ಕೇರಳದ ಆಲಪ್ಪುಳದ ಸಿಪಿಐ(ಎಂ) ನಾಯಕರೊಬ್ಬರು ಪಕ್ಷ ತೊರೆದು ಬಿಜೆಪಿಗೆ ಸೇರಿದ ಕೆಲವೇ ದಿನಗಳಲ್ಲಿ, ಪಕ್ಷದ ಮತ್ತೊಬ್ಬ ಹಿರಿಯ ನಾಯಕ ಮಂಗಳವಾರ ಪಕ್ಷ ತೊರೆಯಲಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಪಕ್ಷದ ನಾಯಕ ಮಧು ಮುಲ್ಲಶ್ಶೇರಿ ಅವರು ತಾನು ಪಕ್ಷದಿಂದ ನಿರ್ಗಮಿಸುವುದಾಗಿ ಬೆಳಿಗ್ಗೆ ಘೋಷಿಸುತ್ತಿದ್ದಂತೆ, ಸಿಪಿಐ(ಎಂ) ಅವರನ್ನು ತನ್ನ ಪ್ರಾಥಮಿಕ ಸದಸ್ಯತ್ವದಿಂದ ಕಿತ್ತುಹಾಕಿದೆ. ಕೇರಳ
ಪಕ್ಷದ ತತ್ವಗಳಿಗೆ ವ್ಯತಿರಿಕ್ತವಾಗಿ ವರ್ತಿಸಿ ಸಾರ್ವಜನಿಕ ವಲಯದಲ್ಲಿ ಮಾನಹಾನಿ ಮಾಡಿದ ಕಾರಣ ಅವರನ್ನು ತೆಗೆದುಹಾಕಲಾಗುತ್ತಿದೆ ಎಂದು ಸಿಪಿಐ(ಎಂ) ಹೇಳಿದೆ. ಸಿಪಿಐ(ಎಂ)ನ ಮಾಜಿ ಪ್ರದೇಶ ಕಾರ್ಯದರ್ಶಿಯಾಗಿರುವ ಮತ್ತು 42 ವರ್ಷಗಳಿಂದ ಪಕ್ಷದ ಸದಸ್ಯರಾಗಿರುವ ಮಧು ಅವರು, ತನ್ನ ನಿರ್ಗಮನಕ್ಕೆ ಸ್ಥಳೀಯ ಶಾಸಕ ಮತ್ತು ಜಿಲ್ಲಾ ಸಮಿತಿ ಕಾರ್ಯದರ್ಶಿ ಆಗಿರುವ ವಿ. ಜಾಯ್ ಅವರು ಕಾರಣ ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಜಿಲ್ಲಾ ಕಾರ್ಯದರ್ಶಿ ವಿ.ಜಾಯ್ ಅವರೊಂದಿಗೆ ಕೆಲಸ ಮಾಡುವುದು ಕಷ್ಟಕರವಾದ ಕಾರಣ ನಾನು 42 ವರ್ಷಗಳಿಂದ ಕೆಲಸ ಮಾಡಿದ ಪಕ್ಷವನ್ನು ತೊರೆಯಲು ನಿರ್ಧರಿಸಿದ್ದೇನೆ ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿಯ ರಾಜ್ಯ ನಾಯಕತ್ವ ನನ್ನನ್ನು ಸಂಪರ್ಕಿಸಿದ್ದು, ಯಾವ ಪಕ್ಷಕ್ಕೆ ಸೇರುತ್ತೇನೆ ಎಂಬ ನಿರ್ಧಾರವನ್ನು ಬೆಳಗ್ಗೆ 11 ಗಂಟೆಗೆ ಪ್ರಕಟಿಸುವುದಾಗಿ ಮಧು ಮುಲ್ಲಸ್ಸೆರಿ ಟಿವಿ ಚಾನೆಲ್‌ಗೆ ತಿಳಿಸಿದ್ದಾರೆ. ಕೇರಳ
ಬಿಜೆಪಿಯ ತಿರುವನಂತಪುರಂ ಜಿಲ್ಲಾಧ್ಯಕ್ಷ ವಿ.ವಿ. ರಾಜೇಶ್ ಮತ್ತು ಪಕ್ಷದ ಇತರ ಮುಖಂಡರು ಮಧು ಅವರನ್ನು ಅವರ ನಿವಾಸದಲ್ಲಿ ಬೆಳಗ್ಗೆ ಭೇಟಿ ಮಾಡಿದ್ದಾಗಿ ವರದಿಯಾಗಿದೆ. ಪಕ್ಷದ ಜಿಲ್ಲಾ ಕಾರ್ಯದರ್ಶಿ ಜಾಯ್ ಅವರು, ತಮ್ಮ ಹಿತಾಸಕ್ತಿ ಮತ್ತು ಪಕ್ಷದೊಳಗಿನ ಸ್ಥಾನಗಳ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ ಮತ್ತು ಸಿಪಿಐ(ಎಂ)ನ ಜಿಲ್ಲಾ ಸಮಿತಿಯಲ್ಲಿ ಒಡಕು ಮೂಡಿಸುತ್ತಿದ್ದಾರೆ ಎಂದು ಮಧು ಆರೋಪಿಸಿದ್ದಾರೆ. ಜೊತೆಗೆ, ಅವರು ತನ್ನನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ನವೆಂಬರ್ 30 ರಂದು, ಸಿಪಿಐ(ಎಂ) ಆಲಪ್ಪುಳ ಪ್ರದೇಶ ಸಮಿತಿಯ ಸದಸ್ಯ ಮತ್ತು ಕೃಷ್ಣಾಪುರಂ ವಿಭಾಗವನ್ನು ಪ್ರತಿನಿಧಿಸುವ ಜಿಲ್ಲಾ ಪಂಚಾಯತ್ ಸದಸ್ಯ ಬಿಪಿನ್ ಸಿ ಬಾಬು ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಬಿಜೆಪಿ ಸೇರಿದ ನಂತರ ಸಿಪಿಐ(ಎಂ) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಬಿಪಿನ್, ಪಕ್ಷವು ತನ್ನ ಜಾತ್ಯತೀತ ಗುಣವನ್ನು ಕಳೆದುಕೊಂಡಿದೆ ಎಂದು ಹೇಳಿದ್ದರು. “ಕೆಲವು ಕೋಮುವಾದಿ ಶಕ್ತಿಗಳು ಈಗ ಪಕ್ಷವನ್ನು ಮುನ್ನಡೆಸುತ್ತಿದ್ದು, ಪಕ್ಷವು ಈಗ ನಿರ್ದಿಷ್ಟ ವರ್ಗದ ಮುಖವಾಗಿದೆ” ಎಂದು ಅವರು ಹೇಳಿದ್ದರು.
ಹಿರಿಯ ಸಿಪಿಐ(ಎಂ) ನಾಯಕ ಜಿ. ಸುಧಾಕರನ್ ಅವರನ್ನು ಬದಿಗಿರಿಸಿರುವುದು ಪಕ್ಷದೊಳಗೆ ಟೀಕೆಗೆ ಗುರಿಯಾಗಿದೆ. ಜೊತೆಗೆ, ಕೊಲ್ಲಂ ಜಿಲ್ಲೆಯ ಕರುನಾಗಪಲ್ಲಿಯಂತಹ ಕೆಲವು ಸ್ಥಳಗಳಲ್ಲಿ ಪಕ್ಷದ ಸ್ಥಳೀಯ ಮತ್ತು ಪ್ರದೇಶ ಸಮ್ಮೇಳನಗಳಲ್ಲಿ ಬಹಿರಂಗ ಪ್ರತಿಭಟನೆಗಳು ನಡೆದಿದೆ ಎಂದು ಪಕ್ಷದ ಮೂಲಗಳನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.


