ಬೆಂಗಳೂರಿನ ಕೋಗಿಲು ಬಡಾವಣೆಯ ವಾಸಿಂ ಹಾಗೂ ಫಕೀರ್ ಕಾಲೊನಿಗಳ ಸುಮಾರು 300 ಮನೆಗಳನ್ನು ನೆಲಸಮ ಮಾಡಿ, ಮೂರು ಸಾವಿರಕ್ಕೂ ಹೆಚ್ಚು ಜನರನ್ನು ಬೀದಿಗೆ ತಳ್ಳಿರುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.
ಕೋಗಿಲು ಬಡಾವಣೆ ನಿವಾಸಿಗಳಾದ ಝೈಬಾ ತಬಸ್ಸುಮ್, ರೆಹನಾ ಮತ್ತು ಆರೀಫ್ ಬೇಗಂ ಅರ್ಜಿ ಸಲ್ಲಿಸಿದ್ದು, ರಾಜ್ಯ ಸರ್ಕಾರ, ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಪೊಲೀಸ್ ಆಯುಕ್ತರು ಮತ್ತು ಬೆಂಗಳೂರು ಉತ್ತರ ತಾಲ್ಲೂಕು ತಹಸೀಲ್ದಾರ್ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.
ಮನೆಗಳನ್ನು ಕೆಡವುದಕ್ಕೂ ಮುನ್ನ ನೋಟಿಸ್ ನೀಡಿಲ್ಲ. ನಮ್ಮ ಅಹವಾಲು ಆಲಿಸಿಲ್ಲ. ನಿರಾಶ್ರಿತರಾದ ಬಹುತೇಕರು ತಮ್ಮ ಮನೆಗಳಿಗೆ ಸಂಬಂಧಿಸಿದಂತೆ ದಾಖಲೆ ಇಟ್ಟುಕೊಂಡಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಸರ್ಕಾರದ ಅಧಿಕಾರಿಗಳು ಸುಪ್ರೀಂ ಕೋರ್ಟ್ನ ನಿರ್ದೇಶನಗಳನ್ನು ಉಲ್ಲಂಘಿಸಿ ಮನೆಗಳನ್ನು ನೆಲಸಮಗೊಳಿಸಿದ್ದಾರೆ. ಇದರಿಂದ ನೂರಾರು ಬಡ ವಿದ್ಯಾರ್ಥಿಗಳ ಸಮವಸ್ತ್ರ, ಪುಸ್ತಕಗಳು ಮತ್ತು ಹಾಲ್ ಟಿಕೆಟ್ಗಳು ನಾಶವಾಗಿದ್ದು, ಅವರ ಶೈಕ್ಷಣಿಕ ಭವಿಷ್ಯಕ್ಕೆ ತೊಂದರೆಯಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಫಕೀರ್ ಮತ್ತು ವಾಸಿಂ ಕಾಲೊನಿಯ ಎಲ್ಲಾ ನಿರಾಶ್ರಿತರಿಗೆ ಅಲ್ಲಿಂದ 5 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಪುನರ್ವಸತಿ ಅಥವಾ ಪರ್ಯಾಯ ವಸತಿ ಒದಗಿಸಬೇಕು. ಅದಕ್ಕಾಗಿ ಸಮೀಕ್ಷೆ ನಡೆಸಬೇಕು. ಹಲವು ವರ್ಷಗಳ ಕಾಲ ಶ್ರಮಿಸಿ ನಿರ್ಮಿಸಿರುವ ಮನೆಗಳನ್ನು ಕೆಡವಿರುವುದರಿಂದ ಪರಿಹಾರ ಒದಗಿಸಬೇಕು. ಗಾಯಗೊಂಡಿರುವವರಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಸುಪ್ರೀಂ ಕೋರ್ಟ್ ಮಾರ್ಗಸೂಚಿ ಉಲ್ಲಂಘಿಸಿ, ಮನೆ ಕೆಡವಿರುವ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿ, ನಷ್ಟ ಮತ್ತು ಹಾನಿಗೆ ಅವರನ್ನು ವೈಯಕ್ತಿಕವಾಗಿ ಹೊಣೆಗಾರರನ್ನಾಗಿ ಮಾಡಬೇಕು. ಸಂತ್ರಸ್ತರಾಗಿರುವ ಅಂಗವಿಕಲರು, ಮಹಿಳೆಯರು ಮತ್ತು ವೃದ್ಧರಿಗೆ ಶುದ್ದ ಕುಡಿಯುವ ನೀರು ಮತ್ತು ಪೌಷ್ಠಿಕ ಆಹಾರ ತಕ್ಷಣದಿಂದಲೇ ಪೂರೈಸಬೇಕು. ಪುರುಷರು ಮತ್ತು ಮಹಿಳೆಯರಿಗೆ ತಾತ್ಕಾಲಿಕವಾಗಿ ಪ್ರತ್ಯೇಕ ಶೌಚಾಲಯ ನಿರ್ಮಿಸಬೇಕು. ನ್ಯಾಪ್ಕಿನ್ ಸೇರಿದಂತೆ ಅಗತ್ಯ ನೈರ್ಮಲ್ಯ ಸಾಮಗ್ರಿಗಳನ್ನು ಒದಗಿಸಬೇಕು. ಮಹಿಳೆಯರು ಮತ್ತು ಮಕ್ಕಳಿಗೆ ಭದ್ರತೆ ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಮನೆ ಕಳೆದು ಬೀದಿ ಪಾಲಾಗಿರುವವರಿಗೆ ಸಾಂಕ್ರಾಮಿಕ ರೋಗ ತಗುಲುವ ಸಾಧ್ಯತೆಯಿದ್ದು, ಸ್ಥಳದಲ್ಲಿ ತಾತ್ಕಾಲಿಕ ವೈದ್ಯಕೀಯ ಶಿಬಿರ ಪ್ರಾರಂಭಿಸಿ ತಕ್ಷಣ ಚಿಕಿತ್ಸೆ ಲಭ್ಯವಾಗುವಂತೆ ಮಾಡಬೇಕು. ತೆರವು ಕಾರ್ಯಚರಣೆ ವೇಳೆ ಮೂಲ ಹಾಲ್ ಟಿಕೆಟ್ ನಾಶವಾಗಿದ್ದು, ಪರೀಕ್ಷೆ ಬರೆಯುವುದಕ್ಕೆ ಸಾಧ್ಯವಾಗದಂತಹ ವಿದ್ಯಾರ್ಥಿಗಳಿಗೆ ನಕಲು ಹಾಲ್ ಟಿಕೆಟ್ ಪ್ರತಿ ಕಲ್ಪಿಸಿ ಪರೀಕ್ಷೆಗೆ ಅವಕಾಶ ಕಲ್ಪಿಸುವಂತೆ ಮಾಡಬೇಕು. ತೊಂದರೆಗೊಳಗಾದ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಶೈಕ್ಷಣಿಕ ಸಾಮಗ್ರಿ (ಪುಸ್ತಕ, ನೋಟ್ ಬುಕ್, ಅಧ್ಯಯನ ಸಾಮಗ್ರಿ ಮತ್ತು ಸಮವಸ್ತ್ರ) ಒದಗಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.


