ಈ ವರ್ಷದ ಮಾರ್ಚ್‌ನಲ್ಲಿ ದೇಶ ಕೋವಿಡ್ ಭಯದಲ್ಲಿದ್ದಾಗ ಮಧ್ಯಪ್ರದೇಶದಲ್ಲಿ ಬಿಜೆಪಿಯು ಆಪರೇಷನ್ ಕಮಲ ನಡೆಸಿ 22 ಕಾಂಗ್ರೆಸ್ ಶಾಸಕರನ್ನು ರಾಜೀನಾಮೆ ಕೊಡಿಸಿ ಕಾಂಗ್ರೆಸ್ ಸರ್ಕಾರ ಬೀಳಿಸಿ, ತಾನು ಅಧಿಕಾರದ ಗದ್ದುಗೆಯೇರಿತ್ತು. ಈ ರೀತಿಯಾಗಿ ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಪತನವಾಗುವಲ್ಲಿ ಪ್ರಧಾನಿ ನರೇಂದ್ರ ಮೋದಿಯವರೇ ಪ್ರಮುಖ ಪಾತ್ರ ವಹಿಸಿದ್ದರು ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಹೇಳಿದ್ದಾರೆ.
‘ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಬೀಳಿಸಿ ಸಿಎಂ ಕಮಲ್ ನಾಥ್ ಅವರನ್ನು ಪದಚ್ಯುತಗೊಳಿಸುವಲ್ಲಿ ಪ್ರಧಾನಿ ಮೋದಿಯವರು ಪ್ರಮುಖ ಪಾತ್ರ ವಹಿಸಿದ್ದರು’ ಎಂದು ಇಂದೋರ್‌ನಲ್ಲಿ ಬುಧವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಕೈಲಾಸ್ ವಿಜಯವರ್ಗಿಯಾ ಹೇಳಿಕೆ ನೀಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಷ್ಟು ದಿನ ಕಾಂಗ್ರೆಸ್ ಪಕ್ಷದ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಪಕ್ಷದೊಂದಿಗೆ ಮುನಿಸಿಕೊಂಡು ತನ್ನ ಬೆಂಬಲಿಗ 22 ಶಾಸಕರ ಜೊತೆಗೆ ರಾಜೀನಾಮೆ ನೀಡಿದ್ದರು. ಆ ನಂತರವಷ್ಟೇ ಅವರು ಬಿಜೆಪಿ ಸೇರಿದ್ದರು ಎಂದು ಬಿಜೆಪಿ ಹೇಳುತ್ತಿತ್ತು. ಆದರೆ ಕಮಲ್ ನಾಥ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿನ ಕಾಂಗ್ರೆಸ್ ಸರ್ಕಾರದ ಪತನಕ್ಕೆ ಪ್ರಧಾನಿ ಮೋದಿಯನ್ನು ದೂರಿದ್ದರು.
ಆದರೆ ನಿನ್ನೆಯ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಹಾಜರಿದ್ದ ಸಂದರ್ಭದಲ್ಲಿಯೇ ಮಾತನಾಡಿರುವ ವಿಜಯ ವರ್ಗಿಯಾ “ಈ ವಿಚಾರವನ್ನು ನಾನು ಮೊದಲ ಬಾರಿಗೆ ಸಾರ್ವಜನಿಕಗೊಳಿಸುತ್ತಿದ್ದೇನೆ. ಹೀಗಾಗಿ ನೀವೂ ಸಹ ಯಾರಿಗೂ ಹೇಳಬೇಡಿ. ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಪದಚ್ಯುತಗೊಳಿಸುವಲ್ಲಿ ಯಾರಾದರೂ ಪ್ರಮುಖ ಪಾತ್ರವಹಿಸಿದ್ದರೆ ಅದು ಪ್ರಧಾನಿ ನರೇಂದ್ರ ಮೋದಿಯೇ ಹೊರತು ಧರ್ಮೇಂದ್ರ ಪ್ರಧಾನ್ ಅಲ್ಲ” ಎಂದು ಹೇಳಿದ್ದಾರೆ.
@KailashOnline disclosure @narendramodi played important role in fall of @OfficeOfKNath government @INCIndia @ndtvindia @ndtv @vinodkapri @rohini_sgh #BJP #Congress pic.twitter.com/GvNhic9cv8
— Anurag Dwary (@Anurag_Dwary) December 16, 2020
ಈ ವರ್ಷದ ಜೂನ್‌ನಲ್ಲಿಯೂ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ “ಕಮಲ್ ನಾಥ್ ಸರ್ಕಾರವನ್ನು ಬಿಳೀಸುವಲ್ಲಿ ಬಿಜೆಪಿ ಕೇಂದ್ರ ನಾಯಕರು ಕೆಲಸ ಮಾಡಿದ್ದರು” ಎಂದು ಹೇಳಿದ್ದರು. ಆದರೆ ಅವರು ನಿರ್ಧಿಷ್ಟ ಹೆಸರುಗಳನ್ನು ಬಹಿರಂಗಪಡಿಸಿರಲಿಲ್ಲ.
“ಸಾಂವಿಧಾನಿಕವಾಗಿ ಚುನಾಯಿತವಾದ ಸರ್ಕಾರಗಳನ್ನು ಅಸಂವಿಧಾನಿಕ ರೀತಿಯಲ್ಲಿ ಕೆಳಗಿಳಿಸುವವರು ಪ್ರಧಾನಿ ನರೇಂದ್ರ ಮೋದಿ ಎಂಬುದು ಈಗ ಸ್ಪಷ್ಟವಾಗಿದೆ” ಎಂದು ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ಪಕ್ಷ ಆಕ್ರೋಶ ವ್ಯಕ್ತಪಡಿಸಿದೆ. “ಕಾಂಗ್ರೆಸ್ ಸರ್ಕಾರ ಉರುಳಲು ಪ್ರಧಾನಿ ಮೋದಿಯೇ ಕಾರಣ ಎಂದು ಮೊದಲ ದಿನದಿಂದಲೇ ನಾವು ಹೇಳುತ್ತಿದ್ದೇವೆ. ಆದರೆ, ಕಮಲ್ ನಾಥ್ ಸರ್ಕಾರದ ಪತನಕ್ಕೆ ಕಾಂಗ್ರೆಸ್‌ನ ಆಂತರಿಕ ಜಗಳವೇ ಕಾರಣ ಎಂದು ಬಿಜೆಪಿ ಹೇಳುತ್ತಿತ್ತು. ಈಗ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಸತ್ಯವನ್ನು ಜನರ ಮುಂದೆ ತೆರೆದಿಟ್ಟಿದ್ದಾರೆ” ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ನರೇಂದ್ರ ಸಲೂಜಾ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಬೆಲ್ಲವನ್ನು ಹೇಗೆ ತಯಾರಿಸುತ್ತಾರೆ ಎಂಬುದೂ ರಾಹುಲ್ ಗಾಂಧಿಗೆ ಗೊತ್ತಿಲ್ಲ: ಶಿವರಾಜ್ ಸಿಂಗ್ ಚೌಹಾಣ್ ವ್ಯಂಗ್ಯ


