ಬುಧವಾರ ಲೋಕಸಭೆಯಲ್ಲಿ ಸಂಭವಿಸಿದ ಭಾರಿ ಭದ್ರತಾ ಲೋಪದ ನಂತರ, ಸರ್ಕಾರ ಉತ್ತರಿಸಬೇಕು ಎಂದು ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಪಕ್ಷಗಳು ಬೇಡಿಕೆ ಇಟ್ಟಿದ್ದವು. ಸದನದಲ್ಲಿ ಉಂಟಾದ ಗದ್ದಲದಿಂದಾಗಿ ಕಾಂಗ್ರೆಸ್-ಡಿಎಂಕೆ ಪಕ್ಷದ ಹದಿಮೂರು ಸಂಸದರನ್ನು ಸ್ಪೀಕರ್ ಅಮಾನತು ಮಾಡಿದ್ದರು. ಆದರೂ ಪಟ್ಟು ಬಿಡದ ಸಂಸದರು, ‘ಗೃಹ ಸಚಿವ ಅಮಿತ್ ಶಾ ಸಮಜಾಯಿಷಿ ನೀಡಲೇಬೇಕು’ ಎಂದು ಶುಕ್ರವಾರವೂ ಧರಣಿ ಮುಂದುವರಿಸಿದ್ದರು.
ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿರುವ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಪ್ರಧಾನಿ ಮೋದಿ ಅಥವಾ ಗೃಹ ಸಚಿವ ಅಮಿತ್ ಶಾ ಅವರು ಉತ್ತರ ಕೊಡುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ. ‘ಲೋಕಸಭೆ ಭದ್ರತೆಯು ಕಾರ್ಯದರ್ಶಿಗಳ ಜವಾಬ್ದಾರಿಯಾಗಿದೆ, ಸರ್ಕಾರ ಉತ್ತರಿಸಬೇಕಾಗಿಲ್ಲ. ಈ ವಿಷಯದಲ್ಲಿ ಗೃಹ ಸಚಿವರನ್ನು ಏಕೆ ಹೊಣೆಗಾರರನ್ನಾಗಿ ಮಾಡಬೇಕು’ ಎಂದು ಎಕ್ಸ್‌ನಲ್ಲಿ ಸರಣಿ ಟ್ವೀಟ್ ಮಾಡಿದ್ದಾರೆ.
1974 ಮತ್ತು 1994 ರಲ್ಲಿ ಸಂಸತ್ತಿನ ಭದ್ರತಾ ಉಲ್ಲಂಘನೆ ಘಟನೆಗಳನ್ನು ಉಲ್ಲೇಖಿಸಿದ ದುಬೆ, ಲೋಕಸಭೆಯ ಭದ್ರತೆಯ ಜವಾಬ್ದಾರಿಯು ಲೋಕಸಭೆಯ ಕಾರ್ಯದರ್ಶಿಯ ಮೇಲಿದೆ ಎಂದು ಒತ್ತಿ ಹೇಳಿದರು. 1974ರಲ್ಲಿ ವ್ಯಕ್ತಿಯೊಬ್ಬರು ಎರಡು ಪಿಸ್ತೂಲ್‌ಗಳೊಂದಿಗೆ ಲೋಕಸಭೆಗೆ ಪ್ರವೇಶಿಸಿದಾಗ, ಜನಸಂಘದ ಪ್ರತಿಪಕ್ಷಗಳು ಅದನ್ನು ವಿವಾದಗೊಳಿಸಲಿಲ್ಲ. ಅಂದಿನ ಪ್ರಧಾನಿ ಮತ್ತು ಗೃಹ ಸಚಿವರ ಹೆಸರನ್ನು ಉಲ್ಲೇಖಿಸಲಿಲ್ಲ’ ಎಂದರು.
ಇತ್ತೀಚಿನ ಭದ್ರತಾ ಉಲ್ಲಂಘನೆ ಮತ್ತು ಈ ಹಿಂದೆ ನಡೆದಿರುವ ಘಟನೆಗಳಿಗೆ ಹೋಲಿಸಿ ಮಾತನಾಡಿರುವ ದುಬೆ ಅವರ ಎಕ್ಸ್ ಪೋಸ್ಟ್‌ಗೆ ವಿರೋಧ ಪಕ್ಷದ ನಾಯಕರು ಕಿಡಿಕಾರಿದ್ದಾರೆ. ಡಿಸೆಂಬರ್ 13ರಂದು ನಡೆದ ಭದ್ರತಾ ಲೋಪ ಘಟನೆಯ ಗಂಭೀರತೆಯನ್ನು ಒತ್ತಿ ಹೇಳಿದ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ, ಸರ್ಕಾರವು ಉತ್ತರದಾಯಿತ್ವವನ್ನು ಪ್ರದರ್ಶಿಸಬೇಕು ಎಂದು ಒತ್ತಾಯಿಸಿದರು.
‘ಇಂದು, ಉಸೇನ್ ಬೋಲ್ಟ್ ಅವರ ಓಟಕ್ಕಿಂತ ವೇಗವಾಗಿ ಸದನವನ್ನು ಮುಂದೂಡಲಾಗಿದೆ. ಏಕೆಂದರೆ, ನಾವು ಪ್ರಧಾನಿ ಅಥವಾ ಗೃಹ ಸಚಿವರಿಂದ ಉತ್ತರವನ್ನು ಕೋರುತ್ತಿದ್ದೇವೆ. ಅವರು ಖಾಸಗಿ ಟಿವಿ ಚಾನೆಲ್‌ನಲ್ಲಿ ಸುದೀರ್ಘ ವಿವರಣೆಯನ್ನು ನೀಡಿದ್ದಾರೆ. ಆದರೆ, ಈವರೆಗೂ ಸದನದಲ್ಲಿ ಹೇಳಿಕೆ ನೀಡಿಲ್ಲ’ ಎಂದು ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
ಸರ್ಕಾರದ ನಡೆಗೆ ಚಿದಂಬರಂ ಕಿಡಿ:
ಭದ್ರತಾ ವೈಪಲ್ಯದ ಬಗ್ಗೆ ಉತ್ತರ ಕೊಡದ ಸರ್ಕಾರದ ನಡೆ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ, ‘ಬಿಜೆಪಿಯ ಆಡಳಿತದಲ್ಲಿ ರಾಜಕೀಯ ಹೊಸ ಆಳಕ್ಕೆ ಇಳಿದಿದೆ. ಡಿಸೆಂಬರ್ 13 ರಂದು ಭೀಕರ ಭದ್ರತಾ ಉಲ್ಲಂಘನೆಯ ಕುರಿತು ಸಂಸತ್ತಿನಲ್ಲಿ ಗೌರವಾನ್ವಿತ ಪ್ರಧಾನ ಮಂತ್ರಿ ಅಥವಾ ಗೌರವಾನ್ವಿತ ಗೃಹ ಸಚಿವರು ಹೇಳಿಕೆ ನೀಡಬೇಕೆಂದು ಪ್ರತಿಪಕ್ಷಗಳು ಬಯಸಿದರೆ, ಅವರ ಸದಸ್ಯರನ್ನು ಅಮಾನತುಗೊಳಿಸಲಾಗುತ್ತದೆ. ಭದ್ರತೆಯನ್ನು ಉಲ್ಲಂಘಿಸಿದ ಸಂಸದರಿಗೆ ಅಮಾನತು ಅಡ್ಡಿಯಾಗುವುದಿಲ್ಲ. ಇದು ಪ್ರತಿಪಕ್ಷಗಳ ಬಾಯಿ ಮುಚ್ಚಿಸುವ ಉದ್ದೇಶ ಹೊಂದಿದೆ’ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ; ವೈದ್ಯಕೀಯ ಗರ್ಭಪಾತ ಕಾಯ್ದೆ; ಮಾರ್ಗಸೂಚಿ ಹೊರಡಿಸಿದ ಕರ್ನಾಟಕ ಹೈಕೋರ್ಟ್


