ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜೆಲಗೆರೆ ಕೈಗಾರಿಕಾ ಪ್ರದೇಶದ ಗಾರ್ಮೆಂಟ್ಸ್ ಕಾರ್ಖಾನೆಯೊಂದರ ಬೇಜವಾಬ್ದಾರಿಯಿಂದಾಗಿ ಕಾರ್ಮಿಕರು ಆಸ್ಪತ್ರೆ ಸೇರಿ ನರಳುವಂತಾಗಿದೆ.
ಗುರುವಾರ (ಫೆ.20) ಕಾರ್ಖಾನೆಯಲ್ಲಿ ನಡೆದ ಎರಡು ಪ್ರತ್ಯೇಕ ಅವಘಡಗಳಲ್ಲಿ ಮೂವರು ಕಾರ್ಮಿಕರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಪೈಕಿ ಒಬ್ಬರು ಚಿಕಿತ್ಸೆ ಪಡೆದು ಮನೆಗೆ ಮರಳಿದ್ದು, ಇನ್ನಿಬ್ಬರು ಆಸ್ಪತ್ರೆಯಲ್ಲೇ ಇದ್ದಾರೆ. ಇವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ.
ಗುರುವಾರ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಕಾರ್ಖಾನೆಯಲ್ಲಿ ಮೊದಲ ಅವಘಡ ಸಂಭವಿಸಿದೆ. ಪ್ರಿಂಟಿಂಗ್ ವಿಭಾಗದಲ್ಲಿ ಸ್ಪಾಟ್ ಲಿಕ್ಕರ್ (ಸ್ಪ್ರೇ ಬಾಟಲ್) ನಿಂದ ಕೆಮಿಕಲ್ ಸ್ಪೋಟಗೊಂಡ ಪರಿಣಾಮ ಅಲ್ಲೇ ಕೆಲಸ ಮಾಡುತ್ತಿದ್ದ ಕಾರ್ಮಿಕರಾದ ಶಿವಕುಮಾರ್ ಮತ್ತು ಪ್ರಸನ್ನ ಎಂಬವರಿಗೆ ತೀವ್ರ ತರಹದ ಸುಟ್ಟ ಗಾಯಗಳಾಗಿವೆ. ಇನ್ನೊಬ್ಬರು ಮಹಿಳಾ ಕಾರ್ಮಿಕರಾದ ಲಕ್ಷ್ಮೀ ಎಂಬವರು ಪ್ರಜ್ಞಾಹೀನರಾಗಿದ್ದರು. ಪ್ರಥಮ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದಾರೆ.

ಅವಘಡದಲ್ಲಿ ಶಿವಕುಮಾರ್ ಮತ್ತು ಪ್ರಸನ್ನ ಅವರ ಕೈಗಳು ಮತ್ತು ಮುಖ ಸುಟ್ಟಿದೆ. ದುರಂತ ನಡೆದಾಗ ಗಂಭೀರ ಸ್ಥಿತಿಯಲ್ಲಿದ್ದ ಇವರಿಬ್ಬರನ್ನೂ ತಕ್ಷಣ ಆಸ್ಪತ್ರೆಗೆ ಕರೆದೊಯ್ಯದ ಕಾರ್ಖಾನೆ ಆಡಳಿತ, ತುಂಬಾ ಹೊತ್ತು ಕಾಯಿಸಿ, ಬಳಿಕ ಮದ್ದೂರಿನ ಸಿದ್ದೇಗೌಡ ಆಸ್ಪತ್ರೆಗೆ ಕರೆದುಕೊಂಡು ಹೋಗಿದೆ. ಅಲ್ಲಿ ಚಿಕಿತ್ಸೆ ಕೊಡಿಸಿ ಆಂಬ್ಯುಲೆನ್ಸ್‌ನಲ್ಲಿ ವಾಪಸ್ ಕಾರ್ಖಾನೆಗೆ ಕರೆತಂದು ಆಂಬ್ಯುಲೆನ್ಸ್‌ನಲ್ಲೇ ಒಂದು ಗಂಟೆ ಕಾಲ ಇರಿಸಿ, ನಂತರ ಮನೆಗೆ ಕರೆದುಕೊಂಡು ಹೋಗಿ ಬಿಟ್ಟಿದ್ದಾರೆ ಎಂದು ಕರ್ನಾಟಕ ಇಂಡಿಪೆಂಡೆಂಟ್ ಗಾರ್ಮೆಂಟ್ ವರ್ಕರ್ಸ್ ಯೂನಿಯನ್ (ಕೆಐಜಿಡಬ್ಲ್ಯುಯು) ಪ್ರಧಾನ ಕಾರ್ಯದರ್ಶಿ ಜಯರಾಮ್ ಎ.ಹೆಚ್ ದೂರಿದ್ದಾರೆ.

ಶಿವಕುಮಾರ್ ಅವರ ಪರಿಸ್ಥಿತಿ ಗಂಭೀರವಾಗಿರುವುದನ್ನು ಗಮನಿಸಿದ ಮನೆಯವರು ಮಂಡ್ಯ ಜಿಲ್ಲಾಸ್ಪತ್ರೆ ಮಿಮ್ಸ್‌ಗೆ ದಾಖಲಿಸಿದ್ದಾರೆ. ಅಲ್ಲಿ ತುರ್ತು ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕಳಿಸಿದ್ದಾರೆ ಎಂದು ಜಯರಾಮ್ ತಿಳಿಸಿದ್ದಾರೆ.

ಕೆಮಿಕಲ್ ಬ್ಲಾಸ್ಟ್ ಅವಘಡದ ಸ್ವಲ್ಪ ಹೊತ್ತಿನ ಬಳಿಕ ಕಾರ್ಖಾನೆಯಲ್ಲಿ ಮತ್ತೊಂದು ಅವಘಡ ಸಂಭವಿಸಿದೆ. ಇದರಲ್ಲಿ ಫ್ಲೋರ್ ಕಟ್ಟಿಂಗ್ ವೇಳೆ ಎಂ. ಅವಿನಾಶ್ ಎಂಬ ಕಾರ್ಮಿಕನ ಎಡಗೈನ ಮುಂಗೈಗೆ ತೀವ್ರವಾದ ಪೆಟ್ಟು ಬಿದ್ದಿದೆ. ಇವರನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಅವಿನಾಶ್ ಅವರಿಗೆ ತೀವ್ರ ಪೆಟ್ಟಾಗಿರುವ ಕಾರಣ ಪ್ಲಾಸ್ಟಿಕ್ ಸರ್ಜರಿ ಮಾಡಬೇಕಾಗಿದೆ ಎಂದು ವೈದ್ಯರು ತಿಳಿಸಿದ್ದಾಗಿ ಕೆಐಜಿಡಬ್ಲ್ಯುಯು ಸಂಘಟನಾ ಕಾರ್ಯದರ್ಶಿ ಉಮೇಶ್ ಮಾಹಿತಿ ನೀಡಿದ್ದಾರೆ.
ಗಾಯಗೊಂಡ ಅವಿನಾಶ್ ಅವರದ್ದು ವೆಲ್ಡಿಂಗ್ ಕೆಲಸ. ಆದರೆ, ಕಾರ್ಖಾನೆಯ ಸೂಪರ್ ವೈಝರ್ ಯಾವುದೇ ಸುರಕ್ಷಾ ಕ್ರಮಗಳಿಲ್ಲದೆ ಅವರು ಮಾಡದೇ ಇರುವ ಫ್ಲೋರ್ ಕಟ್ಟಿಂಗ್ ಕೆಲಸ ಮಾಡಿಸಿದ್ದಾರೆ ಎಂದು ಉಮೇಶ್ ಆರೋಪಿಸಿದ್ದಾರೆ.
ಮದ್ದೂರಿನ ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ಆಗಾಗ ಈ ರೀತಿಯ ಅವಘಡಗಳು ನಡೆಯುತ್ತಲೇ ಇರುತ್ತವೆ. ಅಲ್ಲಿ ಕಾರ್ಮಿಕರನ್ನು ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ದುಡಿಸಲಾಗುತ್ತಿದೆ. ಕಾರ್ಮಿಕರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ಕೆಲ ತಿಂಗಳ ಹೀಟಿಂಗ್ ಮೆಷಿನ್ ಇಟ್ಟಿದ ಟೇಬಲ್‌ನ ಕಬ್ಬಿಣದ ಕಂಬಗಳು ತುಕ್ಕು ಹಿಡಿದು ತುಂಡಾದ ಕಾರಣ, ಮೆಷಿನ್ ಕೆಳಗೆ ಬಿದ್ದಿತ್ತು. ಈ ವೇಳೆ ಮಹಿಳಾ ಕಾರ್ಮಿಕರೊಬ್ಬರ ಕಾಲಿಗೆ ಗಾಯವಾಗಿದೆ. ಅದೃಷ್ಟವಶಾತ್ ದೊಡ್ಡ ಮಟ್ಟದ ಅವಘಡ ತಪ್ಪಿದೆ. ಕಾರ್ಖಾನೆ ಆಡಳಿತ ಗಾಯಗೊಂಡವರನ್ನು ಬೆದರಿಸಿ ಶೌಚಾಲಯದಲ್ಲಿ ಬಿದ್ದು ಗಾಯವಾಗಿದೆ ಎಂದು ಹೇಳಿಸಿದೆ. ಕಂಬಗಳು ತುಕ್ಕು ಹಿಡಿದ ಬಗ್ಗೆ ಕಾರ್ಮಿಕರು ಸಂಬಂಧಪಟ್ಟವರ ಗಮನಕ್ಕೆ ತಂದಿದ್ದರೂ ಅವರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಉಮೇಶ್ ತಿಳಿಸಿದ್ದಾರೆ.
ಮತ್ತೊಂದು ಘಟನೆಯಲ್ಲಿ ಪ್ರಿಂಟಿಂಗ್ ವಿಭಾಗದಲ್ಲಿ ಕಾರ್ಮಿರೊಬ್ಬರ ಹೊಟ್ಟೆಯ ಭಾಗಕ್ಕೆ ಮೆಷಿನ್ ತಾಗಿತ್ತು. ಅವರು ಸ್ವಲ್ಪದರಲ್ಲಿ ಅಪಾಯದಿಂದ ಪಾರಾಗಿದ್ದರು. ಈ ರೀತಿಯ ಘಟನೆಗಳು ಪದೇ ಪದೇ ನಡೆಯುತ್ತಿದ್ದರೂ ಕಾರ್ಖಾನೆ ಅಡಳಿತ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಎಂದು ಉಮೇಶ್ ದೂರಿದ್ದಾರೆ.
ಗುರುವಾರ ನಡೆದ ಅವಘಡದಲ್ಲಿ ಗಾಯಗೊಂಡ ಕಾರ್ಮಿಕರಿಗೆ ಕಾನೂನು ಪ್ರಕಾರ ಸಿಗಬೇಕಾದ ಸೌಲಭ್ಯಗಳನ್ನು ದೊರಕಿಸಿಕೊಡಬೇಕು ಮತ್ತು ಕಾರ್ಖಾನೆ ಅಡಳಿತ ತಾವು ಮಾಡಬೇಕಾದ ಜವಾಬ್ದಾರಿಯನ್ನು ನಿರ್ವಹಿಸಬೇಕೆಂದು ಆಗ್ರಹಿಸಿದ್ದೇವೆ. ಅವರು ನಿರ್ಲಕ್ಷ್ಯ ವಹಿಸಿದರೆ ಮುಂದಿನ ನಡೆಯ ಬಗ್ಗೆ ಯೋಚಿಸುತ್ತೇವೆ ಎಂದು ಉಮೇಶ್ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಬಣದ ಸಚಿವರೇ ರಾಜ್ಯ ಕಾಂಗ್ರೆಸ್‌ನ ಮುಂದಿನ ಅಧ್ಯಕ್ಷ – ವರದಿ


