ಉತ್ತರಾಖಂಡ ಸರ್ಕಾರ ಜಾರಿ ತಂದಿರುವ 2024ರ ಏಕರೂಪ ನಾಗರಿಕ ಸಂಹಿತೆ ಕಾಯ್ದೆಯ ನಿಬಂಧನೆಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ಉತ್ತರಾಖಂಡ ಹೈಕೋರ್ಟ್, ಲಿವ್-ಇನ್ ಸಂಬಂಧಗಳನ್ನು ನಿಯಂತ್ರಿಸಿದರೆ “ಏನು ತಪ್ಪಿದೆ” ಎಂದು ಕೇಳಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಜನವರಿ 27 ರಂದು ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬಂದಿತ್ತು. ಉತ್ತರಾಖಂಡದೊಳಗೆ ಲಿವ್-ಇನ್ ಸಂಬಂಧದಲ್ಲಿರುವ ಎಲ್ಲಾ ವ್ಯಕ್ತಿಗಳು ಹಾಗೂ ತಾತ್ಕಾಲಿಕವಾಗಿ ಹೊರಗೆ ವಾಸಿಸುವ ರಾಜ್ಯದ ಎಲ್ಲಾ ನಿವಾಸಿಗಳು ತಮ್ಮ ಸಂಬಂಧಗಳನ್ನು ನೋಂದಾಯಿಸಿಕೊಳ್ಳಬೇಕು ಎಂದು ಈ ಕಾನೂನು ಆದೇಶಿಸುತ್ತದೆ.
ಕಾನೂನ ಪ್ರಕಾರ, ಲಿವ್-ಇನ್ ಸಂಬಂಧವನ್ನು ನೋಂದಾಯಿಸಲು ವಿಫಲವಾದರೆ ಮೂರು ತಿಂಗಳವರೆಗೆ ಜೈಲು ಶಿಕ್ಷೆ ಮತ್ತು 10,000 ರೂ.ಗಳವರೆಗೆ ದಂಡ ವಿಧಿಸಬಹುದಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಈ ಕಾನೂನು ಲಿವ್-ಇನ್ ಸಂಬಂಧಗಳಲ್ಲಿ ಏರ್ಪಡುವುದನ್ನು ಹೆಚ್ಚು ಕಷ್ಟಕರವಾಗಿಸುವ ಮೂಲಕ, ಅದನ್ನು ನಿಯಂತ್ರಿಸುತ್ತದೆ. ಇಂತಹ ನಿಯಂತ್ರಣವು ಮೂಲಭೂತ ಹಕ್ಕುಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಕುಟುಂಬ ಕಾನೂನು ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರರು ಎಚ್ಚರಿಸಿದ್ದಾರೆ.
ಅಲ್ಮಾಸುದ್ದೀನ್ ಸಿದ್ದಿಕಿ ಮತ್ತು ಇಕ್ರಮ್ ಎಂಬ ಇಬ್ಬರು ವ್ಯಕ್ತಿಗಳು ಹೈಕೋರ್ಟ್‌ನಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಪ್ರಶ್ನಿಸಿ, ಮುಸ್ಲಿಮರು ಮತ್ತು ಇತರ ನಾಗರಿಕರ ಮೂಲಭೂತ ಹಕ್ಕುಗಳನ್ನು ಹಾಗೂ ಮುಸ್ಲಿಂ ಸಮುದಾಯದ ಅಗತ್ಯ ಧಾರ್ಮಿಕ ಆಚರಣೆಗಳನ್ನು ಈ ಸಂಹಿತೆ ಉಲ್ಲಂಘಿಸುತ್ತದೆ ಎಂದು ಹೇಳಿದ್ದಾರೆ.
ಬುಧವಾರ, ಹೈಕೋರ್ಟ್ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ನೋಟಿಸ್ ನೀಡಿದೆ. ಮುಖ್ಯ ನ್ಯಾಯಮೂರ್ತಿ ಜಿ ನರೇಂದರ್ ಅವರ ಪೀಠವು ಲಿವ್-ಇನ್ ಸಂಬಂಧಗಳನ್ನು ನೋಂದಾಯಿಸದ ಕಾರಣ “ಅಪಘಾತ” ಉಂಟಾಗುತ್ತದೆ ಎಂದು ಹೇಳಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
“ಈ ಸಂಬಂಧ ಮುರಿದುಬಿದ್ದರೆ ಏನು ಮಾಡುವುದು? ಈ ಸಂಬಂಧದಿಂದ ಮಗು ಉಂಟಾದರೆ ಏನು ಮಾಡಬೇಕು? ಮದುವೆಗೆ ಸಂಬಂಧಿಸಿದಂತೆ, ಪಿತೃತ್ವದ ಬಗ್ಗೆ ಒಂದು ಊಹೆ ಇದೆ, ಆದರೆ ಲಿವ್-ಇನ್ ಸಂಬಂಧದಲ್ಲಿ, ಆ ಊಹೆ ಎಲ್ಲಿದೆ?” ಎಂದು ನ್ಯಾಯಮೂರ್ತಿ ನರೇಂದರ್ ಕೇಳಿದ್ದಾರೆ.
ಮಹಿಳೆಯರನ್ನು ಕೌಟುಂಬಿಕ ಹಿಂಸಾಚಾರದಿಂದ ರಕ್ಷಿಸುವ ಕಾನೂನಿನಡಿಯಲ್ಲಿ ಲಿವ್-ಇನ್ ಸಂಬಂಧಗಳನ್ನು ಗುರುತಿಸಲಾಗಿದ್ದರೂ, ಅಂತಹ ಸಂಬಂಧಗಳ ನೋಂದಣಿ ಪಿತೃತ್ವವನ್ನು ಸಾಬೀತುಪಡಿಸುವ ವಿಷಯಗಳಲ್ಲಿ ಸಹಾಯಕವಾಗಬಹುದು ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ.
ಉತ್ತರಾಖಂಡ ಮತ್ತು ಕೇಂದ್ರ ಎರಡನ್ನೂ ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಲಿವ್-ಇನ್ ಸಂಬಂಧಗಳ ನೋಂದಣಿ ಮಹಿಳಾ ಸಬಲೀಕರಣವನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ ಎಂದು ಹೈಕೋರ್ಟ್‌ಗೆ ತಿಳಿಸಿದ್ದಾರೆ.
ಕೇಂದ್ರ ನಾಗರಿಕ ಸಂಹಿತೆಯು ಎಲ್ಲಾ ನಾಗರಿಕರಿಗೆ ಮದುವೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ದತ್ತು ಸ್ವೀಕಾರವನ್ನು ನಿಯಂತ್ರಿಸುವ ಕಾನೂನುಗಳ ಸಾಮಾನ್ಯ ಗುಂಪಾಗಿದೆ. ಪ್ರಸ್ತುತ ದೇಶದಲ್ಲಿ, ವಿವಿಧ ಧಾರ್ಮಿಕ ಮತ್ತು ಬುಡಕಟ್ಟು ಗುಂಪುಗಳು ಇವುಗಳನ್ನು ಬೇರೇ ಬೇರೆ ಸಂಪ್ರದಾಯ ಮತ್ತು ಕಾನೂಗಳ ಪ್ರಕಾರ ಇವುಗಳನ್ನು ನಡೆಸುತ್ತದೆ. ಇದನ್ನು ವೈಯಕ್ತಿಕ ವ್ಯವಹಾರಗಳು ಎಂದು ಪರಿಗಣಿಸುತ್ತಿದ್ದು, ವಿವಿಧ ಸಮುದಾಯಗಳು ನಿರ್ದಿಷ್ಟ ಕಾನೂನುಗಳನ್ನು ಆಧರಿಸಿ ಮಾಡುತ್ತದೆ. ಅದರಲ್ಲೂ ಹೆಚ್ಚಾಗಿ ಧಾರ್ಮಿಕ ಗ್ರಂಥಗಗಳ ಆಧಾರದಲ್ಲಿ ಇವುಗಳನ್ನು ಮಾಡಲಾಗುತ್ತದೆ.
ಏಕ ರೂಪ ನಾಗರಿಕ ಸಂಹಿತೆಯ ನಿಯಮದಂತೆ ಒಟ್ಟಿಗೆ ವಾಸಿಸುವ ಜೋಡಿಗಳು(ಲಿವ್ ಇನ್ ರಿಲೇಷನ್‌ಶಿಪ್) ತಮ್ಮ ಸಂಬಂಧವನ್ನು ನೋಂದಾಯಿಸಲು 16 ಪುಟಗಳ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ. ಈ ಪ್ರಕ್ರಿಯೆಗೆ ಅವರು ತಮ್ಮ ಆಧಾರ್ ಕಾರ್ಡ್‌ಗಳು, ಹಿಂದಿನ ವೈವಾಹಿಕ ಸಂಬಂಧಗಳ ವಿವರಗಳು ಅಥವಾ ಲಿವ್-ಇನ್ ಸಂಬಂಧಗಳನ್ನು ಕೊನೆಗೊಳಿಸುವುದು ಮತ್ತು ಅವರ ಮನೆಮಾಲೀಕರ ಹೆಸರು ಮತ್ತು ಸಂಪರ್ಕ ಸೇರಿದಂತೆ ರಾಜ್ಯ ಸರ್ಕಾರಕ್ಕೆ ದಾಖಲೆಗಳ ದೀರ್ಘ ಪಟ್ಟಿಯನ್ನು ನೀಡುವ ಅಗತ್ಯವಿದೆ.
ರಾಜ್ಯದ ಏಕರೂಪ ನಾಗರಿಕ ಸಂಹಿತೆಯ ಅಡಿಯಲ್ಲಿ ಅವರು “ನಿಷೇಧಿತ ಸಂಬಂಧಗಳ ಮಟ್ಟ”ಕ್ಕೆ ಒಳಪಟ್ಟರೆ, ಅಂದರೆ ಅವರು ರಕ್ತ ಸಂಬಂಧಿಗಳಾಗಿದ್ದರೆ, ಅವರು ಮದುವೆಯಾಗಲು ಅರ್ಹರು ಎಂದು ಹೇಳುವ ಧಾರ್ಮಿಕ ಮುಖಂಡರಿಂದ ಪ್ರಮಾಣಪತ್ರವನ್ನು ಪಡೆಯಬೇಕಿದೆ.
ಸಾಮಾನ್ಯ ವೈಯಕ್ತಿಕ ಕಾನೂನನ್ನು ಪರಿಚಯಿಸುವುದು ಬಿಜೆಪಿಯ ಕಾರ್ಯಸೂಚಿಯಾಗಿದ್ದು, ಪಕ್ಷವು ಆಳುವ ಹಲವಾರು ರಾಜ್ಯಗಳು ಅದನ್ನು ಜಾರಿಗೆ ತರಲು ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ.
ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆಗಾಗಿ ತನ್ನ ಅಭಿಯಾನದಲ್ಲಿ, ಬಿಜೆಪಿ ಮುಖ್ಯವಾಗಿ ಮುಸ್ಲಿಂ ವೈಯಕ್ತಿಕ ಕಾನೂನನ್ನು ಗುರಿಯಾಗಿಸಿಕೊಂಡಿತ್ತು. ಮುಸ್ಲಿರು ಬಹುಪತ್ನಿತ್ವವನ್ನು ಆಚರಿಸಲು, ಹೆಚ್ಚಿನ ಆಸ್ತಿಯನ್ನು ಆನುವಂಶಿಕವಾಗಿ ಪಡೆಯಲು, ವಿಚ್ಛೇದನ ಮಾಡಲು ಮತ್ತು ಜೀವನಾಂಶವನ್ನು ನಿರಾಕರಿಸಲು ಅವಕಾಶ ನೀಡುವ ಮೂಲಕ ಮಹಿಳೆಯರ ವಿರುದ್ಧ ತಾರತಮ್ಯ ಮಾಡಿದೆ ಎಂದು ವಾದಿಸಿತ್ತು.
ಕಾನೂನು ತಜ್ಞರು ಈ ಸಂಹಿತೆಯು ಪ್ರಾಥಮಿಕವಾಗಿ ಹಿಂದೂ ವೈಯಕ್ತಿಕ ಕಾನೂನಿನಿಂದ ಬಂದಿದ್ದು, ಅಲ್ಪಸಂಖ್ಯಾತ ಸಮುದಾಯಗಳ ವೈಯಕ್ತಿಕ ಕಾನೂನು ಪದ್ಧತಿಗಳನ್ನು ಅಳಿಸಿಹಾಕಲಿದೆ ಎಂದು ಎಚ್ಚರಿಸಿದ್ದಾರೆ.
ಇದನ್ನೂಓದಿ: ಕೇಂದ್ರದ ಹೊಸ ಕಾರ್ಮಿಕ ನೀತಿಯಿಂದ ಕಾರ್ಮಿಕರ ಕಲ್ಯಾಣಕ್ಕೆ ಅಡ್ಡಿ : ಕೇರಳ ಸರ್ಕಾರ
ಕೇಂದ್ರದ ಹೊಸ ಕಾರ್ಮಿಕ ನೀತಿಯಿಂದ ಕಾರ್ಮಿಕರ ಕಲ್ಯಾಣಕ್ಕೆ ಅಡ್ಡಿ : ಕೇರಳ ಸರ್ಕಾರ


