ಸಂಸತ್ ಭವನದಲ್ಲಿ ಲೋಕಸಭೆ ಕಲಾಪ ನಡೆಯವಾಗಲೇ ಅಪರಿಚಿತರು ನುಗ್ಗಿ ಕಲರ್ ಸ್ಮೋಕ್ ಸಿಡಿಸಿದ ಘಟನೆ ಇಂದು (ಡಿ.13) ನಡೆದಿದೆ. ಈ ಹಿನ್ನೆಲೆ ಸಂಸತ್‌ಗೆ ಸಂದರ್ಶಕರ ಭೇಟಿಯನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ.
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ಸೂಚನೆ ಮೇರೆಗೆ ಮುಂದಿನ ಆದೇಶದವರೆಗೆ ಸಂಸತ್‌ಗೆ ಸಂದರ್ಶಕರ ಪಾಸ್ ನೀಡುವುದನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿಗಳು ಹೇಳಿವೆ.
ಇಂದು ಸಂಸತ್‌ಗೆ ಭೇಟಿ ನೀಡಲು ಹಲವರು ಪಾಸ್ ಪಡೆದಿದ್ದರು. ಆದರೆ, ಅಹಿತಕರ ಘಟನೆ ನಡೆದ ಬಳಿಕ ಅವರ ಪಾಸ್‌ಗಳನ್ನು ರದ್ದು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಆದರೆ, ಸಂದರ್ಶಕರ ಭೇಟಿ ರದ್ದುಪಡಿಸಿರುವ ಬಗ್ಗೆ ನಮಗೆ ಯಾವುದೇ ಲಿಖಿತ ಆದೇಶ ಬಂದಿಲ್ಲ ಎಂದು ಸಂಸತ್ ಭದ್ರತಾ ಅಧಿಕಾರಿಗಳು ತಿಳಿಸಿದ್ದಾಗಿ ವರದಿಗಳು ಹೇಳಿವೆ.
ಸಾಮಾನ್ಯ ಸಂದರ್ಶಕರ ಪಾಸ್ ಮೂಲಕ ಎರಡು ಗಂಟೆಗಳ ಕಾಲ ಸಂಸತ್ ಕಟ್ಟಡ ವೀಕ್ಷಿಸಲು ಅವಕಾಶ ನೀಡಲಾಗ್ತದೆ. ಇಂದು ಬೆಳಿಗ್ಗೆ ಹಲವು ಸಂಸದರ ಪತ್ನಿಯರು ಸಂಸತ್ ಕಟ್ಟಡಕ್ಕೆ ಭೇಟಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಇಂದು ಲೋಕಸಭೆಯಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ಸಂದರ್ಶಕರ ಗ್ಯಾಲರಿಯಲ್ಲಿದ್ದ ಇಬ್ಬರು ಯುವಕರು ಸಂಸದರ ಆಸನದ ಬಳಿಗೆ ಜಿಗಿದು ಕಲರ್ ಸ್ಮೋಕ್ ಸಿಡಿದ್ದರು. ಇದರಿಂದ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಸಂಸತ್ ಭವನದ ಹೊರಗೂ ಒಬ್ಬರ ಯುವಕ ಮತ್ತು ಮತ್ತೊಬ್ಬಳು ಯುವತಿ ಕಲರ್ ಸ್ಮೋಕ್ ಸಿಡಿಸಿ ಪ್ರತಿಭಟಿಸಿದ್ದರು.
ಘಟನೆ ಸಂಬಂಧ ನಾಲ್ವರನ್ನು ಬಂಧಿಸಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ: ಸಂಸತ್ ಭದ್ರತಾ ಲೋಪ: ಕಲರ್ ಸ್ಮೋಕ್ ಬಾಟಲಿಗಾಗಿ ಕಿತ್ತಾಡಿಕೊಂಡ ಟಿವಿ ಪತ್ರಕರ್ತರು


