ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ 35 ವರ್ಷದ ದಲಿತ ವ್ಯಕ್ತಿಯೊಬ್ಬರನ್ನು ಶನಿವಾರ ಸಂಜೆ ನೆರೆಹೊರೆಯವರು ಥಳಿಸಿ ಕೊಂದಿದ್ದಾರೆ. ಹಣ ಮತ್ತು ಇತರ ವಿವಾದಗಳ ಕಾರಣದಿಂದಾಗಿ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದ್ದು, ಹತ್ತಿರದ ಎರಡು ಗ್ರಾಮಗಳ ನಡುವೆ ಉದ್ವಿಗ್ನತೆ ಉಂಟಾಗಿದೆ.
ಭಿಂಡ್ ಜಿಲ್ಲಾ ಕೇಂದ್ರದಿಂದ ಸುಮಾರು 65 ಕಿ.ಮೀ ದೂರದಲ್ಲಿರುವ ದಬೋಹ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಜೆ 6:30 ರ ಸುಮಾರಿಗೆ ಈ ಘಟನೆ ನಡೆದಿದೆ. ಮೃತ ರುದ್ರ ಪ್ರತಾಪ್ ಸಿಂಗ್ ಜಾತವ್ ಎಂದು ಗುರುತಿಸಲ್ಪಟ್ಟ ವ್ಯಕ್ತಿಯ ಮೇಲೆ ನೆರೆಯ ಗ್ರಾಮದ ಪುರುಷರ ಗುಂಪೊಂದು ಕೋಲುಗಳಿಂದ ಹಲ್ಲೆ ನಡೆಸಿದೆ. ಮೃತ ವ್ಯಕ್ತಿ ಮತ್ತು ಆರೋಪಿಗಳು ಹಳೆಯ ದ್ವೇಷವನ್ನು ಹೊಂದಿದ್ದರು. ಸಣ್ಣಪುಟ್ಟ ಜಗಳ ಮತ್ತು ಮಾತಿನ ವಿನಿಮಯ ಹಿನ್ನೆಲೆ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
“ಅವರಿಬ್ಬರ ನಡುವೆ ಹಿಂದೆಯೂ ಜಗಳ ನಡೆದಿತ್ತು. ಮೃತರು ರಾಯ್‌ಪುರ ಗ್ರಾಮದಲ್ಲಿ ವಾಸಿಸುತ್ತಿದ್ದರು. ಆರೋಪಿಗಳು ಹತ್ತಿರದ ರಾನಿಯಾ ಗ್ರಾಮದಲ್ಲಿ ವಾಸಿಸುತ್ತಿದ್ದರು. ಕೌರವ ಸಮುದಾಯದ ಆರೋಪಿಗಳು ಗ್ರಾಮದಲ್ಲಿ ಅಂಗಡಿ ಹೊಂದಿದ್ದಾರೆ, ಕೆಲವು ಸಣ್ಣಪುಟ್ಟ ಹಣದ ವ್ಯವಹಾರಗಳಿಂದಾಗಿ, ಮೃತ ಮತ್ತು ಆರೋಪಿಗಳ ನಡುವೆ ಸಣ್ಣಪುಟ್ಟ ಜಗಳಗಳು ನಡೆದಿವೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಶನಿವಾರ ಸಂಜೆ 6:30 ರ ಸುಮಾರಿಗೆ ಇದು ದೊಡ್ಡ ಜಗಳವಾಗಿ ಬೆಳೆದು ಕೊಲೆಗೆ ಕಾರಣವಾಯಿತು” ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಹಲ್ಲೆ ಬಳಿಕ ಜಾತವ್ ಅವರನ್ನು ಆರಂಭದಲ್ಲಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ, ಹೆಚ್ಚಿನ ಚಿಕಿತ್ಸೆಗಾಗಿ ಗ್ವಾಲಿಯರ್‌ಗೆ ಕರೆದೊಯ್ಯಲಾಯಿತು. ಆದರೆ ಮಾರ್ಗಮಧ್ಯೆ ಅವರು ಸಾವನ್ನಪ್ಪಿದರು. ಜಾತವ್ ಸಾವಿನ ನಂತರ, ಬಲಿಪಶುವಿನ ಸಂಬಂಧಿಕರು ಮತ್ತು ಗ್ರಾಮಸ್ಥರು ಆರೋಪಿಗಳಲ್ಲಿ ಒಬ್ಬರಿಗೆ ಸೇರಿದ ಮನೆಯನ್ನು ಧ್ವಂಸಗೊಳಿಸಿ, ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಿದ್ದರಿಂದ ಉದ್ವಿಗ್ನತೆ ಹೆಚ್ಚಾಯಿತು. ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. “ಆರೋಪಿ ಕಡೆಯಿಂದ ಯಾರೂ ಇಲ್ಲಿಯವರೆಗೆ ಯಾವುದೇ ವಿಧ್ವಂಸಕ ಕೃತ್ಯದ ಬಗ್ಗೆ ದೂರು ನೀಡಿಲ್ಲ” ಎಂದು ಅವರು ಹೇಳಿದರು.
ಕಾನೂನು ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಹತ್ತಿರದ ಪೊಲೀಸ್ ಠಾಣೆಗಳಿಂದ ಹೆಚ್ಚುವರಿ ಪಡೆಗಳನ್ನು ಸಹ ಕರೆಯಲಾಗಿದೆ. “ಭಾರತೀಯ ನ್ಯಾಯ ಸಂಹಿತಾದ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಆರೋಪಿಗಳಾದ ರಣವೀರ್ ಕೌರವ, ಆಶು ಕೌರವ, ಪ್ರಹ್ಲಾದ್ ಕೌರವ, ರಾಜೀವ್ ಕೌರವ ಮತ್ತು ಕುನ್ವರ್ ಸಿಂಗ್ ಕೌರವ ಅವರ ವಿರುದ್ಧ ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಲಾಗಿದೆ ಮತ್ತು ಅವರಿಗಾಗಿ ಹುಡುಕಾಟ ಆರಂಭಿಸಲಾಗಿದೆ. ಶಾಂತಿ ಕಾಪಾಡಲು ಗ್ರಾಮದಲ್ಲಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ” ಎಂದು ಎಸ್‌ಪಿ ಯಾದವ್ ಹೇಳಿದರು.
ದಲಿತ ಎಂಬ ಕಾರಣಕ್ಕೆ ಬಂಗಲೆಯಿಂದ ಬಲವಂತವಾಗಿ ಹೊರಹಾಕಲಾಗಿದೆ: ಕಾಂಗ್ರೆಸ್ ನಾಯಕ ಉದಿತ್ ರಾಜ್ ಆರೋಪ


