Homeಮುಖಪುಟಲಖೀಂಪುರ್ ರೈತ ಹತ್ಯೆ; ಅಧಿಕಾರದ ಪರವಾಗಿ ನಿಂತ ಮಾಧ್ಯಮಗಳ ದುರುಳತನ

ಲಖೀಂಪುರ್ ರೈತ ಹತ್ಯೆ; ಅಧಿಕಾರದ ಪರವಾಗಿ ನಿಂತ ಮಾಧ್ಯಮಗಳ ದುರುಳತನ

- Advertisement -
- Advertisement -

ಭಾರತ ಕೃಷಿ ಪ್ರಧಾನ ರಾಷ್ಟ್ರ. ರೈತರನ್ನು ಅನ್ನದಾತರೆಂದು ಕರೆದು, ಜೈಜವಾನ್ ಜೈ ಕಿಸಾನ್ ಎಂಬ ಘೋಷವಾಕ್ಯಗಳು ಮೊಳಗಿದ ಇದೇ ನೆಲದಲ್ಲಿ, ರೈತರ ಮೇಲೆ ಲಾಠಿ ಪ್ರಹಾರ, ಹಲ್ಲೆ ಇಷ್ಟೇ ಏಕೆ ಗೋಲಿಬಾರ್‌ನಂತಹ ಹೇಯ ಕೃತ್ಯಗಳು ನಡೆದು ನೆಲಕ್ಕೆ ರೈತರ ರಕ್ತವನ್ನು ಅಂಟಿಸಿದ ಉದಾಹರಣೆಗಳೂ ಇಲ್ಲಿ ಸಾಕಷ್ಟ್ಟಿವೆ. ಪ್ರತಿಭಟನೆ, ಪ್ರಕ್ಷುಬ್ಧತೆ, ದೊಂಬಿ, ಗಲಭೆ ಹೀಗೆ ನಾನಾ ಹೆಸರಿನಲ್ಲಿ ಕರೆದು, ಈ ಪ್ರಕರಣಗಳು ಜನಮಾನಸದಿಂದ ಕಳೆದುಹೋದದ್ದೂ ಇದೆ. ದುರಂತವೆಂದರೆ, ಕೇಂದ್ರ ಸಚಿವರೊಬ್ಬರ ಮಗನೊಬ್ಬನ ಕಾರು ರೈತರ ಮೇಲೆ ಹರಿದು ನಾಲ್ಕು ರೈತರ ಸಾವಿಗೆ ಕಾರಣವಾದ ಆರೋಪವನ್ನು ಎದುರಿಸುತ್ತಿದ್ದಾರೆ. ಇಂತಹ ಪ್ರಕರಣ ಭಾರತದ ಇತಿಹಾಸದಲ್ಲಿ ದಾಖಲಾದದ್ದು ಇದೇ ಮೊದಲು ಎನ್ನಬಹುದು. ಇದಕ್ಕಿಂತಲೂ ದುರಂತವೆಂದರೆ ಹಲವು ಮುಖ್ಯವಾಹಿನಿ ಮಾಧ್ಯಮಗಳ ಅಸಹನೀಯ ಮೌನ ಮತ್ತು ನೈಜ ಸುದ್ದಿಯನ್ನೇ ತಿರುಚಲು ಮುಂದಾದ ಕ್ರಿಮಿನಲ್ ಕೆಲಸ.

ಏನಿದು ಲಖೀಂಪುರ್ ರೈತ ಹತ್ಯಾಕಾಂಡ?

ಅದು ಅಕ್ಟೋಬರ್ 03. ಕೇಂದ್ರ ಸಚಿವ ಅಜಯ್ ಮಿಶ್ರಾ ತಮ್ಮ ತಂದೆಯ ಪುಣ್ಯ ತಿಥಿ ಕಾರ್ಯವನ್ನು ಹಮ್ಮಿಕೊಂಡಿದ್ದರು. ಅಜಯ್ ಮಿಶ್ರಾ ಪ್ರತಿ ವರ್ಷ ತಮ್ಮ ತಂದೆಯ ತಿಥಿ ದಿನ ತನ್ನ ಊರಾದ ಲಖೀಂಪುರ್ ಬಳಿಯ ನಿಗಸನ್‌ನಲ್ಲಿ ಕುಸ್ತಿ ಆಟವನ್ನು ಆಯೋಜಿಸುವುದು ಮತ್ತು ಆ ಕಾರ್ಯಕ್ರಮಕ್ಕೆ ಹಿರಿಯ ಸಚಿವರನ್ನು ಕರೆಸುವುದು ವಾಡಿಕೆ. ಅದರಂತೆ ಈ ವರ್ಷದ ಕಾರ್ಯಕ್ರಮಕ್ಕೆ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿಯಾದ ಕೇಶವ ಪ್ರಸಾದ್ ಮೌರ್ಯ ಅವರನ್ನು ಆಹ್ವಾನಿಸಲಾಗಿತ್ತು.

ಅಜಯ್ ಮಿಶ್ರಾ

ಆದರೆ, ಮತ್ತೊಂದೆಡೆ ಕೇಂದ್ರ ಸರ್ಕಾರದ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶದ ರೈತರು ಕಳೆದ ಒಂದು ವರ್ಷದಿಂದ ಸತತ ಹೋರಾಟವನ್ನು ನಡೆಸುತ್ತಿದ್ದಾರೆ. ವಿವಿಧ ರಾಜ್ಯಗಳಲ್ಲಿ ಈ ಹೋರಾಟ ಸದ್ಯಕ್ಕೆ ತಣ್ಣಗಾಗಿದ್ದರೂ ಸಹ ಪಂಜಾಬ್, ಹರಿಯಾಣ, ದೆಹಲಿಯ ಗಡಿಭಾಗ ಮತ್ತು ದೆಹಲಿಯೊಂದಿಗೆ ಗಡಿ ಹಂಚಿಕೊಂಡಿರುವ ಪಶ್ಚಿಮ ಉತ್ತರ ಪ್ರದೇಶದಲ್ಲಿ ರೈತ ಹೋರಾಟ ವರ್ಷ ಕಳೆದರೂ ತಣ್ಣಗಾಗಿಲ್ಲ. ಅಧಿಕ ಸಂಖ್ಯೆಯ ಸಿಖ್ ಸಮುದಾಯ ನೆಲೆಸಿರುವ ಉತ್ತರಪ್ರದೇಶದ ಲಖೀಂಪುರ್‌ನಲ್ಲೂ ಸಹ ರೈತರು ನಿರಂತರ ಹೋರಾಟ ನಡೆಸುತ್ತಿದ್ದರೂ ಸಹ ಕೇಂದ್ರ-ರಾಜ್ಯ ಸರ್ಕಾರಗಳು ಈವರೆಗೆ ಕ್ಯಾರೆ ಎಂದಿಲ್ಲ.

ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಲಖೀಂಪುರಕ್ಕೆ ಆಗಮಿಸುತ್ತಿದ್ದಾರೆ ಎಂದು ತಿಳಿದ ತಕ್ಷಣ ರೈತರು ಅವರಿಗೆ ಕಪ್ಪು ಬಾವುಟವನ್ನು ಪ್ರದರ್ಶಿಸುವ ಸಲುವಾಗಿ ಹೆಲಿಪ್ಯಾಡ್‌ಗೆ ತೆರಳಿದ್ದಾರೆ. ಆದರೆ, ರೈತ ಹೋರಾಟದ ಮಾಹಿತಿ ತಿಳಿದು ಅವರನ್ನು ಕೊನೆಗೆ ರಸ್ತೆ ಮಾರ್ಗವಾಗಿ ನಿಗಸನ್‌ಗೆ ಕರೆತರುವ ಜವಾಬ್ದಾರಿಯನ್ನು ಅಜಯ್ ಮಿಶ್ರಾ ಅವರ ಮಗ ಆಶೀಶ್ ಮಿಶ್ರಾಗೆ ನೀಡಲಾಗಿತ್ತು.

ಆಶೀಶ್ ಮಿಶ್ರಾ ಕಾರ್‌ನಲ್ಲಿ ಬೇರೊಂದು ರಸ್ತೆ ಮಾರ್ಗವಾಗಿ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರನ್ನು ನಿಗಸನ್‌ಗೆ ಕರೆದುಕೊಂಡು ಹೋಗುವ ವಿಚಾರ ತಿಳಿದು ರೈತರು ಅಲ್ಲೂ ಶಾಂತಿಯುತ ಹೋರಾಟ ನಡೆಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಪ್ಪು ಬಾವುಟ ಪ್ರದರ್ಶಿಸುವುದು ಮತ್ತು ಹೋರಾಡುವುದು ತೀರಾ ಸಾಮಾನ್ಯ ವಿಚಾರ. ಆಶೀಶ್ ಮಿಶ್ರಾ ಅವರು ಚಲಿಸುತ್ತಿದ್ದ ಕಾರು ರೈತರ ಮೇಲೆ ಏಕಾಏಕಿ ಹತ್ತಿದ ಪರಿಣಾಮ ನಾಲ್ಕು ಜನ ರೈತರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನು ಆಶೀಶ್ ಮಿಶ್ರಾ ಅಲ್ಲಗೆಳೆದಿದ್ದರೂ, ಲಭ್ಯವಾಗಿರುವ ವಿಡಿಯೋದಲ್ಲಿ ಶಾಂತಿಯುತ ರೈತರ ಮೇಲೆ ಕಾರು ಹತ್ತಿಸುವುದು ಸ್ಪಷ್ಟವಾಗಿದೆ. ನಂತರ ನಡೆದ ಹಿಂಸಾಚಾರದಲ್ಲಿ ಪತ್ರಕರ್ತ ಸೇರಿದಂತೆ 5 ಜನ ಮೃತಪಟ್ಟಿದ್ದರು.

ಸಚಿವರೊಬ್ಬರ ಮಗನ ಕಾರು ರೈತರ ಮೇಲೆ ಏಕಾಏಕಿ ಹರಿದ ಆರೋಪ ರಾಷ್ಟ್ರ ಮತ್ತು ಸ್ಥಳೀಯ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಬೇಕಿತ್ತು. ಇದು ಅಜಯ್ ಮಿಶ್ರಾ ರಾಜೀನಾಮೆಗೆ ದೊಡ್ಡ ಕೂಗಾಗಿ ಮಾರ್ಪಡಬೇಕಿತ್ತು, ಅಧಿಕಾರದ ಅಮಲನ್ನು ಇಳಿಸಬೇಕಿತ್ತು ಎಂಬುದು ಸಂತ್ರಸ್ತರ ಮತ್ತು ರೈತರ ಅಳಲು. ಆದರೆ
ಹಲವು ಮಾಧ್ಯಮಗಳು ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡು ಅಧಿಕಾರದ ಪರವಾಗಿ ನಿಂತರು!

ಮುಖೇಡಿ ಮಾಧ್ಯಮಗಳು!

ಅದು ಕರ್ನಾಟಕದ ಮಾಜಿ ಸಚಿವ ಎನ್.ಎ. ಹ್ಯಾರೀಸ್ ಮಗ ನಲಪಾಡ್ ವಿಚಾರ. ಪಬ್ ಒಂದರಲ್ಲಿ ಕುಡಿದ ಮತ್ತಿನಲ್ಲಿ ಜತೆಗಾರನಿಗೆ ಹೊಡೆದ ಆರೋಪ ಎದುರಾಗಿತ್ತು. ಅಂದು ಕರ್ನಾಟಕದ ಬಹುತೇಕ ಎಲ್ಲಾ ಮಾಧ್ಯಮಗಳೂ ನಲಪಾಡ್ ವಿರುದ್ಧ ಪ್ರತಿವಾದಿಗಳಾಗಿದ್ದರು. ಟಿವಿ ಸ್ಟುಡಿಯೋಗಳೇ ಕೋರ್ಟ್‌ಗಳಾಗಿದ್ದವು, ಆಂಕರ್‌ಗಳೇ ಜಡ್ಜ್‌ಗಳಾಗಿದ್ದರು. ನಲಪಾಡ್ ವಿರುದ್ಧ ಧರ್ಮಯುದ್ಧ ಎಂಬ ಶೀರ್ಷಿಕೆಯ ಅಡಿಯಲ್ಲಿ ನಾನಾ ಕಾರ್ಯಕ್ರಮಗಳು, ಸುದ್ದಿಗಳು ಪ್ರಸಾರವಾಗಿದ್ದವು. ನಲಪಾಡ್ ವಿಚಾರದಲ್ಲಿ ಕರ್ನಾಟಕ ಮಾಧ್ಯಮಗಳು ಈಗಲೂ ಅದೇ ಧಾಟಿಯಲ್ಲಿ ಸುದ್ದಿ ನಿರೂಪಿಸುತ್ತಿವೆ ಎಂಬುದು ಬೇರೆ ಮಾತು. ಆದರೆ, ನಲಪಾಡ್ ವಿಚಾರದಲ್ಲಿ ಅಂದು ಉಗ್ರಾವೇಶ ತೋರಿದ್ದ ಕನ್ನಡ ಮಾಧ್ಯಮಗಳು ಅಕ್ಟೋಬರ್ 03ರಂದು ಮೌನವಾಗಿದ್ದೇಕೆ?

ಲಖೀಂಪುರ್ ರೈತ ಹತ್ಯೆ ಬಗ್ಗೆ ಇಡೀ ವಿಶ್ವ ಮಾತನಾಡುತ್ತಿದೆ. ಅಂತಾರಾಷ್ಟ್ರೀಯ ಮಾಧ್ಯಮಗಳು ಭಾರತದಲ್ಲಿ ಪ್ರಜಾಪ್ರಭುತ್ವ ಇದೆಯೇ ಎಂದು ಪ್ರಶ್ನೆ ಮಾಡುತ್ತಿವೆ. ಸಚಿವರ ಮಗನಿಂದ ಅಮಾನವೀಯ ಹೇಯ ಕೃತ್ಯ ನಡೆದ ಆರೋಪ ಇದ್ದರೂ ಸಹ ಇನ್ನೂ ಏಕೆ ಅಜಯ್ ಮಿಶ್ರಾ ಅವರಿಂದ ರಾಜೀನಾಮೆ ಪಡೆದಿಲ್ಲ ಎಂದು ಪ್ರಶ್ನೆ ಮಾಡುತ್ತಿವೆ. ಮೋದಿ ಸರ್ಕಾರವನ್ನು ಸರ್ವಾಧಿಕಾರಿ ಆಡಳಿತಕ್ಕೆ ಹೋಲಿಸಿ ಪ್ರಜಾಪ್ರಭುತ್ವದ ಪಾಠ ಮಾಡುತ್ತಿವೆ. ಆದರೆ, ದೇಶದ ಮಾಧ್ಯಮಗಳು ಮಾತ್ರ ಲಖೀಂಪುರ ಭಾರತದ ಭೂಗೋಳದಲ್ಲಿಯೇ ಇಲ್ಲವೇನೋ ಎಂಬಂತೆ ವರ್ತಿಸುತ್ತಿವೆ ಮತ್ತು ಕಂಡೂ ಕಾಣದಂತಿವೆ.

ಲಖೀಂಪುರದಲ್ಲಿ ಕಳೆದ ಒಂದು ವಾರದಲ್ಲಿ ಇಡೀ ಊರಿಗೆ ಊರೇ ಉದ್ವಿಗ್ನತೆಯಲ್ಲಿದ್ದರೂ ರೈತರ ಸಾವಿಗೆ ನ್ಯಾಯ ಕೇಳುತ್ತಿದ್ದರೂ ಸಹ ಇಲ್ಲಿನ ಮಾಧ್ಯಮಗಳು ಆ ಬಗ್ಗೆ ಚಕಾರ ಎತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಪ್ರಶ್ನೆ ಮಾಡುವ ಮತ್ತು ಹುತಾತ್ಮ ರೈತ ಕುಟುಂಬಗಳಿಗೆ ನ್ಯಾಯ ಒದಗಿಸುವ ಕೆಲಸಕ್ಕೆ ಮುಂದಾಗಿಲ್ಲ. ಜನರಿಗೆ ಸರಿಯಾದ ಮಾಹಿತಿಯನ್ನು ನೀಡುವತ್ತ ಗಮನ ಹರಿಸಿಲ್ಲ. ಬದಲಾಗಿ ಸಾಕಷ್ಟು ಚಾಕಚಕ್ಯತೆಯಿಂದ ಶಾರೂಖ್ ಖಾನ್ ಮಗನ ಡ್ರಗ್ಸ್ ಕೇಸ್‌ಅನ್ನು ನಿರಂತರವಾಗಿ ಭಿತ್ತರಿಸುವ ಮೂಲಕ ಜನರ ಗಮನವನ್ನು ಲಖೀಂಪುರದಿಂದ ಬೇರೆಡೆ ಸೆಳೆಯುವ ಕೆಲಸವನ್ನು ಮಾಡಿವೆ. ಇದನ್ನೇ ಅಲ್ಲವೇ ವೈಟ್ ಕಾಲರ್ ಕ್ರೈಂ ಎನ್ನುವುದು?

ಲಖೀಂಪುರ ಹತ್ಯಾಕಾಂಡದಲ್ಲಿ ಕನ್ನಡ ಮಾಧ್ಯಮಗಳ ವರಸೆ ಒಂದು ರೀತಿಯಾದರೆ ಇಂಗ್ಲಿಷ್ ಮತ್ತು ಹಿಂದಿ ಮುಖ್ಯವಾಹಿನಿ ಮಾಧ್ಯಮಗಳ ವರಸೆಯೇ ಮತ್ತೊಂದು. ಆಜ್ ತಕ್, ಜೀ ನ್ಯೂಸ್ ಬಿಜೆಪಿ ವಕ್ತಾರರನ್ನು ಲಖೀಂಪುರ್ ಹಿಂಸಾಚಾರದ ಕುರಿತು ಚರ್ಚಿಸಲು ’ರೈತ ನಾಯಕ’ ಎಂಬ ಪೋಲಿ ಮುಖವಾಡದಲ್ಲಿ ತಮ್ಮ ಸ್ಟುಡಿಯೋದಲ್ಲಿ ಕೂರಿಸಿ ಹೊಸ ಹೊಸ ನಾಟಕಗಳನ್ನು ರಂಗೇರಿಸಿದ್ದವು.

ಅಕ್ಟೋಬರ್ 3ರಂದು ಲಖೀಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರದ ಕುರಿತು ಚರ್ಚಿಸುತ್ತಿರುವಾಗ, ಆಜ್ ತಕ್ ಮತ್ತು ಜೀ ನ್ಯೂಸ್ ಎರಡೂ ಕ್ರಮವಾಗಿ ಅಕ್ಟೋಬರ್ 5 ಮತ್ತು ಅಕ್ಟೋಬರ್ 7ರಂದು ವಿವಿಧ ರಾಜಕೀಯ ಪಕ್ಷಗಳ ವಕ್ತಾರರನ್ನು ಪ್ಯಾನಲಿಸ್ಟ್‌ಗಳನ್ನಾಗಿ ಆಹ್ವಾನಿಸಿದ್ದವು. ಪ್ಯಾನಲಿಸ್ಟ್‌ಗಳಲ್ಲಿ ಒಬ್ಬರಾದ ಕುಲದೀಪ್ ಸಿಂಗ್ ಧಲಿವಾಲ್ ಅವರನ್ನು ರೈತ ನಾಯಕ ಎಂದು ಪರಿಚಯಿಸಲಾಗಿತ್ತು. ಧಲಿವಾಲ್ ತನ್ನ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ತನ್ನನ್ನು ತಾನು ಬಿಜೆಪಿ ವಕ್ತಾರ ಎಂದು ವಿವರಿಸಿದ್ದರೂ ಸಹ ಮಾಧ್ಯಮಗಳ ಪಾಲಿಗೆ ಆತನೇ ರೈತ ನಾಯಕನಾಗಿದ್ದ.

ಅದೇ ರೀತಿ ಅಕ್ಟೋಬರ್ 7 ರಂದು, ಜೀ ನ್ಯೂಸ್ “ತಾಲ್ ಥೋಕ್ ಕೆ” ಎಂಬ ಕಾರ್ಯಕ್ರಮದ ವಿಶೇಷ ಆವೃತ್ತಿಯನ್ನು ನಡೆಸಿತ್ತು. ಇದರಲ್ಲಿ ಆಂಕರ್ ಸಚಿನ್ ಅರೋರಾ ಅವರು ಧಲಿವಾಲ್ ಅವರನ್ನು ರೈತ ನಾಯಕ ಎಂದು ಪರಿಚಯಿಸಿದ್ದರು. ಈ ಕಾರ್ಯಕ್ರಮದಲ್ಲಿ ಧಲಿವಾಲ್ ಬಿಜೆಪಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಬೆಂಬಲಿಸಿ ಮಾತನಾಡಿದ್ದರು. ಸಮಾಜವಾದಿ ಪಕ್ಷದ ರಾಜಕಾರಣಿ ಘನಶ್ಯಾಮ್ ತಿವಾರಿ ಅವರು ಧಲಿವಾಲ್ ಬಿಜೆಪಿ ವಕ್ತಾರರೆಂದು ಗಮನಸೆಳೆದಾಗ, ದಿಢೀರನೆ ಕಾರ್ಯಕ್ರಮವನ್ನು ನಿಲ್ಲಿಸಿದ್ದ ವಾಹಿನಿ ಕಾಶ್ಮೀರದಲ್ಲಿ ಇಬ್ಬರು ನಾಗರಿಕರ ಸಾವಿನ ಸುದ್ದಿಯನ್ನು ಭಿತ್ತರಿಸಲು ಮುಂದಾಗಿತ್ತು.

ಧಲಿವಾಲ್ ಅವರ ಟ್ವಿಟರ್ ಬಯೋ ಪ್ರಕಾರ ಆತ ಬಿಜೆಪಿ ವಕ್ತಾರನಾಗಿದ್ದರೂ ಸಹ ಮಾಧ್ಯಮಗಳಿಗೆ ಮಾತ್ರ ಆತ ರೈತ ನಾಯಕ ಮತ್ತು ಹೆಮ್ಮೆಯ ಪ್ಯಾನಲಿಸ್ಟ್ ಆಗಿದ್ದ. ಒಟ್ಟಾರೆ ಲಖೀಂಪುರ್ ಹತ್ಯಾಕಾಂಡವನ್ನು ಮುಚ್ಚಿಹಾಕುವುದು ಮಾತ್ರ ಮಾಧ್ಯಮಗಳ ಕರ್ತವ್ಯವಾಗಿತ್ತು ಎಂಬುದು ಈ ಎಲ್ಲಾ ನಿದರ್ಶನಗಳಿಂದ ಸ್ಪಷ್ಟವಾಗುತ್ತದೆ.

ಇದು ಮಾಧ್ಯಮಗಳ ಮುಖೇಡಿತನಕ್ಕೆ ಸಣ್ಣ ಉದಾಹರಣೆಯಷ್ಟೇ! ಲಖೀಂಪುರ್‌ನಲ್ಲಿ ರೈತರ ಹತ್ಯೆ ಘಟನೆ ನಡೆದಾಗ ಹಲವು ಮಾಧ್ಯಮಗಳು ರೈತರ ತಳ್ಳಾಟದಿಂದಲೇ ಕಾರು ರೈತರ ಮೇಲೆ ಬಿದ್ದಿತು ಎಂಬ ಸುಳ್ಳು ನರೆಟಿವ್ ಕಟ್ಟಲು ಕೂಡ ಪ್ರಯತ್ನಿಸಿದ್ದವು. ಆದರೆ ವೇಗವಾಗಿ ಬಂದ ಕಾರು ರೈತರ ಮೇಲೆ ಹರಿದ ಸ್ಪಷ್ಟ ವಿಡಿಯೋ ಬಹಿರಂಗಗೊಳ್ಳುತ್ತಿದ್ದಂತೆಯೇ ತಮ್ಮ ವರಸೆಯನ್ನು ಬದಲಾಯಿಸಿ ಬೇರೆ ಸುಳ್ಳಿಗೆ ಹೊರಳಿಕೊಳ್ಳುತ್ತಿದ್ದವು. ಇದು ಇಂದಿನ ಕಾರ್ಪೊರೆಟ್ ಹಿಡಿತದ ಮಾಧ್ಯಮಗಳ ದುರುಳತನಕ್ಕೆ ಸಾಕ್ಷ್ಯದಂತಿದೆ.

ಬಿಜೆಪಿ ಮುಖವಾಣಿಯಾದ ಮಾಧ್ಯಮಗಳು

2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಏರಿದ ದಿನದಿಂದಲೂ ದೇಶದ ಬಹುತೇಕ ಮುಖ್ಯವಾಹಿನಿ ಮಾಧ್ಯಮಗಳು ಬಿಜೆಪಿ ಪರವಾದ ಬಲಪಂಥೀಯವಾದವನ್ನು, ಕೋಮುವಾದವನ್ನು ನೀರೆರೆದು ಪೋಷಿಸುತ್ತಿವೆ. ಬಿಜೆಪಿ ದೇಶದಲ್ಲಿ ಬೆಳೆಯಲು ಮಾಧ್ಯಮಗಳ ಪಾತ್ರ ಮಹತ್ವವಾದದ್ದು ಎಂಬ ಮಾತು ಚಾಲ್ತಿಯಲ್ಲಿದೆ. ಆದರೆ, ಮಾಧ್ಯಮಗಳು ಈ ಮಟ್ಟಿಗೆ ಬಹಿರಂಗವಾಗಿ ಬಿಜೆಪಿ ಪಕ್ಷವನ್ನು, ಅಧಿಕಾರದಲ್ಲಿರುವ ಸರ್ಕಾರಗಳನ್ನು ಜನಸಾಮಾನ್ಯರ ಹಿತಾಸಕ್ತಿಗೆ ವಿರುದ್ಧವಾಗಿ ಬೆಂಬಲಿಸುತ್ತವೆ ಎಂದು ಭಾಗಶಃ ಯಾರೂ ಭಾವಿಸಿರಲಿಕ್ಕಿಲ್ಲ.

ಇತ್ತೀಚೆಗೆ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷನಾಗಿ ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ, ತಮ್ಮ ಪದಗ್ರಹಣದ ಭಾಷಣದಲ್ಲಿ ಮಾಧ್ಯಮಗಳನ್ನು ಉಲ್ಲೇಖಿಸಿದ್ದ ಅಣ್ಣಾಮಲೈ, “ದೇಶದ ಎಲ್ಲಾ ರಾಜ್ಯದಲ್ಲೂ ಬಿಜೆಪಿ ಪಕ್ಷ ಮಾಧ್ಯಮಗಳನ್ನು ತನ್ನ ಕಂಟ್ರೋಲ್‌ಗೆ ತೆಗೆದುಕೊಂಡಿದೆ, ಶೀಘ್ರದಲ್ಲಿ ತಮಿಳುನಾಡಿನಲ್ಲೂ ನಾವು ಮಾಧ್ಯಮಗಳನ್ನು ಕಂಟ್ರೋಲ್‌ಗೆ ತೆಗೆದುಕೊಳ್ಳುತ್ತೇವೆ” ಎಂದು ಬಹಿರಂಗವಾಗಿ ನೀಡಿದ್ದ ಹೇಳಿಕೆ ಮಾಧ್ಯಮಗಳು ಮತ್ತು ಬಿಜೆಪಿ ನಡುವಿನ ಗುಪ್ತ್ ಗುಪ್ತ್ ಕಹಾನಿಗೆ ದೊಡ್ಡ ಸಾಕ್ಷಿಯಾಗಿದೆ. ಇಂತಹ ಕಹಾನಿಯೇ ಲಖೀಂಪುರ್ ಖೇರಿ ಹತ್ಯಾಕಾಂಡದಲ್ಲಿ ಕೆಲಸ ಮಾಡಿದೆ ಎಂಬುದರಲ್ಲಿ ಈಗ ಯಾವುದೇ ಸಂಶಯ ಉಳಿದಿಲ್ಲ.

ಅಜಯ್ ಮಿಶ್ರಾ ರಾಜೀನಾಮೆ ಏಕಿಲ್ಲ?

2009ರಲ್ಲಿ ಯುಪಿಎ-2 ಸರ್ಕಾರದ ಅವಧಿಯಲ್ಲಿ ಕೇರಳದ ಶಶಿ ತರೂರ್ ವಿದೇಶಾಂಗ ಇಲಾಖೆ ರಾಜ್ಯ ಖಾತೆ ಸಚಿವರಾಗಿದ್ದರು. ಒಮ್ಮೆ ಅವರು ವಿಮಾನದಲ್ಲಿ ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣ ಬೆಳೆಸುವ ಪ್ರಸಂಗ ಎದುರಾಗಿತ್ತು. ಆದರೆ, ಅವರು ಪ್ರಯಾಣದ ನಂತರ ಎಕಾನಮಿ ಕ್ಲಾಸ್ ಅನ್ನು ದನದ ಕೊಟ್ಟಿಗೆಗೆ ಹೋಲಿಸಿ ಒಂದು ಟ್ವೀಟ್ ಮಾಡಿದ್ದರು.

ಆ ಟ್ವೀಟ್ ಮಹಾ ಅಪರಾಧ ಎಂಬಂತೆ ಬಿಜೆಪಿ ದೇಶದಾದ್ಯಂತ ಹೋರಾಟ ನಡೆಸಿತ್ತು. ಶಶಿ ತರೂರ್ ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸುವವರನ್ನು ಹೀಗಳೆದಿದ್ದಾರೆ ಎಂದು ಆರೋಪಿಸಿತ್ತು. ಮಾಧ್ಯಮಗಳೂ ಸಹ ಬಿಜೆಪಿ ತಾಳಕ್ಕೆ ತಕ್ಕಂತೆ ಕುಣಿದಿದ್ದವು. ಪರಿಣಾಮ ಕೊನೆಗೆ ಈ ಟ್ವೀಟ್ ಸಂಬಂಧವಾಗಿ ಬಹಿರಂಗ ಕ್ಷಮೆ ಕೇಳಿದ್ದ ಶಶಿ ತರೂರ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಅಂದು ಕೇವಲ ಒಂದು ಟ್ವೀಟ್‌ಗೆ ಶಶಿ ತರೂರ್ ಅವರಿಂದ ರಾಜೀನಾಮೆ ಕೇಳಿದ್ದ ಬಿಜೆಪಿ, ಇಂದು 4 ಜನ ರೈತರು ಸೇರಿದಂತೆ 9 ಜನರ ಹತ್ಯೆಗೆ ತಮ್ಮ ಮಗ ಕಾರಣವಾಗಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದರೂ ಬಿಜೆಪಿ ಸಚಿವ ಅಜಯ್ ಶರ್ಮಾ ಅವರಿಂದ ಈವರೆಗೆ ಏಕೆ ರಾಜೀನಾಮೆ ಪಡೆದಿಲ್ಲ? ಇದು ಬಿಜೆಪಿ ಎಂಬ ಸರ್ವಾಧಿಕಾರಿ ಧೋರಣೆಯನ್ನು ತನ್ನದಾಗಿಸಿಕೊಂಡಿರುವ ಪಕ್ಷದ ಇಬ್ಬಗೆಯ ನಡವಳಿಕೆಗೆ ಸಾಕ್ಷಿಯಾಗಿದೆ.


ಇದನ್ನೂ ಓದಿ: ದೇಶದಲ್ಲಿ ಲಖಿಂಪುರ್‌ ಖೇರಿಯಂತಹ ಘಟನೆ ನಡೆಯುತ್ತಲೇ ಇರುತ್ತವೆ: ನಿರ್ಮಲಾ ಸೀತಾರಾಮನ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...