ಕನ್ನಡ ಮುಖ್ಯವಾಹಿನಿ ಸಿನೆಮಾ ಅಪರೂಪಕ್ಕೊಮ್ಮೆ ಮಾತ್ರ ಸಮಾಜದ ಮೂಲಭೂತ ಪ್ರಶ್ನೆಗಳತ್ತ ನೇರವಾಗಿ ಮುಖ ಮಾಡುತ್ತದೆ. ಜಾತಿ, ಭೂಮಿ, ಅಧಿಕಾರ ಎಲ್ಲವನ್ನು ಒಟ್ಟಿಗೆ ಹಿಡಿದು ಪ್ರಶ್ನಿಸುವ ಚಿತ್ರಗಳು ಇನ್ನೂ ವಿರಳ. ನಿರ್ದೇಶಕ–ಕಥಾಲೇಖಕ ಜಡೆಶ್ ಕೆ. ಹಂಪಿ ಅವರ ನಿರ್ದೇಶನದ ‘ಲ್ಯಾಂಡ್‌ಲಾರ್ಡ್’ ಅಂಥ ವಿರಳ ಚಿತ್ರಗಳಲ್ಲಿ ಒಂದು. ಇದು ಕೇವಲ ಆಕ್ಷನ್ ಅಥವಾ ಪ್ರತೀಕಾರದ ಕಥೆಯಲ್ಲ; ಇದು ಜಮೀನ್ದಾರಿ ವ್ಯವಸ್ಥೆಯ ವಿರುದ್ಧದ ಸಂವಿಧಾನಾತ್ಮಕ ಆಕ್ರೋಶ. ಭೂಮಿ, ಬದುಕು ಮತ್ತು ಸಂವಿಧಾನ, ಈ ಮೂರರ ನಡುವಿನ ಸಂಘರ್ಷದ ಸಾಂಸ್ಕೃತಿಕ–ರಾಜಕೀಯ ಪಠ್ಯ.
ಆನೇಕಲ್‌ನ ಅನ್ನಪೂರ್ಣೇಶ್ವರಿ ಥಿಯೇಟರ್‌ನಲ್ಲಿ ಲ್ಯಾಂಡ್‌ಲಾರ್ಡ್ ವೀಕ್ಷಿಸಿದ ಅನುಭವ ಈ ಚಿತ್ರದ ಸಾಮಾಜಿಕ ಮಹತ್ವವನ್ನು ಇನ್ನಷ್ಟು ಸ್ಪಷ್ಟಪಡಿಸಿತು. ದುನಿಯಾ ವಿಜಯ್ ಅವರ ಸಿನಿಮಾ ಎಂಬ ಕಾರಣಕ್ಕೆ ಅಭಿಮಾನಿಗಳ ಭಾರೀ ಹಾಜರಿ, ಕೇಕೆ, ಜೈಕಾರ, ವಿಶಲ್—ಇವೆಲ್ಲ ನಿರೀಕ್ಷಿತವೇ. ದುನಿಯಾ ವಿಜಯ್ ಮಾಸ್ ಹೀರೋ ಆಗಿರುವುದರಿಂದ ಈ ಸಂಭ್ರಮ ಸಹಜ.
ಆದರೆ, ವಿಶೇಷವಾಗಿ ಮನಸ್ಸಿಗೆ ತಟ್ಟಿದ್ದು, ಚಿತ್ರದಲ್ಲಿ ಸಂವಿಧಾನದ ಕುರಿತು ಸಂಭಾಷಣೆ ಬಂದಾಗ ಥಿಯೇಟರ್‌ನಲ್ಲಿ ಮೂಡಿದ ಸ್ಪಂದನೆ. ಚಪ್ಪಾಳೆ, ಕೂಗು, ವಿಶಲ್- ಅದು ಪಾತ್ರಗಳಿಗೆ ಸಿಕ್ಕ ಪ್ರತಿಕ್ರಿಯೆಯಲ್ಲ; ಅದು ಸಂವಿಧಾನಕ್ಕೆ ಸಿಕ್ಕ ಗೌರವ.
“ಸಂವಿಧಾನ ಒಪ್ಪಿಕೊಂಡು ದೇಶ ಉದ್ದಾರ ಆಗಿದೆ, ಇನ್ನು ಈ ಊರು ಉದ್ದಾರ ಆಗಲ್ವಾ?”
“ಊರಿನ ಪದ್ದತಿ ಕಿತ್ತು ಬಿಸಾಕಿ, ಸಂವಿಧಾನ ಪದ್ದತಿ ಜಾರಿಗೆ ತರೋಣ”
“ಮಳೆ ಬಂದ್ರೆ ಭೂಮಿ ಹಸನಾಗುತ್ತೆ, ಸಂವಿಧಾನ ಬಂದ್ರೆ ನಮ್ಮ ಬದುಕು ಹಸನಾಗುತ್ತೆ”
“ಈಗ ಇರೋದು ಸಂದಾನದ ಕಾಲ ಅಲ್ಲ, ಸಂವಿಧಾನದ ಕಾಲ”
ಈ ಸಾಲುಗಳಿಗೆ ಜನರು ಸ್ಪಂದಿಸಿದ ರೀತಿ ನೋಡಿದಾಗ, ದೇಶದೊಳಗಿನ ಅಂಡರ್‌ಕರೆಂಟ್ ಇನ್ನೂ ಜೀವಂತವಾಗಿದೆ ಅನ್ನೋ ಭರವಸೆ ಮೂಡುತ್ತದೆ. ಥಿಯೇಟರ್ ಹೊರಗೆ ದುನಿಯಾ ವಿಜಯ್ ಅವರಿಗೆ ಕೇಕ್ ಕತ್ತರಿಸಿ, ಬಂದವರಿಗೆಲ್ಲ “ಜೈ ಭೀಮ್” ಅಂತ ಹೇಳಿ ಊಟ ಹಂಚಿದ ದೃಶ್ಯ-ಸಿನೆಮಾ, ರಾಜಕೀಯ ಮತ್ತು ಸಂವಿಧಾನಾತ್ಮಕ ಆಶಯಗಳು ಒಂದೇ ನೆಲೆಗೆ ಬಂದ ಕ್ಷಣ.
ಅಂಚಿನಲ್ಲಿರುವ ಸಮುದಾಯಗಳ ಬದುಕಿನ ಪ್ರಶ್ನೆಗಳನ್ನು ಅವರದೇ ದೃಷ್ಟಿಕೋನದಿಂದ ತೆರೆಗೆ ತರುವ ಪ್ರಯತ್ನಗಳು ಕನ್ನಡ ಮುಖ್ಯವಾಹಿನಿ ಸಿನೆಮಾದಲ್ಲಿ ವಿರಳ. ಆ ಅರ್ಥದಲ್ಲಿ ನಿರ್ದೇಶಕ–ಕಥಾಲೇಖಕ ಜಡೇಶ್ ಕೆ. ಹಂಪಿ ಅವರ ‘ಲ್ಯಾಂಡ್‌ಲಾರ್ಡ್’ ಕೇವಲ ಒಂದು ಆಕ್ಷನ್ ಚಿತ್ರವಲ್ಲ; ಅದು ಸಂವಿಧಾನ ನೀಡಿದ ಭರವಸೆಗಳು ನೆಲಮಟ್ಟದಲ್ಲಿ ಹೇಗೆ ನಿರಾಕರಿಸಲ್ಪಡುತ್ತವೆ ಎಂಬುದರ ಮೇಲೆ ಮಾಡಿದ ಗಂಭೀರ ಟಿಪ್ಪಣಿಯಾಗಿದೆ.
ಲ್ಯಾಂಡ್‌ಲಾರ್ಡ್ ಸಿನಿಮಾ ದಲಿತರ ಬದುಕು ಮತ್ತು ಭೂಮಿ ಹಕ್ಕಿನ ಪ್ರಶ್ನೆಯನ್ನು ಕೇಂದ್ರವಾಗಿಸಿಕೊಂಡ ಶಕ್ತಿಶಾಲಿ ಕತೆ. ಭೂಮಿ ಇಲ್ಲಿ ಕೇವಲ ಆಸ್ತಿ ಅಲ್ಲ; ಅದು ಬದುಕಿನ ಗೌರವ, ಸ್ವಾಭಿಮಾನ ಮತ್ತು ನಾಗರಿಕ ಹಕ್ಕಿನ ಪ್ರತೀಕ. ಸ್ವಾಯತ್ತತೆ ಮತ್ತು ಸಾಮಾಜಿಕ ಸಮಾನತೆಯ ಸಂಕೇತ. ಚಿತ್ರವು ಜಾತಿ ವ್ಯವಸ್ಥೆಯೊಳಗಿನ ಭೂಸ್ವಾಮ್ಯ ರಾಜಕಾರಣ ದಲಿತರ ಶ್ರಮವನ್ನು ಹೇಗೆ ಹೀರಿಕೊಳ್ಳುತ್ತದೆ ಮತ್ತು ಅವರನ್ನು ಶಾಶ್ವತ ಅವಲಂಬಿತರಾಗಿ ಇಡುತ್ತದೆ ಎಂಬುದನ್ನು ತೆರೆದಿಡುತ್ತದೆ. ದಲಿತರ ಭೂಮಿ ಹಕ್ಕಿನ ಹೋರಾಟವನ್ನು ಮಾನವೀಯ ಭಾವನೆಗಳು, ಸಂಘರ್ಷಗಳು ಮತ್ತು ಪ್ರತಿರೋಧದ ಮೂಲಕ ಚಿತ್ರಿಸಿ, ಸಂವಿಧಾನಾತ್ಮಕ ನ್ಯಾಯ ಮತ್ತು ಸಮಾನತೆಯ ಅಗತ್ಯವನ್ನು ದೃಢವಾಗಿ ಪ್ರತಿಪಾದಿಸುತ್ತದೆ.
ಕಥೆ ಮೂರು ದಶಕಗಳ ಹಿಂದಿನ ಕೋಲಾರ ಜಿಲ್ಲೆಯ ಹಳ್ಳಿಯಲ್ಲಿ ನಡೆಯುತ್ತದೆ. ಇಲ್ಲಿ ಭೂಮಿಯಿಲ್ಲದ ಕಾರ್ಮಿಕರು ಶತಮಾನಗಳಿಂದ ದುಡಿಯುತ್ತಿದ್ದರೂ, ಅವರ ಪಾಲಿಗೆ ಭೂಮಿ ಎಂದೂ ಕನಸಾಗಿಯೇ ಉಳಿದಿದೆ. ಸಂವಿಧಾನದ ಪ್ರಸ್ತಾವನೆಯಲ್ಲಿರುವ ನ್ಯಾಯ, ಸಮಾನತೆ ಮತ್ತು ಗೌರವಯುತ ಜೀವನ ಎಂಬ ಮೌಲ್ಯಗಳು ಇಲ್ಲಿ ಪುಸ್ತಕದ ಪುಟಗಳಲ್ಲೇ ಸೀಮಿತವಾಗಿವೆ. ಹಳ್ಳಿಯ ಸಾಮಾಜಿಕ ರಚನೆ ಇನ್ನೂ ಜಾತಿ ವ್ಯವಸ್ಥೆಯ ಹಿಡಿತದಲ್ಲಿದ್ದು, ಜಮೀನ್ದಾರನೇ ಕಾನೂನು, ಜಮೀನ್ದಾರನದ್ದೇ ನ್ಯಾಯ.
ಈ ಹಿನ್ನೆಲೆಗೆ ಪ್ರವೇಶಿಸುವ ರಾಚಯ್ಯ (ದುನಿಯಾ ವಿಜಯ್) ಕೇಳುವುದು ಕೇವಲ ಸರ್ಕಾರದಿಂದ ಎರಡು ಎಕರೆ ಭೂಮಿ. ಅದು ಸಂವಿಧಾನಾತ್ಮಕ ಹಕ್ಕು; ರಾಜ್ಯದ ಕಲ್ಯಾಣ ತತ್ವದ ಭಾಗ. ಇದನ್ನು ಪಡೆಯಲು ಅವರು ಆಯ್ಕೆಮಾಡುವ ಮಾರ್ಗ ಬಾಬಾಸಾಹೇಬರ ಶಿಕ್ಷಣ, ಸಂಘಟನೆ, ಹೋರಾಟ ಹಾಗೂ ಸಂವಿಧಾನ.
ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ಭೂಮಿ ಪ್ರಶ್ನೆ ಹೊಸದಲ್ಲ. ಚೋಮನದುಡಿ ಕಾದಂಬರಿ ಹಾಗೂ ‘ಚೋಮನ ಮಕ್ಕಳು’ ಪದ್ಯಗಳು ದಲಿತರ ಭೂಮಿ ಪ್ರಶ್ನೆಯನ್ನು ಕೇವಲ ಆರ್ಥಿಕ ಸಮಸ್ಯೆಯಾಗಿ ಅಲ್ಲ, ಬದುಕಿನ ಅಸ್ತಿತ್ವ, ಸಂಸ್ಕೃತಿ, ಸ್ವಾಭಿಮಾನ ಮತ್ತು ಮಾನವೀಯ ಗೌರವದ ಕೇಂದ್ರ ಪ್ರಶ್ನೆಯಾಗಿ ಮಂಡಿಸುತ್ತವೆ. ಚೋಮನು ಮತ್ತು ಅವನ ಮಕ್ಕಳು ಭೂಮಿಯನ್ನು ಹೊಂದಬೇಕೆಂಬ ಕನಸು ಜಾತಿ ವ್ಯವಸ್ಥೆಯ ಕ್ರೂರ ಗೋಡೆಗೆ ತಾಕಿ ಮರುಮರು ಭಗ್ನವಾಗುತ್ತದೆ; ಇದು ದಲಿತ ಬದುಕಿನ ಐತಿಹಾಸಿಕ ವಂಚನೆಯ ಸಾಂಸ್ಕೃತಿಕ ರೂಪಕವಾಗಿದೆ. ಭೂಮಿ ಇಲ್ಲಿ ಕೇವಲ ಉತ್ಪಾದನೆಯ ಸಾಧನವಲ್ಲ, ಅದು ಮಾನವೀಯ ಸ್ವಾತಂತ್ರ್ಯ, ಸಾಮಾಜಿಕ ಸ್ಥಾನ ಮತ್ತು ಭವಿಷ್ಯದ ಭರವಸೆಯ ಸಂಕೇತ. ಆದರೆ ಭೂಮಿ ಹಕ್ಕು ಮೇಲ್ಜಾತಿಗಳ ರಾಜಕೀಯ–ಸಾಂಸ್ಕೃತಿಕ ಶಕ್ತಿಯ ಸಾಧನವಾಗಿ ಪರಿಣಮಿಸಿದ್ದು, ದಲಿತರನ್ನು ಶಾಶ್ವತ ಕೂಲಿ ಕಾರ್ಮಿಕರಾಗಿ ಬಂಧಿಸುತ್ತದೆ. ‘ಚೋಮನ ಮಕ್ಕಳು’ ಪದ್ಯದಲ್ಲಿ ಮುಂದಿನ ಪೀಳಿಗೆಯ ಮೇಲೂ ಈ ಅನ್ಯಾಯ ಹೇಗೆ ವರ್ಗಾಯಿಸುತ್ತದೆ ಎಂಬುದನ್ನು ಹೇಳಿದೆ. ಕನಸು, ಶ್ರಮ ಮತ್ತು ಹಸಿವು ಎಲ್ಲವೂ ಜಾತಿ ವ್ಯವಸ್ಥೆಯ ಒಳಗೆ ಸಿಲುಕುತ್ತವೆ. ಈ ಕೃತಿಗಳು ಭೂಮಿಯ ಪ್ರಶ್ನೆಯನ್ನು ರಾಜ್ಯದ ನೀತಿಗಳ, ಭೂಮಿ ಕುರಿತ ಕಾನೂನುಗಳ ವಿಫಲತೆಯ ಮತ್ತು ಪ್ರಜಾಸತ್ತಾತ್ಮಕ ವ್ಯವಸ್ಥೆಯ ಒಳಗಿನ ಜಾತಿ ಪಕ್ಷಪಾತದ ರಾಜಕೀಯ ವಿಮರ್ಶೆಯಾಗಿ ಎತ್ತಿ ಹಿಡಿಸುತ್ತವೆ. ಸಾಂಸ್ಕೃತಿಕವಾಗಿ, ದಲಿತರ ದುಡಿಮೆಯ ನೈತಿಕತೆ ಮತ್ತು ಭೂಮಿಯೊಂದಿಗೆ ಅವರ ಸಂಬಂಧವನ್ನು ರಾಜಕೀಯವಾಗಿ ಭೂಮಿ ಹಕ್ಕಿನ ಪುನರ್ ವಿತರಣೆಯ ಅಗತ್ಯವನ್ನು ತೀವ್ರವಾಗಿ ನೆನಪಿಸುತ್ತವೆ. ಚೋಮನ ಕಥೆ ಒಂದು ವ್ಯಕ್ತಿಯ ದುರಂತವಲ್ಲ; ಅದು ದಲಿತ ಸಮುದಾಯದ ಸಮೂಹ ಅನುಭವ, ಪ್ರತಿರೋಧ ಮತ್ತು ನ್ಯಾಯದ ಅನಿವಾರ್ಯ ಬೇಡಿಕೆಯ ಸಂಕೇತವಾಗಿದೆ.
ಲ್ಯಾಂಡ್‌ಲಾರ್ಡ್‌ನ ರಾಚಯ್ಯ ಆ ಚೋಮನ ಮಕ್ಕಳ ಮುಂದಿನ ತಲೆಮಾರಿನ ಪ್ರತಿನಿಧಿ. ಚೋಮನ ಕಾಲದಲ್ಲಿ ಭೂಮಿ ಒಂದು ಕನಸಾಗಿದ್ದರೆ, ರಾಚಯ್ಯನ ಕಾಲದಲ್ಲಿ ಭೂಮಿಗೆ ಸಂವಿಧಾನಾತ್ಮಕ ಭರವಸೆ ಇದೆ. ಆದರೆ ಜಮೀನ್ದಾರಿ ವ್ಯವಸ್ಥೆ ಇನ್ನೂ ಜೀವಂತವಾಗಿರುವುದರಿಂದ, ಆ ಭರವಸೆಯೂ ನೆಲಮಟ್ಟದಲ್ಲಿ ತುಳಿಯಲ್ಪಡುತ್ತದೆ. ಚಿತ್ರದಲ್ಲಿ ಜಮೀನ್ದಾರ ಪಾತ್ರ ಕೇವಲ ಒಬ್ಬ ವ್ಯಕ್ತಿಯಲ್ಲ; ಅದು ಜಾತಿ ಆಧಾರಿತ ಅಧಿಕಾರ ವ್ಯವಸ್ಥೆಯ ಪ್ರತಿರೂಪ. ಭೂಮಿ, ಗೌರವ, ಹಳ್ಳಿ ರಾಜಕೀಯ-ಎಲ್ಲವೂ ಅವನ ಹಿಡಿತದಲ್ಲಿದೆ. ಕಾನೂನು, ಪೊಲೀಸ್, ಆಡಳಿತ-ಎಲ್ಲವೂ ಜಮೀನ್ದಾರನ ಪರವಾಗಿ ಕಾರ್ಯನಿರ್ವಹಿಸುವಂತೆ ಕಾಣುತ್ತದೆ.
ರಾಚಯ್ಯನ ಮಗಳು ಪೊಲೀಸ್ ಕಾನ್ಸ್‌ಟೇಬಲ್ ಆಗಿರುವುದು ಚಿತ್ರಕ್ಕೆ ಮತ್ತೊಂದು ಮಹತ್ವದ ಆಯಾಮ ನೀಡುತ್ತದೆ. ಆಕೆ ಸಂವಿಧಾನದ ಪ್ರತಿನಿಧಿ-ರಾಜ್ಯದ ಅಧಿಕಾರದ ಸಂಕೇತ. ಆದರೆ ಆ ಅಧಿಕಾರವೂ ಜಾತಿ ವ್ಯವಸ್ಥೆಯ ಮುಂದೆ ಎಷ್ಟು ಅಸಹಾಯಕ ಎಂಬುದನ್ನು ಚಿತ್ರ ನಿರ್ದಾಕ್ಷಿಣ್ಯವಾಗಿ ತೋರಿಸುತ್ತದೆ. ಇಲ್ಲಿ ಸಂವಿಧಾನ ಮತ್ತು ನೆಲಮಟ್ಟದ ವಾಸ್ತವಗಳ ನಡುವಿನ ಅಂತರ ಸ್ಪಷ್ಟವಾಗುತ್ತದೆ. ಕಾನೂನು ಇದ್ದರೂ ನ್ಯಾಯ ಇಲ್ಲ; ಅಧಿಕಾರ ಇದ್ದರೂ ಶಕ್ತಿ ಇಲ್ಲ.
ರಾಚಯ್ಯ, ‘ಕೊಡಲಿ ರಾಚಯ್ಯ’ನಾಗಿ ಪರಿವರ್ತನೆಯಾಗುವ ಹಂತದಲ್ಲಿ ಚಿತ್ರ ತಾತ್ವಿಕವಾಗಿ ಅತ್ಯಂತ ಮುಖ್ಯ ಪ್ರಶ್ನೆ ಎತ್ತುತ್ತದೆ. ಜಾತಿ ಹಾಗೂ ಗಂಡಾಳ್ವಿಕೆ ವ್ಯವಸ್ಥೆ ನಿರಂತರವಾಗಿ ಸಂವಿಧಾನಾತ್ಮಕ ಮಾರ್ಗಗಳನ್ನು ಮುಚ್ಚಿದಾಗ, ಹಿಂಸೆ ಒಂದು ಆಯ್ಕೆಯಾಗಿ ಹುಟ್ಟಿಕೊಳ್ಳುತ್ತದೆಯೇ? ಇದು ವ್ಯಕ್ತಿಯ ವೈಫಲ್ಯವಲ್ಲ; ಅದು ವ್ಯವಸ್ಥೆಯ ವೈಫಲ್ಯ ಎಂಬುದನ್ನು ಜಡೇಶ್ ಹಂಪಿ ಸೂಚಿಸುತ್ತಾರೆ.
ಚಿತ್ರದ ಫ್ಲ್ಯಾಶ್‌ಬ್ಯಾಕ್ ಭಾಗ ರಾಚಯ್ಯನ ಹೋರಾಟವನ್ನು ವೈಯಕ್ತಿಕ ಪ್ರತೀಕಾರದಿಂದ ಹೊರತಂದು, ಒಂದು ಸಾಮಾಜಿಕ–ಐತಿಹಾಸಿಕ ಹೋರಾಟವಾಗಿ ರೂಪಿಸುತ್ತದೆ. ಈ ಮೂಲಕ ಚಿತ್ರ ಗಾಂಧೀತತ್ವ, ಸಂವಿಧಾನಾತ್ಮಕ ತತ್ವ ಮತ್ತು ಹಿಂಸೆ-ಈ ಮೂರರ ನಡುವಿನ ಸಂಘರ್ಷವನ್ನು ಸಮಾನ ತೂಕದಲ್ಲಿ ಇಡುತ್ತದೆ. ಯಾವುದು ಶ್ರೇಷ್ಠ ಎಂಬ ಉತ್ತರವನ್ನು ನಿರ್ದೇಶಕ ಪ್ರೇಕ್ಷಕರಿಗೇ ಬಿಡುತ್ತಾರೆ.
ದುನಿಯಾ ವಿಜಯ್ ಅವರ ಅಭಿನಯ ಈ ತಾತ್ವಿಕ ಭಾರವನ್ನು ಹೊರುವಷ್ಟು ಗಂಭೀರವಾಗಿದೆ. ರಾಜ್ ಬಿ. ಶೆಟ್ಟಿ ಅವರ ಜಮೀನ್ದಾರ ಪಾತ್ರ ಕೇವಲ ವ್ಯಕ್ತಿಯಲ್ಲ; ಅದು ವ್ಯವಸ್ಥೆಯ ಮುಖ-ಸಂವಿಧಾನ ವಿರೋಧಿ ಶಕ್ತಿಗಳ ಪ್ರತಿನಿಧಿ.
ರಿತನ್ಯಾ (ದುನಿಯಾ ವಿಜಯ್ ಮಗಳು) ಅವರ ಪಾತ್ರ ಆಧುನಿಕ ಭಾರತದ ಯುವ ಜನಾಂಗದ ಸಂಕೇತದಂತೆ ಕಾಣುತ್ತದೆ. ಸಂವಿಧಾನವನ್ನು ನಂಬುವ, ಆದರೆ ಅದರ ಜಾರಿಗೆ ಹತಾಶರಾಗುವ ತಲೆಮಾರು. ಸಹಾಯಕ ಪಾತ್ರಗಳು ಕೂಡ ಸಮಾಜದ ವಿಭಿನ್ನ ಶಕ್ತಿಸಮೀಕರಣಗಳನ್ನು ಪ್ರತಿಬಿಂಬಿಸುತ್ತವೆ.
ದೇವದಾಸಿ ಪದ್ದತಿ, ನಾಯಕತ್ವದ ಅಪ್ರಾಮಾಣಿಕತೆ, ಜೊತೆಗಿದ್ದೆ ಎದೆಗೆ ಇರಿಯುವ ಮನುಷ್ಯ ದೌರ್ಬಲ್ಯ, ಸಶಕ್ತ ಮಹಿಳೆ ಹಾಗೂ ದುರ್ಬಲ ಮಹಿಳೆ ಏಕಕಾಲಕ್ಕೆ ರೂಪುಗೊಳ್ಳುವ ವೈರುಧ್ಯ, ಎದೆಗೆ ಬಿದ್ದ ಅಕ್ಷರದ ಪರಿಣಾಮ.. ಹೀಗೆ ಹಲವು ಪದರಗಳಲ್ಲಿ ಸಿನಿಮಾ ಮಾತಾಡುತ್ತಿದೆ… ಮತ್ತೆ ಮತ್ತೆ ನೋಡುವ ಸಿನಿಮಾ ಇದಾಗಿದೆ ಬನ್ನಿ ನೋಡೋಣ.
ಸಂಪತ್ ಮೈತ್ರೇಯ, ವಾಣಿ ಸತೀಶ್, ಗೋಮಾರದಹಳ್ಳಿ ಮಂಜುನಾಥ ಮುಂತಾದ ಆತ್ಮೀಯರು ಸಿನಿಮಾದಲ್ಲಿ ಅಭಿನಯಿಸಿರುವುದು ಕೂಡ ಖುಷಿಯ ವಿಷಯವೇ..
‘ಲ್ಯಾಂಡ್‌ಲಾರ್ಡ್’ ಒಂದು ಆಕ್ಷನ್–ಮನರಂಜಕ ಚಿತ್ರವಾಗಿರುವುದರ ಜೊತೆಗೆ, ಸಂವಿಧಾನ ಏಕೆ ಬೇಕು? ಅದು ಯಾರಿಗಾಗಿ? ಮತ್ತು ಅದನ್ನು ಬದುಕಿನಲ್ಲಿ ಹೇಗೆ ಸಾಕಾರಗೊಳಿಸಬೇಕು? ಎಂಬ ಪ್ರಶ್ನೆಗಳನ್ನು ಎತ್ತುವ ರಾಜಕೀಯ–ಸಾಂಸ್ಕೃತಿಕ ಪಠ್ಯವೂ ಹೌದು. ಅಂಚಿನವರ ದೃಷ್ಟಿಯಿಂದ ಸಂವಿಧಾನವನ್ನು ಮರುಓದುವ ಇಂಥ ಪ್ರಯತ್ನಗಳು ಕನ್ನಡ ಸಿನೆಮಾಕ್ಕೆ ಮಾತ್ರವಲ್ಲ, ನಮ್ಮ ಪ್ರಜಾಸತ್ತಾತ್ಮಕ ಚರ್ಚೆಗೂ ಅತ್ಯಂತ ಅಗತ್ಯ.


