ಜಮೀನಿನ ಒಳಗೆ ಜಾನುವಾರು ಹೋದ ಕಾರಣಕ್ಕೆ ಪರಿಶಿಷ್ಟ ಪಂಗಡ (ವಾಲ್ಮೀಕಿ ಸಮುದಾಯ)ದ ಮೂವರು ಯುವಕರ ಮೇಲೆ, ಕುರುಬ ಸಮುದಾಯದವರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.
ಈ ಸಂಬಂಧ ಜಿಲ್ಲೆಯ ತಾವರೆಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಾರತೀಯ ದಂಡ ಸಂಹಿತೆ ಸೆಕ್ಷನ್ 143, 147, 148, 323, 324, 307, 504, 506, 149 ಮತ್ತು ‘ಎಸ್‌ಸಿ ಎಸ್‌ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆ’ಯ ಸೆಕ್ಷನ್ 3 (1)(r), 3(1)(s), 3(2)(va) ಅಡಿಯಲ್ಲಿ ಜನವರಿ 21ರಂದು ಪ್ರಕರಣ ದಾಖಲಾಗಿದೆ.
ಏನಿದು ವಿವಾದ?
ವಾಲ್ಮೀಕಿ ಸಮುದಾಯದ ಆಂಜನೇಯಗೌಡ ಮತ್ತು ಇತರ ಇಬ್ಬರು ಸಹೋದರರು ಹಲ್ಲೆಗೆ ಒಳಗಾಗಿದ್ದಾರೆ. ದಿನಾಂಕ 21-01-2023ರಂದು ಸಂಜೆ 7.30ರ ಸುಮಾರಿಗೆ ತಾವರಗೆರೆ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪೊಲೀಸರು ಮಾಹಿತಿ ಪಡೆದಿದ್ದಾರೆ.
ಕುಷ್ಟಗಿ ತಾಲ್ಲೂಕಿನ ಗರ್ಜನಾಳ ಗ್ರಾಮದ ಮಾನನಗೌಡ ಮತ್ತು ಪರಮಪ್ಪ ಅವರ ಜಮೀನುಗಳು ಅಕ್ಕಪಕ್ಕದಲ್ಲಿ ಇದ್ದು, ಒಂದು ತಿಂಗಳ ಹಿಂದೆ ಆಂಜನೇಯಗೌಡ (ಮಾನನಗೌಡ ಅವರ ಮಗ) ಅವರ ಜಮೀನಿಗೆ ಪರಮಪ್ಪ ಅವರು ಕುರಿ ಮತ್ತು ದನಗಳನ್ನು ಬಿಟ್ಟಿದ್ದರು. ಈ ವಿಚಾರವಾಗಿ ಪ್ರಶ್ನಿಸಿದಾಗ ಊರಿನ ಹಿರಿಯರು ಪರಮಪ್ಪನವರಿಗೆ ಬುದ್ಧಿ ವಾದ ಹೇಳಿದ್ದರು. ಈ ರೀತಿ ಬಿಟ್ಟು ಜಗಳ ಮಾಡಿಕೊಳ್ಳಬಾರದು ಎಂದು ತಿಳಿಸಿದ್ದರು. ಆವಾಗಿನಿಂದ ಪರಮಪ್ಪ ಅವರು ಆಂಜನೇಯಗೌಡನ ಕುಟುಂಬದ ಮೇಲೆ ಸಿಟ್ಟಾಗಿದ್ದರು.
ಜನವರಿ 21ರಂದು ಸಂಜೆ 5.30 ಗಂಟೆ ಸುಮಾರಿಗೆ ಆಂಜನೇಯಗೌಡರ ಜಾನುವಾರು ಪರಮಪ್ಪ ಕಂಬಳಿಯವರ ಜಮೀನಿಗೆ ಆಕಸ್ಮಿಕವಾಗಿ ಹೋಗಿತ್ತು. ಇದನ್ನೇ ನೆಪವಾಗಿಟ್ಟುಕೊಂಡು ಪರಮಪ್ಪ, ಆಂಜನೇಯಗೌಡನ ತಮ್ಮನಾದ ಬಸವನಗೌಡನಿಗೆ ಹೊಡೆದಿದ್ದರು. ಜೊತೆಗೆ ಇವರ ಎಮ್ಮೆಯನ್ನು ತಮ್ಮ ಹೊಲದಲ್ಲಿ ಕಟ್ಟಿ ಹಾಕಿಕೊಂಡಿದ್ದರು. ಸಹೋದರರಾದ ಆಂಜನೇಯಗೌಡ, ದುರುಗನಗೌಡ ಮತ್ತು ಬಸವನಗೌಡ ಮೂವರು ಸೇರಿಕೊಂಡು ಸಂಜೆ 6.30ರ ಸುಮಾರಿಗೆ ಹೊಲದ ಬಳಿ ಬಂದರು. “ಆಕಸ್ಮಿಕವಾಗಿ ನಮ್ಮ ಎಮ್ಮೆ ಬಂದಿದೆ. ಆದರೆ ಬಸವನಗೌಡನಿಗೆ ಹೊಡೆದಿದ್ದೀರಿ. ಅಲ್ಲದೆ ನಮ್ಮ ಎಮ್ಮೆಯನ್ನೂ ಕಟ್ಟಿ ಹಾಕಿಕೊಂಡಿದ್ದೀರಿ. ಕೂಡಿ ಹಾಕಿರುವ ನಮ್ಮ ಎಮ್ಮೆಯನ್ನು ಬಿಟ್ಟುಬಿಡಿ” ಎಂದು ಆಂಜನೇಯಗೌಡ ಕೇಳಿದ್ದರು.
ಆಗ ಜಗಳ ತೆಗೆದಿರುವ ಪರಮಪ್ಪ, “ಈ ಹಿಂದೆ ಗ್ರಾಮದ ಹಿರಿಯರಿಗೆ ತಿಳಿಸಿ ನಮಗೆ ಅವಮಾನ ಮಾಡಿದ್ದೀರಿ” ಎಂದು ತನ್ನವರ ಗುಂಪು ಕಟ್ಟಿಕೊಂಡು ಹಲ್ಲೆ ನಡೆಸಿದ್ದಾರೆ, ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ, ಜಾತಿ ನಿಂದನೆ ಮಾಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಬಸವನಗೌಡ, ದುರುಗನಗೌಡ, ಆಂಜನೇಯಗೌಡ ಹಲ್ಲೆಗೊಳಗಾಗಿದ್ದಾರೆ. ಕುರುಬ ಸಮುದಾಯದ ಪರಮಪ್ಪ, ಬಾಲಪ್ಪ, ಬೀರಪ್ಪ, ಮಹಲಿಂಗರಾಯ, ಯಮನೂರಪ್ಪ, ಶಿವಗ್ಯಾನಪ್ಪ ಎಂಬವರ ಮೇಲೆ ಪ್ರಕರಣ ದಾಖಲಾಗಿದೆ.
“ಘಟನೆ ನಡೆದು ಹತ್ತು ದಿನಗಳಾದರೂ ಆರೋಪಿಗಳ ಬಂಧನವಾಗಿಲ್ಲ. ಅವರು ಊರಿನಲ್ಲಿ ಆರಾಮವಾಗಿ ಅಡ್ಡಾಡಿಕೊಂಡು ಇದ್ದಾರೆ” ಎಂದು ಸಂತ್ರಸ್ತರು ಆರೋಪಿಸಿದ್ದಾರೆ.


