ಆಲ್ ಇಂಡಿಯಾ ರೇಡಿಯೋ (ಎಐಆರ್) ಮತ್ತು ದೂರದರ್ಶನ (ಡಿಡಿ) ವಿರೋಧ ಪಕ್ಷದ ನಾಯಕರ ಭಾಷಣಗಳನ್ನು ಪ್ರಸಾರಕ್ಕೂ ಮುನ್ನ ಸೆನ್ಸಾರ್ ಮಾಡಿವೆ ಎಂದು ವರದಿಯಾಗಿದೆ.
ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರು ತಮ್ಮ ಭಾಷಣದಲ್ಲಿ ಬಳಸಿದ್ದ “ಕೋಮುವಾದ, ಸರ್ವಾಧಿಕಾರಿ ಆಡಳಿತ”, “ಕಠಿಣ ಕಾನೂನುಗಳು” ಎಂಬ ಪದಗುಚ್ಛಗಳನ್ನು ಮತ್ತು ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ (ಎಐಎಫ್‌ಬಿ) ನಾಯಕ ಜಿ ದೇವರಾಜನ್ ಅವರು ಬಳಸಿದ್ದ “ಮುಸ್ಲಿಮರು” ಎಂಬ ಪದವನ್ನು ಸೆನ್ಸಾರ್ ಮಾಡಲಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಶುಕ್ರವಾರ ವರದಿ ಮಾಡಿದೆ.
ಚುನಾವಣಾ ಚಿಹ್ನೆಗಳ (ಮೀಸಲು ಮತ್ತು ಹಂಚಿಕೆ) ನಿಬಂಧನೆಗಳ ಆದೇಶ 1968ರಡಿ 6 ರಾಷ್ಟ್ರೀಯ ಪಕ್ಷಗಳು ಹಾಗೂ 59 ರಾಜ್ಯ ಪಕ್ಷಗಳು ಚುನಾವಣಾ ಪ್ರಚಾರದ ಸುದ್ದಿ ಪ್ರಸಾರದ ಅರ್ಹತೆ ಹೊಂದಿವೆ. ಈ ಪಕ್ಷಗಳ ರಾಷ್ಟ್ರ ಹಾಗೂ ರಾಜ್ಯ ಪ್ರತಿನಿಧಿಗಳ ಚುನಾವಣಾ ಪ್ರಚಾರದ ಭಾಷಣವನ್ನು ಪ್ರಸಾರ ಮಾಡಲು ಅನುಮತಿಸಲಾಗಿರುವುದನ್ನು ಏಪ್ರಿಲ್‌ನಲ್ಲಿ ಹೊರಡಿಸಿರುವ ಚುನಾವಣಾ ಆಯೋಗದ ಆದೇಶದಲ್ಲಿ ತಿಳಿಸಲಾಗಿತ್ತು.
ಪ್ರಸಾರ ಭಾರತಿಯ ಅಧಿಕಾರಿಯೊಬ್ಬರು ಸೆನ್ಸಾರ್ ಆದೇಶವನ್ನು ಸಮರ್ಥಿಸಿಕೊಂಡಿದ್ದು, ಎಐಆರ್ ಮತ್ತು ಡಿಡಿ ಎರಡೂ ಸಂಸ್ಥೆಗಳು ಚುನಾವಣಾ ಆಯೋಗ ನಿಗದಿಪಡಿಸಿದ ‘ನಡವಳಿಕೆ ನಿಯಮಗಳನ್ನು’ ಅನುಸರಿಸುವುದು ಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ. ಆದರೆ, ಇದು ರಾಜಕೀಯ ನಾಯಕರ ಭಾಷಣದಲ್ಲಿ ನಡೆಯುವ ಸಾಮಾನ್ಯ ಪ್ರಕ್ರಿಯೆ ಎಂದು ಅವರು ಹೇಳಿದ್ದು, ಮುಖ್ಯಮಂತ್ರಿಗಳ ಪಠ್ಯಗಳನ್ನು ಸಹ ಸರಿಪಡಿಸಿದ ನಿದರ್ಶನಗಳಿವೆ ಎಂದಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸೀತಾರಾಮ್ ಯೆಚೂರಿ, “ನನ್ನ ಭಾಷಣದ ಹಿಂದಿ ಆವೃತ್ತಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಆದರೆ, ಇಂಗ್ಲಿಷ್ ತರ್ಜುಮೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದಿದ್ದಾರೆ.
ಜಿ ದೇವರಾಜನ್ ಮಾತನಾಡಿ, “ನಾನು ನನ್ನ ಭಾಷಣದಲ್ಲಿ ಸಿಎಎಯಿಂದ ಮುಸ್ಲಿಮರಿಗೆ ಆಗುತ್ತಿರುವ ತಾರತಮ್ಯಗಳ ಬಗ್ಗೆ ಉಲ್ಲೇಖಿಸಿದ್ದೆ. ಅವರು ‘ಮುಸ್ಲಿಂ’ ಪದವನ್ನು ತೆಗೆಯಲಾಗಿದೆ ಎಂದು ತಿಳಿಸಿದ್ದಾರೆ. ನಾನು ಸಿಎಎ ಕಾನೂನಿನಲ್ಲಿ ಮುಸ್ಲಿಮರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಸರ್ಕಾರದ ಮಾಧ್ಯಮಗಳಿಗೆ ಮನವರಿಕೆ ಮಾಡಿದರೂ, ಅವರು ಆ ಪದವನ್ನು ಉಳಿಸಿಕೊಳ್ಳದೆ ಅಳಿಸಿದ್ದಾರೆ ಎಂದು ತಿಳಿಸಿದ್ದಾರೆ.
ದೂರದರ್ಶನದ ಮಹಾನಿರ್ದೇಶಕರಿಗೆ ಪತ್ರ ಬರೆದಿರುವ ಸೀತಾರಾಮ್ ಯೆಚೂರಿ ಅವರು ಸೆನ್ಸಾರ್ ಅನ್ನು ಪ್ರತಿಭಟಿಸಿದ್ದಾರೆ. ಭಾಷಣದಿಂದ ನಿರ್ದಿಷ್ಟ ಪದಗಳನ್ನು ಅಳಿಸುವುದು ಭಿನ್ನಾಭಿಪ್ರಾಯದ ಹಕ್ಕಿನ ನಿರಾಕರಣೆಯಾಗಿದೆ ಎಂದು ಯೆಚೂರಿ ಹೇಳಿದ್ದಾರೆ. ಎಐಅಆರ್‌ಗೂ ಅವರು ಪತ್ರ ಬರೆದಿದ್ದಾರೆ ಎಂದು ವರದಿ ಹೇಳಿದೆ.
ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರದ ಭಾಷಣಗಳ ಉಚಿತ ಪ್ರಸಾರ ಯೋಜನೆಯನ್ನು ಜನವರಿ 1998ರಲ್ಲಿ ಪರಿಚಯಿಸಲಾಗಿದೆ. ಈ ಮೂಲಕ ಚುನಾವಣೆಯ ಸಂದರ್ಭದಲ್ಲಿ ಮಾನ್ಯತೆ ಪಡೆದ ಎಲ್ಲಾ ರಾಜಕೀಯ ಪಕ್ಷಗಳು ಸರ್ಕಾರಿ ಸ್ವಾಮ್ಯದ ಎಲೆಕ್ಟ್ರಾನಿಕ್ ಮಾಧ್ಯಮಗಳನ್ನು ಸಮಾನವಾಗಿ ಬಳಸುವ ಅವಕಾಶ ನೀಡಲಾಗಿದೆ.
ಇದನ್ನೂ ಓದಿ : ರಾಜಸ್ಥಾನ: ಬಿಜೆಪಿ ಸರ್ಕಾರದ ಯೋಜನೆಯಲ್ಲಿ 1,140 ಕೋಟಿ ರೂ.ನಷ್ಟ: ತಮ್ಮದೇ ಸರಕಾರದ ವಿರುದ್ಧ ಆರೋಪಿಸಿದ ಸಚಿವ


