ಅಮೆರಿಕ ಸೇನೆಯಿಂದ ಶನಿವಾರ (ಜ.3) ಸೆರೆಹಿಡಿಯಲ್ಪಟ್ಟ ವೆನಿಜುವೆಲಾ ಅಧ್ಯಕ್ಷ ನಿಕೊಲಸ್ ಮಡೂರೊ ಮತ್ತು ಅವರ ಪತ್ನಿ ಸಿಲಿಯಾ ಪ್ಲೋರ್ಸ್ ಅವರನ್ನು ನ್ಯೂಯಾರ್ಕ್‌ಗೆ ಕರೆದೊಯ್ಯಲಾಗಿದೆ.
ನ್ಯೂಯಾರ್ಕ್‌ನ ಡ್ರಗ್ ಎನ್‌ಫೋರ್ಸ್‌ಮೆಂಟ್ ಅಡ್ಮಿನಿಸ್ಟ್ರೇಷನ್ (ಡಿಇಎ) ಮುಖ್ಯ ಕಛೇರಿಯಲ್ಲಿ ಇಬ್ಬರನ್ನೂ ನಿಯಮ ಪ್ರಕ್ರಿಯೆಗೊಳಪಡಿಸಿ, ನಂತರ ಬ್ರೂಕ್ಲಿನ್‌ನ ಮೆಟ್ರೋಪಾಲಿಟನ್ ಡಿಟೆನ್ಷನ್ ಸೆಂಟರ್‌ಗೆ (ಜೈಲಿಗೆ) ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.
ಮಡೂರೊ ಅವರನ್ನು ಯುಎಸ್ ಅಧಿಕಾರಿಗಳು ಡಿಇಎ ಪ್ರಧಾನ ಕಚೇರಿಯೊಳಗಿನ ಕಾರಿಡಾರ್ ಮೂಲಕ ಕರೆದೊಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದೆ.
ಮುಂದೆ ಮಡುರೊ ಮತ್ತು ಫ್ಲೋರ್ಸ್ ದಂಪತಿಯನ್ನು ಅಮೆರಿಕದಲ್ಲಿ ದೀರ್ಘಕಾಲ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ಏಕೆಂದರೆ, ಅಮೆರಿಕ ನ್ಯಾಯ ಇಲಾಖೆ ಅವರ ವಿರುದ್ದ ಈ ಹಿಂದಿನಿಂದಲೂ ಹಲವು ಆರೋಪಗಳನ್ನು ಮಾಡುತ್ತಾ ಬಂದಿದೆ. ಡ್ರಗ್ ಕಳ್ಳಸಾಗಣೆ ಮತ್ತು ಭಯೋತ್ಪಾದನೆ ಸಂಬಂಧಿತ ಷಡ್ಯಂತ್ರದ (ನಾರ್ಕೋ-ಟೆರರಿಸಂ) ಗುಂಪಿನೊಂದಿಗೆ ಭಾಗಿಯಾಗಿದ್ದಾರೆ ಎಂದು ನ್ಯಾಯ ಇಲಾಖೆ ಆರೋಪಿಸಿದೆ.
ಸರಳವಾಗಿ ಹೇಳುವುದಾದರೆ, ಮಡುರೊ ದಂಪತಿ ವೆನಿಜುವೆಲಾವನ್ನು ಬಳಸಿಕೊಂಡು ಟನ್‌ಗಟ್ಟಲೆ ಡ್ರಗ್ಸ್ (ಕೊಕೇನ್) ಅಮೆರಿಕಕ್ಕೆ ಕಳುಹಿಸಿದ್ದಾರೆ ಮತ್ತು ಭಯೋತ್ಪಾದಕ ಗುಂಪುಗಳೊಂದಿಗೆ ಸೇರಿ ಈ ಕೆಲಸ ಮಾಡಿದ್ದಾರೆ ಎಂಬುವುದು ಅಮೆರಿಕದ ಆರೋಪ.
ಅಧ್ಯಕ್ಷರನ್ನು ಸೆರೆಹಿಡಿದಿರುವ ಹಿನ್ನೆಲೆ, ವೆನಿಜುವೆಲಾದ ಆಡಳಿತವನ್ನು ಸದ್ಯಕ್ಕೆ ಅಮೆರಿಕವೇ ನೋಡಿಕೊಳ್ಳಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿರುವ ಟ್ರಂಪ್, ಸುರಕ್ಷಿತವಾದ, ಸರಿಯಾದ ಮತ್ತು ವಿವೇಚನಾಯುಕ್ತ ಪರಿವರ್ತನೆಯನ್ನು ಮಾಡಲು ಸಾಧ್ಯವಾಗುವವರೆಗೆ ನಾವು ವೆನಿಜುವೆಲಾವನ್ನು ಮುನ್ನಡೆಸುತ್ತೇವೆ ಎಂದಿದ್ದಾರೆ. ಅಮೆರಿಕ ವೆನೆಜುವೆಲಾದ ಅಪಾರ ತೈಲ ನಿಕ್ಷೇಪಗಳನ್ನು ಬಳಸಿ ‘ದೊಡ್ಡ ಪ್ರಮಾಣದಲ್ಲಿ’ ಇತರ ದೇಶಗಳಿಗೆ ಮಾರಾಟ ಮಾಡುತ್ತದೆ ಎಂದು ಇದೇ ಅವರು ತಿಳಿಸಿದ್ದಾರೆ.
ಅಮೆರಿಕ ಸೇನೆ ಆಪರೇಷನ್ ಅಬ್ಸೊಲ್ಯೂಟ್ ರಿಸಾಲ್ವ್ (Operation Absolute Resolve) ಎಂಬ ಹೆಸರಿನಲ್ಲಿ ವೆನಿಜುವೆಲಾ ರಾಜಧಾನಿ ಕಾರಕಸ್ ಮೇಲೆ ಶನಿವಾರ ಏಕಾಏಕಿ ದಾಳಿ ನಡೆಸಿದೆ. ಕಾರಕಸ್ ಮತ್ತು ಸುತ್ತಮುತ್ತಲಿನ ಹಲವು ಪ್ರದೇಶಗಳ ಮೇಲೆ ಬಾಂಬ್ ದಾಳಿ ಮಾಡಿದೆ. ಇದರಿಂದ ಕನಿಷ್ಠ 40 ಜನರು ಸಾವನ್ನಪ್ಪಿದ್ದಾರೆ ಎಂದು ವೆನಿಜುವಾದ ಅಧಿಕಾರಿಗಳು ತಿಳಿಸಿದ್ದಾರೆ.
ಬಾಂಬ್ ದಾಳಿಯ ಬಳಿಕ ಅಧ್ಯಕ್ಷ ಮಡುರೊ ಅವರ ಮನೆಗೆ ನುಗ್ಗಿ, ಮಡುರೊ ಮತ್ತು ಅವರ ಪತ್ನಿಯನ್ನು ಬಂಧಿಸಿದೆ. ನಂತರ ಇಬ್ಬರನ್ನೂ ಯುಎಸ್‌ಎಸ್ ಐವೊ ಜಿಮಾ ಯುದ್ಧನೌಕೆಗೆ ಕರೆದೊಯ್ದು, ಅಲ್ಲಿಂದ ನ್ಯೂಯಾರ್ಕ್‌ಗೆ ಸ್ಥಳಾಂತರಿಸಲಾಗಿದೆ.
ಕೇವಲ 30 ನಿಮಿಷದೊಳಗೆ ವೆನಿಜುವೆಲಾದ ಒಳಗೆ ನುಗ್ಗಿ, ರಾಜಧಾನಿ ಮೇಲೆ ಬಾಂಬ್ ದಾಳಿ ನಡೆಸಿ, ಅಧ್ಯಕ್ಷ ಮತ್ತು ಅವರು ಪತ್ನಿಯನ್ನು ಸೆರೆ ಹಿಡಿದಿರುವ ಅಮೆರಿಕದ ಕಾರ್ಯಾಚರಣೆಯನ್ನು ತಿಂಗಳ ಹಿಂದೆಯೇ ಯೋಜಿಸಲಾಗಿತ್ತು. ಇದಕ್ಕಾಗಿ ಪೂರ್ವ ತಯಾರಿ ಮಾಡಿಕೊಳ್ಳಲಾಗಿತ್ತು ಎಂದು ವರದಿಯಾಗಿದೆ.
ಸಾರ್ವಭೌಮ ರಾಷ್ಟ್ರವೊಂದರ ಒಳಗೆ ನುಗ್ಗಿ, ಅದರ ಅಧ್ಯಕ್ಷರನ್ನು ಸೆರೆ ಹಿಡಿದು ಎಳೆದೊಯ್ದ ಅಮೆರಿಕದ ಈ ಕೃತ್ಯವನ್ನು ಜಗತ್ತಿನ ಹಲವು ರಾಷ್ಟ್ರಗಳು ಖಂಡಿಸಿವೆ. ಸಾರ್ವಜನಿಕ ವಯದಲ್ಲೂ ತೀವ್ರ ಆಕ್ರೋಶ ವ್ಯಕ್ತವಾಗಿದೆ.


