ಈ ವಾರದ ಆರಂಭದಲ್ಲಿ ಕೋಲ್ಕತ್ತಾದ ಕಾನೂನು ಕಾಲೇಜಿನಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಆರೋಪಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪುರುಷರನ್ನು ಬಂಧಿಸಲಾಗಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ವರ್ಷ ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಇದೇ ರೀತಿಯ ಅಪರಾಧ ನಡೆದಿತ್ತು. ಟ್ರೈನಿ ವೈದ್ಯೆಯ ಮೇಲಿನ ಅತ್ಯಾಚಾರ-ಕೊಲೆ ಪ್ರಕರಣದ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ನಡೆದಿದ್ದವು.
ಆಡಳಿತ ಪಕ್ಷವಾದ ತೃಣಮೂಲ ಕಾಂಗ್ರೆಸ್‌ನ ಪ್ರಸ್ತುತ ವಿದ್ಯಾರ್ಥಿ ವಿಭಾಗದ ನಾಯಕರಾಗಿರುವ ಮೂವರು ಆರೋಪಿಗಳನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅವರನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ದೂರಿನ ಪ್ರಕಾರ, ಬುಧವಾರ ಸಂಜೆ 7.30 ರಿಂದ ರಾತ್ರಿ 10.50 ರ ನಡುವೆ ದಕ್ಷಿಣ ಕಲ್ಕತ್ತಾ ಕಾನೂನು ಕಾಲೇಜಿನ ಕ್ಯಾಂಪಸ್‌ನಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಮಹಿಳೆಯ ದೂರಿನ ಆಧಾರದ ಮೇಲೆ ನಡೆಸಿದ ತನಿಖೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಮೂವರು ಪುರುಷರು ಮತ್ತು ಓರ್ವ ಸಿಬ್ಬಂದಿಯನ್ನು ಬಂಧಿಸಲಾಯಿತು. ಸಿಬ್ಬಂದಿ ಕಾಲೇಜಿನ ಮಾಜಿ ವಿದ್ಯಾರ್ಥಿ ಮತ್ತು ತೃಣಮೂಲ ಕಾಂಗ್ರೆಸ್‌ನ ವಿದ್ಯಾರ್ಥಿ ವಿಭಾಗದ ನಾಯಕಿಯಾಗಿದ್ದರು.
24 ವರ್ಷದ ವಿದ್ಯಾರ್ಥಿನಿ ಬುಧವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಪರೀಕ್ಷೆಗೆ ಸಂಬಂಧಿಸಿದ ನಮೂನೆಗಳನ್ನು ಭರ್ತಿ ಮಾಡಲು ಕಾಲೇಜಿಗೆ ಬಂದಿದ್ದರು. ಆಕೆಯ ದೂರಿನ ಪ್ರಕಾರ, ಆಕೆ ಆರಂಭದಲ್ಲಿ ಕಾಲೇಜು ಯೂನಿಯನ್ ಕೋಣೆಯೊಳಗೆ ಕುಳಿತಿದ್ದರು. ನಂತರ, ಪ್ರಾಥಮಿಕ ಆರೋಪಿ ಕಾಲೇಜಿನ ಮುಖ್ಯ ಗೇಟ್ ಅನ್ನು ಲಾಕ್ ಮಾಡಲು ಸೂಚಿಸಿ, ಕ್ಯಾಂಪಸ್‌ನಲ್ಲಿರುವ ಭದ್ರತಾ ಸಿಬ್ಬಂದಿಯ ಕೋಣೆಯೊಳಗೆ ಮಹಿಳೆಯ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಆರೋಪಿಸಲಾಗಿದೆ.
ಮಹಿಳೆಯ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಾಗಿದ್ದು, ಪ್ರಮುಖ ಆರೋಪಿಗಳು ತೃಣಮೂಲ ಕಾಂಗ್ರೆಸ್ ಛತ್ರ ಪರಿಷತ್ (ಟಿಎಂಸಿಪಿ) ನ ದಕ್ಷಿಣ ಕೋಲ್ಕತ್ತಾ ಜಿಲ್ಲೆಯ ಮಾಜಿ ವಿದ್ಯಾರ್ಥಿ ಮತ್ತು ಪ್ರಸ್ತುತ ಪ್ರಧಾನ ಕಾರ್ಯದರ್ಶಿ ಮೋನೋಜಿತ್ ಮಿಶ್ರಾ (31); ಜೈಬ್ ಅಹ್ಮದ್ (19), ಪ್ರಥಮ ವರ್ಷದ ವಿದ್ಯಾರ್ಥಿ ಮತ್ತು 20 ವರ್ಷದ ಪ್ರಮಿತ್ ಮುಖರ್ಜಿ (20) ಸೇರಿದ್ದಾರೆ.
ಪ್ರಮುಖ ಆರೋಪಿ ಮಿಶ್ರಾ ನನ್ನನ್ನು ಮದುವೆಯಾಗುವುದಾಗಿ ಹೇಳಿದ. ಆದರೆ ತನಗೆ ಈಗಾಗಲೇ ಗೆಳೆಯನಿದ್ದಾನೆ ಎಂದು ಹೇಳಿ ಅದನ್ನು ನಿರಾಕರಿಸಿದಾಗ ಆತ ಕೋಪಗೊಂಡ. ಪೊಲೀಸರಿಗೆ ತನ್ನ ಮೇಲಿನ ದೌರ್ಜನ್ಯವನ್ನು ವಿವರಿಸುತ್ತಾ, ಆರೋಪಿಗಳು ತನ್ನನ್ನು ಬಲವಂತವಾಗಿ ಕೋಣೆಯೊಳಗೆ ಕೂಡಿ ಹಾಕಿ, ತನ್ನನ್ನು ಮತ್ತು ತನ್ನ ಗೆಳೆಯನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದರು. ತನ್ನ ಪೋಷಕರನ್ನು ಬಂಧಿಸುವಂತೆ ಬೆದರಿಕೆ ಹಾಕಿದರು ಎಂದು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
“ನಾನು ಅವನ ಪಾದಗಳನ್ನು ಮುಟ್ಟಿದೆ, ಆದರೆ ಅವನು ನನ್ನನ್ನು ಆಚೆಗೆ ಹೋಗಲು ಬಿಡಲಿಲ್ಲ. ಅವರು ನನ್ನನ್ನು ಬಲವಂತವಾಗಿ ಗಾರ್ಡ್ ರೂಂಗೆ ಕರೆದೊಯ್ದು, ನನ್ನ ಬಟ್ಟೆ ಬಿಚ್ಚಿ, ನನ್ನ ಮೇಲೆ ಅತ್ಯಾಚಾರ ಮಾಡಲು ಪ್ರಾರಂಭಿಸಿದರು” ಎಂದು ಅವರು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಆರೋಪಿಗಳು ಕೃತ್ಯದ ವೀಡಿಯೊಗಳನ್ನು ರೆಕಾರ್ಡ್ ಮಾಡಿದ್ದಾರೆ. ಸಹಕರಿಸದಿದ್ದರೆ ಅವುಗಳನ್ನು ಸೋರಿಕೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ಹೇಳಿದ್ದಾರೆ. ತಾನು ಪ್ರತಿದಾಳಿ ನಡೆಸಲು ಪ್ರಯತ್ನಿಸಿದೆ, ತಪ್ಪಿಸಿಕೊಳ್ಳಲು ಪ್ರಯತ್ನಿಸಿದೆ ಎಂದು ಅವರು ಹೇಳಿದರು. ಆದರೆ, ಆರೋಪಿಗಳು ಹಾಕಿ ಸ್ಟಿಕ್‌ನಿಂದ ಹೊಡೆಯಲು ಪ್ರಯತ್ನಿಸಿದಾಗ ನಾನು ಗಾಯಗೊಂಡೆ ಎಂದು ತಿಳಿಸಿದ್ದಾರೆ.
ಆರೋಪಿಗಳಲ್ಲಿ ಇಬ್ಬರಾದ ಮಿಶ್ರಾ ಮತ್ತು ಅಹ್ಮದ್ ಅವರನ್ನು ಗುರುವಾರ ಸಂಜೆ ದಕ್ಷಿಣ ಕೋಲ್ಕತ್ತಾದ ಕಸ್ಬಾದಲ್ಲಿ ಸಿಗ್ನಲ್ ಕ್ರಾಸಿಂಗ್‌ನಿಂದ ಬಂಧಿಸಲಾಯಿತು. ಬಂಧನದ ಸಮಯದಲ್ಲಿ ಅವರ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೂರನೇ ಆರೋಪಿ ಮುಖರ್ಜಿ ಅವರನ್ನು ಗುರುವಾರ ಬೆಳಗಿನ ಜಾವ 12.30 ರ ಸುಮಾರಿಗೆ ಅವರ ನಿವಾಸದಿಂದ ಬಂಧಿಸಲಾಯಿತು. ಅವರ ಮೊಬೈಲ್ ಫೋನ್ ಅನ್ನು ಸಹ ವಶಪಡಿಸಿಕೊಳ್ಳಲಾಯಿತು.
ದೆಹಲಿ | ಚನ್ನರಾಯಪಟ್ಟಣ ರೈತ ಹೋರಾಟಕ್ಕೆ ಸಂಯುಕ್ತ ಕಿಸಾನ್ ಮೋರ್ಚಾ ಬೆಂಬಲ


