ಮಂಗಳೂರು ಹೊರವಲಯದ ಕುಡುಪು ಬಳಿ 2025ರ ಏಪ್ರಿಲ್ 27ರಂದು ನಡೆದ ಕೇರಳ ಮೂಲದ ಮುಹಮ್ಮದ್ ಅಶ್ರಫ್ ಅವರ ಗುಂಪು ಹತ್ಯೆ ಪ್ರಕರಣದ ಆರೋಪಿ ನಟೇಶ್ ಕುಮಾರ್‌ಗೆ ಹೈಕೋರ್ಟ್ ಶುಕ್ರವಾರ (ಜ.23) ಜಾಮೀನು ಮಂಜೂರು ಮಾಡಿದೆ.
ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣವರ್ ಅವರು ನಟೇಶ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ ಜಾಮೀನು ಮಂಜೂರು ನೀಡಿದ್ದಾರೆ.
ಪ್ರಕರಣದ ತನಿಖೆ ಪೂರ್ಣಗೊಂಡು ಚಾರ್ಜ್‌ಶೀಟ್ ಸಲ್ಲಿಕೆಯಾಗಿರುವುದು, ಆರೋಪಿಯು ಈಗಾಗಲೇ ಸುದೀರ್ಘ ಕಾಲ (2025ರ ಏಪ್ರಿಲ್‌ನಿಂದ) ನ್ಯಾಯಾಂಗ ಬಂಧನದಲ್ಲಿರುವುದು ಮತ್ತು ಹೆಚ್ಚಿನ ಕಸ್ಟಡಿ ವಿಚಾರಣೆಯ ಅಗತ್ಯವಿಲ್ಲದಿರುವುದನ್ನು ಗಮನಿಸಿ ನ್ಯಾಯಾಲಯ ಜಾಮೀನು ನೀಡಿದೆ ಎಂದು ವರದಿಯಾಗಿದೆ.
ಕ್ರಿಕೆಟ್ ಪಂದ್ಯದ ವೇಳೆ ಅಶ್ರಫ್ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ್ದರು ಎಂದು ಆರೋಪಿಸಿ ಗುಂಪು ಹತ್ಯೆ ನಡೆಸಲಾಗಿತ್ತು. ಈ ವೇಳೆ ನಟೇಶ್ ಅಶ್ರಫ್ ಕಣ್ಣಿಗೆ ಮೆಣಸಿನ ಪುಡಿ ಎರಚಿ ಇತರರನ್ನು ಹಲ್ಲೆಗೆ ಪ್ರಚೋದಿಸಿದ್ದರು ಎಂದು ಪ್ರಾಸಿಕ್ಯೂಷನ್ ವಾದಿಸಿದೆ.
ನ್ಯಾಯಾಲಯವು ಆರೋಪಿಗೆ ಸಾಕ್ಷ್ಯಗಳನ್ನು ನಾಶಪಡಿಸಬಾರದು, ವಿಚಾರಣೆಗೆ ಸಹಕರಿಸಬೇಕು, ರೂ. 1,00,00 ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತಕ್ಕೆ ಒಬ್ಬರನ್ನು ಶ್ಯೂರಿಟಿ ಇಡಬೇಕು ಎಂಬ ಷರತ್ತುಗಳನ್ನು ವಿಧಿಸಿದೆ.
ಈ ಪ್ರಕರಣದಲ್ಲಿ ಈಗಾಗಲೇ ಸಚಿನ್, ದೀಕ್ಷಿತ್, ಸಂದೀಪ್ ಹಾವೇರಿ ಸೇರಿದಂತೆ ಇತರ ಕೆಲವು ಆರೋಪಿಗಳಿಗೂ ವಿವಿಧ ಹಂತಗಳಲ್ಲಿ ಜಾಮೀನು ಲಭಿಸಿದೆ.


