ಮಗುವಿನ ಜನನ ಪ್ರಮಾಣಪತ್ರದಲ್ಲಿ ತಮ್ಮ ಹೆಸರನ್ನು ತಂದೆ-ತಾಯಿ ಬದಲಿಗೆ ‘ಪೋಷಕರು’ ಎಂದು ನಮೋದಿಸಲು ಟ್ರಾನ್ಸ್‌ಜೆಂಡರ್ ಜೋಡಿಗೆ ಕೇರಳ ಹೈಕೋರ್ಟ್ ಸೋಮವಾರ (ಜೂನ್ 2) ಅವಕಾಶ ನೀಡಿದೆ.
ಕೇರಳದಲ್ಲಿ ಮೊದಲ ಬಹಿರಂಗವಾಗಿ ಟ್ರಾನ್ಸ್‌ಜೆಂಡರ್ ದಂಪತಿಗಳಾದ ಟ್ರಾನ್ಸ್‌ಮ್ಯಾನ್ ಝಹಾದ್ (ಹುಟ್ಟಿನಲ್ಲೇ ಹೆಣ್ಣು ಎಂದು ಗೊತ್ತುಪಡಿಸಲಾಗಿದೆ ಆದರೆ ಪುರುಷ ಎಂದು ಗುರುತಿಸಲಾಗಿದೆ) ಮತ್ತು ಟ್ರಾನ್ಸ್‌ವುಮನ್ ಝಿಯಾ ಪಾವಲ್ (ಹುಟ್ಟಿನಲ್ಲೇ ಗಂಡು ಎಂದು ಗೊತ್ತುಪಡಿಸಲಾಗಿದೆ ಆದರೆ ಮಹಿಳೆ ಎಂದು ಗುರುತಿಸಲಾಗಿದೆ) ಅವರ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಝಿಯಾದ್ ರೆಹಮಾನ್ ಎಎ ಆದೇಶ ನೀಡಿದ್ದಾರೆ.
ಫೆಬ್ರವರಿ 2023ರಲ್ಲಿ ಝಹಾದ್ ತಮ್ಮ ಮಗುವಿಗೆ ಜನ್ಮ ನೀಡಿದಾಗ, ಈ ಟ್ರಾನ್ಸ್‌ಜೆಂಡರ್ ಜೋಡಿ ಮಾಧ್ಯಮಗಳ ಗಮನ ಸೆಳೆದಿದ್ದರು.
ಕೋಝಿಕ್ಕೋಡ್ ಪಾಲಿಕೆ ನೋಂದಾಯಿಸಿದ ಮಗುವಿನ ಜನನ ಪ್ರಮಾಣಪತ್ರದಲ್ಲಿ ತಾಯಿಯ ಹೆಸರನ್ನು ಝಹಾದ್ (ಟ್ರಾನ್ಸ್‌ಜೆಂಡರ್) ಮತ್ತು ತಂದೆಯ ಹೆಸರನ್ನು ಝಿಯಾ (ಟ್ರಾನ್ಸ್‌ಜೆಂಡರ್) ಎಂದು ದಾಖಲಿಸಲಾಗಿದೆ.
ಝಹಾದ್ ಮತ್ತು ಝಿಯಾ ತಮ್ಮ ಮಗುವಿನ ಜನನ ಪ್ರಮಾಣಪತ್ರದಲ್ಲಿನ ವಿವರಗಳನ್ನು ಬದಲಾಯಿಸಲು ಮತ್ತು ಅವರಿಬ್ಬರನ್ನೂ ತಾಯಿ ಮತ್ತು ತಂದೆಯ ಬದಲು ಕೇವಲ ‘ಪೋಷಕರು’ ಎಂದು ನಮೋದಿಸಲು ಪಾಲಿಕೆಗೆ ಮನವಿ ಮಾಡಿದ್ದರು.
ಪಾಲಿಕೆ ಅಧಿಕಾರಿಗಳು ಅವರ ಮನವಿಯನ್ನು ತಿರಸ್ಕರಿಸಿದ್ದರು. ಹಾಗಾಗಿ, ಜೋಡಿ ಹೈಕೋರ್ಟ್ ಮೊರೆ ಹೋಗಿದ್ದರು.
ತಮ್ಮ ಮನವಿಯನ್ನು ತಿರಸ್ಕರಿಸಿರುವುದು ನಮ್ಮ ಮಗುವಿನ ಮೂಲಭೂತ ಹಕ್ಕಿನ ನಿರಾಕರಣೆಯಾಗಿದೆ ಎಂದು ಜೋಡಿ ತಮ್ಮ ಅರ್ಜಿಯಲ್ಲಿ ಹೇಳಿದ್ದರು. ಅಲ್ಲದೆ, ಹೊಸ ಪ್ರಮಾಣಪತ್ರದ ನಿರಾಕರಣೆಯು ಮಹತ್ವದ NALSA ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿಗೆ ವಿರುದ್ಧವಾಗಿದೆ ಎಂದಿದ್ದರು.
ಇತರ ಹಲವು ದೇಶಗಳು ದಂಪತಿಗಳಿಗೆ ವಿಶೇಷವಾಗಿ ಸಲಿಂಗ ದಂಪತಿಗಳಿಗೆ ತಮ್ಮ ಮಗುವಿನ ಜನನ ಪ್ರಮಾಣಪತ್ರದಲ್ಲಿ ‘ತಾಯಿ, ತಂದೆ ಮತ್ತು ಪೋಷಕರ’ ನಡುವೆ ತಮ್ಮ ಶೀರ್ಷಿಕೆಯನ್ನು ಆಯ್ಕೆ ಮಾಡಲು ಅವಕಾಶ ನೀಡುತ್ತವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ಅರ್ಜಿದಾರರ ಪರ ವಕೀಲರಾದ ಪದ್ಮಾ ಲಕ್ಷ್ಮಿ, ಮರಿಯಮ್ಮ ಎಕೆ, ಇಪ್ಸಿತಾ ಓಜಾಲ್, ಪ್ರಶಾಂತ್ ಪದ್ಮನಾಭನ್, ಮೀನಾಕ್ಷಿ ಕೆಬಿ ಮತ್ತು ಪೂಜಾ ಉನ್ನಿಕೃಷ್ಣನ್ ಅವರು ವಾದ ಮಂಡಿಸಿದ್ದರು.
ಅಣ್ಣಾ ವಿಶ್ವವಿದ್ಯಾಲಯ ಲೈಂಗಿಕ ದೌರ್ಜನ್ಯ ಪ್ರಕರಣ: ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ


