ಮಥುರಾದ ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂಗಳು ದಾಖಲಿಸಿರುವ ಮೊಕದ್ದಮೆಗಳ ಅಂಗೀಕಾರಾರ್ಹತೆಯನ್ನು ಪ್ರಶ್ನಿಸಿ ಮಸೀದಿ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಇಂದು (ಆ.1) ತಿರಸ್ಕರಿಸಿದೆ.
ಆದೇಶ 7 ನಿಯಮ 11 ಸಿಪಿಸಿ ಅಡಿ ಶಾಹಿ ಈದ್ಗಾ ಮಸೀದಿ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಮಯಾಂಕ್ ಕುಮಾರ್ ಜೈನ್ ಅವರ ಏಕಸದಸ್ಯ ಪೀಠವು, ಹಿಂದೂಗಳ ಎಲ್ಲಾ 18 ಮೊಕದ್ದಮೆಗಳು ವಿಚಾರಣೆಗೆ ಅಂಗೀಕಾರಾರ್ಹವಾಗಿವೆ ಎಂದು ಹೇಳಿದೆ.
ಹಿಂದೂಗಳು ದಾಖಲಿಸಿರುವ ಮೊಕದ್ದಮೆಯ ಅಂಗೀಕಾರಾರ್ಹತೆಯನ್ನು ಪ್ರಶ್ನಿಸಿ ಶಾಹಿ ಈದ್ಗಾ ಮಸೀದಿ ಸಮಿತಿಯ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ್ದ ನ್ಯಾಯಾಧೀಶರು ಜೂನ್ 6 ರಂದು ಆದೇಶ ಕಾಯ್ದಿರಿಸಿದ್ದರು.
ಹಿಂದೂಗಳು ದಾಖಲಿಸಿರುವ ಮೊಕದ್ದಮೆ ವಿಚಾರಣೆಯನ್ನು ಪೂಜಾ ಸ್ಥಳಗಳ ಸಂರಕ್ಷಣಾ ಕಾಯ್ದೆ ಇತ್ಯಾದಿಗಳ ಅಡಿಯಲ್ಲಿ ನಿರ್ಬಂಧಿಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಕೃಷ್ಣ ಜನ್ಮಭೂಮಿ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸುವಂತೆ ಹಿಂದೂಗಳು ಕೋರಿದ್ದಾರೆ. ಔರಂಗ್‌ಝೇಬ್ ಕಾಲದ ಮಸೀದಿಯನ್ನು ದೇವಸ್ಥಾನವನ್ನು ನೆಲಸಮಗೊಳಿಸಿದ ಬಳಿಕ ನಿರ್ಮಿಸಲಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ : ಪರಿಶಿಷ್ಟ ಜಾತಿ, ಪಂಗಡಗಳಲ್ಲೇ ಹಿಂದುಳಿದ ಸಮುದಾಯಗಳಿಗೆ ಪ್ರತ್ಯೇಕ ಮೀಸಲಾತಿ: ಸುಪ್ರೀಂ ಕೋರ್ಟ್ ಸಮ್ಮತಿ


