ಸಂಘ ಪರಿವಾರದ ಕೆಂಗಣ್ಣಿಗೆ ಗುರಿಯಾಗಿರುವ ಮೋಹನ್ ಲಾಲ್ ಅಭಿನಯದ ‘ಎಂಪುರಾನ್’ (L2: Empuraan) ಚಿತ್ರದ ನಿರ್ಮಾಪಕರು ಚಿತ್ರದಲ್ಲಿ ಸ್ವಯಂಪ್ರೇರಿತ ಮಾರ್ಪಾಡುಗಳನ್ನು ಮಾಡಲು ನಿರ್ಧರಿಸಿದ್ದಾರೆ ಎಂದು ತಿರುವನಂತಪುರಂನಲ್ಲಿರುವ ಪ್ರಾದೇಶಿಕ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ (ಸಿಬಿಎಫ್‌ಸಿ) ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ವರದಿಯಾಗಿದೆ.
“ಸೆನ್ಸಾರ್ ಮಂಡಳಿಯಿಂದ ಈಗಾಗಲೇ ಪ್ರಮಾಣೀಕರಿಸಲ್ಪಟ್ಟ ಚಲನಚಿತ್ರದ ಸ್ವಯಂಪ್ರೇರಿತ ಮಾರ್ಪಾಡುಗಳಿಗೆ ಅವಕಾಶವಿದೆ. ಈ ಸಂಬಂಧ ನಿರ್ಮಾಪಕರು ಈಗಾಗಲೇ ಮಂಡಳಿಯನ್ನು ಸಂಪರ್ಕಿಸಿದ್ದಾರೆ. ಏನೆಲ್ಲ ಮಾರ್ಪಾಡುಗಳನ್ನು ಮಾಡಬೇಕೆಂಬುದು ಅವರ ವಿವೇಚನೆಗೆ ಬಿಟ್ಟದ್ದು. ನಮ್ಮ ಕಾರ್ಯವಿಧಾನದ ಪ್ರಕಾರ, ನಾವು ಸ್ವಯಂಪ್ರೇರಿತ ಮಾರ್ಪಾಡುಗಳಿಗೆ ಅನುಮತಿಸುತ್ತೇವೆ” ಎಂದು ಅಧಿಕಾರಿ ಹೇಳಿದ್ದಾಗಿ ವರದಿ ತಿಳಿಸಿದೆ.
ಗುರುವಾರ ವಿಶ್ವದಾದ್ಯಂತ ತೆರೆ ಕಂಡಿರುವ ನಟ-ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ಎಂಪುರಾನ್ ಚಿತ್ರದಲ್ಲಿ, 2002ರ ಗುಜರಾತ್ ಗಲಭೆಯ ಉಲ್ಲೇಖ ಬಲಪಂಥೀಯ ಗುಂಪುಗಳು ಮತ್ತು ಬೆಂಬಲಿಗರ ವಿರೋಧಕ್ಕೆ ಕಾರಣವಾಗಿದೆ. “ಈ ಚಿತ್ರವು ಹಿಂದೂ ಧರ್ಮವನ್ನು ಅಪಮಾನಗೊಳಿಸಿದೆ ಮತ್ತು ರಾಷ್ಟ್ರ ವಿರೋಧಿ ಅಂಶಗಳನ್ನು ಸಮಾಧಾನಪಡಿಸುವ ಗುರಿ ಹೊಂದಿದೆ” ಎಂದು ಬಲಪಂಥೀಯರು ಆರೋಪಿಸಿದ್ದಾರೆ.
ಬಿಜೆಪಿ ಮತ್ತು ಸಂಘಪರಿವಾರದ ನಾಯಕರು ಎಂಪುರಾನ್ ಚಿತ್ರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರೆ, ಬಿಜೆಪಿ ಪಕ್ಷ ಅಧಿಕೃತವಾಗಿ ಚಿತ್ರವನ್ನು ವಿರೋಧಿಸಿಲ್ಲ. ವಿವಾದದಿಂದ ದೂರವಿರಲು ಪ್ರಯತ್ನಿಸಿರುವ ಬಿಜೆಪಿ, “ಚಿತ್ರದ ವಿರುದ್ಧ ಪ್ರಚಾರ ಮಾಡುವುದಿಲ್ಲ. ಇದನ್ನು ಒಂದು ಸಿನಿಮಾ ಆಗಿ ಮಾತ್ರ ನೋಡಬೇಕು” ಎಂದಿದೆ.
“ಸಿನಿಮಾವನ್ನು ವಿಭಜನಕಾರಿ ರಾಜಕೀಯ ಕಾರ್ಯಸೂಚಿಗೆ ವೇದಿಕೆಯಾಗಿ ಬಳಸಲಾಗುತ್ತಿದೆಯೇ ಎಂದು ವಿಮರ್ಶಕರು ಮತ್ತು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ” ಎಂದು ಆರ್‌ಎಸ್‌ಎಸ್ ಮುಖವಾಣಿ ಆರ್ಗನೈಸರ್‌ನ ವೆಬ್‌ಸೈಟ್‌ನಲ್ಲಿನಲ್ಲಿ ಪ್ರಕಟಗೊಂಡ ಲೇಖನವೊಂದು ತಿಳಿಸಿದೆ.
“ಇಡೀ ಹಿಂದೂ ಸಮುದಾಯವನ್ನು ಅವಹೇಳನ ಮಾಡಲು, ಗುಜರಾತ್ ಹಿಂಸಾಚಾರವನ್ನು ಉಲ್ಲೇಖಿಸಿ ಮಲಯಾಳಂ ಚಲನಚಿತ್ರವು ಹಿಂದೂಗಳನ್ನು ರಕ್ಷಕರಂತೆ ಚಿತ್ರಿಸಬಹುದಾದ ಸಂದರ್ಭಗಳಲ್ಲಿಯೂ ಸಹ ಖಳನಾಯಕರಂತೆ ಚಿತ್ರಿಸಿದೆ” ಎಂದು ಲೇಖನ ಹೇಳಿದೆ.

“2002ರ ಗುಜರಾತ್ ಗಲಭೆಯಲ್ಲಿ ಹಿಂದೂಗಳು ಪ್ರಾಥಮಿಕ ಆಕ್ರಮಣಕಾರರು ಎಂಬ ಚಿತ್ರಣವನ್ನು ಬಲಪಡಿಸಲು, ಎರಡು ಸಮುದಾಯಗಳ ನಡುವೆ ದ್ವೇಷವನ್ನು ಶಾಶ್ವತಗೊಳಿಸಲು ಮತ್ತು ಹಿಂದೂಗಳನ್ನು ಖಳನಾಯಕರಂತೆ ಬಿಂಬಿಸಲು ಚಿತ್ರದಲ್ಲಿ ಉದ್ದೇಶಪೂರ್ವಕವಾಗಿ ಪ್ರಯತ್ನಿಸಲಾಗಿದೆ” ಎಂದು ಲೇಖನ ತಿಳಿಸಿದೆ.
“ವಿಭಜಕ ಮತ್ತು ರಾಜಕೀಯವಾಗಿ ಪ್ರಭಾವಿತವಾದ ನಿರೂಪಣೆಯನ್ನು ಉತ್ತೇಜಿಸುವ ಚಿತ್ರದಲ್ಲಿ ನಟಿಸುವ ನಟನ ನಿರ್ಧಾರವು ಅವರ ನಿಷ್ಠಾವಂತ ಅಭಿಮಾನಿ ಬಳಗಕ್ಕೆ ಮಾಡಿದ ದ್ರೋಹವಾಗಿದೆ” ಎಂದು ಲೇಖನವು ಮೋಹನ್ ಲಾಲ್ ಅವರನ್ನು ಉಲ್ಲೇಖಿಸಿ ಹೇಳಿದೆ.
ಕೆಲವು ಬಿಜೆಪಿ ನಾಯಕರು ಚಿತ್ರದ ವಿರುದ್ಧ ಧ್ವನಿ ಎತ್ತಿದ್ದಾರೆ. ಭಾರತೀಯ ಜನತಾ ಯುವ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ, ಬಿಜೆಪಿ ಯುವ ಘಟಕದ ನಾಯಕ ಕೆ. ಗಣೇಶ್ ಶನಿವಾರ ಈ ಚಿತ್ರವು “ರಾಷ್ಟ್ರವಿರೋಧಿ ಅಂಶಗಳಿಂದ ತುಂಬಿದೆ” ಎಂದು ಹೇಳಿದ್ದಾರೆ. “ನಿರ್ದೇಶಕ ಪೃಥ್ವಿರಾಜ್ ಅವರ ವಿದೇಶಿ ಸಂಪರ್ಕಗಳನ್ನು ತನಿಖೆ ಮಾಡಬೇಕು. ಅವರು ಇಸ್ಲಾಮಿಕ್ ಸ್ಟೇಟ್‌ನ ಸಿದ್ಧಾಂತದಿಂದ ಪ್ರಭಾವಿತರಾಗಿದ್ದಾರೆಯೇ ಎಂದು ಅನುಮಾನ ಬರುತ್ತಿದೆ” ಎಂದಿದ್ದಾರೆ.
“ವಿವಾದ ಉಲ್ಬಣಗೊಳ್ಳುತ್ತಿದ್ದಂತೆ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಗೋಕುಲಂ ಗೋಪಾಲನ್ ಅವರು ಪ್ರತಿಕ್ರಿಯಿಸಿ, ಚಿತ್ರದಲ್ಲಿ ಮಾರ್ಪಾಡುಗಳನ್ನು ಮಾಡಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ. ನಮ್ಮ ಚಿತ್ರ ಯಾರನ್ನೂ ನೋಯಿಸುವ ಉದ್ದೇಶ ಹೊಂದಿಲ್ಲ” ಎಂದು ತಿಳಿಸಿದ್ದಾರೆ.
ಡ್ರಗ್ಸ್ ವಿರುದ್ಧ ಸಮರಕ್ಕಿಳಿದ ‘ಫರೀಷಾ ಆಬಿದ್’: ಪಂಚಾಯತ್ ಅಧ್ಯಕ್ಷೆಯ ಬೆನ್ನಿಗೆ ನಿಂತ ಜನತೆ


