ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಚೆನ್ನೈನ ರಾಜ ಭವನದಲ್ಲಿ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು. ಅವರು ತಮಿಳು ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಇದರ ಜೊತೆಗೆ ಹಿರಿಯ ನಾಯಕರು ಹಾಗೂ ಒಂದು ಡಜನ್‌ಗೂ ಹೆಚ್ಚು ಮೊದಲ ಬಾರಿಗೆ ಸಚಿವರಾಗುತ್ತಿರುವ 34 ಸದಸ್ಯರ ಕ್ಯಾಬಿನೆಟ್‌ನ ಪಟ್ಟಿಯನ್ನು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅನುಮೋದಿಸಿದ್ದಾರೆ ಎಂದು ರಾಜ ಭವನ ಪ್ರಕಟಣೆ ತಿಳಿಸಿದೆ.
ಗೃಹ ಇಲಾಖೆ ಸೇರಿದಂತೆ ಕೆಲವು ಇಲಾಖೆಗಳನ್ನು ಸ್ಟಾಲಿನ ತಮ್ಮಲ್ಲೇ ಉಳಿಸಿಕೊಂಡಿದ್ದಾರೆ. ಪಕ್ಷದ ಹಿರಿಯ ನಾಯಕ, ಪ್ರಧಾನ ಕಾರ್ಯದರ್ಶಿ, ದುರೈಮುರುಗನ್ ಅವರು ಜಲಸಂಪನ್ಮೂಲ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಇದನ್ನೂ ಓದಿ: ‘ತಂಬಿ ತೇಜಸ್ವಿ ಸೂರ್ಯ, ಇದು ತಮಿಳುನಾಡು; ನಿಮ್ಮ ನಾಟಕ ಬೆಂಗಳೂರಲ್ಲೇ ಬಿಟ್ಟು ಬನ್ನಿ’
ಸಚಿವ ಸಂಪುಟವು ಇಬ್ಬರು ಮಹಿಳಾ ಸದಸ್ಯರನ್ನು ಹೊಂದಿದೆ. ಮೊದಲ ಸಚಿವ ಸಂಪುಟ ಪಟ್ಟಿಯಲ್ಲಿ ಸ್ಟಾಲಿನ್ ಅವರ ಮಗ ಉದಯನಿಧಿ ಅವರ ಹೆಸರು ಕಾಣಿಸಿಕೊಂಡಿಲ್ಲ.
ಸಂಪುಟದಲ್ಲಿ ಮೊದಲ ಬಾರಿಗೆ ಮಂತ್ರಿಯಾಗುತ್ತಿರುವ ಮಾಜಿ ಚೆನ್ನೈ ಮೇಯರ್ ಮಾ ಸುಬ್ರಮಣಿಯನ್ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾಗಿ ನಿಯೋಜನೆಗೊಂಡಿದ್ದಾರೆ. ಪಕ್ಷದ ಪ್ರಭಾವಿ ವ್ಯಕ್ತಿ ಪಿ.ಕೆ.ಸೇಕರ್‌ಬಾಬು ಅವರಿಗೆ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯನ್ನು ನೀಡಲಾಗಿದೆ.
ಮಾಜಿ ಬ್ಯಾಂಕರ್ ಪಳನಿವೇಲ್ ತ್ಯಾಗರಾಜನ್ ಅವರಿಗೆ ಹಣಕಾಸು ಇಲಾಖೆಯನ್ನು ಮತ್ತು ಶಾಲಾ ಶಿಕ್ಷಣ ಇಲಾಖೆಯನ್ನು ಅನ್ಬಿಲ್ ಮಹೇಶ್ ಪೊಯ್ಯಮೊಳಿಗೆ ಹಂಚಿಕೆ ಮಾಡಲಾಗಿದೆ. 2018 ರಲ್ಲಿ ಎಐಎಡಿಎಂಕೆ ಡಿಎಂಕೆ ಸೇರಿಕೊಂಡ ವಿ. ಸೆಂಥಿಲ್ ಬಾಲಾಜಿಗೆ ವಿದ್ಯುತ್ ಇಲಾಖೆ ಸಚಿವಾಲಯವನ್ನು ನೀಡಲಾಗಿದೆ.
ಕೆ.ಎನ್. ನೆಹರೂ ಅವರನ್ನು ಪುರಸಭೆ ಆಡಳಿತ ಸಚಿವರನ್ನಾಗಿ ಆಯ್ಕೆ ಮಾಡಲಾಗಿದ್ದರೆ, ಐ ಪೆರಿಯಸಾಮಿಯನ್ನು ಸಹಕಾರ ಸಚಿವರನ್ನಾಗಿ ನೇಮಿಸಲಾಗಿದೆ. ಕೆ.ಪೊನ್ಮುಡಿ ಅವರು 2006-11ರ ಅಧಿಕಾರಾವಧಿಯಲ್ಲಿದ್ದಾಗ ಇದ್ದ ಉನ್ನತ ಶಿಕ್ಷಣ ಇಲಾಖೆಯನ್ನು ಮರಳಿ ಪಡೆದಿದ್ದಾರೆ.
ಇದನ್ನೂ ಓದಿ: ತಮಿಳುನಾಡು: ಭರ್ಜರಿ ಮುನ್ನಡೆ ಸಾಧಿಸಿದ ಡಿಎಂಕೆ – ದಶಕದ ನಂತರ ಉದಯಿಸಿದ ಸೂರ್ಯ!
ಪಕ್ಷದ ಪ್ರಭಾವಿ ನಾಯಕ ಇ.ವಿ.ವೇಲು ಅವರನ್ನು ಲೋಕೋಪಯೋಗಿ ಸಚಿವರನ್ನಾಗಿ ಆಯ್ಕೆ ಮಾಡಲಾಗಿದ್ದರೆ, ಎಂ.ಆರ್.ಕೆ ಪನ್ನೀರ್‌ಸೆಲ್ವಂ ಅವರು ಕೃಷಿ ಮತ್ತು ಕಲ್ಯಾಣ ಸಚಿವರಾಗಲಿದ್ದಾರೆ. ಕೆಕೆಎಸ್‌ಎಸ್‌ಆರ್ ರಾಮಚಂದ್ರನ್ ಅವರು ಕಂದಾಯ ಸಚಿವರಾಗಿ, ತಂಗಮ್ ತೆನ್ನರಸು ಕೈಗಾರಿಕಾ ಸಚಿವರಾಗಿ ಮತ್ತು ಎಸ್. ರಘುಪತಿ ಅವರು ಕಾನೂನು ಸಚಿವಾಗಿ ಆಯ್ಕೆಯಾಗಿದ್ದಾರೆ.
ಕೆ.ಆರ್. ಪೆರಿಯಕಾರಪ್ಪನ್, ಟಿ.ಎಂ. ಅನ್ಬರಸನ್, ಎಂ.ಪಿ. ಸಮಿನಾಥನ್, ಈ ಎಲ್ಲಾ ಮಾಜಿ ಮಂತ್ರಿಗಳನ್ನು ಸಹ ಸಚಿವರನ್ನಾಗಿ ಹೆಸರಿಸಲಾಗಿದ್ದು, ಕ್ರಮವಾಗಿ ಗ್ರಾಮೀಣಾಭಿವೃದ್ಧಿ, ಗ್ರಾಮೀಣ ಕೈಗಾರಿಕೆಗಳು ಮತ್ತು ಮಾಹಿತಿ ಮತ್ತು ಪ್ರಚಾರ ಇಲಾಖೆಗಳನ್ನು ನೀಡಲಾಗಿದೆ. ಏತನ್ಮಧ್ಯೆ, ಪಿ. ಗೀತಾ ಜೀವನ್ ಅವರನ್ನು ಸಮಾಜ ಕಲ್ಯಾಣ ಮತ್ತು ಮಹಿಳಾ ಸಬಲೀಕರಣ ಸಚಿವರಾಗಿ ಆಯ್ಕೆ ಮಾಡಲಾಗಿದೆ.
ಇನ್ನುಳಿದಂತೆ ಎಸ್. ಸೆಲ್ವರಾಜ್ (ಆದಿ ದ್ರಾವಿಡಾರ್ ಕಲ್ಯಾಣ), ಆರ್ ಸಕ್ಕರಪಾಣಿ (ಆಹಾರ), ಆರ್ ಗಾಂಧಿ (ಕೈಮಗ್ಗ ಮತ್ತು ಜವಳಿ), ಪಿ ಮೂರ್ತಿ (ವಾಣಿಜ್ಯ ತೆರಿಗೆ), ಎಸ್.ಎಸ್.ಶಿವಶಂಕರ್ (ಹಿಂದುಳಿದ ವರ್ಗಗಳ ಕಲ್ಯಾಣ), ಶಿವ ವಿ ಮಯನಾಥನ್ (ಪರಿಸರ), ಜಿಂಗಿ ಕೆ.ಎಸ್.ಮಸ್ತಾನ್ (ಅಲ್ಪಸಂಖ್ಯಾತರ ಕಲ್ಯಾಣ) ಮತ್ತು ಎಸ್.ಎಂ.ನಾಸರ್ (ಡೈರಿ) ಇಲಾಖೆಯ ಸಚಿವರಾಗಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: ಬಂಗಾಳಕ್ಕೆ ‘ದೀದಿ’, ತಮಿಳುನಾಡಿಗೆ ‘ಸ್ಟಾಲಿನ್’, ಕೇರಳಕ್ಕೆ ‘ವಿಜಯನ್’!


