ಕಲ್ಕತ್ತಾ ವಿಶ್ವವಿದ್ಯಾನಿಲಯಕ್ಕೆ ಸಂಯೋಜಿತವಾಗಿರುವ ಖಾಸಗಿ ಕಾನೂನು ಕಾಲೇಜಿನ ಆಡಳಿತ ವರ್ಗ ಉಪನ್ಯಾಸಕಿಯೊಬ್ಬರಿಗೆ ಕಾಲೇಜಿಗೆ ಹಿಜಾಬ್ ಧರಿಸಿಕೊಂಡು ಬರದಂತೆ ಸೂಚಿಸಿದ್ದು, ಶಿಕ್ಷಕಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ತರಗತಿಗಳಿಗೆ ಹಾಜರಾಗುವುದನ್ನು ನಿಲ್ಲಿಸಿದ್ದಾರೆ.
ಈ ವಿಷಗಳ ಬಗ್ಗೆ ಸುದ್ದಿಯಾಗುತ್ತಿದ್ದಂತೆ ಈ ಆದೇಶ ತಪ್ಪು ಸಂವಹನದಿಂದ ಉಂಟಾಗಿದೆ ಎಂದು ಕಾಲೇಜು ಆಡಳಿತ ಮಂಡಳಿ ಹೇಳಿಕೊಂಡಿದ್ದು, ಶಿಕ್ಷಕಿ ರಾಜೀನಾಮೆ ಹಿಂಪಡೆದು ತರಗತಿಗೆ ಹಾಜರಾಗುವುದನ್ನು ಮುಂದುವರಿಸಿದ್ದಾರೆ.
ಕೆಲಸದ ಸ್ಥಳದಲ್ಲಿ ಹಿಜಾಬ್ ಧರಿಸದಂತೆ ಕಾಲೇಜು ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎಂದು ಆರೋಪಿಸಿ ಮೇ 31ರ ನಂತರ ಉಪನ್ಯಾಸಕಿ ಸಂಜಿದಾ ಖಾದರ್ ಎಲ್‌ಜೆಡಿ ಕಾನೂನು ಕಾಲೇಜಿಗೆ ತೆರಳುವುದನ್ನು ನಿಲ್ಲಿಸಿದ್ದರು. ಕಾಲೇಜು ಆಡಳಿತ ಮಂಡಳಿಯ ಆದೇಶವು ನನ್ನ ಮೌಲ್ಯಗಳು ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಅವರು ಆರೋಪಿಸಿದ್ದರು.
ಶಿಕ್ಷಕಿಯೊಂದಿಗೆ ಒಗ್ಗಟ್ಟು ವ್ಯಕ್ತಪಡಿಸಿದ ಪಶ್ಚಿಮ ಬಂಗಾಳದ ಸಚಿವ ಮತ್ತು ಜಮೀಯತ್ ಉಲೇಮಾ-ಎ-ಹಿಂದ್ ಅಧ್ಯಕ್ಷ ಸಿದ್ದಿಕುಲ್ಲಾ ಚೌಧರಿ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಕಾಲೇಜು ಅಧಿಕಾರಿಗಳು ಆರೆಸ್ಸೆಸ್ ಮತ್ತು ಬಿಜೆಪಿಯ ಆಜ್ಞೆಯ ಮೇರೆಗೆ ಕೆಲಸ ಮಾಡುತ್ತಿದೆಯೇ ಎಂದು ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಶಿಕ್ಷಕಿ ಸಂಜಿದಾ ಹಿಜಾಬ್ ಧರಿಸಿಕೊಂಡು ಕಾಲೇಜಿಗೆ ತೆರಳುತ್ತಿದ್ದರು. ಕಾಲೇಜು ಅಧಿಕಾರಿಗಳು ಮತ್ತೆ ಅವರನ್ನು ಸಂಪರ್ಕಿಸಿ ಇದು ಕೇವಲ ತಪ್ಪು ಸಂವಹನದಿಂದ ನಡೆದಿದೆ ಎಂದು ಹೇಳಿದ್ದಾರೆ. ಕೆಲಸದ ಸಮಯದಲ್ಲಿ ಬಟ್ಟೆಯಿಂದ ತಲೆ ಮುಚ್ಚುವುದನ್ನು ನಾವು ಎಂದಿಗೂ ನಿಷೇಧಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಗೋಪಾಲ್ ದಾಸ್ ಈ ಕುರಿತು ಪಿಟಿಐ ಜೊತೆ ಮಾತನಾಡಿದ್ದು, ಇಂತಹ ಯಾವುದೇ ನಿರ್ದೇಶನವನ್ನು ನೀಡಲಾಗಿಲ್ಲ ಎಂದು ಹೇಳಿದ್ದಾರೆ. ಕಾಲೇಜು ಆಡಳಿತಾಧಿಕಾರಿಗಳು ಪ್ರತಿಯೊಬ್ಬರ ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತಾರೆ. ಅವರು ತರಗತಿಗೆ ಮತ್ತೆ ಹಾಜರಾಗುತ್ತಾರೆ ಎಂದು ಹೇಳಿದ್ದಾರೆ.
ಸೋಮವಾರ ಕಚೇರಿಯಿಂದ ನನಗೆ ಇಮೇಲ್ ಬಂದಿದೆ, ನನ್ನ ಮುಂದಿನ ಕ್ರಮಗಳನ್ನು ವಿಶ್ಲೇಷಿಸಿ ನಂತರ ನಿರ್ಧರಿಸುತ್ತೇನೆ. ಆದರೆ ನಾನು ಮಂಗಳವಾರ ಕಾಲೇಜಿಗೆ ಹೋಗುತ್ತಿಲ್ಲ ಎಂದು ಶಿಕ್ಷಕಿ ಹೇಳಿದ್ದಾರೆ.
ಕಾನೂನು ಕಾಲೇಜಿನ ಆಡಳಿತ ಮಂಡಳಿಯ ಮುಖ್ಯಸ್ಥರು ಇಂತಹ ಆದೇಶವನ್ನು ಹೇಗೆ ಹೊರಡಿಸುತ್ತಾರೆ? ಅಂತಹ ಸಂಸ್ಥೆಯಲ್ಲಿ ಮಕ್ಕಳು ಸಂವಿಧಾನ ಮತ್ತು ಕಾನೂನುಗಳ ಬಗ್ಗೆ ಹೇಗೆ ಕಲಿಯುತ್ತಾರೆ ಎಂದು ಯೋಚಿಸಿ. ಸಿಖ್ ಪುರುಷರು ಪೇಟ ಧರಿಸುವುದಕ್ಕೆ ಅವರಿಗೆ ಯಾವುದೇ ಅಭ್ಯಂತರವಿಲ್ಲ ಎಂದು ನಾವು ಕೇಳಿದ್ದೇವೆ. ಹೀಗಿರುವಾಗ ಮುಸಲ್ಮಾನರನ್ನು ಏಕೆ ಗುರಿಯಾಗಿಸಿಕೊಳ್ಳಲಾಗುತ್ತಿದೆ. ರಾಜ್ಯದ ಜಾತ್ಯತೀತ, ಬಹುತ್ವ ಮತ್ತು ಸಹಿಷ್ಣು ಮೌಲ್ಯಗಳನ್ನು ನಾಶಮಾಡಲು ಹೊರಟಿರುವ ಇಂತಹ ವ್ಯಕ್ತಿಗಳನ್ನು ಬಂಗಾಳದ ಜನರು ಕ್ಷಮಿಸುವುದಿಲ್ಲ ಎಂದು ಚೌಧರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಹೇಳಿದ್ದಾರೆ.
ಇದನ್ನು ಓದಿ: ಪಂಜಾಬ್‌ನಲ್ಲಿ 128 ಸಾವುಗಳು, ನಾಪತ್ತೆಗಳಿಗೆ ಕಾರಣನಾಗಿದ್ದ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಆರೋಪಿತ ಅಧಿಕಾರಿ?


