ಮಧ್ಯಪ್ರದೇಶದ ಮಾಂಡ್ಲಾ ಜಿಲ್ಲೆಯಲ್ಲಿ ಬುಧವಾರ (ಏ.2) ವಿಶೇಷ ಪೊಲೀಸ್ ಪಡೆ ‘ಹಾಕ್’ನೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ತಲಾ 14 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದ್ದ ಇಬ್ಬರು ಮಹಿಳಾ ನಕ್ಸಲರನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.
ಮಾಂಡ್ಲಾ ಜಿಲ್ಲೆಯ ಬಿಚಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯದಲ್ಲಿ ಬುಧವಾರ ಬೆಳಿಗ್ಗೆ ನಕ್ಸಲರು ಮತ್ತು ಹಾಕ್ ಪಡೆಗಳ ನಡುವೆ ಮುಖಾಮುಖಿ ನಡೆದಿದ್ದು, ಇಬ್ಬರನ್ನು ಹತ್ಯೆಗೈದ ಬಳಿಕ ಪೊಲೀಸರು ಅವರ ಬಳಿಯಿದ್ದ ಶಸ್ತ್ರಾಸ್ತ್ರಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
“ಬುಧವಾರ ಬೆಳಿಗ್ಗೆ ಮಾಂಡ್ಲಾ ಜಿಲ್ಲೆಯ ಬಿಚಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರೊಂದಿಗೆ (ಹಾಕ್ ಪಡೆ) ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಮಹಿಳಾ ನಕ್ಸಲರು ಸಾವನ್ನಪ್ಪಿದ್ದಾರೆ. ಅವರ ಬಳಿಯಿದ್ದ ಒಂದು ಎಸ್‌ಎಲ್‌ಆರ್ ರೈಫಲ್, ಒಂದು ರೈಫಲ್, ವೈರ್‌ಲೆಸ್ ಸೆಟ್ ಮತ್ತು ಇತರ ದಿನನಿತ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೆಚ್ಚಿನ ಶೋಧ ನಡೆಯುತ್ತಿದೆ” ಎಂದು ಮಧ್ಯಪ್ರದೇಶ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದಾರೆ.
ನಕ್ಸಲರನ್ನು ಕೊಂದ ಪೊಲೀಸ್ ಸಿಬ್ಬಂದಿಯನ್ನು ಮುಖ್ಯಮಂತ್ರಿ ಮೋಹನ್ ಯಾದವ್ ಅಭಿನಂದಿಸಿದ್ದಾರೆ. ರಾಜ್ಯದಲ್ಲಿ ನಕ್ಸಲರನ್ನು ನಿರ್ಮೂಲನೆ ಮಾಡಲು ನಿರಂತರ ಕಾರ್ಯಾಚರಣೆ ನಡೆಯುತ್ತಿದೆ ಎಂದಿದ್ದಾರೆ.
“ಮಾಂಡ್ಲಾ ಜಿಲ್ಲೆಯಲ್ಲಿ ಪೊಲೀಸರೊಂದಿಗಿನ ಗುಂಡಿನ ಚಕಮಕಿಯಲ್ಲಿ ತಲಾ 14 ಲಕ್ಷ ರೂಪಾಯಿ ಬಹುಮಾನ ಘೋಷಣೆಯಾಗಿದ್ದ ಇಬ್ಬರು ಮಹಿಳಾ ನಕ್ಸಲರು ಸಾವನ್ನಪ್ಪಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ನಮ್ಮ ಪೊಲೀಸ್ ಪಡೆ ನಿರಂತರವಾಗಿ ನಕ್ಸಲ್ ವಿರೋಧಿ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿವೆ. ಪೊಲೀಸರು ಹತರಾದ ನಕ್ಸಲರ ಬಳಿಯಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ರಾಜ್ಯದಿಂದ ನಕ್ಸಲರನ್ನು ನಿರ್ಮೂಲನೆ ಮಾಡಲು ನಾವು ನಿರಂತರವಾಗಿ ಶ್ರಮಿಸುತ್ತಿದ್ದೇವೆ” ಎಂದು ಸಿಎಂ ಯಾದವ್ ಹೇಳಿದ್ದಾರೆ.
“ಕಳೆದ ಒಂದು ವರ್ಷದಲ್ಲಿ ನಾವು ವಿವಿಧ ಎನ್‌ಕೌಂಟರ್‌ಗಳಲ್ಲಿ ಹತ್ತುಕ್ಕೂ ಹೆಚ್ಚು ನಕ್ಸಲರನ್ನು ಕೊಂದಿದ್ದೇವೆ. ನಮ್ಮ ಪೊಲೀಸ್ ಸಿಬ್ಬಂದಿಯನ್ನು ನಾನು ಈ ಕಾರಣಕ್ಕೆ ಅಭಿನಂದಿಸುತ್ತೇನೆ. ಈ ಕಾರ್ಯಾಚರಣೆಯಲ್ಲಿ ನಮ್ಮ ಯಾವುದೇ ಪೊಲೀಸ್ ಸಿಬ್ಬಂದಿಗೆ ಯಾವುದೇ ರೀತಿಯ ಹಾನಿಯಾಗಿಲ್ಲ ಎಂಬುದು ಗಮನಾರ್ಹ ಸಂಗತಿ” ಎಂದು ಸಿಎಂ ಯಾದವ್ ತಿಳಿಸಿದ್ದಾರೆ.
ಸಿಪಿಐ(ಎಂ) 24ನೇ ಮಹಾ ಅಧಿವೇಶನ ಆರಂಭ | ಎಡಪಕ್ಷಗಳಷ್ಟೆ ಹಿಂದುತ್ವದ ವಿರುದ್ಧ ನಿರಂತರ ಹೋರಾಡಬಲ್ಲವು: ಪ್ರಕಾಶ್ ಕಾರಟ್


