- Advertisement -
ವೈದ್ಯಕೀಯ ವಿದ್ಯಾರ್ಥಿಯೊಬ್ಬ ಚೀನಾದ ವುಹಾನ್ ನಗರದ ಸಮೀಪವೊಂದರ ಪಟ್ಟಣಕ್ಕೆ ಹೋಗಿ ತುಮಕೂರು ನಗರಕ್ಕೆ ವಾಪಸ್ಸಾಗಿರುವುದರ ಹಿನ್ನೆಲೆಯಲ್ಲಿ ಆತನನ್ನು ವೈದ್ಯರು ತಪಾಸಣೆ ನಡೆಸಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ತಪಾಸಣೆ ನಡೆಸಿ ಆತನ ರಕ್ತ ಮತ್ತು ಕಫವನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ.
ವಿದ್ಯಾರ್ಥಿ ಅಮಿತ್ ಇತ್ತೀಚೆಗೆ ಚೀನಾದ ವೂಹಾನಗೆ ತೆರಳಿದ್ದರು. ಕೆಲವು ದಿನಗಳ ಕಾಲ ಅಲ್ಲಿದ್ದ ಅಮಿತ್ ಕಳೆದ ಹತ್ತು ದಿನಗಳ ಹಿಂದೆ ತುಮಕೂರಿಗೆ ವಾಪಸ್ಸಾಗಿದ್ದರು.

ಈ ಹಿನ್ನೆಲೆಯಲ್ಲಿ ಚೀನಾಕ್ಕೆ ಭೇಟಿ ನೀಡಿ ವಾಪಸ್ಸಾಗಿರುವ ಎಲ್ಲರಿಗೂ ತಪಾಸಣೆ ನಡೆಸುವಂತೆ ಅಮಿತ್ ಗೂ ಕೂಡ ವೈದ್ಯರು ತಪಾಸಣೆ ನಡೆಸಿದ್ದಾರೆ. ಆತನ ರಕ್ತ ಮತ್ತು ಕಫ ಮಾದರಿಗಳನ್ನು ಬೆಂಗಳೂರಿನ ನಿಮ್ಹಾನ್ಸ್ ನಲ್ಲಿರುವ ವೈರಾಲಜಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ತುಮಕೂರಿನ ಅಮಿತ್ ಗೆ ಕೊರೊನ ವೈರಸ್ ಹರಡಿರುವ ಕುರಿತು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವೀರಭದ್ರಯ್ಯ ಅವರನ್ನು ನಾನುಗೌರಿ.ಕಾಂ ದೂರವಾಣಿ ಮೂಲಕ ಸಂಪರ್ಕಿಸಿದಾಗ “ಕೊರೋನ ವೈರಸ್ ಇರುವುದು ಪತ್ತೆಯಾಗಿಲ್ಲ. ಮಾಮೂಲಿಯಾಗಿ ತಪಾಸಣೆ ಮಾಡಿದ್ದೇವೆ. ರಕ್ತ, ಕಫ ಮಾದರಿಗಳನ್ನು ಬೆಂಗಳೂರಿಗೆ ಕಳಿಸಿದ್ದೇವೆ. ನಾಳೆ ವರದಿ ಬರಲಿದೆ” ಎಂದು ಸ್ಪಷ್ಟಪಡಿಸಿದರು.
ಅಮಿತ್ ಸದ್ಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಯಾವುದೇ ತೊಂದರೆ ಇಲ್ಲ. ಜನರು ಭಯಪಡಬೇಕಾದ ಅಗತ್ಯವಿಲ್ಲ. ಜಿಲ್ಲಾಸ್ಪತ್ರೆಯಲ್ಲೂ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.


