ಮಹಾರಾಷ್ಟ್ರದ ಮುಂಬೈ ಬಳಿಯ ಥಾಣೆ ಜಿಲ್ಲೆಯ ಭಿವಾಂಡಿ ಪ್ರದೇಶದಲ್ಲಿ ಇಂದು ಮುಂಜಾನೆ ಮೂರು ಅಂತಸ್ತಿನ ಕಟ್ಟಡ ಕುಸಿದು 10ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ದುರ್ಘಟನೆ ಜರುಗಿದೆ. ಕನಿಷ್ಟ 20 ಮಂದಿಯನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಮಂಕರ್ ನಾಕಾ ಬಳಿಯ ನಾರ್ಪೋಲಿಯ ಪಟೇಲ್ ಕಾಂಪೌಂಡ್ ನಲ್ಲಿರುವ 43 ವರ್ಷದ ಹಳೆಯದಾದ ಗಿಲಾನಿ ಕಟ್ಟಡ ಸೋಮವಾರ ಮುಂಜಾನೆ 3.40ರ ಸುಮಾರಿನಲ್ಲಿ ಕುಸಿದಿದೆ. ಜನರ ನಿದ್ರಾವಸ್ಥೆಯಲ್ಲಿದ್ದ ಸಮಯದಲ್ಲಿ ಈ ಅವಘಡ ಸಂಭವಿಸಿದ್ದು 25 ಕುಟುಂಬಗಳು ಅವಶೇಷಗಳಡಿ ಸಿಲುಕಿದ್ದಾರೆ ಎನ್ನಲಾಗಿದೆ. 40 ಮನೆಗಳನ್ನು ಹೊಂದಿದ್ದ ಈ ಕಟ್ಟಡದಲ್ಲಿ 150ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದರು ಎನ್ನಲಾಗಿದೆ.
ಘಟನೆಯಲ್ಲಿ ನಾಲ್ಕು ವರ್ಷದ ಬಾಲಕ ಸೇರಿದಂತೆ ಏಳು ಮಂದಿ ಮಕ್ಕಳು ಮತ್ತು ಮೂವರು ವಯಸ್ಕರು ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ದುರಂತದ ಹಿನ್ನೆಲೆಯಲ್ಲಿ ಭಿವಾಂಡಿ ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಥಾಣೆ ವಿಪಸ್ತು ನಿರ್ವಹಣಾ ಸಿಬ್ಬಂದಿ ಕಟ್ಟಡದ ಅವಶೇಷಗಳಡಿ ಸಿಲುಕಿರುವವರನ್ನು ಹೊರತೆಗೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವೂ ಕೂಡ ಸ್ಥಳಕ್ಕೆ ಆಗಮಿಸಿದ್ದು, ಕಾರ್ಯಾಚರಣೆ ಮುಂದುವರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಣಹಾನಿಯ ಬಗ್ಗೆ ದುಃಖ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ. “ಮಹಾರಾಷ್ಟ್ರದ ಭಿವಾಂಡಿಯಲ್ಲಿ ಕಟ್ಟಡ ಕುಸಿದಿದ್ದರಿಂದ ಬೇಸರವಾಗಿದೆ. ದುಃಖಿತ ಕುಟುಂಬಗಳಿಗೆ ಸಂತಾಪಗಳು. ಗಾಯಗೊಂಡವರ ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸುತ್ತೇನೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಮತ್ತು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲಾ ಸಹಾಯವನ್ನು ನೀಡಲಾಗುತ್ತದೆ” ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
Saddened by the building collapse in Bhiwandi, Maharashtra. Condolences to the bereaved families. Praying for a quick recovery of those injured. Rescue operations are underway and all possible assistance is being provided to the affected.
— Narendra Modi (@narendramodi) September 21, 2020
ಭಿವಾಂಡಿ ಮುನಿಸಿಪಲ್ ಕಾರ್ಪೋರೇಷನ್ ಕಟ್ಟಡದ ನಿವಾಸಿಗಳಿಗೆ ಸ್ಥಳ ಖಾಲಿ ಮಾಡುವಂತೆ ಎರಡು ಬಾರಿ ಸೂಚನೆ ನೀಡಿತ್ತು. ಆದರೆ ಯಾರೊಬ್ಬರೂ ಮನೆಗಳನ್ನು ಖಾಲಿ ಮಾಡಿರಲಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: 97 ವಲಸೆ ಕಾರ್ಮಿಕರ ಸಾವು: ಮಾಹಿತಿ ಇಲ್ಲ ಎಂದು ಹೇಳಿ, ಈಗ ಮಾಹಿತಿ ನೀಡಿದ ಕೇಂದ್ರ ಸರ್ಕಾರ!!!


