ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಬಗ್ಗೆ ಸ್ಟ್ಯಾಂಡ್-ಅಪ್ ಹಾಸ್ಯನಟ ಕುನಾಲ್ ಕಮ್ರಾ ಅವರ ಇತ್ತೀಚಿನ ಹೇಳಿಕೆಗಳಿಗೆ ರಾಜಕೀಯ ವಿರೋಧ ಹೆಚ್ಚುತ್ತಿವೆ. ಈ ನಡುವೆ, ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಕಾರ್ಮಿಕರು ಸೋಮವಾರ ಮುಂಬೈನ ಹ್ಯಾಬಿಟೇಟ್ ಸ್ಟುಡಿಯೋಗೆ ಆಗಮಿಸಿದ್ದಾರೆ. ಈ ವೇಳೆ ಅವರು ನಿಯಮ ಉಲ್ಲಂಘನೆಯನ್ನು ಉಲ್ಲೇಖಿಸಿ ಸ್ಥಳದ ಕೆಲವು ಭಾಗಗಳನ್ನು ಕೆಡವಲು ಪ್ರಾರಂಭಿಸಿದ್ದಾರೆ ಎಂದು NDTV ವರದಿ ಮಾಡಿದೆ. ಮಹಾರಾಷ್ಟ್ರ ಡಿಸಿಎಂ
ವರದಿಯ ಪ್ರಕಾರ, BMC ಅಧಿಕಾರಿಗಳು ಅಧಿಕೃತ ವಿವರಗಳನ್ನು ನೀಡದ ಕಾರಣ, ಈ ಆಪಾದಿತ ಉಲ್ಲಂಘನೆಗಳ ನಿಖರ ಸ್ವರೂಪ ಸ್ಪಷ್ಟವಾಗಿಲ್ಲ. ಆದಾಗ್ಯೂ, ಹಲವಾರು ಅಧಿಕಾರಿಗಳು ಖಾರ್‌ನಲ್ಲಿರುವ ಯುನಿಕಾಂಟಿನೆಂಟಲ್ ಹೋಟೆಲ್ ಒಳಗೆ ಇರುವ ಸ್ಥಳಕ್ಕೆ ಸುತ್ತಿಗೆಗಳನ್ನು ಹಿಡಿದು ಪ್ರವೇಶಿಸುತ್ತಿರುವುದು ಕಂಡುಬಂದಿದೆ.
ಈ ಮಧ್ಯೆ, ಶಿಂಧೆ ಅವರನ್ನು ಉಲ್ಲೇಖಿಸಿ ಹೇಳಿದ್ದಾರೆ ಎನ್ನಲಾದ ತನ್ನ ‘ಗದ್ದಾರ್’ ಅಥವಾ ‘ದೇಶದ್ರೋಹಿ’ ಹೇಳಿಕೆಗೆ ಕ್ಷಮೆ ಯಾಚಿಸುವುದಿಲ್ಲ ಎಂದು ಕಮ್ರಾ ಮುಂಬೈ ಪೊಲೀಸರಿಗೆ ತಿಳಿಸಿದ್ದಾರೆ. ಈ ಬಗ್ಗೆ ನ್ಯಾಯಾಲಯಗಳು ನಿರ್ದೇಶಿಸಿದರೆ ಮಾತ್ರ ತಾನು ಕ್ಷಮೆಯಾಚಿಸುತ್ತೇನೆ ಎಂದು ಕುನಾಲ್ ಹೇಳಿಕೊಂಡಿದ್ದಾರೆ ಎಂದು ಎನ್‌ಡಿಟಿವಿ ಹೇಳಿದೆ. ಮಹಾರಾಷ್ಟ್ರ ಡಿಸಿಎಂ
ಈ ನಡುವೆ ಕುನಾಲ್ ಅವರು ಇತ್ತಿಚೆಗಿನ ಟ್ವೀಟ್‌ನಲ್ಲಿ ಭಾರತ ಸಂವಿಧಾನದ ಪ್ರತಿಹಿಡಿದಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದು, ಮುಂದುವರೆಯಲು ಇರುವ ಒಂದೇ ಒಂದು ದಾರಿ ಎಂದು ಬರೆದುಕೊಂಡಿದ್ದಾರೆ ಅಷ್ಟೆ ಅಲ್ಲದೆ ಮತ್ತೊಂದು ಪೋಸ್ಟ್‌ನಲ್ಲಿ ವಿವಾದಾತ್ಮಕ ವಿಡಿಯೊವನ್ನು ಕೂಡಾ ಅವರು ಪೋಸ್ಟ್ ಮಾಡಿದ್ದಾರೆ.
Maharashtra ❤️❤️❤️ pic.twitter.com/FYaL8tnT1R
— Kunal Kamra (@kunalkamra88) March 23, 2025
ತನ್ನ ಹೇಳಿಕೆಗೆ ಕುನಾಲ್ ಕ್ಷಮೆಯಾಚಿಸಬೇಕು ಎಂಬ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಆಗ್ರಹದ ನಡುವೆ ಕುನಾಲ್ ಅವರು ಈ ಹೇಳಿಕೆ ನೀಡಿದ್ದಾರೆ. ವಿಧಾನಸಭೆಯನ್ನುದ್ದೇಶಿಸಿ ಮಾತನಾಡಿದ ಫಡ್ನವಿಸ್, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಕೀಳು ಮಟ್ಟದ ಹಾಸ್ಯ ಮತ್ತು ಉಪಮುಖ್ಯಮಂತ್ರಿಯನ್ನು ಅವಮಾನಿಸುವುದನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಈ ನಡುವೆ ಶಿಂಧೆ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ್ದಕ್ಕಾಗಿ ಮುಂಬೈ ಪೊಲೀಸರು ಕುನಾಲ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಜೊತೆಗೆ ಶಿಂಧೆ ಅವರನ್ನು “ಗದ್ದಾರ್” (ದೇಶದ್ರೋಹಿ) ಎಂದು ನಿಂದನೆ ಮಾಡಿರುವುದನ್ನು ವಿರೋಧಿಸಿ ಕುನಾಲ್ ಅವರು ಪ್ರದರ್ಶನ ನೀಡಿದ್ದ ಖಾರ್ ಪ್ರದೇಶದ ಹ್ಯಾಬಿಟಾಟ್ ಸ್ಟುಡಿಯೋ ಮತ್ತು ಸ್ಟುಡಿಯೋ ಇರುವ ಹೋಟೆಲ್ ಅನ್ನು ಧ್ವಂಸ ಮಾಡಿದ್ದಕ್ಕಾಗಿ ಪೊಲೀಸರು 40 ಶಿವಸೇನೆ ಕಾರ್ಯಕರ್ತರ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ.
ಹ್ಯಾಬಿಟಾಟ್ ಇರುವ ಹೋಟೆಲ್ ಯುನಿಕಾಂಟಿನೆಂಟಲ್ ಹೊರಗೆ ಭಾನುವಾರ ರಾತ್ರಿ ಹಲವಾರು ಶಿವಸೇನಾ ಕಾರ್ಯಕರ್ತರು ಜಮಾಯಿಸಿದ್ದರು. ಅವರು ಸ್ಟುಡಿಯೋ ಮತ್ತು ಹೋಟೆಲ್ ಆವರಣವನ್ನು ಧ್ವಂಸ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಎರಡು ದಿನಗಳಲ್ಲಿ ಶಿಂಧೆ ಅವರೊಂದಿಗೆ ಕ್ಷಮೆಯಾಚಿಸದಿದ್ದರೆ ಪಕ್ಷದ ಕಾರ್ಯಕರ್ತರು ಕುನಾಲ್ ಅವರನ್ನು ಬೀದಿಗಳಲ್ಲಿ ಓಡಾಡಲು ಬಿಡುವುದಿಲ್ಲ ಎಂದು ಶಿವಸೇನಾ ಶಾಸಕ ಮುರ್ಜಿ ಪಟೇಲ್ ಹೇಳಿದ್ದಾರೆ.
ಶಿಂಧೆ ಕಾರ್ಯಕರ್ತರು ತಮ್ಮ ಆವರಣವನ್ನು ಧ್ವಂಸ ಮಾಡಿದ ನಂತರ ಸೋಮವಾರ ಕಾರ್ಯಕ್ರಮ ನಡೆದ ಹ್ಯಾಬಿಟ್ಯಾಟ್ ಸ್ಟುಡಿಯೋ ಮುಚ್ಚುವುದಾಗಿ ಘೋಷಿಸಿತು. ಈ ಬಗ್ಗೆ ಸೋಮವಾರ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಸ್ಟುಡಿಯೋ, “ನಮ್ಮನ್ನು ಗುರಿಯಾಗಿಸಿಕೊಂಡು ನಡೆದ ಇತ್ತೀಚಿನ ವಿಧ್ವಂಸಕ ಕೃತ್ಯಗಳಿಂದ ನಾವು ಆಘಾತಕ್ಕೊಳಗಾಗಿದ್ದೇವೆ, ಚಿಂತಿತರಾಗಿದ್ದೇವೆ ಮತ್ತು ತೀವ್ರವಾಗಿ ಭೀತರಾಗಿದ್ದೇವೆ. ಕಲಾವಿದರ ಅಭಿಪ್ರಾಯಗಳು ಮತ್ತು ಸೃಜನಶೀಲ ಆಯ್ಕೆಗಳಿಗೆ ಅವರೆ ಜವಾಬ್ದಾರರಾಗಿದ್ದು, ಅವರ ಪ್ರದರ್ಶನದ ವಿಷಯದಲ್ಲಿ ತಾನು ಎಂದಿಗೂ ಭಾಗಿಯಾಗಿಲ್ಲ” ಎಂದು ಹೇಳಿದೆ.
“ಆದರೆ ಇತ್ತೀಚಿನ ಘಟನೆಗಳು, ನಾವು ಪ್ರದರ್ಶಕರ ಪ್ರತಿನಿಧಿಗಳಾಗಿರುವಂತೆಯೇ ಪ್ರತಿ ಬಾರಿಯೂ ನಮ್ಮನ್ನು ಹೇಗೆ ದೂಷಿಸಲಾಗುತ್ತದೆ ಮತ್ತು ಗುರಿಯಾಗಿಸಲಾಗುತ್ತದೆ ಎಂಬುದರ ಕುರಿತು ಪುನರ್ವಿಮರ್ಶೆ ಮಾಡುವಂತೆ ಮಾಡಿದೆ. ನಮ್ಮನ್ನು ಮತ್ತು ನಮ್ಮ ಆಸ್ತಿಯನ್ನು ಅಪಾಯಕ್ಕೆ ಸಿಲುಕಿಸದೆ ಮುಕ್ತ ಅಭಿವ್ಯಕ್ತಿಗೆ ವೇದಿಕೆಯನ್ನು ಒದಗಿಸುವ ಅತ್ಯುತ್ತಮ ಮಾರ್ಗವನ್ನು ನಾವು ಕಂಡುಕೊಳ್ಳುವವರೆಗೆ ನಾವು ಸ್ಟುಡಿಯೊ ಮುಚ್ಚುತ್ತಿದ್ದೇವೆ. ಎಲ್ಲಾ ಕಲಾವಿದರು, ಪ್ರೇಕ್ಷಕರು ಮತ್ತು ಪಾಲುದಾರರನ್ನು ಚರ್ಚಿಸಲು ಮತ್ತು ಅವರ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ನಾವು ಆಹ್ವಾನಿಸುತ್ತೇವೆ. ಪ್ರದರ್ಶಕರ ಹಕ್ಕುಗಳನ್ನು ಗೌರವಿಸಲು ನಿಮ್ಮ ಮಾರ್ಗದರ್ಶನವನ್ನು ಕೋರುತ್ತೇವೆ” ಎಂದು ಅದರ ಟಿಪ್ಪಣಿ ಹೇಳಿದೆ.
ಸೋಮವಾರ ಹಾಕಿದ್ದ ಪೋಸ್ಟ್‌ನಲ್ಲಿ “ಕುನಾಲ್ ಕಾಮ್ರಾ ಅವರ ಇತ್ತೀಚಿನ ವೀಡಿಯೊ ತಯಾರಿಕೆಯಲ್ಲಿ ಹ್ಯಾಬಿಟ್ಯಾಟ್ ಭಾಗಿಯಾಗಿಲ್ಲ. ಅದು ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ನಾವು ಅನುಮೋದಿಸುವುದಿಲ್ಲ” ಎಂದು ಅದು ಹೇಳಿತ್ತು. ಕುನಾಲ್ ಅವರ ಪ್ರದರ್ಶನ ನಡೆದ ಹ್ಯಾಬಿಟ್ಯಾಟ್ ಸ್ಟುಡಿಯೋ, ವಿವಾದಾತ್ಮಕ ‘ಇಂಡಿಯಾಸ್ ಗಾಟ್ ಲ್ಯಾಟೆಂಟ್’ ಪ್ರದರ್ಶನವನ್ನು ಚಿತ್ರೀಕರಿಸಿದ್ದ ಅದೇ ಸ್ಥಳವಾಗಿದ್ದು, ಕಳೆದ ತಿಂಗಳು ದೊಡ್ಡ ವಿವಾದಕ್ಕೆ ಈ ಸ್ಥಳ ಕಾರಣವಾಗಿತ್ತು.


