ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಅಧಿಕಾರಿಯೊಬ್ಬರು ತಮ್ಮ ಸಮುದಾಯದ ಹತ್ತು ಪುರುಷರ “ಕಾನೂನುಬಾಹಿರ ಹತ್ಯೆ”ಯಲ್ಲಿ ಭಾಗಿಯಾಗಿದ್ದಾರೆ ಎಂದು ಮಣಿಪುರದ ಕುಕಿ-ಝೋ ಸಂಘಟನೆಗಳು ಸೋಮವಾರ (ಜ.26) ಆರೋಪಿಸಿದ್ದು, ಆ ಅಧಿಕಾರಿಗೆ ಶೌರ್ಯ ಚಕ್ರ ನೀಡಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಟೀಕಿಸಿವೆ.
ಸಿಆರ್‌ಪಿಎಫ್ 20ನೇ ಬೆಟಾಲಿಯನ್‌ನ ಸಹಾಯಕ ಕಮಾಂಡೆಂಟ್ ವಿಪಿನ್ ವಿಲ್ಸನ್ ಅವರಿಗೆ ನೀಡಿರುವ ಪ್ರಶಸ್ತಿಯನ್ನು ಹಿಂತೆಗೆದುಕೊಳ್ಳಬೇಕೆಂದು ಕುಕಿ ಆರ್ಗನೈಸೇಶನ್ ಫಾರ್ ಹ್ಯೂಮನ್ ರೈಟ್ಸ್ ಟ್ರಸ್ಟ್ ಮತ್ತು ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ ಒತ್ತಾಯಿಸಿವೆ.
ಜನವರಿ 25ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಶಸ್ತ್ರ ಪಡೆಗಳ 70 ಸಿಬ್ಬಂದಿಗೆ ಶೌರ್ಯ ಪ್ರಶಸ್ತಿಗಳನ್ನು ಅನುಮೋದಿಸಿದ್ದು, ದೇಶದ ಮೂರನೇ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿಯಾದ ಶೌರ್ಯ ಚಕ್ರವನ್ನು ಪಡೆದ 13 ಸಿಬ್ಬಂದಿಗಳಲ್ಲಿ ವಿಲ್ಸನ್ ಕೂಡ ಒಬ್ಬರು.
ನವೆಂಬರ್ 11, 2024ರಂದು ವಿಲ್ಸನ್ ಮಣಿಪುರದಲ್ಲಿ ದಂಗೆಕೋರರ ಶಿಬಿರದ ದಾಳಿಯನ್ನು ವಿಫಲಗೊಳಿಸಲು ಮತ್ತು ಅವರಲ್ಲಿ 10 ಜನರನ್ನು ತಟಸ್ಥಗೊಳಿಸಲು ಸಿಬ್ಬಂದಿ ತಂಡವನ್ನು ಮುನ್ನಡೆಸಿದ್ದರು. ಅವರ ಅಪ್ರತಿಮ ಧೈರ್ಯಕ್ಕಾಗಿ ಈ ಗಣರಾಜ್ಯೋತ್ಸವದಂದು ಶೌರ್ಯ ಚಕ್ರವನ್ನು ಪ್ರದಾನ ಮಾಡಲಾಗುತ್ತದೆ ಎಂದು ಸಿಆರ್‌ಪಿಎಫ್ ಭಾನುವಾರ (ಜ.25) ರಾತ್ರಿ ತಿಳಿಸಿತ್ತು.
ಮಣಿಪುರದ ಜಿರಿಬಮ್ ಜಿಲ್ಲೆಯ ಬೊರೊಬೆಕ್ರಾ ಪ್ರದೇಶದ ಸಿಆರ್‌ಪಿಎಫ್ ಪೋಸ್ಟ್‌ನಲ್ಲಿ ಗುಂಡಿನ ಚಕಮಕಿ ನಡೆದಿತ್ತು. ದಾಳಿಯ ಸಮಯದಲ್ಲಿ, ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದವರು ಶಂಕಿತ ಕುಕಿ ಉಗ್ರಗಾಮಿಗಳು ಎಂದು ಮಣಿಪುರ ಪೊಲೀಸರು ಹೇಳಿಕೊಂಡಿದ್ದರು. ಆದರೆ, ಕುಕಿ-ಝೋ ಸಂಘಟನೆಗಳು ಅವರು ಗ್ರಾಮ ಸ್ವಯಂಸೇವಕರು ಎಂದು ಹೇಳಿಕೊಂಡಿದ್ದವು.
ಮೇ 2023ರಲ್ಲಿ ಕುಕಿ-ಝೋ-ಹ್ಮಾರ್ಸ್ ಮತ್ತು ಮೈತೇಯಿ ಸಮುದಾಯಗಳ ನಡುವೆ ಜನಾಂಗೀಯ ಘರ್ಷಣೆಗಳು ಭುಗಿಲೆದ್ದಾಗಿನಿಂದ ಗ್ರಾಮಗಳನ್ನು ಕಾಯುತ್ತಿರುವ ಸಶಸ್ತ್ರ ನಾಗರಿಕರಿಗೆ “ಗ್ರಾಮ ಸ್ವಯಂಸೇವಕರು” ಎಂಬ ಪದವನ್ನು ಬಳಸಲಾಗುತ್ತಿದೆ. ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರದಿಂದಾಗಿ ಕನಿಷ್ಠ 260 ಜನರು ಸಾವನ್ನಪ್ಪಿದ್ದಾರೆ ಮತ್ತು 59,000ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ.
ಸೋಮವಾರ ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆಯು, ಸಹಾಯಕ ಕಮಾಂಡೆಂಟ್‌ಗೆ ಶೌರ್ಯ ಚಕ್ರವನ್ನು ನೀಡುವ ಕೇಂದ್ರ ಸರ್ಕಾರದ ನಿರ್ಧಾರದಿಂದ ದಿಗ್ಭ್ರಮೆಗೊಂಡಿರುವುದಾಗಿ ಎಂದು ಹೇಳಿದೆ. ಈ ಪ್ರಶಸ್ತಿಯು ಕುಕಿ-ಝೋ ಸಮುದಾಯಕ್ಕೆ ಮಾಡಲಾದ ‘ತಾರತಮ್ಯ ಮತ್ತು ಅನ್ಯಾಯದ ಮುಂದುವರಿಕೆ’ ಎಂದಿದೆ.
ಅಧಿಕಾರಿಗಳು ಆರೋಪಿಸಿದಂತೆ 10 ಗ್ರಾಮ ಸ್ವಯಂಸೇವಕರು ಸಿಆರ್‌ಪಿಎಫ್ ಪೋಸ್ಟ್ ಮೇಲೆ ದಾಳಿ ಮಾಡಲು ಯಾವುದೇ ಕಾರಣವಿಲ್ಲ ಎಂದು ವೇದಿಕೆ ಹೇಳಿದೆ. ಈ ಪುರುಷರು ಹೆಚ್ಚಾಗಿ ದಿನಗೂಲಿ ಕಾರ್ಮಿಕರ ಗುಂಪಾಗಿದ್ದು, ಅವರು ತಮ್ಮ ಜನರನ್ನು ರಕ್ಷಿಸಲು ಸ್ವಯಂಸೇವಕರಾಗಿದ್ದರು. ಪೊಲೀಸರು ಆರೋಪಿಸಿದಂತೆ ತರಬೇತಿ ಪಡೆದ ‘ಉಗ್ರಗಾಮಿಗಳು’ ಅಲ್ಲ ಎಂದು ತಿಳಿಸಿದೆ.
ಸಿಆರ್‌ಪಿಎಫ್ ಪೋಸ್ಟ್ ಮೇಲೆ ದಾಳಿ ಮಾಡಲಾಗಿದೆ ಎಂಬ ಅಧಿಕೃತ ನಿರೂಪಣೆಗೆ ವಿರುದ್ಧವಾಗಿ, ಶವಪರೀಕ್ಷೆ ವರದಿಗಳು ಪುರುಷರಿಗೆ ಹಿಂದಿನಿಂದ ಗುಂಡು ಹಾರಿಸಲಾಗಿದೆ ಎಂದು ಬಹಿರಂಗಪಡಿಸಿವೆ ಎಂದು ವೇದಿಕೆ ಹೇಳಿಕೆಯಲ್ಲಿ ತಿಳಿಸಿದೆ. ತಮ್ಮ ಸಮುದಾಯವನ್ನು ರಕ್ಷಿಸಲು ಪ್ರಯತ್ನಿಸಿದ ಪುರುಷರ ಮೇಲೆ ಮಾತ್ರ ಗುಂಡು ಹಾರಿಸಲು ನಿರ್ಧರಿಸಿದ್ದ ವಿಲ್ಸನ್ ಅವರಿಗೆ ಪ್ರಶಸ್ತಿ ನೀಡುವುದನ್ನು ಅದು ಪ್ರಶ್ನಿಸಿದೆ.
ಕುಕಿ ಆರ್ಗನೈಸೇಶನ್ ಫಾರ್ ಹ್ಯೂಮನ್ ರೈಟ್ಸ್ ಟ್ರಸ್ಟ್ ಕೂಡ ಪ್ರಶಸ್ತಿಯನ್ನು ಖಂಡಿಸಿ, ಈ ಗೌರವವು ರಾಷ್ಟ್ರೀಯ ಹೆಮ್ಮೆಯ ಕಾರ್ಯವಲ್ಲ, ಬದಲಿಗೆ ಕಾನೂನುಬಾಹಿರ ಹತ್ಯೆಗೆ ಸರ್ಕಾರದ ಅನುಮೋದನೆ ಎಂದು ಆರೋಪಿಸಿದೆ.
ವಿಧಿ ವಿಜ್ಞಾನ ವರದಿಗಳು ಮತ್ತು ಪ್ರತ್ಯಕ್ಷದರ್ಶಿಗಳ ಸಾಕ್ಷ್ಯಗಳು ಸೇರಿದಂತೆ ವಿಶ್ವಾಸಾರ್ಹ ಪುರಾವೆಗಳು, ಬಲಿಪಶುಗಳು ನಿರಾಯುಧರಾಗಿದ್ದರು ಅಥವಾ ಜನಾಂಗೀಯ ಹಿಂಸಾಚಾರದ ಅವಧಿಯಲ್ಲಿ ಸಮುದಾಯ ರಕ್ಷಣಾ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದರು ಎಂಬುವುದಾಗಿ ದೃಢಪಡಿಸುತ್ತದೆ ಎಂದು ಸಂಸ್ಥೆ ಹೇಳಿದೆ.
ಅವರನ್ನು ಉಗ್ರಗಾಮಿಗಳು ಎಂದು ಹಣೆಪಟ್ಟಿ ಕಟ್ಟುವ ಸರ್ಕಾರದ ನಿರೂಪಣೆಯು ಏಕಪಕ್ಷೀಯ, ಅಸಮಾನವಾದ ಮಾರಕ ಬಲಪ್ರಯೋಗವನ್ನು ಸಮರ್ಥಿಸಲು ವಿನ್ಯಾಸಗೊಳಿಸಲಾದ ಕಟ್ಟುಕಥೆಯಾಗಿದೆ. “ಇದು ಎನ್‌ಕೌಂಟರ್ ಅಲ್ಲ, ಮರಣದಂಡನೆ” ಎಂದಿದೆ.
ವಿಲ್ಸನ್ ಅವರಿಗೆ ಪ್ರಶಸ್ತಿ ನೀಡಿರುವುದು ಸಾಂವಿಧಾನಿಕ ಮೌಲ್ಯಗಳಿಗೆ ಮಾಡಿದ ಆಳವಾದ ದ್ರೋಹ ಮತ್ತು ಕುಕಿ-ಝೋ ಜನರ ಜೀವನದ ಬಗ್ಗೆ ತಿರಸ್ಕಾರವನ್ನು ಪ್ರದರ್ಶಿಸುತ್ತದೆ ಎಂದು ಸಂಸ್ಥೆ ಅಸಮಾಧಾನ ಹೊರಹಾಕಿದೆ.
ಪ್ರಶಸ್ತಿಯನ್ನು ರದ್ದುಗೊಳಿಸುವುದರ ಜೊತೆಗೆ, ಹತ್ಯೆಯ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಸ್ವತಂತ್ರ ತನಿಖಾ ಸಮಿತಿಯನ್ನು ಸ್ಥಾಪಿಸಬೇಕೆಂದು ಕುಕಿ ಆರ್ಗನೈಸೇಶನ್ ಫಾರ್ ಹ್ಯೂಮನ್ ರೈಟ್ಸ್ ಟ್ರಸ್ಟ್ ಒತ್ತಾಯಿಸಿದೆ.


