ಎನ್.ಸಿ.ಪಿ. ಶಾಸಕ ಧನಂಜಯ ಮುಂಡೆ ಅತ್ಯಾಚಾರ ಆರೋಪ ಎದುರಿಸುತ್ತಿದ್ದರೂ ಮಹಾರಾಷ್ಟ್ರ ಶಿವಸೇನಾ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದ ರಾಜ್ಯ ಸಚಿವರಾಗಿ ಮುಂದುವರಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದ್ದು, ಇಂದು ಅಂತಿಮ ತೀರ್ಮಾನಕ್ಕೆ ಬರಬಹುದು ಎನ್ನಲಾಗಿದೆ.
ಪ್ರತಿಪಕ್ಷಗಳಾದ ಭಾರತೀಯ ಜನತಾ ಪಕ್ಷ ಮತ್ತು ಮಹಾರಾಷ್ಟ್ರ ನವನಿರ್ಮಾಣ ವೇದಿಕೆ ಅತ್ಯಾಚಾರ ಆರೋಪಕ್ಕೆ ಗುರಿಯಾಗಿರುವ ಧನಂಜಯ ಮುಂಡೆ ವಿರುದ್ಧ ವಾಗ್ದಾಳಿ ನಡೆಸಿವೆ. ಸಚಿವರೊಬ್ಬರು ಮಹಿಳೆಗೆ ಕಿರುಕುಳ ನೀಡಿದ್ದು ಅವರನ್ನು ಸಂಪುಟದಿಂದ ಕೈಬಿಡುವಂತೆ ಆಗ್ರಹಿಸಿವೆ.
ಆದರೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಉನ್ನತ ನಾಯಕತ್ವ ಮತ್ತು ಮುಖ್ಯಸ್ಥ ಶರದ್ ಪವಾರ್, ಉಪಮುಖ್ಯಮಂತ್ರಿ ಅಜಿತ್ ಪವಾರ್, ಜಲಸಂಪನ್ಮೂಲ ಸಚಿವ ಜಯಂತ್ ಪಾಟೀಲ್, ಹಿರಿಯ ನಾಯಕ ಪ್ರಫುಲ್ ಪಟೇಲ್ ಸಭೆ ಸೇರಿ ಮುಂಡೆ ಎದುರಿಸುತ್ತಿರುವ ಆರೋಪಗಳ ಕುರಿತು ಚರ್ಚಿಸಿದ್ದಾರೆ.
45 ವರ್ಷದ ಧನಂಜಯ ಮುಂಡೆ ಮಹಾ ಅಘಾಡಿ ಸರ್ಕಾರದಲ್ಲಿ ಸಾಮಾಜಿಕ ನ್ಯಾಯ ರಾಜ್ಯ ಸಚಿವರಾಗಿ ಕೆಲಸ ನಿರ್ವಹಿಸುತ್ತಿದ್ದು ಅವರ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದೆ. ಇದೊಂದು ಬ್ಲಾಕ್ ಮೇಲ್ ತಂತ್ರ ಎಂದು ಅವರು ಹೇಳಿದ್ದಾರೆ.
ಬಿಜೆಪಿ ಮುಖಂಡ ಕೃಷ್ಣ ಹೆಗ್ಡೆ ಸಾಮಾಜಿಕ ನ್ಯಾಯ ಸಚಿವರು ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದರೆ, ಮಹಾರಾಷ್ಟ್ರ ನವನಿರ್ಮಾಣ ವೇದಿಕೆಯೂ ಕೂಡ ಅಂಥದ್ದೇ ಆರೋಪ ಮಾಡಿದೆ. ಈ ಸಂಬಂಧ ಪೊಲೀಸ್ ತನಿಖೆ ಮುಂದುವರಿದಿದೆ.
ಈ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿರುವ ಎನ್.ಸಿ.ಪಿ. ಮುಖ್ಯಸ್ಥ ಶರದ್ ಪವಾರ್, ಇದೊಂದು ಗಂಭೀರ ಆರೋಪ. ಮುಂದೆ ಏನು ಮಾಡಬೇಕೆಂಬ ಬಗ್ಗೆ ಪಕ್ಷ ತೀರ್ಮಾನಿಸಲಿದೆ ಎಂದು ಹೇಳಿದ್ದಾರೆ.
ಪ್ರತಿಪಕ್ಷಗಳ ಆರೋಪದ ಬಗ್ಗೆ ಮಹಾ ಅಘಾಡಿ ಸರ್ಕಾರ ಮೌನ ವಹಿಸಿದ್ದು ಧನಂಜಯ ಮುಂಡೆಯವರನ್ನು ಸಚಿವರಾಗಿ ಮುಂದುವರಿಸುವ ಕುರಿತು ಇಂದು ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಬ್ಯಾಂಕುಗಳಿಗೆ 4.5 ಲಕ್ಷ ಕೋಟಿ ರೂ ಸಾಲ ತೀರಿಸುತ್ತಿಲ್ಲವೇಕೆ? ಅದಾನಿ ವಿರುದ್ಧ ಸುಬ್ರಮಣಿಯನ್ ಸ್ವಾಮಿ…


