ರಾಜಸ್ಥಾನದ ಕೋಟಾದಲ್ಲಿ ಮತ್ತೊಂದು ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದ್ದು, ಮಂಗಳವಾರ ನಗರದ ಜವಾಹರ್ ನಗರ ಪ್ರದೇಶದ ತನ್ನ ಹಾಸ್ಟೆಲ್ ಕೋಣೆಯಲ್ಲಿ 17 ವರ್ಷದ ವೈದ್ಯಕೀಯ ಆಕಾಂಕ್ಷಿಯೊಬ್ಬರು ಕಬ್ಬಿಣದ ರಾಡ್‌ಗೆ ನೇಣು ಬಿಗಿದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸರ ಪ್ರಕಾರ, ಜನವರಿ 2025 ರಿಂದ ಕೋಟಾದಲ್ಲಿ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿಗಳ ಆತ್ಮಹತ್ಯೆ ಮಾಡಿಕೊಂಡಿರುವ ಒಂಬತ್ತನೇ ಪ್ರಕರಣ ಇದಾಗಿದೆ. ಮೃತನನ್ನು ಹರ್ಷರಾಜ್ ಶಂಕರ್ ಎಂದು ಗುರುತಿಸಲಾಗಿದೆ. ಇವರು ಬಿಹಾರದ ನಳಂದ ಜಿಲ್ಲೆಯವರು. ಕಳೆದ ವರ್ಷ ಏಪ್ರಿಲ್‌ನಿಂದ ಇಲ್ಲಿನ ಕೋಚಿಂಗ್ ಸಂಸ್ಥೆಯಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಅವರು ತಯಾರಿ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು ಮಧ್ಯಾಹ್ನ ಬಾಲಕ ಒಳಗಿನಿಂದ ಬಾಗಿಲು ಹಾಕಿದ್ದಾನೆ; ಪ್ರತಿಕ್ರಿಯಿಸುತ್ತಿಲ್ಲ ಎಂದು ಹಾಸ್ಟೆಲ್ ಕೇರ್‌ಟೇಕರ್‌ಗೆ ಸಹಪಾಠಿಗಳು ತಿಳಿಸಿದ್ದರು. ನಂತರ, ಪೊಲೀಸ್ ತಂಡ ಸ್ಥಳಕ್ಕೆ ತಲುಪಿತು. ಜವಾಹರ್ ನಗರ ಎಸ್‌ಎಚ್‌ಒ ರಾಮ್ಲಕ್ಷ್ಮಣ್ ತಂಡವು ಕೋಣೆಯ ಬಾಗಿಲು ಒಡೆದಾಗ ಬಾಲಕ ಕಬ್ಬಿಣದ ರಾಡ್‌ಗೆ ನೇತಾಡುತ್ತಿರುವುದು ಕಂಡುಬಂದಿದೆ ಎಂದು ಅವರು ಹೇಳಿದರು.
ಹಾಸ್ಟೆಲ್ ಕೊಠಡಿಯಲ್ಲಿರುವ ಸೀಲಿಂಗ್ ಫ್ಯಾನ್‌ನಲ್ಲಿ ‘ಆತ್ಮಹತ್ಯೆ ವಿರೋಧಿ ಸಾಧನ’ ಅಳವಡಿಸಲಾಗಿತ್ತು. ಆದ್ದರಿಂದ, ನೀಟ್ ಆಕಾಂಕ್ಷಿ ನೇಣು ಬಿಗಿದುಕೊಳ್ಳಲು ಕಬ್ಬಿಣದ ರಾಡ್ ಬಳಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳದಿಂದ ಯಾವುದೇ ಆತ್ಮಹತ್ಯಾ ಪತ್ರ ಪತ್ತೆಯಾಗಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಶವವನ್ನು ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದ್ದು, ಅವರ ಪೋಷಕರು ಬಂದ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಅವರು ಹೇಳಿದರು.
ವರ್ಷದಲ್ಲಿ 9ನೇ ಆತ್ಮಹತ್ಯೆ ಪ್ರಕರಣ
ಕೋಚಿಂಗ್ ಹಬ್ ಎಂದು ಪ್ರಸಿದ್ಧವಾಗಿರುವ ನಗರದಲ್ಲಿ ಈ ವರ್ಷ ನಡೆದ ಒಂಬತ್ತನೇ ವಿದ್ಯಾರ್ಥಿ ಆತ್ಮಹತ್ಯೆ ಇದಾಗಿದೆ ಎಂಬುದನ್ನು ಇಲ್ಲಿ ಗಮನಿಸಬೇಕು. ಆರು ಜನ ಕೋಚಿಂಗ್ ವಿದ್ಯಾರ್ಥಿಗಳು, ಐದು ಜನ ಜೆಇಇ, ಒಬ್ಬ ನೀಟ್ ವಿದ್ಯಾರ್ಥಿ ಜನವರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡರು. 2024 ರಲ್ಲಿ ಕೋಟಾದ ತರಬೇತಿ ಪಡೆಯುತ್ತಿದ್ದ 17 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರು.
ವೈದ್ಯಕೀಯ, ಎಂಜಿನಿಯರಿಂಗ್ ಆಕಾಂಕ್ಷಿಗಳ ಕೇಂದ್ರ
ಜಿಲ್ಲಾಡಳಿತ ಅಧಿಕಾರಿಗಳ ಪ್ರಕಾರ, ವಾರ್ಷಿಕವಾಗಿ ಅಂದಾಜು 10,000 ಕೋಟಿ ರೂ. ಮೌಲ್ಯದ ಪರೀಕ್ಷಾ-ಪೂರ್ವಸಿದ್ಧತಾ ಉದ್ಯಮದ ಕೇಂದ್ರಬಿಂದುವಾಗಿ ಕೋಟಾ ತನ್ನನ್ನು ತಾನು ದೃಢವಾಗಿ ಸ್ಥಾಪಿಸಿಕೊಂಡಿದೆ. ಪ್ರತಿ ವರ್ಷ, ದೇಶಾದ್ಯಂತ ಸಾವಿರಾರು ವಿದ್ಯಾರ್ಥಿಗಳು ಹತ್ತನೇ ತರಗತಿ ಮುಗಿಸಿದ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಈ ಕೋಚಿಂಗ್ ಹಬ್‌ಗೆ ಸೇರುತ್ತಾರೆ. ಅವರು ನಗರದ ಪ್ರಾಬಲ್ಯ ಹೊಂದಿರುವ ವಸತಿ ತರಬೇತಿ ಸಂಸ್ಥೆಗಳಲ್ಲಿ ದಾಖಲಾಗುತ್ತಾರೆ. ಕಠಿಣ ತಯಾರಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.
ನೆನಪಿಡಿ : ಯಾವುದೇ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ತುರ್ತು ಪರಿಸ್ಥಿತಿಯಿದ್ದರೆ ಕರೆ ಮಾಡಿ ವೈದ್ಯರೊಂದಿಗೆ ಮಾತನಾಡಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104
ಹನಿಟ್ರ್ಯಾಪ್ ಪ್ರಕರಣ: ಸುಪ್ರೀಂ ಕೋರ್ಟ್‌ನಲ್ಲಿ ಇಂದು ಪಿಐಎಲ್ ವಿಚಾರಣೆ


