ಪ್ರಾಧ್ಯಾಪಕರ ಜಾತಿ ತಾರತಮ್ಯದಿಂದಾಗಿ 10 ವರ್ಷವಾದರೂ ತನ್ನ ಪಿಎಚ್‌ಡಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದು ಆರೋಪಿಸಿ ಕೇರಳದ ದೀಪಾ ಕೆ ಮೋಹನನ್ ಎಂಬ ದಲಿತ ಸಂಶೋಧನಾ ವಿದ್ಯಾರ್ಥಿನಿ ಅಕ್ಟೋಬರ್ 29 ರಿಂದ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ಸೋಮವಾರ ಸಂಜೆ ಕೊನೆಗೊಳಿಸಿದ್ದಾರೆ. ವಿದ್ಯಾರ್ಥಿನಿಯ ಹಕ್ಕೊತ್ತಾಯದಂತೆ ಜಾತಿ ತಾರತಮ್ಯವೆಸಗಿದ ಪ್ರಾಧ್ಯಾಪಕರನ್ನು ವಜಾಗೊಳಿಸುವುದಾಗಿ ವಿಶ್ವವಿದ್ಯಾಲಯ ತಿಳಿಸಿದ ನಂತರ ದೀಪಾ ತನ್ನ ಹೋರಾಟ ಅಂತ್ಯಗೊಳಿಸಿದ್ದು ಇದು ಸಾಂವಿಧಾನಿಕ ಮೌಲ್ಯಗಳಿಗೆ ಸಂದ ಜಯ ಎಂದಿದ್ದಾರೆ.
ಕೇರಳದ ಕೊಟ್ಟಾಯಂನಲ್ಲಿರುವ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ಸಬು ಥಾಮಸ್‌ರವರು ಜಾತಿ ತಾರತಮ್ಯವೆಸಗಿದ ಡಾ. ನಂದಕುಮಾರ್ ಕಲರಿಕ್ಕಲ್ ರನ್ನು ವಿವಿಯಿಂದ ಕೈಬಿಡುವುದಾಗಿ ಘೋಷಿಸಿದ್ದಾರೆ. ಡಾ. ನಂದಕುಮಾರ್ ಕಲರಿಕ್ಕಲ್ ಅವರನ್ನು IIUCNN ನಿಂದ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ ಎಂಬ ಪತ್ರಕ್ಕೆ ಸಹಿ ಕೂಡ ಮಾಡಿದ್ದಾರೆ.
A decade long struggles finally come to an end! Deepa P Mohanan's victory is creating history and extends to many future generations of dalit women in kerala. Jai Bhim, Jai Bhim Army
We call for celebrate the victory #BhimArmyKerala #StandWithDeepaPMohanan pic.twitter.com/TJDVoSaeXp
— BHIM ARMY KERALA (@BhimArmyKerala) November 8, 2021
ದೀಪಾರವರ ಪಿಎಚ್‌ಡಿ ಪೂರ್ಣಗೊಳಿಸಲು ಅಗತ್ಯವಿರುವ ಕ್ರಮಗಳನ್ನು ವಿವಿ ತೆಗೆದುಕೊಳ್ಳುತ್ತದೆ. ಸದ್ಯಕ್ಕೆ ಸ್ಥಗಿತಗೊಂಡಿರುವ ಅವರ ಫೆಲೋಶಿಪ್ ಅನ್ನು ಕೂಡಲೇ ಬಿಡುಗಡೆ ಮಾಡುತ್ತದೆ ಎಂದು ಉಪ ಕುಲಪತಿಗಳು ತಿಳಿಸಿದ್ದಾರೆ.
ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ಬಳಿಕ ವಿವಿ ಮುಂದೆ ಜೈಭೀಮ್ ಘೋಷಣೆಗಳು ಮೊಳಗಿವೆ. ಯಾವುದೇ ರೀತಿಯ ಜಾತಿ ತಾರತಮ್ಯವನ್ನು ಸಹಿಸಿಕೊಳ್ಳುವುದಿಲ್ಲ ಎಂದು ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ವಿವಿಯಲ್ಲಿ ನಡೆದ ಸಭೆಯಲ್ಲಿ ದೀಪಾ ಕೆ ಮೋಹನನ್ ರವರ ಮೂರು ಹಕ್ಕೊತ್ತಾಯಗಳು ಈಡೇರಿದ ಕಾರಣದಿಂದ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸುತ್ತಿದ್ದಾರೆ ಎಂದು ಭೀಮ್ ಆರ್ಮಿ ಕೇರಳ ಘಟಕ ತಿಳಿಸಿದೆ. ಆರಂಭದಿಂದಲೂ ವಿದ್ಯಾರ್ಥಿನಿಯ ಹೋರಾಟಕ್ಕೆ ಭೀಮ್ ಆರ್ಮಿ ಸಂಪೂರ್ಣ ಬೆಂಬಲ ಘೋಷಿಸಿತ್ತು.
ಹೋರಾಟದ ಹಿನ್ನೆಲೆ
ಇಂಟರ್ನ್ಯಾಷನಲ್ ಮತ್ತು ಇಂಟರ್ ಯೂನಿವರ್ಸಿಟಿ ಸೆಂಟರ್ ಫಾರ್ ನ್ಯಾನೊಸೈನ್ಸ್ ಮತ್ತು ನ್ಯಾನೊಟೆಕ್ನಾಲಜಿ (IIUCNN) ವಿಭಾಗದ ನಿರ್ದೇಶಕರಾದ ನಂದಕುಮಾರ್ ಕಲರಿಕಲ್ ಜಾತಿ ತಾರತಮ್ಯವೆಸಗಿ ತನ್ನ ಪಿಎಚ್‌ಡಿ ಪದವಿಗೆ ಅಡ್ಡಿಯಾಗಿದ್ದಾರೆ ಎಂದು ಆರೋಪಿಸಿ ದೀಪಾ ಕೆ ಮೋಹನನ್‌ರವರು ಅಕ್ಟೋಬರ್ 29 ರಿಂದ ವಿವಿ ಎದುರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.
Bhim Army kerala is taking over the struggle of Deepa P Mohanan, who has not been able to complete her research since last 10 years at Kottayam MG University due to caste discrimination. Bhim army will never let the manuvadi culprits to teach over any students.@BhimArmyChief pic.twitter.com/sFs3uN5UJe
— BHIM ARMY KERALA (@BhimArmyKerala) October 28, 2021
ಮೆಡಿಕಲ್ ಮೈಕ್ರೋಬಯಾಲಜಿಯಲ್ಲಿ ಸ್ನಾತಕೋತ್ತರ ಪದವಿ ಮುಗಿಸಿರುವ ದೀಪಾ, ನಂತರ 2011 ರಲ್ಲಿ MG ಯುನಿವರ್ಸಿಟಿ (MGU) ಗೆ ಸೇರಿದರು. ಬಳಿಕ, ತಾವು ಯೂನಿವರ್ಸಿಟಿಗೆ ಸೇರಿದ ಮೊದಲ ವರ್ಷದಿಂದಲೂ ನಂದಕುಮಾರ್ ಕಲರಿಕಲ್ ಅವರು ದಲಿತೆ ಎಂಬ ಕಾರಣಕ್ಕೆ ತನ್ನ ಶಿಕ್ಷಣಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಹೇಳುತ್ತಾರೆ.
ದೀಪಾ ಅವರು ಇನ್ಸ್ಟಿಟ್ಯೂಟ್‌ನಲ್ಲಿ ಸಂಶೋಧನೆ ಪ್ರಾರಂಭಿಸಿದಾಗ ಜಂಟಿ ನಿರ್ದೇಶಕರಾಗಿದ್ದ ಮತ್ತು ಈಗ IIUCNN ನಲ್ಲಿ ನಿರ್ದೇಶಕರಾಗಿರುವ ನಂದಕುಮಾರ್ ಆಕೆ ಲ್ಯಾಬ್‌ಗೆ ಪ್ರವೇಶಿಸುವುದನ್ನು, ಲ್ಯಾಬ್‌ನಲ್ಲಿ ಕೆಮಿಕಲ್‌ಗಳು ಮತ್ತು ಪಾಲಿಮರ್‌ಗಳನ್ನು ಬಳಸುವುದನ್ನು ನಿರಾಕರಿಸಿದ್ದರು. ಕೂರಲು ಕುರ್ಚಿ ಸಹ ನೀಡುತ್ತಿರಲಿಲ್ಲ ಮಾತ್ರವಲ್ಲದೆ ಅವರಿಗೆ ಬರುವ ಸ್ಟೈಫಂಡ್ ಅನ್ನು ಕೂಡ ತಡೆಹಿಡಿಯಲು ಮುಂದಾಗಿದ್ದರು ಎನ್ನಲಾಗಿದೆ.
ಒಮ್ಮೆ ತಾನು ಲ್ಯಾಬ್‌ನಲ್ಲಿ ಏಕಾಂಗಿಯಾಗಿದ್ದಾಗ, ತನ್ನನ್ನು ಕೂಡಿ ಹಾಕಿದ್ದರು. ತನ್ನ ಬ್ಯಾಚ್‌ನಲ್ಲಿರುವ ಏಕೈಕ ದಲಿತ ಸ್ಕಾಲರ್ ಆಗಿರುವ ತನ್ನೊಂದಿಗೆ ಅಸಭ್ಯವಾಗಿ ಮತ್ತು ನಿಂದನೀಯವಾಗಿ ವರ್ತಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಪಿಎಚ್‌ಡಿ ಪಡೆಯದಂತೆ ತಡೆಯಲು ಎಲ್ಲಾ ರೀತಿಯಲ್ಲೂ ಯತ್ನಿಸುತ್ತಿದ್ದಾರೆ ಎಂದು ದೀಪಾ ಆರೋಪಿಸಿದ್ದರು.
ತನ್ನ ಸಂಶೋಧನಾ ಮಾರ್ಗದರ್ಶಿಯನ್ನು ಬದಲಾಯಿಸಬೇಕು, ಎಲ್ಲಾ ಇತರ ಪಿಎಚ್‌ಡಿ ವಿದ್ಯಾರ್ಥಿಗಳಂತೆ ತನಗೆ ಸಂಶೋಧನೆಯನ್ನು ಪೂರ್ಣಗೊಳಿಸಲು ಸಾಮಗ್ರಿಗಳನ್ನು ಒದಗಿಸಬೇಕು ಮತ್ತು ನನ್ನ ವಿದ್ಯಾಭ್ಯಾಸಕ್ಕೆ ಅಡ್ಡಿಯಾದ ನಂದಕುಮಾರ್ ಕಲರಿಕಲ್ ಅವರನ್ನು ಸಂಸ್ಥೆಯಿಂದ ತೆಗೆದುಹಾಕಬೇಕು ಎಂಬ ಮೂರು ಹಕ್ಕೊತ್ತಾಯಗಳು ದೀಪಾರವರದ್ದಾಗಿದ್ದವು.
ನವೆಂಬರ್ 1 ರಂದು ವಿಶ್ವವಿದ್ಯಾನಿಲಯವು ದೀಪಾರೊಂದಿಗೆ ಸಭೆ ನಡೆಸಿ ಅವರ ಮೊದಲ ಎರಡು ಬೇಡಿಕೆಗಳನ್ನು ಪೂರೈಸಲು ಒಪ್ಪಿಕೊಂಡದೆ. ಆದರೆ ತಾಂತ್ರಿಕ ಕಾರಣಗಳಿಂದ ನಂದಕುಮಾರ್ ಅವರನ್ನು IIUCNN ನಿಂದ ತೆಗೆದುಹಾಕಲು ನಿರಾಕರಿಸಿತ್ತು. ಪ್ರತಿಭಟನೆ ತೀವ್ರಗೊಂಡ ನಂತರ ಸೋಮವಾರ ಅವರ ಮೂರನೇ ಹಕ್ಕೊತ್ತಾಯವನ್ನು ವಿವಿ ಒಪ್ಪಿಕೊಂಡಿದೆ.
ದೀಪಾ ಅವರು 2015ರಲ್ಲಿ ನಂದಕುಮಾರ್ ವಿರುದ್ಧ ಜಾತಿ ತಾರತಮ್ಯದ ದೂರು ಸಲ್ಲಿಸಿದ್ದರು. ಆಗ ವಿಶ್ವವಿದ್ಯಾನಿಲಯವು ಆರೋಪಗಳನ್ನು ಪರಿಶೀಲಿಸಲು ಎನ್ ಜಯಕುಮಾರ್ ಮತ್ತು ಕೆಎಸ್ ಇಂದು ಅವರ ದ್ವಿಸದಸ್ಯ ಸಮಿತಿಯನ್ನು ರಚಿಸಿತ್ತು. ಸಮಿತಿಯು ದೀಪಾ ಅವರ ಆರೋಪ ನಿಜವೆಂದು ವರದಿ ನೀಡಿತು. ಅಲ್ಲದೆ, ದೀಪಾ ಅವರ ಸಂಶೋಧನೆಯನ್ನು ಪೂರ್ಣಗೊಳಿಸಲು ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ವಿಶ್ವವಿದ್ಯಾಲಯವು ಒದಗಿಸಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು.
ಅದರ ನಂತರವೂ ಏನೂ ಬದಲಾಗಿಲ್ಲ. ದೀಪಾ ದೂರು ನೀಡಲು ರಾಜ್ಯಪಾಲರನ್ನು ಭೇಟಿ ಮಾಡಲು ಯತ್ನಿಸಿದಾಗ ಅವರನ್ನು ಪೊಲೀಸರು ಬಂಧಿಸಿ ಎರಡು ದಿನಗಳ ಕಾಲ ಠಾಣೆಯಲ್ಲಿ ಇರಿಸಿದ್ದರು. ನಂದಕುಮಾರ್ ಕೇರಳದ ಸಿಪಿಐ(ಎಂ)ನ ಉನ್ನತ ನಾಯಕರ ನಿಕಟವರ್ತಿಯಾಗಿರುವುದು ಇದಕ್ಕೆ ಕಾರಣ ಎಂದು ದೀಪಾ ಈ ಹಿಂದೆ ಆರೋಪಿಸಿದ್ದರು. ಇದಕ್ಕಾಗಿಯೇ, ಸಿಪಿಐ(ಎಂ)ನ ವಿದ್ಯಾರ್ಥಿ ಘಟಕವಾಗಿರುವ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ದಂತಹ ವಿದ್ಯಾರ್ಥಿ ಒಕ್ಕೂಟಗಳು ಸಹ ತನ್ನನ್ನು ಬೆಂಬಲಿಸಿಲ್ಲ ಎಂದು ದೀಪಾ ಹೇಳಿದ್ದಾರೆ.
ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ 2016ರಲ್ಲಿ ನಂದಕುಮಾರ್ ವಿರುದ್ಧ ದೀಪಾ ಪೊಲೀಸ್ ದೂರು ದಾಖಲಿಸಿದ್ದರು. ತದನಂತರ, ಆತ ನನ್ನ ವಿರುದ್ಧ ಹೆಚ್ಚು ಸೇಡು ತೀರಿಸಿಕೊಂಡರು. ಅವರು ನನ್ನನ್ನು IIUCNN ನಿಂದ ವಜಾಗೊಳಿಸುವಂತೆ ಹಲವು ಬಾರಿ ವಿಶ್ವವಿದ್ಯಾಲಯಕ್ಕೆ ಪತ್ರಗಳನ್ನು ಬರೆದಿದ್ದಾರೆ. ಅಧ್ಯಯನ ಕೇಂದ್ರದಲ್ಲಿ ಎಲ್ಲವನ್ನೂ ನಿರ್ಧರಿಸುವವರು ಅವರೇ. ವಿಸಿ ಅವರನ್ನು ರಕ್ಷಿಸುತ್ತಿರುವುದರಿಂದ ನಾನು ಉಪವಾಸ ಸತ್ಯಾಗ್ರಹವನ್ನು ಮುಂದುವರಿಸುತ್ತಿದ್ದೇನೆ” ಎಂದು ದೀಪಾ ಹೇಳಿದ್ದಾರೆ.
ಭೀಮ್ ಆರ್ಮಿ ಕೇರಳ, ಬಿರ್ಸಾ ಅಂಬೇಡ್ಕರ್ ಫುಲೆ ಸ್ಟೂಡೆಂಟ್ಸ್ ಅಸೋಸಿಯೇಷನ್ ಮತ್ತು ಅಂಬೇಡ್ಕರ್ ಸ್ಟೂಡೆಂಟ್ ಅಸೋಸಿಯೇಷನ್ ಸೇರಿದಂತೆ ಹಲವು ಸಂಘಟನೆಗಳು ದೀಪಾ ಅವರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದ್ದವು.
ಇದನ್ನೂ ಓದಿ: ಜಾತಿ ತಾರತಮ್ಯ ಆರೋಪ: ದಲಿತ ವಿದ್ಯಾರ್ಥಿನಿಗೆ 10 ವರ್ಷ ಕಳೆದರೂ ಸಿಗದ ಪಿಎಚ್‌ಡಿ ಪದವಿ – ಉಪವಾಸ ಸತ್ಯಾಗ್ರಹ


