ಮಸ್ಕಿ ಉಪ ಚುನಾವಣೆಯಲ್ಲಿ ಆಡಳಿರೂಢ ಪಕ್ಷದ ಅಭ್ಯರ್ಥಿ ಸೋಲುವಂತೆ ಮಾಡಿದ್ದರಲ್ಲಿ ಎನ್‌ಆರ್‌ಬಿಸಿ 5ಎ ನೀರಾವರಿ ಕಾಲುವೆ ಹೋರಾಟದ ಪ್ರಧಾನ ಪಾತ್ರವಿದೆ. ಅದಕ್ಕೂ ಮುಖ್ಯವಾಗಿ ದೆಹಲಿಯ ಗಡಿಗಳಲ್ಲಿನ ರೈತರ ಹೋರಾಟವನ್ನು ಬಗ್ಗುಬಡಿಯಲು ಸಾಂಕ್ರಾಮಿಕ ಪರಿಸ್ಥಿತಿಯನ್ನು ಬಳಸಿಕೊಳ್ಳಲು ಪ್ರಭುತ್ವಗಳು, ಮುಖ್ಯವಾಗಿ ಮೋದಿ ಸರ್ಕಾರವು ಯತ್ನಿಸುತ್ತಿರುವುದರ ಈ ಸಂದರ್ಭದಲ್ಲಿ ರಾಜ್ಯದಲ್ಲಿಯೂ ನೀರಾವರಿ ಹೋರಾಟವೊಂದು ಅಡೆತಡೆಗಳನ್ನು ಮೀರಿ ಮುಂದುವರೆದಿದೆ.
ದೆಹಲಿ ಗಡಿಗಳಲ್ಲಿ ಕಂಡು ಬರುತ್ತಿರುವ ಹೋರಾಟದ ದೃಢತೆ ಮಸ್ಕಿಯಲ್ಲೂ ವ್ಯಕ್ತವಾಗುತ್ತಿದೆ.
ಇವತ್ತು 5-ಎ ನೀರಾವರಿ ಹೋರಾಟ 173ನೇ ದಿನಕ್ಕೆ ತಲುಪಿದೆ. ಚುನಾವಣೆ ನಂತರವೂ ದೃಢವಾಗಿ ಮುನ್ನುಗ್ಗುತ್ತಿದೆ.
ನಿನ್ನೆಯಿಂದ ಲಾಕ್‌ಡೌನ್ ಶುರುವಾದ ನಂತರ ಈ ಪ್ರತಿಭಟನೆ ನಿಲ್ಲಿಸಬೇಕು ಎಂದು ಪೊಲೀಸರು, ಅಂದರೆ ಸರ್ಕಾರ ಒತ್ತಡ ಹೇರುತ್ತಿದೆ. ನಾವು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡೇ ಹೋರಾಟ ಮುಂದುವರೆಸುತ್ತೇವೆ ಎಂದು ರೈತರು ಸ್ಪಷ್ಟವಾಗಿ ಹೇಳುತ್ತಿದ್ದಾರೆ.
ಈ ಕುರಿತು ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಹೋರಾಟ ಸಮಿತಿಯ ಗೌರವಾಧ್ಯಕ್ಷ ತಿಮ್ಮನಗೌಡ ಚಿಲ್ಕರಾಗಿ, ‘ಸ್ವಾತಂತ್ರ್ಯ ಪೂರ್ವದಿಂದಲೂ ರೈತರ ಮತ್ತು ಶ್ರಮಿಕರ ಹೋರಾಟಗಳನ್ನು ಮುರಿಯಲು ಹಲವು ಕುತಂತ್ರಗಳನ್ನು ಮಾಡುತ್ತ ಬರಲಾಗಿದೆ. ಈಗ ಕೊರೋನಾ ಬಿಕ್ಕಟ್ಟು, ಲಾಕ್‌ಡೌನ್‌ಗಳ ಮೂಲಕ ಹೋರಾಟ ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ನಾವು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ’ ಎಂದರು.
ಹೋರಾಟ ಸಮಿತಿ ಅಧ್ಯಕ್ಷ ಬಸವರಾಜಪ್ಪಗೌಡ ಹರ್ವಾಪರ ಮತ್ತು ಕಾರ್ಯದರ್ಶಿ ನಾಗರಡ್ಡೆಪ್ಪ ದೇವರಮನಿ, ‘ನಾವು ಯಾವುದೇ ನಿಯಮ ಉಲ್ಲಂಘಿಸುತ್ತಿಲ್ಲ. ಪ್ರತಿಭಟನೆಯಲ್ಲಿ ಇರುವವರು ಮಾಸ್ಕ್ ಧರಿಸುತ್ತಿದ್ದಾರೆ, ಸಾಮಾಜಿಕ ಅಂತರ ಕಾಪಾಡುತ್ತಿದ್ದಾರೆ. ಜಾಸ್ತಿ ಜನರನ್ನು ಸೇರಿಸದೇ ಇದನ್ನು ಸಾಂಕೇತಿಕ ಪ್ರತಿಭಟನೆಯನ್ನಾಗಿ ಮುಂದುವರೆಸಿದ್ದೇವೆ. ಇದು ಈಗ ಒಂದೇ ಊರಿಗೆ ಸಮೀತವಾಗಿಲ್ಲ. ಪ್ರತಿದಿನ ಬೇರೆಬೇರೆ ಹಳ್ಳಿಗಳಲ್ಲಿ ಈ ಪ್ರತಿಭಟನೆ ನಡೆಯುತ್ತಿದೆ’ ಎಂದರು.
ಪ್ರತಿಭಟನೆಯಲ್ಲಿರುವ ಕೆಲವು ಯುವಕರು, ‘ಎಫ್‌ಐಆರ್ ದಾಖಲಿಸತ್ತೇವೆ ಎಂದೆಲ್ಲ ಪೊಲೀಸರು ಹೆದರಿಸುತ್ತಿದ್ದಾರೆ. ನಾವು ಮನೆಮನೆಗೂ ಈ ಹೋರಾಟ ಒಯ್ಯತ್ತೇವೆ. ಜನರು ಮನೆ ಮುಂದೆ ಬ್ಯಾನರ್ ಕಟ್ಟಿ ಅವರ ಮನೆ ಕಟ್ಟೆಗಳ ಮೇಲೆಯೇ ಸಾಂಕೇತಿಕ ಹೋರಾಟ ನಡೆಯುವಂತೆ ಮಾಡುತ್ತೇವೆ’ ಎಂದು ದೃಢನಿರ್ಧಾರ ಮಾಡಿದ್ದಾರೆ.
ಮಸ್ಕಿ ತಾಲೂಕಿನ 58 ಗ್ರಾಮಗಳ ಜಮೀನುಗಳಿಗೆ ಕೃಷ್ಣಾ ನದಿಯ ನೀರು ಒದಗಿಸುವ 5-ಎ ನೀರಾವರಿ ಯೋಜನೆ ಜಾರಿ ಆಗಬೇಕೆಂದು 173 ದಿನಗಳಿಂದ ಸತತ ಹೋರಾಟ ನಡೆದಿದೆ. ಇದು ಈ ಸಲದ ಉಪ ಉನಾವಣೆ ಫಲಿತಾಶದಲ್ಲೂ ಪ್ರಮುಖ ಪರಿಣಾಮ ಬೀರಿದ ಕಾರಣಕ್ಕೆ ಬಿಜೆಪಿ ಅಭ್ಯರ್ಥಿ 30 ಸಾವಿರಕ್ಕೂ ಅಧಿಕ ಮತಗಳಿಂದ ಸೋಲು ಉಂಡಿದ್ದಾರೆ.
* ಪಿ.ಕೆ ಮಲ್ಲನಗೌಡರ್
ಇದನ್ನೂ ಓದಿ: ಸರ್ಕಾರ ಜನರ ಮೇಲೆ ದರ್ಪ ಪ್ರದರ್ಶಿಸುವುದು ಬಿಟ್ಟು ಪರಿಹಾರ ನೀಡಲಿ- ಎಚ್.ಡಿ.ಕುಮಾರಸ್ವಾಮಿ


