ಕೇಂದ್ರ ಸಾಹಿತ್ಯ ಅಕಾಡೆಮಿಯ 2024ನೇ ಸಾಲಿನ ‘ಬಾಲ ಸಾಹಿತ್ಯ ಪುರಸ್ಕಾರ’ ಮತ್ತು ‘ಯುವ ಪುರಸ್ಕಾರ ಪ್ರಶಸ್ತಿ’ ಪ್ರಕಟಗೊಂಡಿದೆ.
ಬಾಲ ಸಾಹಿತ್ಯ ಪುರಸ್ಕಾರಕ್ಕೆ ಕೃಷ್ಣಮೂರ್ತಿ ಬಿಳಿಗೆರೆ ಅವರು ಆಯ್ಕೆಯಾಗಿದ್ದಾರೆ. ಕೃಷ್ಣಮೂರ್ತಿಯವರ ‘ಛೂಮಂತ್ರಯ್ಯನ ಕಥೆಗಳು’ ಕಥಾ ಸಂಗ್ರಹಕ್ಕೆ ಪ್ರಶಸ್ತಿ ದೊರೆತಿದೆ.
ಕೃಷ್ಣಮೂರ್ತಿಯವರು ಕಣ್ಮುಚ್ಚಾಲೆ ಮಕ್ಕಳ ಗುಂಪು, ನಮ್ಮ ಪ್ರಕಾಶನ ಮತ್ತು ಸಿರಿಸಮೃದ್ಧಿ ಬಳಗ ಮುಂತಾದ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದಾರೆ. ಹುಳಿಯಾರಿನ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಕೆಲಸ ಮಾಡುತ್ತಿದ್ದಾರೆ. ಸಾವಯವ ಕೃಷಿ ಮತ್ತು ಮಳೆ ನೀರಿನ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದಾರೆ.
#SahityaAkademi announces its Bal Sahitya Puraskar 2024 in 24 languages.@ksraosahitya @PIB_India @PIBCulture @MIB_India pic.twitter.com/3Hrwt2Y05I
— Sahitya Akademi (@sahityaakademi) June 15, 2024
ಮಕ್ಕಳಿಗಾಗಿ ಜೀರಿಂಬೆ ಹಾಡು, ಗುಡು ಗುಡು ಗುಡ್ಡ, ಪದ್ಯದ ಮರ, ಡ್ರೂ ಡ್ರೂ ಡ್ರೂಟೆ, ಹಾಡೆ ಸುವ್ವಿ ಹಾಡಿನ ಪುಸ್ತಕಗಳನ್ನು ಬರೆದಿದ್ದಾರೆ. ಹಾಗೆಯೇ ಮಳೆ ಹುಚ್ಚ, ಅಗಲ ಕಿವಿಯ ಅರಿವುಗಾರ, ನವಿಲೂರಿನ ಕತೆ, ಅಂಗಭಂಗದ ರಾಜ್ಯದಲ್ಲಿ, ಕೇಡಾಳ ಕೆಪ್ಪರ್ಕ, ಕತ್ತೆ ಹಾಡು ಎಂಬ ಮಕ್ಕಳ ನಾಟಕಗಳನ್ನು ರಚಿಸಿದ್ದಾರೆ. ಚಗಚೆ ಹೂವಿನ ಹುಡುಗಿ, ಛೂಮಂತ್ರಯ್ಯನ ಕತೆಗಳು ಇವರ ಮಕ್ಕಳ ಕಥಾ ಪುಸ್ತಕಗಳಾಗಿದೆ.
ಸಾವಿರ ಕಣ್ಣಿನ ನವಿಲು, ಕಿಂಚಿತ್ತು ಪ್ರೀತಿಯ ಬದುಕು, ದಾಸಯ್ಯ ಇದು ಕನಸೇನಯ್ಯ, ಧರೆ ಮೇಲೆ ಉರಿಪಾದ ಇವರ ಕಾವ್ಯ ಕೃತಿಗಳಾಗಿದ್ದು, ಮಳೆ ನೀರ ಕೊಯ್ಲು ಕುರಿತ ಪುಸ್ತಕಗಳು ಮಳೆ ನೀರ ಕುಡಿ, ಅನ್ನ ದೇವರ ಮುಂದೆ, ಮರದಡಿಯ ಮನುಷ್ಯ, ಬಿಸ್ಲುಬಾಳೆ ಹಣ್ಣು ಮತ್ತು ಇತರ ಪ್ರಬಂಧಗಳು ರಚಿಸಿದ್ದಾರೆ.
ಎರಡು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ, ಜಿಎಸ್ಎಸ್ ಕಾವ್ಯ ಪ್ರಶಸ್ತಿ, ಶಿಕ್ಷಣ ಸಿರಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕ ಸೊಗಸು ಪ್ರಶಸ್ತಿಗಳಿಗೆ ಕೃಷ್ಣಮೂರ್ತಿ ಬಿಳಿಗೆರೆ ಭಾಜನರಾಗಿದ್ದಾರೆ.
ಯುವ ಪುರಸ್ಕಾರಕ್ಕೆ ಶ್ರುತಿ ಬಿಆರ್ ಆಯ್ಕೆ
ಯುವ ಪುರಸ್ಕಾರಕ್ಕೆ ಕವಯತ್ರಿ ಶ್ರುತಿ ಬಿಆರ್ ಆಯ್ಕೆಯಾಗಿದ್ದಾರೆ. ಶ್ರುತಿ ಅವರ ಚೊಚ್ಚಲ ಕವನ ಸಂಕಲನ ‘ಜಿರೋ ಬ್ಯಾಲೆನ್ಸ್’ಗೆ ಪ್ರಶಸ್ತಿ ಲಭಿಸಿದೆ.
ಮೂಲತಃ ಚಿಕ್ಕಮಗಳೂರು ಜಿಲ್ಲೆ ತರೀಕೆರೆಯವರಾದ ಶ್ರುತಿ ಬಿಆರ್, ಪ್ರಸ್ತುತ ಬೆಂಗಳೂರಿನಲ್ಲಿ ಕೆಎಎಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
#SahityaAkademi announces its Yuva Puraskar 2024 in 23 languages.@ksraosahitya @PIB_India @PIBCulture @MIB_India pic.twitter.com/FdMUAarYRH
— Sahitya Akademi (@sahityaakademi) June 15, 2024
ಶ್ರುತಿ ಅವರು ಮಾನಸ ಗಂಗೋತ್ರಿಯ ಮೈಸೂರು ವಿಶ್ವ ವಿದ್ಯಾನಿಲಯದಿಂದ ಪ್ರಥಮ ರ್‍ಯಾಂಕ್ ಮತ್ತು ಐದು ಚಿನ್ನದ ಪದಕಗಳೊಂದಿಗೆ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, 2017ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪಿಹೆಚ್‌ಡಿ ಪದವಿ ಪಡೆದಿದ್ದಾರೆ.
ಇವರ ಹಲವಾರು ಲೇಖನಗಳು, ಕವಿತೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 2008ರಲ್ಲಿ ಪ್ರಜಾವಣಿ ದೀಪಾವಳಿ ವಿಶೇಷಾಂಕದ ಕವನ ಸ್ಪರ್ಧೆಯ ವಿದ್ಯಾರ್ಥಿ ವಿಭಾಗದ ಬಹುಮಾನ ದೊರೆತಿದೆ.
ಬಾಲ ಸಾಹಿತ್ಯ ಪುರಸ್ಕಾರಕ್ಕೆ ಒಟ್ಟು ಏಳು ಕಾದಂಬರಿಗಳು, ಆರು ಕವನ ಸಂಕಲನಗಳು ನಾಲ್ಕು ಕಥಾ ಸಂಕಲನಗಳು, ಐದು ಸಣ್ಣ ಕಥಾ ಸಂಕಲನಗಳು, ಒಂದು ನಾಟಕ ಮತ್ತು ಒಂದು ಹಿಸ್ಟಾರಿಕಲ್ ಫಿಕ್ಷನ್ ಆಯ್ಕೆಯಾಗಿವೆ.
ಯುವ ಪುರಸ್ಕಾರ ಒಟ್ಟು 10 ಕವನ ಸಂಕಲನಗಳು, ಏಳು ಕಥಾ ಸಂಕಲನಗಳು, ಎರಡು ಪ್ರಬಂಧ ಸಂಕಲನಗಳು, ಒಂದು ಕಾದಂಬರಿ, ಒಂದು ಗಝಲ್ ಪುಸ್ತಕ್ಕೆ ದೊರೆತಿದೆ.
ಇದನ್ನೂ ಓದಿ : ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಕುಮಾರಸ್ವಾಮಿ, ಬೊಮ್ಮಾಯಿ


