲಿಂ ವ್ಯಕ್ತಿಯ ಹತ್ಯೆ
ಉನ್ನಾವೊ: ಹೋಳಿಯ ಬಣ್ಣ ಬಳಿಯುವುದನ್ನು ವಿರೋಧಿಸಿದಕ್ಕಾಗಿ ಮುಸ್ಲಿಂ ವ್ಯಕ್ತಿಯ ಹತ್ಯೆ

