ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟಕ್ಕೊಳಗಾಗಿರುವ ಜನಸಾಮಾನ್ಯರಿಗೆ ಮೋದಿ ಸರ್ಕಾರ ಮತ್ತೊಮ್ಮೆ ಹೊಡೆತ ನೀಡಿದೆ. ಎಲ್‌ಪಿಜಿ ಸಿಲಿಂಡರ್ ಬೆಲೆ ಇಂದಿನಿಂದ ಪ್ರತಿ ಸಿಲಿಂಡರ್‌ಗೆ 25 ರೂಪಾಯಿಯಂತೆ ಹೆಚ್ಚಳ ಮಾಡಲಾಗಿದೆ.
ಆಗಸ್ಟ್ 1 ರಂದು ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಆಗಸ್ಟ್ 17ರಿಂದ ಜಾರಿಗೆ ಬರುವಂತೆ ಪ್ರತಿ ಸಿಲಿಂಡರ್‌ಗೆ 25ರೂ ಏರಿಕೆ ಮಾಡಲಾಗಿತ್ತು. ಅದಾದ ನಂತರ ಈಗ ಸೆಪ್ಟೆಂಬರ್ 1ರಿಂದ ಜಾರಿಗೆ ಬರುವಂತೆ ಮತ್ತೆ 25 ರೂ ಹೆಚ್ಚಿಸಲಾಗಿದೆ.
ಬೆಂಗಳೂರಿನಲ್ಲಿ 14.2 ಕೆ.ಜಿ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ಗೆ 862 ರೂ ನೀಡಲಾಗುತ್ತಿತ್ತು. ಇನ್ನು ಮುಂದೆ ಗ್ರಾಹಕರು ಪ್ರತಿ ಸಿಲಿಂಡರ್‌ಗೆ 887ರೂ ಬೆಲೆ ತೆರಬೇಕಾಗಿದೆ. ಹದಿನೈದು ದಿನಗಳ ಅಂತದಲ್ಲಿ 50 ರೂ ಏರಿಕೆಯಾಗಿರುವುದು ಜನಸಾಮಾನ್ಯರ ಹೊರೆ ಹೆಚ್ಚಿಸಿದೆ.
2021ರ ಜನವರಿಯಿಂದ ಸೆಪ್ಟೆಂಬರ್ 1ರವರೆಗೆ ಅಡುಗೆ ಸಿಲಿಂಡರ್ ಬೆಲೆ ಒಟ್ಟು 190 ರೂ ಹೆಚ್ಚಳವಾಗಿದೆ.
ಕೇಂದ್ರ ಸರ್ಕಾರದ ಈ ಬೆಲೆ ಏರಿಕೆ ನಿರ್ಧಾರ ಖಂಡಿಸಿ ಮಹಿಳಾ ಕಾಂಗ್ರೆಸ್ ಬೆಂಗಳೂರಿನ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದೆ.
ಸಿಲಿಂಡರ್, ಅಡುಗೆ ಎಣ್ಣೆ, ದಿನಸಿ, ಪೆಟ್ರೋಲ್, ವಿದ್ಯುತ್… ಹೀಗೆ ದಿನನಿತ್ಯದ ಬದುಕಿನ ಅಗತ್ಯಗಳ ಬೆಲೆ ಏರಿಕೆಯಿಂದಾಗಿ ಜನರು ಹೈರಾಣರಾಗಿದ್ದಾರೆ. ಒಂದು ಕಡೆ ಕೋವಿಡ್‌ನಿಂದಾಗಿ ಸರಿಯಾಗಿ ಸಂಬಳ, ದಿನಗೂಲಿ ಇಲ್ಲದೇ ಮನೆಯಲ್ಲಿ ಇದ್ದದ್ದರಲ್ಲೇ ಒಂದೊತ್ತಿನ ಹೊಟ್ಟೆ ತುಂಬಿಸಿಕೊಂಡಿದ್ದ ಜನರ ಬದುಕಲ್ಲಂತೂ ಈ ಬೆಲೆ ಏರಿಕೆ ಸಾವು ನೋವಿನ ಪ್ರಶ್ನೆಯಾಗಿ ಮಾರ್ಪಟ್ಟಿದೆ.
ಇದನ್ನೂ ಓದಿ: ದೆಹಲಿ: ನಾಲ್ಕು ವರ್ಷದ ಮಗುವಿನ ಮೇಲೆ ಅಮಾನವೀಯ ಅತ್ಯಾಚಾರ


