ಪ್ರಧಾನಿ ನರೇಂದ್ರ ಮೋದಿ ಅವರು ಶಾಸಕರು ಜನರಿಗೆ ಹೊರೆಯಾಗದಂತೆ ನೋಡಿಕೊಳ್ಳುವ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸುಧಾರಣೆಗಳನ್ನು ಕೈಗೊಳ್ಳುವಂತೆ ಕರೆ ನೀಡಿದ್ದಾರೆ.
‘ದೇಶದ ಯಾವುದೇ ವ್ಯಕ್ತಿ ಕಾನೂನು ಅಥವಾ ನಿಯಮಗಳಿಂದಾಗಿ ಕಿರುಕುಳ, ಅನಾನುಕೂಲತೆಯನ್ನು ಎದುರಿಸಬಾರದು. ಅಂತಹ ಕ್ರಮಗಳು ಯಾವಾಗಲೂ ಜನರ ಅನುಕೂಲಕ್ಕಾಗಿಯೇ ಇರಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸಂಸತ್ ಭವನದ ಸಂಕೀರ್ಣದಲ್ಲಿ ನಡೆದ ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ, ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಸಂಸದರಿಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ.
‘ಕೇವಲ ಆರ್ಥಿಕತೆಯಲ್ಲಿ ಮಾತ್ರವಲ್ಲದೆ ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಸುಧಾರಣೆ ತರಬೇಕಾಗಿದೆ. ದೇಶದ ಜನರು ಯಾವುದೇ ಅನಾನುಕೂಲತೆ ಎದುರಿಸಬಾರದು. ನಿಯಮಗಳು ಜನರ ಅನುಕೂಲಕ್ಕಾಗಿ ಮತ್ತು ಅವರ ಜೀವನವನ್ನು ಸುಧಾರಿಸುವಂತೆ ಎಲ್ಲರೂ ಖಚಿತಪಡಿಸಿಕೊಳ್ಳಬೇಕು’ ಎಂದು ಮೋದಿ ಹೇಳಿದ್ದಾರೆ.
‘ಅಭಿವೃದ್ಧಿ ಕಾರ್ಯಗಳನ್ನು ಮೂರು ಪಟ್ಟು ವೇಗಗೊಳಿಸಲು ಮತ್ತು ಯುವಕರು, ಕ್ರೀಡೆ ಮತ್ತು ಇತರ ಚಟುವಟಿಕೆಗಳೊಂದಿಗೆ ಸಂಪರ್ಕ ಸಾಧಿಸಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು’ ಎಂದೂ ಎನ್‌ಡಿಎ ಸಂಸದರಿಗೆ ಮೋದಿ ಹೇಳಿದ್ದಾರೆ.
‘ಕಾನೂನುಗಳು ಅಥವಾ ನಿಯಮಗಳು ಜನರ ಅನುಕೂಲಕ್ಕಾಗಿ ಇರಬೇಕೇ ಹೊರತು, ಹೊರೆಯಾಗಿರಬಾರದು. ಜತೆಗೆ, ನಿಯಮಗಳು ವ್ಯವಸ್ಥೆಯನ್ನು ಸುಧಾರಿಸುವಂತಿರಬೇಕು ಬದಲಾಗಿ ಯಾವುದೇ ಕಾರಣವಿಲ್ಲದೆ ಜನರಿಗೆ ಕಿರುಕುಳ ನೀಡುವಂತಿರಬಾರದು’ ಎಂದು ರಿಜಿಜು ಸಹ ತಿಳಿಸಿದ್ದಾರೆ.
ಇದೇ ವೇಳೆ ಇತ್ತೀಚೆಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಕ್ಕಾಗಿ ಮೋದಿ ಅವರನ್ನು ಅಭಿನಂದಿಸಲಾಯಿತು. ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷರೂ ಆಗಿರುವ ಜೆ.ಪಿ ನಡ್ಡಾ ಉಪಸ್ಥಿತರಿದ್ದರು.


