ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ವಿಲಕ್ಷಣ ಘಟನೆಯೊಂದು ವರದಿಯಾಗಿದೆ. ಜಿಲ್ಲೆಯ ಮಜಲ್‌ಗಾಂವ್‌ನಲ್ಲಿ ಕೋತಿಗಳು ಮತ್ತು ನಾಯಿಗಳ ನಡುವೆ ನಡೆಯುತ್ತಿರುವ ಕಚ್ಚಾಟ ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದೆ. ಇಲ್ಲಿನ ಕೋತಿಗಳು ಗ್ರಾಮದಲ್ಲಿ ಸುಮಾರು 250 ನಾಯಿಗಳನ್ನು ಕೊಂದಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕಳೆದೊಂದು ತಿಂಗಳಿನಿಂದ ಮಂಗಗಳು ನಾಯಿಗಳನ್ನು ಕೊಂದು ಹಾಕುವ ಘಟನೆಗಳು ನಡೆಯುತ್ತಿದ್ದು, ನಾಯಿಗಳು ಮತ್ತು ಕೋತಿಗಳ ಕಚ್ಚಾಟಕ್ಕೆ ಗ್ರಾಮದ ಜನರು ಭಯಭೀತರಾಗಿ ಓಡುತ್ತಿದ್ದಾರೆ. ಈ ಕೋತಿಗಳು ನಾಯಿಮರಿಯೊಂದಿಗೆ ಗ್ರಾಮದಲ್ಲಿನ ಮನೆಗಳ ಟೆರೇಸ್, ಮರಗಳಿಗೆ ಹತ್ತಿ ಅಲ್ಲಿಂದ ಮರಿಗಳನ್ನು ಕೆಳಕ್ಕೆ ಎಸೆಯುತ್ತಿವೆ. ಇದರಿಂದಾಗಿ ಅಲ್ಲಿರುವ ಜನರು ತಮ್ಮ ಮೇಲೆಯೂ ಮಂಗಗಳು ದಾಳಿ ಮಾಡುವ ಭಯದಲ್ಲಿದ್ದಾರೆ.
ಘಟನೆ ಕುರಿತು ಗ್ರಾಮದ ನಿವಾಸಿಗಳು ಅರಣ್ಯ ಇಲಾಖೆಯನ್ನು ಸಂಪರ್ಕಿಸಿ ಪ್ರದೇಶದಲ್ಲಿ ಮಂಗಗಳನ್ನು ಹಿಡಿಯುವಂತೆ ಮನವಿ ಮಾಡಿದ್ದರು. ನಿನ್ನೆ ಗ್ರಾಮದಲ್ಲಿ ಹಲವು ಮಂಗಗಳನ್ನು ಹಿಡಿಯುವಲ್ಲಿ ಇಲಾಖೆ ಯಶಸ್ವಿಯಾಗಿದೆ.
ಇದನ್ನೂ ಓದಿ: ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನ: ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ನಟ ದರ್ಶನ್ ಆಗ್ರಹ
ಘಟನೆಗೆ ಕಾರಣ:
ಕೆಲ ದಿನಗಳ ಹಿಂದೆ ನಾಯಿಗಳು ಕೋತಿ ಮರಿಯೊಂದನ್ನು ಕೊಂದು ಹಾಕಿದ್ದವು. ಆದಾದ ಬಳಿಕ ಕೋಪಗೊಂಡ ಕೋತಿಗಳು ನಾಯಿಗಳ ಮೇಲೆ ಸೇಡು ತೀರಿಸಿಕೊಳ್ಳುವ ಕಾರ್ಯ ಆರಂಭಿಸಿವೆ ಎನ್ನುತ್ತಾರೆ ಗ್ರಾಮಸ್ಥರು. ನಾಯಿಯನ್ನು ಕಂಡ ಮಂಗಗಳು ಅವುಗಳನ್ನು ಎಳೆದುಕೊಂಡು ಹೋಗಿ ಕೊಂದ ನಂತರ ಮರದಿಂದ ಅಥವಾ ಮನೆಗಳ ಮೇಲ್ಛಾವಣಿಯಿಂದ ಕೆಳಕ್ಕೆ ಎಸೆಯುತ್ತವೆ ಎಂದಿದ್ದಾರೆ.
ಸದ್ಯ ಗ್ರಾಮದಲ್ಲಿ ನಾಯಿಗಳು ಉಳಿದಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ. ನಾಯಿಗಳು ಕಡಿಮೆಯಾಗಿದ್ದರೂ ಮಂಗಗಳ ಕಾಟ ಮಾತ್ರ ನಿಂತಿಲ್ಲ. ವರದಿಯ ಪ್ರಕಾರ ಪ್ರೈಮರಿ ಶಾಲೆಗೆ ಹೋಗುವ ಮಕ್ಕಳನ್ನು ಈ ಮಂಗಗಳು ಗುರಿಯಾಗಿಸಲು ಪ್ರಾರಂಭಿಸಿವೆ. ಕೆಲ ದಿನಗಳ ಹಿಂದೆ ಎಂಟು ವರ್ಷದ ಮಗುವನ್ನು ಹಿಡಿದು ಎಳೆದುಕೊಂಡು ಹೋಗಿದೆ. ಮಂಗಗಳ ಕಾಟದಿಂದ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಹೇಳಿದ್ದಾರೆ.
ಸುಮಾರು ಐದು ಸಾವಿರ ಜನಸಂಖ್ಯೆಯ ಈ ಗ್ರಾಮದ ಜನರು ಮಂಗಗಳ ಕಾಟದಿಂದ ಕಂಗಾಲಾಗಿದ್ದಾರೆ. ರಸ್ತೆಯಲ್ಲಿ ಸಂಚರಿಸುವವರ ಮೇಲೂ ಮಂಗಗಳು ಹಲವು ಬಾರಿ ದಾಳಿ ನಡೆಸಿವೆ. ಅರಣ್ಯ ಇಲಾಖೆ ಕೆಲವು ಮಂಗಗಳನ್ನು ಬೋನಿನಲ್ಲಿ ಬಂಧಿಸಿದೆ. ಆದರೆ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ಇಲ್ಲಿನ ಜನ.


