ಎಲೆಕ್ಟ್ರಾನಿಕ್ ಎವಿಡೆನ್ಸ್ ಅಥವಾ ಮೊಬೈಲ್ ಫೋನ್‌ನಿಂದ ವಶಪಡಿಸಿಕೊಂಡಿರುವ ಫೋಟೋ, ವಿಡಿಯೋಗಳು ಒದಗಿಸುವಂತೆ ಕೋರಿದ್ದ ಪ್ರಜ್ವಲ್ ರೇವಣ್ಣ ಅರ್ಜಿಯನ್ನು ತಿರಸ್ಕರಿಸಿರುವ ಹೈಕೋರ್ಟ್, “ಪ್ರಜ್ವಲ್ ರೇವಣ್ಣ ಎಂದ ಮಾತ್ರಕ್ಕೆ ಕಾನೂನು ಬದಲಿಸಲಾಗದು” ಎಂದು ಗುರುವಾರ (ಜ.16) ಮೌಖಿಕವಾಗಿ ಹೇಳಿದೆ.
ಕಾರು ಚಾಲಕನ ಫೋನ್‌ನಿಂದ ಪಡೆದಿರುವ ಫೋಟೊ ಮತ್ತು ವಿಡಿಯೋಗಳನ್ನು ಒದಗಿಸಲು ಪ್ರಾಸಿಕ್ಯೂಷನ್‌ಗೆ ನಿರ್ದೇಶಿಸಬೇಕು ಎಂದು ಕೋರಿ ಪ್ರಜ್ವಲ್ ರೇವಣ್ಣ ಸಿಆರ್‌ಪಿಸಿ ಸೆಕ್ಷನ್ 207ರ ಅಡಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಇತ್ಯರ್ಥಪಡಿಸಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.
“ಪ್ರಕರಣಕ್ಕೆ ಸಂಬಂಧಿಸಿದ ಫೋಟೋ, ವಿಡಿಯೋಗಳು ಎಲ್ಲವೂ ಅಶ್ಲೀಲವಾಗಿದೆ. ಅಶ್ಲೀಲಕ್ಕೂ ಒಂದು ಮಿತಿ ಇರಬೇಕು. ಇದು ಎಲ್ಲವನ್ನೂ ಮೀರಿದೆ. ಈ ರೀತಿಯ ಫೋಟೋಗಳನ್ನು ಯಾರು ಸೆರೆ ಹಿಡಿಯಲು ಸಾಧ್ಯ?” ಎಂದು ಪ್ರಜ್ವಲ್ ಪರ ವಕೀಲ ಜಿ ಅರುಣ್ ಅವರನ್ನು ನ್ಯಾಯಾಲಯವು ವಿಚಾರಣೆಯ ವೇಳೆ ಪ್ರಶ್ನಿಸಿತು ಎಂದು ವರದಿ ಹೇಳಿದೆ.
“ಸುಪ್ರೀಂ ಕೋರ್ಟ್ ಗೋಪಾಲಕೃಷ್ಣ ಪ್ರಕರಣದಲ್ಲಿ ನೀಡಿರುವ ತೀರ್ಪಿನ ಪ್ರಕಾರ ಹಾಲಿ ಪ್ರಕರಣಕ್ಕೆ ಅಗತ್ಯವಾದ ಫೋಟೋ, ವಿಡಿಯೋಗಳನ್ನು ಪ್ರಾಸಿಕ್ಯೂಷನ್ ಒದಗಿಸಲಿದೆ. ಅದನ್ನು ಹೊರತುಪಡಿಸಿ ಬೇರೆ ಮಹಿಳೆಯರ ಖಾಸಗಿತನಕ್ಕೆ ಧಕ್ಕೆಯಾಗುವ ಫೋಟೋ, ವಿಡಿಯೋಗಳನ್ನು ನೀಡಲಾಗದು. ನೀವು ಏನೋ ಮಾಡಬೇಕು ಎಂಬುದಕ್ಕೆ ಬೇರೊಬ್ಬ ಮಹಿಳೆಯ ಖಾಸಗಿತನದ ಉಲ್ಲಂಘನೆಯಾಗುವುದಕ್ಕೆ ಅವಕಾಶ ನೀಡಲಾಗದು” ಎಂದು ನ್ಯಾಯಾಲಯ ಹೇಳಿದೆ ಎಂದಿದೆ.
ಪ್ರಜ್ವಲ್ ರೇವಣ್ಣ ಎಂದ ಮಾತ್ರಕ್ಕೆ ಕಾನೂನು ಬದಲಿಸಲಾಗದು: ಹೈಕೋರ್ಟ್#KarnatakaHighCourt #PrajwalRevanna https://t.co/6xBwjIZ7eA
— ಬಾರ್ & ಬೆಂಚ್ – Kannada Bar & Bench (@Kbarandbench) January 16, 2025
ಅರ್ಜಿದಾರರ ಪರವಾಗಿ ವಾದಿಸಿದ ವಕೀಲ ಜಿ ಅರುಣ್ ಅವರು “ನಾನು ಯಾವುದೇ ಅಶ್ಲೀಲ ಚಿತ್ರಗಳನ್ನು ಒದಗಿಸಿ ಎಂದು ಕೋರಿಲ್ಲ. ಪ್ರಾಸಿಕ್ಯೂಷನ್ ಎಫ್‌ಎಸ್‌ಎಲ್ ವರದಿಯಲ್ಲಿ ಎಷ್ಟು ಅಶ್ಲೀಲ ಚಿತ್ರಗಳಿವೆ ಎಂದು ಉಲ್ಲೇಖಿಸಿಲ್ಲ. 2024ರ ಏಪ್ರಿಲ್ 30ರ ಮಹಜರು ಸಂದರ್ಭ ಮಾಜಿ ಕಾರು ಚಾಲಕನ ಫೋನ್ ಮತ್ತು ಸಿಮ್ ಜಫ್ತಿ ಮಾಡಲಾಗಿದೆ” ಎಂದಿದ್ದಾರೆ.
ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು “ನ್ಯಾಯಾಲಯ ನಿರ್ದೇಶಿಸಿದರೆ ಕ್ಲೋನ್ ಮಾಡಿರುವ ಎಲ್ಲಾ ದಾಖಲೆಗಳನ್ನು ಒದಗಿಸಲಾಗುವುದು. ಆದರೆ, ಬೇರೆ ಮಹಿಳೆಯರ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ. ವಿಚಾರಣಾಧೀನ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ವಿಳಂಬಿಸಲು ಇಂಥ ಅರ್ಜಿಗಳನ್ನು ಸಲ್ಲಿಕೆ ಮಾಡಲಾಗುತ್ತಿದೆ” ಎಂದು ಆಕ್ಷೇಪಿಸಿದರು ಎಂದು ವರದಿ ವಿವರಿಸಿದೆ.
ವಾದ-ಪ್ರತಿವಾದ ಆಲಿಸಿದ ಪೀಠವು ಹಾಲಿ ಸಲ್ಲಿಕೆ ಮಾಡಿರುವ ಅರ್ಜಿಗೂ, ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅರ್ಜಿ ಇತ್ಯರ್ಥಪಡಿಸಿದೆ ಎಂದು ವರದಿ ಹೇಳಿದೆ.
ಕೃಪೆ : ಬಾರ್ & ಬೆಂಚ್
ಬೀದರ್| ಗುಂಡು ಹಾರಿಸಿ ₹93 ಲಕ್ಷ ಹಣ ದೋಚಿದ ಬಂದೂಕುದಾರಿಗಳು; ಓರ್ವ ಸಾವು


