Homeಅಂಕಣಗಳು‘ಮುಖ್ಯವಾಹಿನಿ ಎಂದರೆ ಶಸ್ತ್ರಾಸ್ತ್ರ ಹೋರಾಟದ ದಾರಿಯಿಂದ ಪ್ರಜಾತಾಂತ್ರಿಕ ಹೋರಾಟಕ್ಕೆ ಮರಳುವುದು’: ನೂರ್ ಶ್ರೀಧರ್ ಅವರೊಂದಿಗೆ...

‘ಮುಖ್ಯವಾಹಿನಿ ಎಂದರೆ ಶಸ್ತ್ರಾಸ್ತ್ರ ಹೋರಾಟದ ದಾರಿಯಿಂದ ಪ್ರಜಾತಾಂತ್ರಿಕ ಹೋರಾಟಕ್ಕೆ ಮರಳುವುದು’: ನೂರ್ ಶ್ರೀಧರ್ ಅವರೊಂದಿಗೆ ಸಂದರ್ಶನ

- Advertisement -
- Advertisement -

ನ್ಯಾಯಪಥ: ನ್ಯಾಯಪಥದಿಂದ ಶಾಂತಿಗಾಗಿ ನಾಗರಿಕರ ವೇದಿಕೆಯ ನೂರ್ ಶ್ರೀಧರ್ ಅವರಿಗೆ ನಮಸ್ಕಾರ. ನಕ್ಸಲರ ಶರಣಾಗತಿ ಮತ್ತು ನಕ್ಸಲರ ಮುಖ್ಯವಾಹಿನಿ ಎಂಬುದರ ವ್ಯತ್ಯಾಸವನ್ನು ಸ್ವಲ್ಪ ಬಿಡಿಸಿ ಹೇಳುತ್ತೀರಾ?

ನೂರ್ ಶ್ರೀಧರ್: ಮುಖ್ಯವಾಹಿನಿ ಎಂಬುದನ್ನು ಕರ್ನಾಟಕ ಕಂಡುಹಿಡಿದ ಒಂದು ಹೊಸ ಪದ. ನಕ್ಸಲ್ ಇತಿಹಾಸದಲ್ಲಿ ಇಂತಹದೊಂದು ಇಲ್ಲ. ಹೊಸ ಪರಿಕಲ್ಪನೆಯನ್ನು, ಹೊಸ ಮಾದರಿಯನ್ನು ಕರ್ನಾಟಕ ಕಟ್ಟಿಕೊಟ್ಟಿದೆ. ಇದಕ್ಕಾಗಿ ನಾವೆಲ್ಲ ಹೆಮ್ಮೆ ಪಡಬೇಕು. ಶರಣಾಗತಿಗೂ ಮತ್ತು ಮುಖ್ಯವಾಹಿನಿಗೂ ಮೂಲಭೂತ ವ್ಯತ್ಯಾಸವೆಂದರೆ ಶರಣಾಗತಿ ಎಂದರೆ ನಕ್ಸಲರು ಪೊಲೀಸರ ಮುಂದೆ ಬಂದು ಮಂಡಿಯೂರಿಯೋ ಅಥವಾ ತಲೆಬಾಗಿಯೋ ಅಹವಾಲು ಹೇಳಿಕೊಂಡು ನನಗೆ ಜೀವದಾನ ಕೊಡಿ ಎಂದು ಕೇಳಿಕೊಳ್ಳುವಂತಹದ್ದಾಗಿದೆ. ಪೊಲೀಸರು ಅದಕ್ಕೆ ಆಯಿತು ಎಂದು, ’ನೀವು ಹೊರಗೆ ಬಂದು ಈ ಪ್ರಕ್ರಿಯೆಗೆ ಒಳಪಡಿ’ ಎಂದು ಮಾಡುವಂತಹದಾಗಿದೆ. ಅದಕ್ಕೆ ಬೇಕಾದ ಬಹುಮಾನ, ಪ್ರೋತ್ಸಾಹಧನವನ್ನು ನಕ್ಸಲರಿಗೆ ಸರಕಾರ ಕೊಡುವಂತಹದ್ದು. ಇದೆಲ್ಲ ಸೇರಿ ಒಂದು ಶರಣಾಗತಿಯ ಪ್ಯಾಕೇಜ್. ನಕ್ಸಲರು ಹೋರಾಟವನ್ನು ಕೈಬಿಟ್ಟು ಸರಕಾರಕ್ಕೆ ತಲೆಬಾಗಿ, ತಪ್ಪೊಪ್ಪಿಗೆ ಬರೆದುಕೊಟ್ಟು ತಮ್ಮ ಮುಂದಿನ ಬದುಕನ್ನು ಸುಗಮವಾಗಿ ಸಾಗಿಸಿಕೊಂಡು ಹೋಗುವುದು ನಕ್ಸಲರ ಶರಣಾಗತಿ. ಇಲ್ಲಿಯವರೆಗೆ ನಡೆದಿರುವ ಶರಣಾಗತಿಗಳು ಹೀಗೆ ನಡೆದಿವೆ. ಇದು ಬಹಳ ಅವಮಾನಕಾರಿಯಾಗಿ, ಮತ್ತೆ ನಕ್ಸಲರನ್ನು ಸಾಮಾಜಿಕ ಚಟುವಟಿಕೆಗಳಿಂದ ಪೂರ್ತಿ ವಿಮುಖರನ್ನಾಗಿಸುವ ಪ್ರಕ್ರಿಯೆ. ನಕ್ಸಲ್ ಶರಣಾಗತಿಯ ಪ್ಯಾಕೇಜ್‌ಗಳು ಯಶಸ್ಸು ಕಾಣದೇ ಇರುವುದಕ್ಕೆ ಇದು ಒಂದು ಕಾರಣವಾಗಿದೆ. ನಕ್ಸಲೈಟ್ ಚಳವಳಿಯಲ್ಲಿ ಕಸುವು ಇರುವಂತಹ ಜನ ಯಾರು ಇರುತ್ತಾರೋ ಅವರು ಶರಣಾಗತರಾಗುವುದಿಲ್ಲ. ಬಹಳ ದುರ್ಬಲರಾಗಿರುವ, ಅನಿವಾರ್ಯ ಕಾರಣಗಳಿಗಾಗಿ ಹೋರಾಟದಲ್ಲಿ ಸೋತು ಹೋಗಿರುವವರು, ಪರಿಸ್ಥಿತಿಯ ಇಕ್ಕಟ್ಟಿಗೆ ಸಿಲುಕಿದವರು ಕೊನೆಗೆ ಬದುಕು ಕಂಡುಕೊಳ್ಳಬೇಕು ಎನ್ನುವವರು ಪೊಲೀಸರ ಮುಂದೆ ಶರಣಾಗತರಾಗುತ್ತಾರೆ. ಇದನ್ನು ನಾನು ತಪ್ಪು ಎಂದು ಹೇಳುವುದಿಲ್ಲ. ಆದರೆ ಸಾಮಾನ್ಯವಾಗಿ ಹೋರಾಟದ ಕಸುವನ್ನು ಉಳಿಸಿಕೊಂಡಂತಹವರು ಅಷ್ಟು ಸುಲಭವಾಗಿ ಶರಣಾಗತರಾಗುವುದಿಲ್ಲ. ಯಾಕೆಂದರೆ ಅದು ಅವರು ಒಂದು ಅವಮಾನಕಾರಿಯಾದ ಪ್ರಕ್ರಿಯೆಯಲ್ಲಿ ಸಾಗುವುದು ಮತ್ತು ಹೋರಾಟವನ್ನು ಕೈಬಿಡುವುದು ಎಂಬುದಾಗಿ ನೋಡುತ್ತಾರೆ. ಇಷ್ಟು ಮಾತ್ರವಲ್ಲ ತಾವು ನಂಬಿದ ಸಂಘಟನೆ ಮತ್ತು ಸಿದ್ಧಾಂತದ ವಿರುದ್ಧ ಹೇಳಿಕೆಯನ್ನು ಕೊಡಬೇಕು. ಈ ವಿಚಾರಗಳಿಗೆ ಒಪ್ಪಿಗೆಯಿಲ್ಲದೆ ಯಾವ ಸರಕಾರವು ಶರಣಾಗತಿಗೆ ಒಪ್ಪಿಗೆ ಕೊಡುವುದಿಲ್ಲ. ಆದರೆ ಮುಖ್ಯವಾಹಿನಿಗೆ ಎಂದು ಸರಕಾರ ಬರಮಾಡಿಕೊಳ್ಳುವುದು ಬೇರೆ ರೀತಿಯ ಪ್ರಕ್ರಿಯೆಯಾಗಿದೆ. ಮುಖ್ಯವಾಹಿನಿ ಎಂದರೆ ಅದು ಸಾಮಾನ್ಯ ಮುಖ್ಯವಾಹಿನಿಯಲ್ಲ. ಪ್ರಜಾತಾಂತ್ರಿಕ ಹೋರಾಟದ ಮುಖ್ಯವಾಹಿನಿ. ಅಂದರೆ ಶಸ್ತ್ರಾಸ್ತ್ರ ಹೋರಾಟದಿಂದ ಪ್ರಜಾತಾಂತ್ರಿಕ ಹೋರಾಟಕ್ಕೆ ಬರುವ ಮುಖ್ಯವಾಹಿನಿ. ಈ ಎರಡು ಮಾದರಿಯ ಹೋರಾಟಗಳು ಸಮಾಜದಲ್ಲಿ ನಡೆಯುತ್ತಿರುತ್ತವೆ. ಹಾಗಾಗಿ ಮುಖ್ಯವಾಹಿನಿ ಎಂದರೆ ಶಸ್ತ್ರಾಸ್ತ್ರ ಹೋರಾಟದ ದಾರಿಯಿಂದ ಪ್ರಜಾತಾಂತ್ರಿಕ ಹೋರಾಟದ ದಾರಿಗೆ ಮರಳುವುದು ಎಂದು ಅರ್ಥ. ಇದನ್ನು ಕರ್ನಾಟಕ ಕಟ್ಟಿಕೊಟ್ಟಿರುವ ಒಂದು ಮಾದರಿಯಾಗಿದೆ. ಇದೊಂದು ಹೊಸ ಮಾದರಿಯ ಪರಿಕಲ್ಪನೆ. ದೇಶದ ಬೇರೆ ಎಲ್ಲೂ ಇಂತಹ ಪರಿಕಲ್ಪನೆ ಸಾಕಾರವಾಗಿಲ್ಲ. ನಕ್ಸಲ್ ಸವಾಲನ್ನು, ಸಮಸ್ಯೆಯನ್ನು, ಬಿಕ್ಕಟ್ಟನ್ನು ಪರಿಗಣಿಸಲಿಕ್ಕೆ ಕರ್ನಾಟಕ ಕೊಟ್ಟಿರುವ ಮಾದರಿ. ಒಂದು ಸಣ್ಣ ಆರಂಭಿಕ ಮಾದರಿ.

ಪ್ರ: ನಕ್ಸಲರ ಮುಖ್ಯವಾಹಿನಿ ಪ್ರಕ್ರಿಯೆ ಪ್ರಾರಂಭವಾಗಿದ್ದು ಯಾವಾಗ?

ನೂರ್: 2014ರ ಡಿಸೆಂಬರ್ 28ರಂದು ನಾನು ಮತ್ತು ಸಿರಿಮನೆ ನಾಗರಾಜ್ ಅವರು ಮುಖ್ಯವಾಹಿನಿಗೆ ಬರುತ್ತೇವೆ. ಆ ಸಂದರ್ಭದಲ್ಲೇ ಈ ಮುಖ್ಯವಾಹಿನಿ ಎಂಬ ಪ್ರಕ್ರಿಯೆ ಹುಟ್ಟಿಕೊಂಡಿತ್ತು. ಈ ಮೊದಲು 8 ಜನ ನಕ್ಸಲರು ಬಂದಿರುತ್ತಾರೆ. ಮುಖ್ಯವಾಹಿನಿ ಪ್ರಕ್ರಿಯೆ ಪ್ರಾರಂಭಕ್ಕೂ ಮೊದಲು ನಡೆದ ಈ ಪ್ರಕ್ರಿಯೆಗಳನ್ನು ಶರಣಾಗತಿ ಎಂದು ಕರೆಯಲು ಬರುವುದಿಲ್ಲ. ಅವರು ಕೂಡ ಮುಖ್ಯವಾಹಿನಿಯನ್ನು ಬಯಸಿದ್ದರೋ ಏನೋ, ಆದರೆ ಅಂತಹ ಒಂದು ಪರಿಸ್ಥಿತಿ ಆಗ ಇರಲಿಲ್ಲ. ನಾವು ಬಂದಂತಹ ಸಂದರ್ಭದಲ್ಲಿ ಇದ್ದಂಥ ರೀತಿಯ ಜನಬೆಂಬಲ ಸಂಪರ್ಕಗಳು ರಾಜ್ಯದಲ್ಲಿ ಇರಲಿಲ್ಲ. ಹಾಗಾಗಿ ಅವರೆಲ್ಲಾ ಶರಣಾಗತಿಯ ಪ್ಯಾಕೇಜ್ ಅಡಿಯಲ್ಲಿಯೇ ಬಂದವರಾಗಿದ್ದಾರೆ. ಅಮೇಲೆ ಅವರೆಲ್ಲಾ ತಮ್ಮ ಬದುಕನ್ನು ಕಟ್ಟಿಕೊಳ್ಳುವಲ್ಲಿ ಒದ್ದಾಡಿದ್ದಾರೆ. ಆದರೆ ಇವೆಲ್ಲಾ ಹೆಚ್ಚುಕಡಿಮೆ ಮುಖ್ಯವಾಹಿನಿಯೇ. 2014ರಲ್ಲಿ ನಾವು ಮುಖ್ಯವಾಹಿನಿ ಬರುವುದಕ್ಕಾಗಿಯೇ ಒಂದು ವರ್ಷಗಳ ಕಾಲ ಪ್ರಕ್ರಿಯೆ ನಡೆದಿದೆ. ಇದಕ್ಕಾಗಿ ಶಾಂತಿಗಾಗಿ ನಾಗರಿಕರ ವೇದಿಕೆ ಸಾಕಷ್ಟು ಶ್ರಮ ಹಾಕಿದೆ. ಅದರಲ್ಲಿ ಮುಖ್ಯವಾಗಿ ಗೌರಿ ಲಂಕೇಶ್, ಎ.ಕೆ.ಸುಬ್ಬಯ್ಯ, ದೊರೆಸ್ವಾಮಿಯವರ ಶ್ರಮ ಬಹಳಷ್ಟಿದೆ. ಇವರಲ್ಲದೆ ಅನೇಕ ಜನರ ಶ್ರಮವಿದೆ. ನಾನು ಅವರುಗಳ ಹೆಸರನ್ನು ಹೇಳುತ್ತಾ ಹೋದರೆ ಕೆಲವರ ಹೆಸರು ತಪ್ಪಿ ಹೋಗಬಹುದು. ಹಾಗಾಗಿ ಅವರುಗಳ ಹೆಸರು ಬೇಡ. ನಮಗೂ ಮೊದಲು ಕೆಲವರು ನಕ್ಸಲ್ ಚಟುವಟಿಕೆಯಿಂದ ಹೊರಬಂದು ಬದುಕನ್ನು ಸಾಗಿಸುತ್ತಾ ಇದ್ದರು. ಇದಾಗಲೇ ಬಂದು ಬದುಕು ಸಾಗಿಸುತ್ತಿರುವ ಕೆಲವರನ್ನು ಸರಕಾರವೇ ಶರಣಾಗತರನ್ನಾಗಿ ಮಾಡಿತು. ಒಂದು ವ್ಯವಸ್ಥಿತ ಶರಣಾಗತಿ ಅಥವಾ ಮುಖ್ಯವಾಹಿನಿ ಪ್ರಕ್ರಿಯೆ ಪ್ರಾರಂಭವಾಗಿದ್ದೇ 2014ರ ನಂತರವಾಗಿದೆ.

ಪ್ರ: ಶಾಂತಿಗಾಗಿ ನಾಗರಿಕರ ವೇದಿಕೆ ಹಾಗೂ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿಗಳು ರಚನೆಯಾಗಿದ್ದು ಎಂದು? ಇವುಗಳ ಪಾತ್ರವೇನು? ಇವುಗಳಿಗಿರುವ ವ್ಯತ್ಯಾಸವೇನು?

ನೂರ್: ಶಾಂತಿಗಾಗಿ ನಾಗರಿಕರ ವೇದಿಕೆ ಒಂದು ಸ್ವತಂತ್ರವಾದ ವೇದಿಕೆ. ಅದಕ್ಕೂ ಸರಕಾರಕ್ಕೂ ಯಾವುದೇ ಸಂಬಂಧವಿಲ್ಲ. ನಮ್ಮ ರಾಜ್ಯದಲ್ಲಿ ಇದರ ಪ್ರಾರಂಭ 2005ರಲ್ಲಿ ಆಗಿದೆ. 2005ರಲ್ಲಿ ನಕ್ಸಲ್ ನಾಯಕ ಸಾಕೇತ್ ರಾಜನ್ ಎಂಬುವವರ ಎನ್‌ಕೌಂಟರ್ ಆಗುತ್ತದೆ. ಇದು ರಾಜ್ಯದ ನಾಗರಿಕರನ್ನು ಬಹಳ ವಿಚಲಿತಗೊಳಿಸುತ್ತದೆ. ಯಾಕೆಂದರೆ ಸಾಕೇತ್ ರಾಜನ್ ಹಿನ್ನೆಲೆ ನಮಗೆಲ್ಲಾ ಗೊತ್ತಿರುವ ಹಾಗೆ ಬಹಳ ವಿದ್ವತ್ತನ್ನು ಹೊಂದಿರುವ ಪ್ರಖ್ಯಾತ ಹೋರಾಟಗಾರರು. ಒಟ್ಟಾರೆ ಅವರು ಬರಹದಲ್ಲಿ ಮಾಡಿರುವಂತಹ ಕೆಲಸ, ’ಮೇಕಿಂಗ್ ಹಿಸ್ಟರಿ’ ಎಂಬ ಕೃತಿ ರಚನೆ, ಚಳವಳಿ ಕುರಿತು ಅವರ ವ್ಯಾಖ್ಯಾನಗಳ ಪರಿಕಲ್ಪನೆ, ಅವರು ನೀಡಿದಂತಹ ಸಂದರ್ಶನ ಇವೆಲ್ಲದರಿಂದಾಗಿ ಒಂದು ಅಪರಿಮಿತವಾದ ಅಭಿಮಾನ ಸಾಕಷ್ಟು ಜನರಿಗಿತ್ತು. ಹೋರಾಟದ ಮಾದರಿಯ ಬಗ್ಗೆ ಒಪ್ಪಿಗೆಯಿಲ್ಲವೆಂದವರೂ ಕೂಡ ಸಾಕೇತ್ ರಾಜನ್ ಅವರ ಬಗ್ಗೆ, ನಕ್ಸಲ್ ಚಳವಳಿಯ ಬಗ್ಗೆ ಸಾಕಷ್ಟು ಅಭಿಮಾನವನ್ನು ಕರ್ನಾಟಕ ನಾಗರಿಕ ಸಮಾಜ ಹೊಂದಿತ್ತು. ಯಾವಾಗ ಸಾಕೇತ್ ರಾಜನ್ ಅವರ ಹತ್ಯೆಯಾಯಿತೋ- ಅದರಲ್ಲೂ ಇಂತಹ ಒಂದು ಅಮೂಲ್ಯ ಜೀವಗಳು ಈ ರೀತಿ ಕೊನೆಗೊಳ್ಳುವುದು ಕರ್ನಾಟಕದಲ್ಲಿ ಸಾಧ್ಯವಾಗಕೂಡದು ಎಂದು- ರಾಜ್ಯದಲ್ಲಿ ಸರಕಾರಕ್ಕೂ ಮತ್ತು ನಕ್ಸಲೀಯರ ನಡುವೆ ಒಳ್ಳೆಯ ಮಾತುಕತೆ ನಡೆಯಬೇಕು- ನಕ್ಸಲೀಯರು ಎತ್ತುತ್ತಿರುವ ಸಮಸ್ಯೆಗಳು ಅಂದರೆ ಜನರ ಸಮಸ್ಯೆಗಳನ್ನು ಸರಕಾರ ಬಗೆಹರಿಸಬೇಕು- ಆ ಮೂಲಕ ನಕ್ಸಲ್ ಮಾದರಿಯ ಹೋರಾಟವನ್ನು ಸಮಾರೋಪಗೊಳಿಸಬೇಕು ಎಂಬ ಕಾರಣಕ್ಕಾಗಿ ನಡೆದ ಪ್ರಯತ್ನವೇ ಶಾಂತಿಗಾಗಿ ನಾಗರಿಕರ ವೇದಿಕೆಯ ರಚನೆ. 2014ರಲ್ಲಿ ನಾವೇನೂ ಮುಖ್ಯವಾಹಿನಿಗೆ ಬರುವ ಮುಂಚೆ ಕಾಂಗ್ರೆಸ್ಸಿನ ಧರ್ಮಸಿಂಗ್ ಸರಕಾರವಾಗಲಿ, ನಂತರ ಬಂದ ಬಿಜೆಪಿ ಸರಕಾರವಾಗಲಿ ಈ ಪ್ರಕ್ರಿಯೆಗೆ ಓಗೊಡಲಿಲ್ಲ. ನಂತರ ಬಂದ ಬಿಜೆಪಿ ಸರಕಾರವಂತೂ ಈ ಕುರಿತು ಗಮನವೇ ಹರಿಸಲಿಲ್ಲ. 2013ರಲ್ಲಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಈ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತದೆ. ನಕ್ಸಲೀಯರು ಶಸ್ತ್ರಾಸ್ತ್ರ ಹೋರಾಟವನ್ನು ತೊರೆದು ಬರುವುದಾದರೆ ನಾವು ಮಾತುಕತೆಗೆ ಸಿದ್ಧವೆಂದು ಸರಕಾರ ಹೇಳಿತು. ಆಗ ನಾಗರಿಕ ಸಮಾಜದವರು ನಕ್ಸಲ್ ಚಳವಳಿಗಾರರಿಗೆ ಮನವಿ ಮಾಡಿಕೊಳ್ಳುತ್ತಾರೆ. ಅದೇ ಸಂದರ್ಭದಲ್ಲಿ ನಕ್ಸಲೀಯರಲ್ಲಿ ಎರಡು ಬಣಗಳಾಗಿದ್ದವು. ಒಂದು ಬಣ ಶಸ್ತ್ರಾಸ್ತ್ರ ಹೋರಾಟವೇ ಸರಿಯಾದ ದಾರಿ ಎಂದು, ಇನ್ನೊಂದು ಪ್ರಜಾತಾಂತ್ರಿಕ ಹೋರಾಟದ ಮಾದರಿಯೆಂದು; ಆಗ ನಾವು ಬದಲಾವಣೆಗಾಗಿ ಹಾತೊರೆಯುತ್ತಿದ್ದೆವು ಮತ್ತು ಇದಕ್ಕೆ ಸ್ಪಂದಿಸಿ ಹೇಳಿಕೆ ಕೊಟ್ಟೆವು. ಇದರ ಭಾಗವಾಗಿ ಈ ಪ್ರಕ್ರಿಯೆ ಪ್ರಾರಂಭವಾಯಿತು. ಈ ಪ್ರಕ್ರಿಯೆ ಆರಂಭವಾದಾಗ ಸರಕಾರಿ ಸಮಿತಿಯಲ್ಲಿ ಒಂದು ರಾಜ್ಯ ಮಟ್ಟದ ಸಮಿತಿ ಇರಲಿಲ್ಲ. ಆದರೆ ಚಿಕ್ಕಮಗಳೂರಿನಲ್ಲಿ ಜಿಲ್ಲಾ ಮಟ್ಟದ ಒಂದು ಸರಕಾರಿ ಸಮಿತಿ ಇತ್ತು. ಅದು ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿ ಎನ್ನುವಂತಹ ಸರಕಾರದ ಸಮಿತಿ. ಇದರಲ್ಲಿ ಪೊಲೀಸ್ ಅಧಿಕಾರಿಗಳು ಮೇಲಾಗಿ ಇರುತ್ತಾರೆ, ಜಿಲ್ಲಾಧಿಕಾರಿಗಳು ಇರುತ್ತಾರೆ ಜೊತೆಗೆ ನಾಗರಿಕ ಸಮಾಜದಿಂದಲೂ ಕೆಲವರನ್ನು ಅವರ ಅರ್ಹತೆ ಮಾನದಂಡದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಒಂದು ರೀತಿಯಲ್ಲಿ ನಾಗರಿಕ ಸಮಾಜದವರು ಮತ್ತು ಸರಕಾರಿ ಅಧಿಕಾರಿಗಳು ಇರುವಂತಹ ಸರಕಾರಿ ಸಮಿತಿಯಾಗಿದೆ. ನಾವೂ ಬರುವ ಹೊತ್ತಿಗೆ ಅನಿವಾರ್ಯತೆ ಇರುವ ಕಾರಣ ರಾಜ್ಯ ಮಟ್ಟದ ಸರಕಾರಿ ಸಮಿತಿ ರಚನೆಯಾಗುತ್ತದೆ. ಶಾಂತಿಗಾಗಿ ನಾಗರಿಕ ವೇದಿಕೆಯೇ ಈ ಸರಕಾರಿ ಸಮಿತಿಗೆ ಮೂರು ಜನರನ್ನು ಆಯ್ಕೆ ಮಾಡಿ ಕಳುಹಿಸುತ್ತದೆ. ಹಲವಾರು ನೀತಿನಿರೂಪಣೆಗಳನ್ನು ಮಾಡಬೇಕಾಗಿರುವುದರಿಂದ ಕೆಲವು ಪ್ರಬಲ ವ್ಯಕ್ತಿಗಳನ್ನು ನಾಗರಿಕ ಸಮಾಜದಿಂದ ಆಯ್ಕೆ ಮಾಡಲಾಗುತ್ತದೆ. ಗೌರಿ ಲಂಕೇಶ್, ಎ.ಕೆ.ಸುಬ್ಬಯ್ಯ, ದೊರೆಸ್ವಾಮಿಯವರು ಈ ಸರಕಾರಿ ಸಮಿತಿಗೂ, ಶಾಂತಿಗಾಗಿ ನಾಗರಿಕ ವೇದಿಕೆಗೂ ಸದಸ್ಯರಾಗಿರುತ್ತಾರೆ. ಆಗ ಎರಡು ಸಮಿತಿಗಳು ಅಂದರೆ ಶಾಂತಿಗಾಗಿ ನಾಗರಿಕರ ವೇದಿಕೆ ಮತ್ತು ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿಗಳು ಕಾರ್ಯನಿರತವಾಗಿದ್ದವು. ಈ ಮೂರು ಜನ ಎರಡು ಸಮಿತಿಗಳ ನಡುವೆ ಸಮನ್ವಯ ಮಾಡುವ ಪಾತ್ರವನ್ನು ವಹಿಸಿದರು. ಮೂಲಭೂತವಾಗಿ ಶಾಂತಿಗಾಗಿ ನಾಗರಿಕರ ವೇದಿಕೆಯ ಭಾಗವಾಗಿ ಇದ್ದರು. ಈ ಮೂರು ಜನರ ಪ್ರಯತ್ನದಿಂದಾಗಿಯೇ ಈ ಮುಖ್ಯವಾಹಿನಿಯ ಪರಿಕಲ್ಪನೆಯು ಸೇರಲ್ಪಟ್ಟಿತು. ಮೊದಲಿದ್ದ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿಯ ನೀತಿ ಏನಿತ್ತೋ ಅದನ್ನು ಇವರು ರಾಜ್ಯದಲ್ಲಿ ಬದಲಾಯಿಸುತ್ತಾರೆ. ಶರಣಾಗತಿಗೆ ಬದಲಾಗಿ ಮುಖ್ಯವಾಹಿನಿಗೆ ಬರಲು ಅನುವು ಮಾಡಿಕೊಡುವ ಯೋಜನೆ ಎಂದು ಒಂದು ಬದಲಾವಣೆ ಮಾಡುತ್ತಾರೆ. ಇಂತಹ ಒಂದು ಬದಲಾವಣೆ ಮಾಡುವುದರಲ್ಲಿ ಈ ಮೂರು ಜನರ ಪಾತ್ರ ಮಹತ್ವದ್ದು. ನಂತರ ನಡೆದ ಎರಡು ಪ್ರಕ್ರಿಯೆಗಳಲ್ಲೂ ಈ ಎರಡೂ ಸಮಿತಿಗಳಿಗೆ ತಮ್ಮದೇ ಪಾತ್ರಗಳು ಹೊಂದಿದ್ದವು.

ಪ್ರ: ನೀವು ಮುಖ್ಯವಾಹಿನಿಗೆ ಬರುವಾಗ ಸರಕಾರದ ಕಡೆಯಿಂದ ಯಾವೆಲ್ಲಾ ಭರವಸೆಗಳನ್ನು ನೀಡಲಾಗಿತ್ತು? ಅವುಗಳನ್ನು ಸರಕಾರ ಈಡೇರಿಸಿದೆಯೇ?

ನೂರ್: ನಾವು ಬಂದಾಗ ಸರಕಾರಕ್ಕೆ ಹೆಚ್ಚಿನ ಬೇಡಿಕೆಗಳನ್ನು ಇಡಲಿಲ್ಲ. ನಾವು ಇಟ್ಟಿದ್ದು ಒಂದು ಸಿಂಗಲ್ ಬೇಡಿಕೆ ಮಾತ್ರ. ನಾವು ಹೋರಾಟದ ಮಾರ್ಗವನ್ನು ಮಾತ್ರ ಬದಲಾಯಿಸಿಕೊಳ್ಳುತ್ತೇವೆ. ಮುಂದೆ ಬದಲಿ ಹೋರಾಟದ ಮಾರ್ಗದಲ್ಲಿ ಮುಂದುವರಿಯುತ್ತೇವೆ. ಭವಿಷ್ಯದಲ್ಲಿ ನಾವು ಪ್ರಜಾತಾಂತ್ರಿಕ ಹೋರಾಟದಲ್ಲಿ ಮುಂದುವರಿಯುವುದಕ್ಕೆ ಯಾವುದೇ ಅಡೆತಡೆಗಳು ಇರಬಾರದು. ಇದೊಂದು ನಾವು ಇಟ್ಟ ಬೇಡಿಕೆಯಾಗಿದೆ. ಹಕ್ಕೊತ್ತಾಯ ಎಂದು ಸರಕಾರದ ಮುಂದೆ ಮಂಡಿಸಬಹುದಾಗಿತ್ತು. ಅವುಗಳನ್ನು ಸರಕಾರ ಅಷ್ಟು ಸುಲಭವಾಗಿ ಈಡೇರಿಸುತ್ತದೆ ಎಂದು ನಾವು ನಂಬಿಕೆ ಇಡಲು ಸಾಧ್ಯವಿರಲಿಲ್ಲ. ಅಂತಹ ಒಂದು ಭ್ರಮೆ ನಮಗೂ ಇರಬಾರದು ಕೂಡ. ಏನಿದ್ದರೂ ಹೋರಾಟದ ಮೂಲಕವೇ ನಡೆಯಬೇಕು. ಸಂಘರ್ಷದ ಮೂಲಕವೇ ಆ ಬದಲಾವಣೆ ಬರುತ್ತದೆ. ಆ ಸಂಘರ್ಷಕ್ಕೆ ಬೇಕಾಗಿರುವ ಅವಕಾಶವನ್ನು ಮಾತ್ರ ಸರಕಾರ ನೀಡಬೇಕು ಎಂಬುದು ನಮ್ಮ ಬೇಡಿಕೆಯಾಗಿತ್ತು. ಅದಕ್ಕಾಗಿ ಗ್ಯಾರಂಟಿ ಬೇಕಾಗಿತ್ತು. ಈ ಬೇಡಿಕೆಯನ್ನು ಸರಕಾರ ಒಪ್ಪಿಕೊಂಡಿತ್ತು. ಶರಣಾಗತಿ ಪ್ಯಾಕೇಜಿನಲ್ಲಿ ನಾವು ಬರುವುದಿಲ್ಲ. ಅದು ಏನೇ ಇದ್ದರೂ ನಮ್ಮನ್ನು ಘನತೆಯಿಂದ ನಡೆಸಿಕೊಳ್ಳಬೇಕು. ಇದರ ಭಾಗವಾಗಿ ಮುಖ್ಯವಾಹಿನಿ ಯೋಜನೆಯನ್ನು ರೂಪಿಸಬೇಕೆಂದು ಕೇಳಿಕೊಂಡೆವು. ಅದು ಸಾಧ್ಯವಾಯಿತು. ಈ ಬಾರಿ ನಡೆದಂತೆ ಮುಖ್ಯಮಂತ್ರಿಯವರೇ ಸ್ವಾಗತಿಸಿದಂತೆ ನಮ್ಮನ್ನು ಬರಮಾಡಿಕೊಳ್ಳಲಿಲ್ಲವಾದರೂ ನಾವು ಮುಖ್ಯವಾಹಿನಿಗೆ ಬಂದಾಗಲೂ ಬಹಳ ಅದ್ದೂರಿ ಸ್ವಾಗತವೇ ನೀಡಲಾಯಿತು. ಚಿಕ್ಕಮಗಳೂರಿನಲ್ಲಿ ಇಡೀ ಕರ್ನಾಟಕದ ನಾಗರಿಕ ಸಮಾಜವೇ ಸ್ವಾಗತಿಸಿತು. ನಾವು ನೇರವಾಗಿ ನಾಗರಿಕ ಸಮಾಜದ ಮುಂದೆ ಬಂದೆವು. ನಾಗರಿಕ ಸಮಾಜ ನಮ್ಮನ್ನು ಗೌರವಾನ್ವಿತವಾಗಿ ಬರಮಾಡಿಕೊಂಡ ನಂತರ ಅವರು ಅಧಿಕಾರಿಗಳು, ಪೊಲೀಸರ ಮುಂದೆ ಹಸ್ತಾಂತರ ಮಾಡುತ್ತಾರೆ. ಆಗ ದೊರೆಸ್ವಾಮಿಯವರು, ’ನಾವು ಅಮೂಲ್ಯವಾದ ಮುತ್ತುಗಳನ್ನು ನಿಮ್ಮ ಕೈಗೆ ಕೊಡುತ್ತಿದ್ದೇವೆ. ನೀವು ಜೋಪಾನವಾಗಿ ಕಾಪಿಟ್ಟುಕೊಂಡು ಆದಷ್ಟು ಬೇಗ ನಮಗೆ ಹಿಂದಿರುಗಿಸಬೇಕೆಂದು’ ತಾಕೀತು ಮಾಡಿ ನಮ್ಮನ್ನು ಹಸ್ತಾಂತರ ಮಾಡುತ್ತಾರೆ. ಅನಂತರ ಪೊಲೀಸ್ ಠಾಣೆಯಲ್ಲಿ ಘನತೆಯಿಂದಲೇ ನಡೆಸಿಕೊಳ್ಳಲಾಯಿತು. ಆನಂತರ ಜಾಮೀನು ಪ್ರಕ್ರಿಯೆಯ ಭಾಗವಾಗಿ ಒಂದಷ್ಟು ದಿನಗಳ ಕಾಲ ನಾನು ಜೈಲಿನಲ್ಲಿರಬೇಕಾಯಿತು. ಜಾಮೀನು ತೆಗೆದುಕೊಂಡು ಹೊರಗೆ ಬಂದೆ. ಅಮೇಲೆ ಕೇಸುಗಳು ನಡೆದವು. ನಾವು ಕಾನೂನುಬದ್ಧವಾಗಿ ಹೋರಾಟ ನಡೆಸಿದೆವು. ಕೊನೆಗೆ ಕೇಸುಗಳು 2019ರಲ್ಲಿ ವಜಾಗೊಂಡವು. ನಂತರ ನಾವು ಮುಖ್ಯವಾಗಿ ಕೇಳಿದ್ದ ಪ್ರಜಾತಾಂತ್ರಿಕ ಹೋರಾಟದ ಬೇಡಿಕೆಗೆ ತಡೆಯಾಗಲಿಲ್ಲ. ಮತ್ತೆ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ಸ್ವಲ್ಪ ತೊಂದರೆ ಕೊಡಲು ಪ್ರಾರಂಭಿಸಿತು. ಇವರು ಸರಿಯಾದ ರೀತಿಯಲ್ಲಿ ಪೊಲೀಸರಿಗೆ ವರದಿ ನೀಡುತ್ತಿಲ್ಲ, ಇವರ ಜಾಮೀನು ರದ್ದುಗೊಳಿಸಬೇಕು ಎಂದು. ಮತ್ತೆ ನಮ್ಮನ್ನು ಜೈಲಿಗೆ ಹಾಕುವ ಪ್ರಯತ್ನಗಳು ನಡೆದವು. ನಾನು ಎಲ್ಲಿಯಾದರೂ ಸರ್ವೆ ಮಾಡಲು ಹೋದರೆ ಪೊಲೀಸರು ಬರುವಂತಹದ್ದು, ಕಿರಿಕಿರಿ ಮಾಡುವಂತಹದ್ದು, ನನ್ನ ಜೊತೆ ಸಭೆಗೆ ಬರುವವರಿಗೆ ತೊಂದರೆ ಕೊಡುವುದು ಇಂತಹವೆಲ್ಲ ನಡೆಯಿತು. ಇಷ್ಟೆಲ್ಲ ಇದ್ದಾಗಲೂ ಹೋರಾಟದಲ್ಲಿ ಮುಂದುವರಿಯುವುದಕ್ಕೆ ಯಾವುದೇ ರೀತಿಯ ದೊಡ್ಡ ತಡೆಯಾಗಲಿಲ್ಲ. ನಾವು ಏನನ್ನೂ ಬಯಸಿದ್ದೆವೋ ಆ ರೀತಿಯ ಹೋರಾಟದ ದಾರಿಗೆ ಬರಲು ಸಾಧ್ಯವಾಯಿತು.

ಪ್ರ: ಮುಖ್ಯವಾಹಿನಿಗೆ ಬಂದ ಕನ್ಯಾಕುಮಾರಿ ಅಂತವರು ಕಳೆದ 7-8 ವರ್ಷದಿಂದ ಜೈಲಿನಲ್ಲೇ ಇದ್ದಾರಲ್ಲ. ಇದಕ್ಕೆ ಏನು ಹೇಳುತ್ತೀರಿ. ಇದರಲ್ಲಿ ಈ ಸಮಿತಿಗಳ ಪಾತ್ರವೇನು?

ನೂರ್: ಅದೇ ದುರಂತ. ನಮ್ಮ ನಂತರ 2016, 2018ರಲ್ಲಿ ಸುಮಾರು 7 ಜನ ನಕ್ಸಲರು ಇದೇ ಮುಖ್ಯವಾಹಿನಿ ಯೋಜನೆಯಡಿ ಬರುತ್ತಾರೆ. ಕನ್ಯಾಕುಮಾರಿ, ಪದ್ಮನಾಭ್, ಪರಶುರಾಮ್, ಚೆನ್ನಮ್ಮ, ರಿಜ್ವಾನ ಬೇಗಂ, ಶಿವಕುಮಾರ್ ಇವರೆಲ್ಲ ಬರುತ್ತಾರೆ. ಇವರೆಲ್ಲಾ ಮೊದಲು ನಮ್ಮನ್ನು ಸಂಪರ್ಕ ಮಾಡಿದರು. ನಾವು ಶಾಂತಿಗಾಗಿ ನಾಗರಿಕರ ವೇದಿಕೆಯನ್ನು ಸಂಪರ್ಕ ಮಾಡಿದೆವು. ಮತ್ತೆ ಶಾಂತಿಗಾಗಿ ನಾಗರಿಕರ ವೇದಿಕೆಯಿಂದ ಸರಕಾರಿ ಸಮಿತಿಯ ಮುಂದೆ ತೆಗೆದುಕೊಂಡು ಹೋಗುತ್ತೇವೆ. ಅಲ್ಲಿ ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ನಡೆದು ಮುಖ್ಯವಾಹಿನಿಗೆ ಬಂದರು. ಆದರೆ ದುರದೃಷ್ಟವಶಾತ್ ಯಾವ ಅವರ ಸಮಸ್ಯೆಗಳು ಬಗೆಹರಿಯಲಿಲ್ಲ. ಅಷ್ಟೊತ್ತಿಗೆ ಕಾಂಗ್ರೆಸ್ ಸರಕಾರ ಉರುಳಿಹೋಗಿತ್ತು. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿತ್ತು. ಅದು ಪೂರ್ತಿಯಾಗಿ ಅಸಹಕಾರದ ಪ್ರಕ್ರಿಯೆಯನ್ನು ಅನುಸರಿಸಿತು. ಸರಕಾರದ ಸಮಿತಿಯೇ ನಿಷ್ಕ್ರಿಯವಾಯಿತು. ಅವರ ಕೇಸುಗಳು ಬಗೆಹರಿಯುತ್ತಿಲ್ಲ. ಬದುಕಿಗೆ ಬೇಕಾದಂತಹ ಬೆಂಬಲವೂ ಕೂಡ ಸಿಗಲಿಲ್ಲ. ಹಾಗಾಗಿ ಈ 7 ಜನ ಬಹಳಷ್ಟು ಕಷ್ಟ ಬಿದ್ದಿದ್ದಾರೆ ಎಂದೇ ಹೇಳಬೇಕು ಮತ್ತು ಈಗಲೂ ಒದ್ದಾಟ ನಡೆಸುತ್ತಲೇ ಇದ್ದಾರೆ.

ಪ್ರ: 2025, ಜ.8ರಂದು 6 ಜನ ನಕ್ಸಲರು ಮುಖ್ಯವಾಹಿನಿಗೆ ಬಂದಿದ್ದರ ಪ್ರಕ್ರಿಯೆಯನ್ನು ಸ್ವಲ್ಪ ವಿವರಿಸಿ.

ನೂರ್: ಇದೆಲ್ಲಾ ವಿಕ್ರಂ ಗೌಡ ಹತ್ಯೆಯ ನಂತರದ ಪ್ರಕ್ರಿಯೆಯಾಗಿದೆ. ಇದಕ್ಕೂ ಮೊದಲು 7-8 ತಿಂಗಳ ಹಿಂದೆ ಪುನರ್‌ರಚನೆಗೊಂಡ ಸರಕಾರಿ ಸಮಿತಿಯಿಂದ ನಕ್ಸಲರನ್ನು ಶರಣಾಗತಿ ಮಾಡಿಸಿಕೊಳ್ಳಬೇಕೆಂಬ ಪ್ರಕ್ರಿಯೆಗಳು ನಡೆಯುತ್ತಲೇ ಇದ್ದವು. ಪೊಲೀಸರ ತೊಡಗುವಿಕೆಯೊಂದಿಗೆ ಇದೆಲ್ಲಾ ನಡೆಯುತ್ತಲೇ ಇತ್ತು. ಈ ಹೊಸ ಸಮಿತಿಯಲ್ಲಿ ನಾಗರಿಕ ಸಮಾಜದಿಂದ ಕೆ.ಪಿ.ಶ್ರೀಪಾಲ್, ಬಂಜಗೆರೆ ಜಯಪ್ರಕಾಶ್, ಬಿಳಿದಾಳೆ ಪಾರ್ವತೀಶ್ ಸದಸ್ಯರಾಗಿದ್ದರು. ಈ ಸಮಿತಿಯು ಈ ಸಂಬಂಧ ಎಲ್ಲ ಕಡೆ ಕರಪತ್ರವನ್ನು ಕೂಡ ಹಂಚಿತ್ತು. ಇದೆಲ್ಲಾ ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ ಇದು ಮುಖ್ಯವಾಹಿನಿಯ ಪ್ರಕ್ರಿಯೆಯಲ್ಲಿ ಅಲ್ಲ. ಹಳೆಯ ರೀತಿಯ ಶರಣಾಗತಿಯ ಪ್ರಕ್ರಿಯೆಯಲ್ಲೇ ಇದು ನಡೆಯುತ್ತಾ ಇತ್ತು. ಅಲ್ಲಿರುವ ನಾಗರಿಕ ಸಮಾಜದ ಸದಸ್ಯರು ಸಾಕಷ್ಟು ಕಾಳಜಿ ವಹಿಸಿ, ಪತ್ರಿಕಾಗೋಷ್ಠಿ ನಡೆಸಿದರು, ಕೇರಳಕ್ಕೂ ಕೂಡ ಹೋಗಿಬಂದರು. ನಕ್ಸಲರ ಸಂಪರ್ಕ ಸಾಧಿಸುವುದಕ್ಕೆ ಪ್ರಕ್ರಿಯೆಗಳನ್ನು ನಡೆಸಿದರು. ಈ ಮಾಹಿತಿ ಈ 6 ಜನ ನಕ್ಸಲರಿಗೆ ಮುಟ್ಟಿತ್ತು. ಈ ಶರಣಾಗತಿ ಪ್ಯಾಕೇಜಿನಡಿ ಬರಲಿಕ್ಕೆ ನಕ್ಸಲರು ಸಿದ್ಧವಿರಲಿಲ್ಲ. ಹಾಗಾಗಿ ಇದು ಯಶಸ್ಸು ಕಂಡಿರಲಿಲ್ಲ. ಇದು ಶರಣಾಗತಿಯ ಪ್ಯಾಕೇಜ್ ಆಗಿರುವುದು ಇದಕ್ಕೆ ಪ್ರಮುಖ ಕಾರಣವಾಗಿತ್ತು. ನಾನು ಮುಖ್ಯವಾಹಿನಿಗೆ ಬಂದಾಗ 4 ಪ್ರಕರಣಗಳಿದ್ದವು. ಇಲ್ಲಿ ಲತಾ ಮೇಲೆ 87ಕ್ಕೂ ಹೆಚ್ಚಿನ ಕೇಸುಗಳಿದ್ದವು, ಜಯಣ್ಣನ ಮೇಲೆ 57, ವನಜಾಕ್ಷಿ ಮೇಲೆ 76 ಕೇಸುಗಳು ಇದ್ದವು. ಇವುಗಳಿಂದ ಹೊರಬರಬೇಕಾದರೆ ಸರಕಾರದ ಬಲವಾದ ಇಚ್ಛಾಶಕ್ತಿಯಿಲ್ಲದೆ ಇದೆಲ್ಲಾ ಆಗುವುದಿಲ್ಲ.

ವಿಕ್ರಂಗೌಡರ ಇತ್ತೀಚಿನ ಒಂದು ವೀಡಿಯೋ ವೈರಲ್ ಆಗಿತ್ತು. ಅದನ್ನು ನೀವೆಲ್ಲಾ ಗಮನಿಸಿರಬಹುದು. ಅದರಲ್ಲಿ ವಿಕ್ರಂ ಗೌಡ ’ನಾವು ಶರಣಾಗತರಾಗಲು ಸಾಧ್ಯವಿಲ್ಲ. ಬೇಕಾದರೆ ನಾವು ಸಾಯಲು ಸಿದ್ಧವಿದ್ದೇವೆಯೇ ಹೊರತು ಶರಣಾಗತರಾಗಲ್ಲ’ ಎಂದು. ಶಾಂತಿಗಾಗಿ ನಾಗರಿಕ ವೇದಿಕೆ ಮತ್ತೆ ಸಕ್ರಿಯಗೊಂಡಿದ್ದು ನಕ್ಸಲ್ ವಿಕ್ರಂ ಗೌಡರ ಹತ್ಯೆಯ ನಂತರ. ಅಲ್ಲಿಯವರೆಗೂ ನಾನು ಮತ್ತು ಸಿರಿಮನೆ ನಾಗರಾಜ್ ಶಾಂತಿಗಾಗಿ ನಾಗರಿಕರ ವೇದಿಕೆಯ ಭಾಗವಾಗಿರಲಿಲ್ಲ. ನಂತರ ನಾವು ಸೇರಿಕೊಂಡು ಅಂದರೆ ಹಳೆಯ ಸದಸ್ಯರು ಹೊಸ ಸದಸ್ಯರು ಸೇರಿಕೊಂಡು ಒಂದು ಪತ್ರಿಕಾಗೋಷ್ಠಿಯನ್ನು ನಡೆಸಿದೆವು. ನವೆಂಬರ್ 18ರಂದು ವಿಕ್ರಂ ಗೌಡರ ಎನ್‌ಕೌಂಟರ್ ಆಗುತ್ತದೆ. ನಾವು ನವೆಂಬರ್ 20ರಂದು ಪತ್ರಿಕಾಗೋಷ್ಠಿಯನ್ನು ನಡೆಸಿದೆವು. ಅಲ್ಲಿ ನಾವು ಸರಕಾರದ ಕ್ರಮವನ್ನು ಹೃದಯಹೀನ ನೀತಿ ಎಂದು ಖಂಡನೆ ಮಾಡಿದೆವು. ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಯವರ ಹೇಳಿಕೆಯನ್ನೂ ಖಂಡಿಸಿದೆವು. ಇಷ್ಟು ಮಾತ್ರವಲ್ಲ, ಸರಕಾರದ ಮೇಲೆ ಒತ್ತಡ ತರುವುದಕ್ಕಾಗಿ ಶಾಂತಿಗಾಗಿ ನಾಗರಿಕರ ವೇದಿಕೆಯ ವತಿಯಿಂದ ಒಂದು ನಿಯೋಗ ಹೋಗಿ ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಿತು. ಈ ನಿಯೋಗದಲ್ಲಿ ಬಿ.ಟಿ.ಲಲಿತಾ ನಾಯಕ್, ಎನ್.ವೆಂಕಟೇಶಣ್ಣ, ವಿ.ಎಸ್.ಶ್ರೀಧರ್, ನಗರಗೆರೆ ರಮೇಶ್, ತಾರಾ ರಾವ್, ಸಿರಿಮನೆ ನಾಗರಾಜ್ ಇನ್ನು ಮುಂತಾದವರು ಹೋಗಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿತು. ಈ ಮಾತುಕತೆ ನಡೆದಿದ್ದು ಡಿಸೆಂಬರ್ 1ರಂದು. ನಿಯೋಗವು, ’ಈ ಎನ್‌ಕೌಂಟರ್ ಪರಂಪರೆಯನ್ನು ಮುಂದುವರಿಸಬೇಡಿ, ನೀವು ಮಾಡಿದ್ದು ಸರಿಯಿಲ್ಲವೆಂದು’ ಹೇಳಿತು. ’ನಕ್ಸಲರು ಕಾನೂನುಬಾಹಿರವಾಗಿ ಬಂದೂಕು ಹಾಕಿಕೊಂಡು ಓಡಾಡುತ್ತಿದ್ದರೆ ನಾವೇನು ಮಾಡಲು ಸಾಧ್ಯ, ಸರಕಾರ ಸುಮ್ಮನೆ ಕೂರಲು ಸಾಧ್ಯವಿಲ್ಲ’ ಎಂದು ಮುಖ್ಯಮಂತ್ರಿ ಹೇಳಿದರು. ಅದಕ್ಕೆ ನಿಯೋಗವು, ’ನೀವು ಮುಖ್ಯವಾಹಿನಿಗೆ ಕರೆದುಕೊಂಡು ಬರುವ ಪ್ರಯತ್ನವನ್ನು ಮೊದಲು ಮಾಡಿದ್ದೀರಲ್ಲ ಈಗಲೂ ಹಾಗೆ ಮಾಡಿ. ನಕ್ಸಲರಿಗೊಂದು ಅವಕಾಶ ಮಾಡಿಕೊಡಿ, ನಾವು ಪ್ರಯತ್ನ ಮಾಡುತ್ತೇವೆ’ ಎಂದು ಹೇಳಿತು. ’ನೀವು ನಿಮ್ಮ ಪ್ರಯತ್ನವನ್ನು ಮಾಡಿ, ಸರಕಾರದಿಂದ ದೊರೆಯುವ ಸಹಕಾರ ಸಿಗುತ್ತದೆ’ ಎಂದು ಮುಖ್ಯಮಂತ್ರಿ ಹೇಳಿದರು.

ಇದರ ನಂತರ ಚಿಕ್ಕಮಗಳೂರಿನಲ್ಲಿ ಅನೇಕ ಸಂಘಟನೆಗಳು- ಅವುಗಳೆಂದರೆ ಜನಶಕ್ತಿ, ದಲಿತ ಸಂಘರ್ಷ ಸಮಿತಿ, ರೈತ ಸಂಘಟನೆಗಳು, ಆದಿವಾಸಿ ಸಂಘಟನೆಗಳು ಮತ್ತು ಅನೇಕ ಪ್ರಗತಿಪರರು ಇದ್ದಾರೆ- ಇವರಿಗೆಲ್ಲಾ ನಕ್ಸಲರು ನಿಮ್ಮ ಸಂಪರ್ಕಕ್ಕೆ ಬಂದರೆ ಶಾಂತಿಗಾಗಿ ನಾಗರಿಕರ ವೇದಿಕೆ ಜೊತೆ ಮುಖ್ಯವಾಹಿನಿ ಬರುವ ಕುರಿತು ಒಂದು ಸಾರಿ ಮಾತುಕತೆ ನಡೆಸಲು ಹೇಳಿ ಎಂದು ಕೇಳಿಕೊಂಡಿದ್ದೆವು. ಅದರಲ್ಲಿ ಮುಖ್ಯವಾಗಿ ಮಾತುಕತೆ ನಡೆಸಿ ಎಂಬುದಾಗಿತ್ತು. ಮುಖ್ಯವಾಹಿನಿಯ ವಿಚಾರವನ್ನು ಒಪ್ಪಿಕೊಳ್ಳುವುದು ಅಥವಾ ಒಪ್ಪಿಕೊಳ್ಳದೇ ಇರುವುದು ಅವರಿಗೆ ಬಿಟ್ಟದ್ದು ಎಂದು ಹೇಳಿದೆವು. ಡಿಸೆಂಬರ್ ಎರಡನೆ ವಾರದ ಹೊತ್ತಿಗೆ ನಕ್ಸಲರು ಅಲ್ಲಿನ ಸಂಘಟನೆಯ ಕಾರ್ಯಕರ್ತರ ಸಂಪರ್ಕಕ್ಕೆ ಬಂದಿದ್ದಾರೆ. ಸಾಕಷ್ಟು ಮಾತುಕತೆ ನಡೆದಿದೆ. ಯೋಚಿಸಿ ಹೇಳುತ್ತೇವೆ ಎಂದು ನಕ್ಸಲರು ಹೇಳಿದ್ದಾರೆ. ಇದಾದನಂತರ ಅಂದರೆ ಡಿಸೆಂಬರ್ 18ರ ಹೊತ್ತಿಗೆ ಆದಿವಾಸಿ ಹಿರಿಯ ಮಹಿಳೆ ಗೌರಮ್ಮ ಎಂಬವರ ಕೈಯ್ಯಲ್ಲಿ ಮೆಸೇಜ್ ಒಂದನ್ನು ನಮ್ಮ ಕಾರ್ಯಕರ್ತರಿಗೆ ಕಳುಹಿಸುತ್ತಾರೆ. ಈ ಹಿಂದೆ ಯಾರ ಜೊತೆ ಗಂಭೀರ ಚರ್ಚೆ ನಡೆಯಿತೋ ಅವರಿಗೆ ಚೀಟಿಯನ್ನು ಕಳುಹಿಸುತ್ತಾರೆ. ನಾವು ಮಾತುಕತೆಗೆ ಸಿದ್ಧರಿದ್ದೇವೆ. ಶಾಂತಿಗಾಗಿ ನಾಗರಿಕರ ವೇದಿಕೆಗೆ ಬರಲು ಹೇಳಿ ಎಂದು ಆ ಚೀಟಿಯಲ್ಲಿ ಇರುತ್ತದೆ.

ಇದನ್ನೂ ಓದಿ: ಈಡೇರದ ಸರ್ಕಾರದ ಭರವಸೆ: 8 ವರ್ಷದಿಂದ ಜೈಲಿನಲ್ಲಿ ಕೊಳೆಯುತ್ತಿರುವ ನಕ್ಸಲರು

ನಾವು ಮಾತುಕತೆಗೆ ಹೋಗಬೇಕಾಗಿತ್ತು. ನಾವು ಹೋಗುವ ಮೊದಲು ಸರಕಾರದ ಗ್ಯಾರಂಟಿ ಇಲ್ಲದೆ ನಾವು ಮಾತುಕತೆಗೆ ಹೋಗಿ ಏನು ಮಾಡುವುದು? ಹಾಗಾಗಿ ಗುಪ್ತಚರ ಇಲಾಖೆಯ ಮುಖ್ಯಸ್ಥರಾದ ಹೇಮಂತ್ ನಿಂಬಾಳ್ಕರ್ ಅವರನ್ನು ಮತ್ತು ಮುಖ್ಯಮಂತ್ರಿಯವರನ್ನು ಭೇಟಿ ಮಾಡುತ್ತೇವೆ. ಅವರ ಜೊತೆ ಸಾಕಷ್ಟು ಚರ್ಚೆ ಮಾಡುತ್ತೇವೆ. ಇಲ್ಲಿ ಸರಕಾರದ ಸಮಿತಿಯ ಜೊತೆ ಯಾವುದೇ ಮಾತುಕತೆ ನಡೆಸಲಿಲ್ಲ. ಇದೊಂದು ತಾಂತ್ರಿಕ ಸಮಸ್ಯೆಯಾಗಿರುವುದರಿಂದ ನಾವು ನಡೆಸಲಿಲ್ಲ. ’ಅವರು ಬಂದನಂತರ ಜೈಲಿನಲ್ಲಿ ಕೊಳೆಯುವ ಹಾಗೆ ಆಗಬಾರದು, ಬಂದ ನಂತರ ಹೋರಾಟ ಮಾಡುವಂತಾಗಬೇಕು. ಇದಕ್ಕೆ ಅವಕಾಶವಿದೆಯೇ’ ಎಂಬುದು ನಮ್ಮ ಪ್ರಶ್ನೆಯಾಗಿತ್ತು. ಅವರನ್ನು ಅಲ್ಲಿಂದ ಕರೆದುಕೊಂಡು ಬಂದು ಜೀವನಪೂರ್ತಿ ಕೊಳೆಸುವಂತಾಗಬಾರದು. ಇದೊಂದು ರೀತಿಯ ಅಪರಾಧವಾಗುತ್ತದೆ. ಕಾನೂನು ಪ್ರಕ್ರಿಯೆ ನಡೆಯುತ್ತಾ ಇರಲಿ. ಇದಕ್ಕೂ ಮೊದಲು ಅವರು ಜಾಮೀನು ಪಡೆದು ಹೊರಗೆ ಬರಲು ಅವಕಾಶ ಕೊಡಿ. ಇಲ್ಲವೆಂದರೆ ನಾವು ನಕ್ಸಲರ ಜೊತೆ ಮಾತುಕತೆಗೆ ಯಾವ ಮುಖವಿಟ್ಟುಕೊಂಡು ಹೋಗಲಿಕ್ಕೆ ಸಾಧ್ಯ. ಈ ಅಪರಾಧವನ್ನು ನಮ್ಮ ಕೈಯಿಂದ ಮಾಡಿಸಬೇಡಿ ಎಂಬುದು ನಮ್ಮ ಮಾತುಕತೆಯ ಸಾರಾಂಶವಾಗಿತ್ತು.

’ನಕ್ಸಲರೇ ಬರುತ್ತಿರುವುದರಿಂದ ನಾವು ವಿರೋಧ ಮಾಡುವುದಿಲ್ಲ. ಯಾರೂ ಕೂಡ ಕಟು ನಿಲುವು ತೆಗೆದುಕೊಳ್ಳುವುದಿಲ್ಲ’ ಎಂದು ಈ ಇಬ್ಬರು ಹೇಳಿದರು. ನಮ್ಮ ಗ್ಯಾರಂಟಿಗೋಸ್ಕರ ಮುಖ್ಯಮಂತ್ರಿಗಳು ಒಂದು ಹೇಳಿಕೆ ಕೊಡಬೇಕು ಎಂದೆವು. ಡಿಸಿಎಂ, ಗೃಹ ಸಚಿವರ ಜೊತೆ ಮಾತನಾಡಿದ ಸಿಎಂ ಅವರು ಡಿಸೆಂಬರ್ 29ರಂದು ಹೇಳಿಕೆ ಕೊಡುತ್ತಾರೆ. ಜನವರಿ 2ರಂದು ಕಾಡಿಗೆ ಹೋಗಿ ಮಾತುಕತೆ ನಡೆಸುತ್ತೇವೆ. ಈ ಮಾತುಕತೆ ಸಂದರ್ಭದಲ್ಲಿ ಸರಕಾರಿ ಸಮಿತಿಯಾದ ಶರಣಾಗತಿ ಮತ್ತು ಪುನರ್ವಸತಿ ಸಮಿತಿ ಜೊತೆ ಮಾತನಾಡಿ ಅವರಲ್ಲಿ ಒಬ್ಬರಾದ ಕೆ.ಪಿ.ಶ್ರೀಪಾಲ್ ಅವರು ನಮ್ಮ ಜೊತೆ ಮಾತುಕತೆಗೆ ಬರುತ್ತಾರೆ. ಅಲ್ಲಿಗೆ ಹೋದಾಗ ಇದು ಅಷ್ಟು ಸುಲಭವಾಗಿ ಬಗೆಹರಿಯುವಂತದ್ದಾಗಿರಲಿಲ್ಲ. ಮುಖ್ಯ ವಿಚಾರ ಏನೆಂದರೆ ಶರಣಾಗತಿ ಪ್ಯಾಕೇಜ್ ಅಡಿಯಲ್ಲಿ ಬಂದರೆ ನಾವು ನಮ್ಮ ಸಂಘಟನೆ, ಸಿದ್ಧಾಂತದ ವಿರುದ್ಧ ಮಾತನಾಡಬೇಕು. ನಮ್ಮ ಸಂಪರ್ಕಗಳನ್ನು ಹೇಳಬೇಕು. ಹೊರಗೆ ಬಂದು ಜೀವನದಲ್ಲಿ ಸೆಟ್ಲ್ ಆಗಬೇಕು. ಇದೆಲ್ಲಾ ಆಗುವುದಿಲ್ಲವೆಂಬುದು ನಕ್ಸಲರ ವಾದವಾಗಿತ್ತು. ನೀವುಗಳು ಏನು ಪ್ರಜಾತಾಂತ್ರಿಕವಾಗಿ ಹೋರಾಟ ಮಾಡುತ್ತಿದ್ದೀರೋ ಅದು ಸರಿಯಾದದ್ದು; ನಾವು ಕೂಡ ಹಾಗೆಯೇ ಮಾಡಬೇಕು. ಇದಕ್ಕೆ ಸರಕಾರದ ಕಡೆಯಿಂದ ಅವಕಾಶವಿದೆಯೇ ಎಂಬುದು ಅವರ ಪ್ರಶ್ನೆಯಾಗಿತ್ತು. ’ಅವಕಾಶವಿಲ್ಲವೆಂದರೆ ನಾವು ಏಕೆ ಬರಬೇಕು. ಪರವಾಗಿಲ್ಲ. ನಾವು ಹೋರಾಟ ಮಾಡುತ್ತಲೇ ಸಾವನ್ನಪ್ಪುತ್ತೇವೆ. ಇದರಿಂದ ನಾವು ಘನತೆಯುತವಾಗಿ ಸಾಯುತ್ತೇವೆ. ಹೊರಗೆ ಬಂದು ಮಂಡಿಯೂರುವುದಕ್ಕೆ ಸಾಧ್ಯವಿಲ್ಲ’ ಎಂಬುದು ಅವರ ವಾದವಾಗಿತ್ತು.

ಆಗ ನಾವು 2014ರ ನಂತರ ರಾಜ್ಯದಲ್ಲಿ ನಡೆದ ಪ್ರಕ್ರಿಯೆಯನ್ನು ವಿವರಿಸಿ ಹೇಳುತ್ತೇವೆ. ಈ ಕುರಿತು ಅವರಿಗೆ ಯಾವುದೇ ಮಾಹಿತಿ ಇರುವುದಿಲ್ಲ. ಅಷ್ಟರಲ್ಲಾಗಲೇ ಅವರು ಕೇರಳಕ್ಕೆ ತೆರಳಿರುತ್ತಾರೆ. ಇಡೀ ತಂಡ ಸುಮಾರು 10 ವರ್ಷಗಳ ಕಾಲ ಕೇರಳದಲ್ಲಿಯೇ ಇತ್ತು. ಕಳೆದ 4-5 ತಿಂಗಳ ನಂತರ ಅವರು ಕರ್ನಾಟಕಕ್ಕೆ ವಾಪಸ್ಸು ಬಂದಿರುವುದು. ಇದೆಲ್ಲಾ ಮನವರಿಕೆಯಾದ ನಂತರ ಅವರು ಗ್ಯಾರಂಟಿ ಬೇಕು ಎಂದು ಕೇಳುತ್ತಾರೆ. ಅದಕ್ಕೆ ನೀವೊಂದು ಪತ್ರ ಬರೆದುಕೊಡಿ ಎಂದು ನಾವು ಕೇಳುತ್ತೇವೆ. ಅವರೊಂದು ಪತ್ರ ಬರೆದುಕೊಡುತ್ತಾರೆ. ’ಒಂದು ನಮ್ಮನ್ನು ಘನತೆಯುತವಾಗಿ ಬರಮಾಡಿಕೊಳ್ಳಬೇಕು. ಎರಡನೆಯದು ಮುಂದಿನ ಹೋರಾಟದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಬೇಕು. ಮೂರನೆಯದು ಜೈಲಿನಲ್ಲಿಯೇ ಇದ್ದು ಕೊಳೆಯುವಂತೆ ಆಗಬಾರದು’- ಇವು ಬಹಳ ಮುಖ್ಯವಾದ ಅವರ ಬೇಡಿಕೆಗಳಾಗಿದ್ದವು. ನಂತರ ಜನರ ಬದುಕಿಗೆ ಸಂಬಂಧಿಸಿದ 18 ಬೇಡಿಕೆಗಳು ಇರುತ್ತವೆ. ನಾವು ಕಳೆದ 25 ವರ್ಷಗಳಿಂದ ಮಲೆನಾಡಿನ ಮೂಲಭೂತ ಹಕ್ಕೊತ್ತಾಯಗಳೇನನ್ನು ಇಟ್ಟಿದ್ದೇವೋ ಅವೇ ಬೇಡಿಕೆಗಳನ್ನು ಅವರು ಇಟ್ಟಿದ್ದು. ಇಷ್ಟಾದರೂ ದೊಡ್ಡ ಬದಲಾವಣೆಗಳು ಬಂದಿಲ್ಲ. ಇವತ್ತಿಗೂ ಕೂಡ ನಮ್ಮನ್ನು ಎತ್ತಂಗಡಿ ಮಾಡುತ್ತಾರೆಂಬ ಆತಂಕದಲ್ಲಿ ಆದಿವಾಸಿಗಳು ಇದ್ದಾರೆ. ಈಗಲೂ ಕೂಡ ಕಸ್ತೂರಿ ರಂಗನ್ ವರದಿ ಬರುತ್ತದೆ, ಗಾಡ್ಗಿಲ್ ವರದಿ ಬರುತ್ತದೆ, ಒತ್ತುವರಿ ತೆರವಿನ ಹೆಸರಿನಲ್ಲಿ ಬರುವ ಆತಂಕ ತಪ್ಪಿಲ್ಲ. ಅಲ್ಲಿನ ಬೆಳೆಗಳಾದ ಅಡಿಕೆ, ಕಾಫಿ ಮುಂತಾದವುಗಳಿಗೆ ಬರುವ ಕೊಳೆರೋಗಗಳಿಂದ ರೈತರಿಗೆ ಮುಕ್ತಿ ಸಿಕ್ಕಿಲ್ಲ. ಇವುಗಳನ್ನೆಲ್ಲಾ ಮಾಯಮಂತ್ರ ಮಾಡಿ ಬಗೆಹರಿಸಿ ಎಂದು ನಾವು ಹೇಳುತ್ತಿಲ್ಲ. ಆದರೆ ಇದಕ್ಕೊಂದು ವಿಶೇಷ ಸಮಿತಿ ರಚನೆಯಾಗಬೇಕು, ವಿಶೇಷ ಪ್ರಯತ್ನ ನಡೆಯಬೇಕು. ಸರಕಾರ ಈ ಎರಡು ವಿಷಯಗಳಿಗೆ ಒಪ್ಪುವುದಾದರೆ ನಾವು ಮುಖ್ಯವಾಹಿನಿಗೆ ಬರಲು ಸಿದ್ಧವೆಂದು ಅವರು ಹೇಳುತ್ತಾರೆ.

ವಿಕ್ರಂ ಗೌಡ

ಅಲ್ಲಿಂದ ನಾವು ಬಂದನಂತರ ಮುಖ್ಯಮಂತ್ರಿ ಜೊತೆ ಮತ್ತು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮತ್ತೆ ಮಾತುಕತೆ ನಡೆಯುತ್ತದೆ. ’ಅಲ್ಲಿಯ ಜನರ ಸಮಸ್ಯೆ ಬಗೆಹರಿಸಲು ವಿಶೇಷ ಗಮನ ಕೊಡುತ್ತೇವೆ. ಅದೇ ಸಂದರ್ಭದಲ್ಲಿ ಅವರು ಹೊರಬಂದನಂತರ ಅವರು ಘನತೆಯಿಂದಲೇ ನಡೆಸಿಕೊಳ್ಳುತ್ತೇವೆ. ಅವರನ್ನು ಅಪರಾಧಿಗಳಾಗಿ ಅಲ್ಲ ಹೋರಾಟಗಾರರನ್ನಾಗಿ ಬರಮಾಡಿಕೊಳ್ಳೋಣ’ ಎನ್ನುತ್ತಾರೆ. ಇದಾದ ನಂತರ ಎರಡನೇ ಸುತ್ತು ಮಾತುಕತೆಗೆ ಮತ್ತೆ ಹೋಗುತ್ತೇವೆ. ಹೋಗುವಾಗ ಎರಡು ಸಮಸ್ಯೆ ಇದ್ದವು- ನಮ್ಮ ಸಮಿತಿಯಲ್ಲಿ ಕೆಲವರಿಗೆ ಕಡಿದಾದ ಬೆಟ್ಟಗುಡ್ಡಗಳಲ್ಲಿ ನಡೆದಾಡಲು ಕಷ್ಟವಿತ್ತು. ಅವರನ್ನು ಗಡಿ ಭಾಗಕ್ಕೆ ಬರಲು ಹೇಳುವುದು ಸ್ವಲ್ಪ ಸಮಸ್ಯೆ ಇತ್ತು. ಹಾಗಾಗಿ ವೆಂಕಟೇಶ್-ರಾಧಾ, ರವಿ-ಲಲಿತ, ಗುರುಮೂರ್ತಿ-ಭಾಗ್ಯ ಎಂಬ ಮೂರು ಕುಟುಂಬಗಳಿಗೆ, ಮುಖ್ಯವಾಹಿನಿಗೆ ಬರುತ್ತಿರುವವರಿಗೆ ರಕ್ಷಣೆ ಕೊಡಬೇಕು ಎಂದು ಕೇಳಿಕೊಂಡಾಗ ಅದರ ತಾಪತ್ರಯದ ಜವಾಬ್ದಾರಿಯನ್ನು ಈ ಮೂರು ಕುಟುಂಬಗಳು ತೆಗೆದುಕೊಳ್ಳುತ್ತವೆ. ಇವರ ಸಹಕಾರವಿಲ್ಲದೆ ಹೋಗಿದ್ದರೆ ಇದೆಲ್ಲಾ ಸಾಧ್ಯವಿರಲಿಲ್ಲ. 3ನೇ ತಾರೀಖು ಬೆಳಗ್ಗೆ 8ರಿಂದ ಸಂಜೆ 7ರವರೆಗೆ ನಿರಂತರ ಮಾತುಕತೆ ನಡೆಯುತ್ತದೆ. ಊಟ ಮಾಡುತ್ತಲೇ 11 ಗಂಟೆ ನಿರಂತರ ಮಾತುಕತೆ ನಡೆಯುತ್ತದೆ. ಒಂದೊಂದು ವಿಷಯಕ್ಕೂ ಸಂಬಂಧಿಸಿದಂತೆ ವಿವರಿಸಿ ಹೇಳಿದೆವು. ಜೊತೆಗೆ ಕೆಲವು ಸಮಸ್ಯೆಗಳನ್ನು ಹೇಳಿದೆವು. ’ಇಂದು ಇರುವ ಸಕಾರಾತ್ಮಕ ಪರಿಸ್ಥಿತಿ ಮುಂದೆ ಇರದೇ ಹೋಗಬಹುದು; ಸರಕಾರವೆಂದರೆ ಸರಕಾರವೇ’ ಎಂದು ವಿವರಿಸಿದೆವು. ’ನ್ಯಾಯಾಲಯದಲ್ಲಿ ನಿಮಗೆ ಜಾಮೀನು ನೀಡುವಾಗ ಬಲಪಂಥೀಯ ನ್ಯಾಯಮೂರ್ತಿ ಸಿಕ್ಕರೆ ಪರಿಸ್ಥಿತಿ ವ್ಯತಿರಿಕ್ತವಾಗುತ್ತದೆ. ಸರಕಾರವೂ ಏನೂ ಮಾಡದೆ ಇರುವ ಪರಿಸ್ಥಿತಿ ಬರಬಹುದು’ ಎಂಬುದನ್ನು ಅವರಿಗೆ ಮನವರಿಕೆ ಮಾಡಿದೆವು. ನಮ್ಮ ಬಲವಂತ ಏನೂ ಇಲ್ಲ. ನಿಮ್ಮ ವೈಯಕ್ತಿಕ ತೀರ್ಮಾನ ಹೇಳಬೇಕು ಎಂದೆವು. ಆಗ ಅವರು ನೀವೆಲ್ಲಾ ಸೇರಿದಂತೆ ರಾಜ್ಯದ ಜನ ನಮ್ಮ ಬಗ್ಗೆ ಕಾಳಜಿ ವಹಿಸುತ್ತಿರುವುದು ತುಂಬಾ ಸಂತೋಷ. ಈಗ ದೇಶದಲ್ಲಿ ಬರುತ್ತಿರುವ ಬದಲಾವಣೆಗಳು, ಕಾಡಿನಲ್ಲಿರುವ ನಮ್ಮ ಪರಿಸ್ಥಿತಿ ಗಮನಿಸಿ- ಎಲ್ಲ ಕಡೆ ರಿಸ್ಕ್ ಇದೆ; ಕಾಡಿನಲ್ಲಿ ಇದ್ದರೂ ರಿಸ್ಕ್, ನಾಡಿಗೆ ಬಂದರೂ ರಿಸ್ಕ್- ನಿಮ್ಮ ಮಾತಿನಲ್ಲಿ ವಿಶ್ವಾಸವಿಟ್ಟು ನಾವು ಬರುತ್ತೇವೆ ಎಂದರು.

ಅಲ್ಲಿಂದ ನಾವು ಬಂದನಂತರ ಗುಪ್ತಚರ ಇಲಾಖೆಯ ಅಧಿಕಾರಿ ಜೊತೆ ಈ ಎಲ್ಲ ವಿಚಾರಗಳನ್ನು ಮಾತನಾಡುತ್ತೇವೆ. ವಿಕ್ರಂ ಗೌಡ ಎನ್‌ಕೌಂಟರ್ ಕುರಿತ ಚರ್ಚೆ ನಡುವೆ ಒಪ್ಪಂದಕ್ಕೆ ಬರಲಾಗುವುದಿಲ್ಲ. ಆ ವಿಚಾರವಾಗಿ ನಾಗರಿಕ ಸಮಾಜವಾಗಿ ನಾವು ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ. ಇದನ್ನು ಕಂಡಿಷನ್ ರೀತಿಯಲ್ಲಿ ಹಾಕುವುದು ಬೇಡ ಎಂದಾಗುತ್ತದೆ. ಕೇರಳ ಸರಕಾರದ ಜೊತೆ ಮಾತುಕತೆ ಸ್ವಲ್ಪ ಜಟಿಲವಾಗಿತ್ತು. ಹೇಮಂತ್ ಅವರು ಅವತ್ತು ರಾತ್ರಿಯೇ ಕೇರಳ ಗುಪ್ತಚರ ಇಲಾಖೆಯ ಮುಖ್ಯಸ್ಥರೊಂದಿಗೆ ಮಾತನಾಡುತ್ತಾರೆ. ಅವರು ನಿಮ್ಮ ನಿಲುವಿಗೆ ಪೂರಕವಾಗಿರುತ್ತೇವೆ ಮುಂದುವರಿಸಿ ಎನ್ನುತ್ತಾರೆ. ಈ ಮಧ್ಯೆ ನಾವು ಒಂದು ವಾರದ ಸಮಯವನ್ನು ಕೇಳಿದೆವು. ಯಾಕೆಂದರೆ ತಂಡದಲ್ಲಿ ಒಬ್ಬರು ತಪ್ಪಿಸಿಕೊಂಡಿದ್ದರು. ಆದರೆ ಇದನ್ನು ಮುಂದೂಡುತ್ತಾ ಹೋದರೆ ಮುಂದೆ ಮತ್ತೆ ಯಾವ ಸಮಸ್ಯೆ ಬರುತ್ತವೋ ಏನೋ ಅವನ್ನೆಲ್ಲಾ ಬಗೆಹರಿಸಲು ಆಗುವುದಿಲ್ಲ. ಮುಂದುವರಿಯಿರಿ, ಬೇಗನೆ ಪ್ರಕ್ರಿಯೆಯನ್ನು ಮುಂದುವರಿಸಿ ಎಂದು ಸರಕಾರದ ಕಡೆಯಿಂದ ಹೇಳಲಾಗುತ್ತದೆ. ಪರಿಸ್ಥಿತಿಗಳು ಬೇರೆ ಇದ್ದವು; ನಕ್ಸಲರು ರಿಸ್ಕಿ ಪ್ರದೇಶದಲ್ಲಿ ಉಳಿದಿದ್ದರು. ಇದು ಸಮಸ್ಯೆಯಾಗುತ್ತದೆ ಎಂದು ನಾವು ಪ್ರಕ್ರಿಯೆಯನ್ನು ಮುಂದುವರಿಸಿದೆವು. ಮೊದಲ ಬಾರಿ ಮಾತುಕತೆಗೆ ಹೋಗುವ ಮುಂಚೆಯೇ ಕೂಂಬಿಂಗ್ ನಿಲ್ಲಿಸಲಾಗಿತ್ತು. ಈ ಕುರಿತು ಮಾತುಕತೆ ಕೂಡ ಆಗಿತ್ತು.

6ನೇ ತಾರೀಖು ಮತ್ತೆ ಕಾಡಿಗೆ ಹೋಗಿ ಚರ್ಚೆ ಮಾಡುತ್ತೇವೆ. ಜ.7ರಂದು 12ಗಂಟೆಗೆ ಕಾಡಿನಿಂದ ವಾಪಸ್ಸು ಬಂದು ಅಧಿಕಾರಿಗಳಿಗೆ ಗ್ರೀನ್‌ಸಿಗ್ನಲ್ ಕೊಡುತ್ತೇವೆ. ಕೊನೆ ಬಾರಿ ಹೋದಾಗ ನಕ್ಸಲ್ ಶರಣಾಗತಿಯ ಎಲ್ಲ ಸದಸ್ಯರು ಬರುತ್ತಾರೆ. ಅಂದರೆ ನಾಗರಿಕ ಸಮಿತಿಯ ಮೂರು ಜನ ಸದಸ್ಯರು ಬರುತ್ತಾರೆ. ಜ. 8ರ ಬೆಳಿಗ್ಗೆ ಕಾಡಿಗೆ ಹೋಗುತ್ತೇವೆ. ಇಲ್ಲಿಯವರೆಗೆ ಹೋರಾಟದಲ್ಲಿ ಮಡಿದವವರಿಗೆ ಅಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ. ಅಲ್ಲಿ ಅವರ ರಕ್ಷಣೆಗಾಗಿ 30 ಜನ ಮಲೆನಾಡಿನ ಯುವಕರು ಇರುತ್ತಾರೆ. ಅವರನ್ನು ಹೊರಗೆ ಕರೆದುಕೊಂಡು ಬರುತ್ತೇವೆ. ಚಿಕ್ಕಮಗಳೂರಿನಲ್ಲಿನ ಮುಖ್ಯವಾಹಿನಿಯ ಕಾರ್ಯಕ್ರಮ ಬೆಂಗಳೂರಿಗೆ ವರ್ಗಾವಣೆಯಾಗುತ್ತದೆ. ನಕ್ಸಲರನ್ನು ಸ್ವಾಗತಿಸಲು ಬಂದಿದ್ದ ಜನರನ್ನು ಪೊಲೀಸರೇ ತಮ್ಮ ವಾಹನಗಳಲ್ಲಿ ಬೆಂಗಳೂರಿಗೆ ಕರೆದುಕೊಂಡು ಬರುತ್ತಾರೆ. ನಕ್ಸಲೈಟರ ಬಿಗಿಭದ್ರತೆಯ ಕಾರಣಕ್ಕಾಗಿ 30-40 ವಾಹನಗಳು ಜೀರೋ ಟ್ರಾಫಿಕ್‌ನ ಶರವೇಗದಲ್ಲಿ ಬಂದು ನಾವು ಒಂದು ರೀತಿ ಅನುಭೂತಿಯನ್ನು ಪಡೆದೆವು.

ನಕ್ಸಲರು ಮಾಧ್ಯಮದ ಮುಂದೆ ಬರುವ ಮೊದಲು, ಮುಖ್ಯಮಂತ್ರಿ ಮತ್ತು ಇಡೀ ಮಂತ್ರಿಮಂಡಲದ ಜೊತೆ ನಕ್ಸಲರ ಸಭೆ ನಡೆಯುತ್ತದೆ. ಅಲ್ಲಿ ಅರಣ್ಯ ಸಚಿವರು, ಕಾನೂನು ಮಂತ್ರಿಗಳು, ಉನ್ನತ ಅಧಿಕಾರಿಗಳು, ನಮ್ಮ ಎರಡೂ ಸಮಿತಿಯ ಸದಸ್ಯರು ಇರುತ್ತಾರೆ. ಇದನ್ನೆಲ್ಲಾ ಮುಖ್ಯಮಂತ್ರಿಯವರೇ ವ್ಯವಸ್ಥೆ ಮಾಡುತ್ತಾರೆ. ನಕ್ಸಲರು ಏನು ಹೇಳುತ್ತಾರೆ ಎಂಬುದನ್ನು ಮುಖ್ಯಮಂತ್ರಿಯೇ ಕೇಳಿಸಿಕೊಳ್ಳುವುದಕ್ಕೆ ಕಾತುರರಾಗಿರುತ್ತಾರೆ. ಆಗ ಲತಾ ಅವರು ಅರ್ಧ ಗಂಟೆ ಬಹಳ ಅದ್ಭುತವಾಗಿ ಮಾತನಾಡಿದರು. ಮಾತನಾಡಿದರು ಎನ್ನುವುದಕ್ಕಿಂತ ಸರಕಾರಕ್ಕೆ ಪ್ರಶ್ನೆಗಳನ್ನು ಕೇಳಿದರು. ನಮ್ಮ ಪರಿಸ್ಥಿತಿ ಯಾಕೆ ಹೀಗೆ ಇದೆ- ಮಾತೆತ್ತಿದರೆ ಎತ್ತಂಗಡಿ, ಎತ್ತಂಗಡಿ- ನ್ಯಾಷನಲ್ ಪಾರ್ಕ್ ವಿಚಾರವನ್ನು ತರದೆ ಹೋಗಿದ್ದರೆ ನಾವೇಕೆ ನಕ್ಸಲ್ ಹೋರಾಟವನ್ನು ಕಟ್ಟುತ್ತಿದ್ದೆವು- ನಮ್ಮ ಮನೆಗಳಿಗೆ, ಭೂಮಿಗೆ ಹಕ್ಕುಪತ್ರಗಳಿಲ್ಲ- ಅರಣ್ಯ ಇಲಾಖೆಯಲ್ಲಿ ಮಾತನಾಡಿದರೆ, ಕಂದಾಯ ಇಲಾಖೆ ಮೇಲೆ ಹೇಳುತ್ತೀರಿ- ಅಲ್ಲಿ ಹೋಗಿ ಮಾತನಾಡಿದರೆ ಮತ್ತೊಂದು ಇಲಾಖೆ ಮೇಲೆ ಹೇಳುತ್ತೀರಿ- ನಾವು ಎಲ್ಲಾ ಪಕ್ಷಗಳನ್ನು ನೋಡಿದ್ದೀವಿ- ಬಿಜೆಪಿ ಬಂದಾಗಲು ನೋಡಿದ್ದೀವಿ- ಕಾಂಗ್ರೆಸ್ ಬಂದಾಗಲೂ ನೋಡಿದ್ದೀವಿ- ಯಾವ ಪಕ್ಷ ಬಂದರೂ ಅಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ; ಇದೊಂದು ರೀತಿಯಲ್ಲಿ ಮಂತ್ರಿಮಂಡಲಕ್ಕೆ ಕ್ಲಾಸ್ ಆಗಿತ್ತು. ಇದಕ್ಕೆ ಸಿಎಂ ಅವರು ಪಾಸಿಟಿವ್ ಆಗಿ ಪ್ರತಿಕ್ರಿಯಿಸಿದರು. ಯಾರು ಕೂಡ ಕಿರಿಕಿರಿ ಮಾಡಿಕೊಳ್ಳಲಿಲ್ಲ. ಎಲ್ಲರ ಪರವಾಗಿ ಸಿಎಂ ಮಾತನಾಡಿ, ಮುಂದೆ ಕೂಡ ಹೋರಾಟ ಮುಂದುವರಿಸುತ್ತೇವೆ. ಬದಲಾದ ಕಾಲಘಟ್ಟಕ್ಕೆ ಹೋರಾಟದ ಮಾರ್ಗವನ್ನು ಬದಲಾಯಿಸಿಕೊಳ್ಳುತ್ತೇವೆ, ಎಂದು ಲತಾ ಹೇಳಿದರು. ಭಾರತದ ಇತಿಹಾಸದಲ್ಲಿ ಇಂತಹದೊಂದು ಪ್ರಕ್ರಿಯೆ ನಡೆದಿಲ್ಲ. ನಂತರ ಮಾಧ್ಯಮಗಳ ಮುಂದೆ ನಕ್ಸಲರು ತಮ್ಮ ಸಮವಸ್ತ್ರಗಳನ್ನು ಸರ್ಕಾರದ ಮುಂದಿಟ್ಟರು, ಮುಖ್ಯಮಂತ್ರಿ ಸಂವಿಧಾನ ಕೈಪಿಡಿಗಳನ್ನು ಇವರಿಗೆ ಕೊಟ್ಟರು. ಮಿಕ್ಕಂತೆ ಇದು 40% ಕೆಲಸ ಮುಗಿದಿದೆ. ಮುಖ್ಯಮಂತ್ರಿಗಳೇ ಹೇಳಿದಂತೆ ಕಾಡಿನಿಂದ ಜೈಲಿಗೆ ಬಂದಾಗಿದೆ. ಈಗ ಜೈಲಿನಿಂದ ನಕ್ಸಲರ ನಾಡಿಗೆ ಬರಬೇಕು. ನಮ್ಮ ಸಮಿತಿಯ ಮಾತನ್ನು ತಮ್ಮ ಮಾತನ್ನಾಗಿ ಸಿಎಂ ಮಾತನಾಡಿದರು. ಈಗ ಇವರನ್ನು ಜೈಲಿನಿಂದ ನಾಡಿಗೆ ತರುವ ಪ್ರಕ್ರಿಯೆ ಇದೆಯಲ್ಲ, ಇದು ಇನ್ನೂ ಸವಾಲಿನ ಕೆಲಸ. ಈ ಪ್ರಕ್ರಿಯೆ ಈಗ ನಡೆಯುತ್ತಾ ಇದೆ.

ಪ್ರ: ನಕ್ಸಲರ ಮುಖ್ಯವಾಹಿನಿ ಕುರಿತು ಕೆಲವರು ಶಾಂತಿಗಾಗಿ ನಾಗರಿಕ ವೇದಿಕೆ ವಿರುದ್ಧ ಅಪಪ್ರಚಾರ ಮಾಡುತ್ತಿದ್ದರಲ್ಲ. ಇದಕ್ಕೆ ಏನು ಹೇಳುತ್ತೀರಿ?

ನೂರ್: ಶಾಂತಿಗಾಗಿ ನಾಗರಿಕರ ವೇದಿಕೆ ಮತ್ತು ನಕ್ಸಲ್ ಶರಣಾಗತಿ ಸಮಿತಿಗಳು ಎರಡು ಚೆನ್ನಾಗಿಯೇ ಕೆಲಸ ಮಾಡಿವೆ. ಪರಸ್ಪರ ಕೆಲಸ ಮಾಡಿದ್ದರಿಂದಲೇ ಇಷ್ಟೆಲ್ಲಾ ಸಾಧ್ಯವಾಗಿದೆ. ವಿಷಯ ಇದಲ್ಲ. ಇದು ಸಮಿತಿಗಳ ನಡುವಿನ ಸಮಸ್ಯೆಯಲ್ಲ. ಸಮಿತಿಯಲ್ಲಿರುವಂತಹ ಕೆಲವು ವ್ಯಕ್ತಿಗಳು. ಹಾಗೆ ನೋಡಿದರೆ ಕೆಲವು ಎಂದು ಕರೆಯಬಾರದು; ಒಬ್ಬ ವ್ಯಕ್ತಿಯ ಸಮಸ್ಯೆ. ಇಂತಹ ಸಂದರ್ಭದಲ್ಲಿ ವ್ಯಕ್ತಿಗಳ ವಿಚಾರವನ್ನು ಎಳೆದು ತಂದು ಚರ್ಚೆ ಮಾಡಲಿಕ್ಕೆ ಇಷ್ಟವಿಲ್ಲ. ಹಾಗಾಗಿ ಅದನ್ನು ಬದಿಗಿಡೋಣ. ಅದನ್ನು ಬಿಟ್ಟು ಮುಂದಕ್ಕೆ ಹೋಗೋಣ.

ಪ್ರ: ಈಗ ಜೈಲಿನಲ್ಲಿರುವ ಮತ್ತು ಈ ಹಿಂದೆ ಜೈಲಿನಲ್ಲಿರುವವರ ಬಿಡುಗಡೆ ಕುರಿತು ವೇದಿಕೆಯ ಮುಂದಿನ ಕಾರ್ಯಕ್ರಮಗಳೇನು?

ನೂರ್: ಈಗ ಜೈಲಿನಲ್ಲಿರುವ ಸಂಗಾತಿಗಳಿಗೆ ಜ.30ರವರೆಗೆ ನ್ಯಾಯಾಂಗ ಬಂಧನವೆಂದು ಆದೇಶವಿತ್ತು. ಆದರೆ ಮಧ್ಯೆ ಅಗತ್ಯವಿದ್ದರೆ ಪೊಲೀಸರು ವಶಕ್ಕೆ ತೆಗೆದುಕೊಳ್ಳಬಹುದು ಎಂದು ಆದೇಶವಿತ್ತು. ಅದರ ಭಾಗವಾಗಿ ಈಗ ಅವರನ್ನು ಒಂದು ವಾರಗಳ ಕಾಲ (ಅಂದರೆ ಜ.23ರವರೆಗೆ) ವಶಕ್ಕೆ ತೆಗೆದುಕೊಳ್ಳಲಾಗಿದೆ. ಕೆಲವು ಮಿನಿಮಮ್ ವಿಚಾರಣೆಗಳು ನಡೆಯಬೇಕು. ಅದಕ್ಕೆ ದೀರ್ಘವಾದ ಪ್ರೋಸೆಸ್ ಇದೆ. ಸಮಿತಿಯ ಗಮನಕ್ಕೆ ತಂದು ಇದನ್ನೆಲ್ಲಾ ಮಾಡಲಾಗಿದೆ. ಮತ್ತೆ ಜ.23ಕ್ಕೆ ಅವರ ನ್ಯಾಯಾಂಗಬಂಧನ ಆಗುತ್ತದೆ. ಇದಕ್ಕಾಗಿ ವಿಶೇಷ ನ್ಯಾಯಾಲಯ ಅಂದರೆ ತ್ವರಿತಗತಿಯ ನ್ಯಾಯಾಲಯ ಮಾಡಬೇಕೆಂದು ಕೇಳುತ್ತಾ ಇದ್ದೇವೆ. ಈ 6 ಜನರನ್ನು ಒಳಗೊಂಡಂತೆ ಈಗಾಗಲೇ ಜೈಲಿನಲ್ಲಿರುವ ನಕ್ಸಲೀಯರನ್ನು ಒಂದೆಡೆ ತರುವುದಕ್ಕೆ ಚರ್ಚೆ ನಡೆಯುತ್ತಿವೆ. ಎಲ್ಲ ಸೇರಿಸಿ 11-12 ಜನ ಆಗುತ್ತಾರೆ. ಸಾಮಾನ್ಯ ನ್ಯಾಯಾಲಯಗಳಲ್ಲಿ ಹೋದರೆ ತುಂಬಾ ವರ್ಷಗಳ ಕಾಲ ಕೊಳೆಸಬೇಕಾಗುತ್ತದೆ. ಹಾಗಾಗಿ ವಿಚಾರಣೆ ತ್ವರಿತಗತಿಯಲ್ಲಿ ನಡೆಯಬೇಕು. ಸರಕಾರ ತಾತ್ವಿಕವಾಗಿ ಒಪ್ಪಿಕೊಂಡಿದೆ. ಆದರೆ ಸರಕಾರ ಇದನ್ನು ಕಾನೂನುಬದ್ಧವಾಗಿ ನಡೆಸಬೇಕಿದೆ. ಆಗ ಮಾತ್ರ ಇದು ತ್ವರಿತಗೊಳ್ಳುತ್ತದೆ. ಇಷ್ಟು ಮಾತ್ರವಲ್ಲ ಕರ್ನಾಟಕ ಜೊತೆ ಕೇರಳ ಸರಕಾರ ಕೂಡ ಒಪ್ಪಿಕೊಳ್ಳಬೇಕು. ಕೇರಳದಲ್ಲೂ ಒಂದು ಕೋರ್ಟ್ ಆಗಬೇಕು. ಇವರ ಮೇಲೆ ಅಲ್ಲೂ ಪ್ರಕರಣಗಳಿವೆ. ಉದಾಹರಣೆ ಸುಂದರಿ ಕರ್ನಾಟಕದವರು; ಅವರ ಮೇಲೆ ಕೇರಳದಲ್ಲಿ 56 ಕೇಸುಗಳಿವೆ. ವಿಶೇಷವಾಗಿ ಸರಕಾರಗಳು ಜಾಮೀನುಗಳನ್ನು ವಿರೋಧಿಸಬಾರದು. ಯಾಕೆಂದರೆ ಅವರಾಗಿಯೇ ಕರೆದುಕೊಂಡು ಬಂದಿರುವುದು. ಆದಷ್ಟು ಬೇಗ ಇವರು ಜಾಮೀನಿನ ಮೇಲೆ ಹೊರಗೆ ಬರುವುದಕ್ಕೆ ಅವಕಾಶ ಮಾಡಬೇಕು ಎಂಬುದರ ಬಗ್ಗೆ ನಾವು ಒತ್ತಡ ಹಾಕುತ್ತಿದ್ದೇವೆ.

ಪ್ರ: ನೀವು ಮುಖ್ಯವಾಹಿನಿಗೆ ಬಂದನಂತರ ಹೋರಾಟದಲ್ಲಿ ತೊಡಗಿಸಿಕೊಂಡಿದ್ದೀರಿ. ನೀವು ಅಂದುಕೊಂಡಂತೆ ಹೋರಾಟ ಸಾಗುತ್ತಿದೆಯೇ?

ನೂರ್: ನಾವು 2014ರ ನಂತರ ಮುಖ್ಯವಾಹಿನಿಗೆ ಬಂದಿದ್ದೇವೆ. ನಾವು ಆಗ ಏನು ಅಂದುಕೊಂಡಿದ್ದೆವೊ ಆ ನಿರೀಕ್ಷೆಗಿಂತ ಹೆಚ್ಚಿನ ಕೆಲಸ ಮಾಡಿದ್ದೇವೆ. ಹೋರಾಟದ ಗುರಿ ಇನ್ನೂ ಯಶಸ್ವಿಯಾಗಿಲ್ಲ. ಹೋರಾಟದ ದಾರಿಯಲ್ಲಿ ಸಾಗುತ್ತಿದ್ದೀವಿ. ಇಂತಿಷ್ಟು ಕೆಲಸ ಆಗಬೇಕು ಅಂದುಕೊಂಡಿದ್ದರಲ್ಲಿ ಒಂದಷ್ಟು ಆಗುತ್ತಿದೆ. ಈ ನಡುವೆ ನಾವು ಸಾಕಷ್ಟು ಹೋರಾಟಗಳನ್ನು ಕಟ್ಟಿದ್ದೇವೆ. ಹಲವು ವೇದಿಕೆ, ಸಂಘಟನೆಗಳ ಭಾಗವಾಗಿದ್ದೇವೆ. ಅವುಗಳಲ್ಲಿ ಸಕ್ರಿಯವಾಗಿ ಪಾಲುದಾರಿಕೆಯಿದೆ ಮತ್ತು ನಾವೇ ಕೆಲವು ವೇದಿಕೆ ಮತ್ತು ಸಂಘಟನೆಗಳನ್ನು ಹುಟ್ಟುಹಾಕಿದ್ದೇವೆ. ಜನಶಕ್ತಿ ಎಂಬ ಸಂಘಟನೆ ಕಟ್ಟಿ ಅದರ ರಾಜ್ಯಾಧ್ಯಕ್ಷನಾಗಿದ್ದೇನೆ. ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ, ಸಂಯುಕ್ತ ಹೋರಾಟ, ಎದ್ದೇಳು ಕರ್ನಾಟಕ ಮುಂತಾದ ಸಂಘಟನೆಗಳು ಮತ್ತು ವೇದಿಕೆಗಳ ಭಾಗವಾಗಿದ್ದೇವೆ. ಭೂಮಿ ವಸತಿ ಹೋರಾಟ ಮುಗಿದುಹೋದ ಅಧ್ಯಾಯವಾಗಿತ್ತು ಅದನ್ನು ಮರು ಅಧ್ಯಾಯವನ್ನಾಗಿಸಿದ್ದೇವೆ. ಜನರನ್ನು ಎತ್ತಂಗಡಿ ಮಾಡಿ ಬೀದಿಗೆ ಬಿಸಾಕುವುದನ್ನು ತಡೆದಿದ್ದೇವೆ. ಎದ್ದೇಳು ಕರ್ನಾಟಕದ ಭಾಗವಾಗಿ ಕೆಲಸ ಮಾಡುತ್ತಿದ್ದೇವೆ. ಎದ್ದೇಳು ಕರ್ನಾಟಕ ನಮ್ಮ ರಾಜ್ಯದ ವಿನೂತನ ಪ್ರಯೋಗ. ಜನಪರ ಹೋರಾಟಗಳನ್ನು ಮುನ್ನಡೆಸುವುದರಲ್ಲಿ ಪಂಜಾಬ್ ಬಿಟ್ಟರೆ ನಮ್ಮ ರಾಜ್ಯ ಮುಂಚೂಣಿಯಲ್ಲಿದೆ. ನಮ್ಮ ಸಂಘಟನೆ ಜನಶಕ್ತಿಯು ಚಳವಳಿ ಬೆಳೆಯುವುದು ಮುಖ್ಯ ಎನ್ನುವ ದೃಷ್ಟಿ ಇಟ್ಟುಕೊಂಡು ವರ್ಗ, ಜಾತಿ, ಲಿಂಗ, ಧರ್ಮ, ಭಾಷೆ ಎಲ್ಲಾ ಸಮಾನತೆಗಳನ್ನು ಒಳಗೊಳ್ಳಬೇಕೆಂಬ ಮಹತ್ವಾಕಾಂಕ್ಷೆ ಇಟ್ಟುಕೊಂಡು ಕೆಲಸ ಮಾಡುತ್ತಿದೆ. ಅದು ಗಟ್ಟಿಯಾಗಿದೆ. ತಳವೂರುತ್ತಿದೆ ಮತ್ತು ಬೆಳೆಯುತ್ತಿದೆ. ನಾವು ಏನೆಲ್ಲಾ ಕೆಲಸ ಮಾಡುತ್ತಿದ್ದೆವೋ ಅವೆಲ್ಲಾ ಸಕಾರಾತ್ಮಕ ದಿಕ್ಕಿನೆಡೆ ಇವೆ. ನಾವು ಗುರಿ ಮುಟ್ಟುವ ದಾರಿ ಇನ್ನೂ ದೂರವಿದೆ. ಅಷ್ಟರ ಮಟ್ಟಿಗೆ ನಾವು ಯಶಸ್ಸನ್ನು ಕಂಡಿದ್ದೇವೆ.

ಪ್ರ: ಮಲೆನಾಡಿನಲ್ಲಿ ಎಲ್ಲ ನಕ್ಸಲರು ಮುಖ್ಯವಾಹಿನಿಗೆ ಬಂದಿದ್ದಾರೆ. ಅಲ್ಲಿ ನಿಮ್ಮ ಕಡೆಯಿಂದ ಪ್ರಜಾತಾಂತ್ರಿಕ ಹೋರಾಟಗಳು ಮುಂದುವರಿಯುತ್ತವೆಯೇ?

ನೂರ್: ಮಲೆನಾಡಿನಲ್ಲಿ ಈಗಾಗಲೇ ನಾವೇ ಕಟ್ಟಿದ ಜನಶಕ್ತಿ ಸಂಘಟನೆ ಕಳೆದ 4 ವರ್ಷದಿಂದ ಸಕ್ರಿಯವಾಗಿದೆ. 2022ರಲ್ಲಿ ಜಿಲ್ಲಾ ಸಮ್ಮೇಳನವನ್ನು ಮಾಡಿದ್ದೇವೆ. ಅಲ್ಲಿ ಸಂಘಟನೆಯ ಸದಸ್ಯರಾಗಲು ಕರೆ ನೀಡಿದಾಗ 500 ಯುವಕ-ಯುವತಿಯರನ್ನೊಳಗೊಂಡಂತೆ ಹಲವರು ಸದಸ್ಯರಾಗಿದ್ದಾರೆ. ನಾವು ಮಾತ್ರವಲ್ಲದೆ ಕೆಲ ವೇದಿಕೆಗಳನ್ನು ಇತರ ಜನಪರ ವ್ಯಕ್ತಿ ಮತ್ತು ಸಂಘಟನೆ ಜೊತೆ ಸೇರಿ ಹೋರಾಟದ ವೇದಿಕೆಗಳನ್ನು ಅಲ್ಲಿ ಹುಟ್ಟು ಹಾಕಿದ್ದೇವೆ. ಈಗಾಗಲೇ ಮುಖ್ಯವಾಹಿನಿಗೆ ಬಂದಿರುವ ಈ 6 ಜನ ನಕ್ಸಲ್ ಸಂಗಾತಿಗಳು ನಮ್ಮ ಜೊತೆ ಕೈಜೋಡಿಸಿದರೆ ಇನ್ನಷ್ಟು ಪ್ರಜಾಸತ್ತಾತ್ಮಕ ಹೋರಾಟಗಳನ್ನು ಕೈಗೆತ್ತಿಕೊಂಡು ನಮ್ಮ ಸಂಘಟನೆ ಮತ್ತು ವೇದಿಕೆಗಳನ್ನು ಬಲಪಡಿಸುತ್ತೇವೆ. ಈ ಪ್ರಕ್ರಿಯೆ ಈಗಲೂ ಇದೆ. ಇನ್ನೂ ಮುಂದೆಯೂ ಇರುತ್ತದೆ.

ಪ್ರ: ಇದನ್ನೆಲ್ಲಾ ಗಮನಿಸುತ್ತಿರುವ ನಾಗರಿಕ ಸಮಾಜಕ್ಕೆ ಏನು ಕರೆ ಕೊಡುತ್ತೀರಿ?

ನೂರ್: ಮೂರು ವಿಚಾರಗಳನ್ನು ಹೇಳಲಿಕ್ಕೆ ಬಯಸುತ್ತೇನೆ. ಒಂದು ಕರ್ನಾಟಕದ ನಾಗರಿಕ ಸಮಾಜಕ್ಕೆ ಸೆಲ್ಯೂಟ್ ಹೇಳಲೇಬೇಕು. ಇದು ಅತಿಶಯೋಕ್ತಿ ಎನ್ನಿಸಬಹುದು. ಇಡೀ ಭಾರತದಲ್ಲಿ ಒಂದು ಪ್ರಬುದ್ಧತೆ ಕಡೆಗೆ ನಾಗರಿಕ ಸಮಾಜ ಚಲಿಸುತ್ತಿದೆ. ಪಂಜಾಬ್‌ನಲ್ಲಿ ಯುನೈಟೆಡ್ ಸ್ಟ್ರಗಲ್‌ಗಳು ನಡೆಯುತ್ತಿವೆ. ಕರ್ನಾಟಕದಲ್ಲಿ ಸಂಘಟನೆಗಳ ಮಧ್ಯೆ ಒಗ್ಗಟ್ಟು ಚೆನ್ನಾಗಿದೆ. ಸೃಜನಶೀಲ ಪ್ರಯೋಗಗಳನ್ನು ಮಾಡುವುದರಲ್ಲಿ ನಮ್ಮ ರಾಜ್ಯ ಮುಂದಿದೆ. ಎಲ್ಲ ವಿಚಾರಗಳ ಬಗ್ಗೆ ಸರಿಯಾದ ದೃಷ್ಟಿಕೋನ ಹೊಂದಿದೆ. ಅದು ಟ್ರಾನ್ಸ್‌ಜೆಂಡರ್ ಸಮಸ್ಯೆ, ಮಹಿಳಾ ಸಮಸ್ಯೆ, ಅಲ್ಪಸಂಖ್ಯಾತರ ವಿಚಾರವಾಗಲಿ, ನಕ್ಸಲೀಯರ ವಿಚಾರವಾಗಲಿ ಬೇರೆ ಕಡೆ ಸಿಕ್ಕಾಪಟ್ಟೆ ಗೊಂದಲಗಳಿವೆ. ಆದರೆ ನಮ್ಮ ರಾಜ್ಯದಲ್ಲಿ ಹಾಗೆ ಇಲ್ಲ. ಸಾಕಷ್ಟು ಸ್ಪಷ್ಟತೆ ಎಲ್ಲಾ ಸಂಘಟನೆಗಳಲ್ಲೂ ಇದೆ. ನಕ್ಸಲರ ಮಾರ್ಗಗಳನ್ನು ಒಪ್ಪದೇ ಅವರ ಆಶಯಗಳನ್ನು ಸ್ವೀಕರಿಸುವಂತಹದ್ದು- ಇಂತಹ ಸಕಾರಾತ್ಮಕ ವಿಚಾರವಿದೆ. ಇದನ್ನು ಬಿಟ್ಟರೆ ನಾಡಿನ ಜನರು ಮತ್ತು ಇನ್ನಿತರ ಸಂಘಟನೆಗಳು ಮತ್ತು ಹೋರಾಟಗಾರರು ಸುಳ್ಳು ವದಂತಿಗಳಿಗೆ ಕಿವಿಗೊಡದೆ ನಾಡನ್ನು ಕಟ್ಟುವಲ್ಲಿ ನಮ್ಮ ಜೊತೆ ಕೈಜೋಡಿಸುವಂತೆ ಮನವಿ ಮಾಡುತ್ತೇನೆ. ಎರಡನೇ ವಿಚಾರ ಇವರನ್ನು ಜೈಲಿನಿಂದ ನಾಡಿಗೆ ತರುವ ದೊಡ್ಡ ಜವಾಬ್ದಾರಿ ಇದೆ; ಇದನ್ನು ಮತ್ತೆ ಮರೆತು ಬಿಡಬಾರದು. ಅವರನ್ನು ಕರೆದುಕೊಂಡು ಬರುವ ತನಕವೂ ಸರಕಾರದ ಮೇಲೆ ಒತ್ತಡ ಹಾಕಬೇಕು. ಮತ್ತೆ ಅವರಿಗೆ ಬೇಕಾದ ಮಾನಸಿಕ ಬೆಂಬಲ ಕೊಡುವಂತಹದ್ದಾಗಿದೆ. ಮೂರನೆಯದಾಗಿ ಈ ಪ್ರಕ್ರಿಯೆಯಲ್ಲಿ ಕೆಲವು ವ್ಯಕ್ತಿಗಳಿಗೆ ಮತ್ತೆ ಕ್ಷಮೆ ಕೋರುತ್ತೇನೆ; ಒಬ್ಬ ವ್ಯಕ್ತಿ ಅಪಪ್ರಚಾರ ಮಾಡುತ್ತಿರುವುದು ಒಂದು ವಿಷಾದನೀಯ ವಿಚಾರವೇ. ಇಂತಹ ಸಮಸ್ಯೆಗಳನ್ನು ಹೇಗೆ ಬಗೆಹರಿಸಬೇಕೆಂಬುದು ನಮ್ಮ ಮುಂದೆ ಇರುವ ಸವಾಲೇ ಆಗಿದೆ. ಈ ವಿಚಾರವನ್ನು ನಾಗರಿಕ ಸಮಾಜ ಮತ್ತೆ ಮತ್ತೆ ಊದಿ ದೊಡ್ಡದು ಮಾಡಬಾರದು ಎಂಬುದು ನನ್ನ ಮತ್ತೊಂದು ಮನವಿ. ಈ ಮಹತ್ವ ಕಾರ್ಯಕ್ಕೆ ಏನೆಲ್ಲಾ ನಡೆದಿದೆ ಅದಕ್ಕೆ ಆ 6 ಜನ ನಕ್ಸಲೀಯರಿಗೆ ಸೆಲ್ಯೂಟ್. ಅವರು ದಿಟ್ಟ ನಿರ್ಧಾರ ತೆಗೆದುಕೊಳ್ಳದೇ ಹೋಗಿದ್ದರೆ ನಾವು ಏನೇ ಮಾಡಿದ್ದರೂ ಇದೆಲ್ಲಾ ನಡೆಯಲು ಸಾಧ್ಯವಿರಲಿಲ್ಲ. ಎರಡನೆ ಶ್ರೇಯಸ್ಸು ಮಲೆನಾಡಿನ ಜನತೆಗೆ ಹೋಗುತ್ತದೆ. ಇವರನ್ನು ಪೋಷಣೆ ಮಾಡಿಕೊಂಡವರು, ಸಂದೇಶ ತಂದು ಕೊಟ್ಟವರು; ಮೂರನೆಯದಾಗಿ ಇವರ ಬಗ್ಗೆ ಪಾಸಿಟಿವ್ ಧೋರಣೆ ಹೊಂದಿದ್ದ ಎರಡು ಸಮಿತಿಗಳಿಗೆ, ನಾಲ್ಕನೆಯದಾಗಿ ಪೊಲೀಸ್ ಅಧಿಕಾರಿಗಳು. ಇವರೆಲ್ಲಾ ಕ್ಷಿಪ್ರಗತಿಯಲ್ಲಿ ಸಹಕಾರ ನೀಡಿದ್ದಾರೆ. ಐದನೆಯದು ಮುಖ್ಯಮಂತ್ರಿ ಸಿದ್ದರಾಮಯ್ಯನವರು. ಅವರು ಪಾಸಿಟಿವ್ ತೀರ್ಮಾನ ತೆಗೆದುಕೊಳ್ಳಲಿಲ್ಲವೆಂದರೆ ಇದೆಲ್ಲಾ ಆಗುತ್ತಿರಲಿಲ್ಲ. ಈ ರೀತಿಯ ಒಗ್ಗಟ್ಟುಗಳನ್ನು ನಾವು ಗಟ್ಟಿಯಾಗಿ ಇಟ್ಟುಕೊಳ್ಳೋಣ. ಸಣ್ಣಪುಟ್ಟ ಊಹಾಪೋಹಗಳಿಗೆ ಕಿವಿಗೊಡುವುದು ಬೇಡ ಎಂದು ಇನ್ನೊಮ್ಮೆ ಕೇಳಿಕೊಳ್ಳುತ್ತೇನೆ.

ನ್ಯಾಯಪಥ: ನಿಮ್ಮನ್ನು ಒಳಗೊಂಡಂತೆ ನಾಡಿನ ಎಲ್ಲ ಜನಪರ ಹೋರಾಟಗಳ ಜೊತೆ ನ್ಯಾಯಪಥ ಮತ್ತು ಗೌರಿ ಮೀಡಿಯಾ ತಂಡ ಯಾವಾಗಲೂ ಬೆಂಬಲವಾಗಿರುತ್ತದೆ. ನಮಸ್ಕಾರ.

ನೂರ್ ಶ್ರೀಧರ್: ಹೊಯ್! ನಾನೊಂದು ಮಾತನ್ನು ಇಲ್ಲಿ ಹೇಳಲೇಬೇಕು. ನಮ್ಮ ಮುಖ್ಯವಾಹಿನಿಯ ಸಂದರ್ಭದಲ್ಲಿ ಎ.ಕೆ.ಸುಬ್ಬಯ್ಯ, ಎಚ್.ಎಸ್.ದೊರೆಸ್ವಾಮಿಯವರ ಜೊತೆ ಗೌರಿ ಲಂಕೇಶ್ ಅವರು ಪಾದರಸದಂತೆ ಓಡಾಡಿ ಕೆಲಸ ಮಾಡಿದ್ದಾರೆ. ಈ ಪ್ರಕ್ರಿಯೆಯಲ್ಲಿ ಗೌರಿಯವರದ್ದು ಮಹತ್ವದ ಪಾತ್ರ. ಅದರ ಪರಂಪರೆಯನ್ನು ನೀವೆಲ್ಲಾ ಮುಂದುವರಿಸುತ್ತಿದ್ದೀರಿ. ಅದಕ್ಕಾಗಿ ನಿಮ್ಮೆಲ್ಲಾ ಗೌರಿ ಬಳಗಕ್ಕೆ ಕೃತಜ್ಞತೆಗಳು. ನ್ಯಾಯಪಥ ತಂಡಕ್ಕೂ ನನ್ನ ವಂದನೆಗಳು.

ಸಂದರ್ಶನ ಮತ್ತು ಬರಹರೂಪ:
ದೇಶಾದ್ರಿ ಕಣಸೋಗಿ
ನಾನುಗೌರಿ.ಕಾಂ

ರಾಜ್ಯದಲ್ಲಿ 1980ರಿಂದ 2024ರವರೆಗೆ ನಕ್ಸಲ್ ಇತಿಹಾಸ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...

ಮೊದಲ ಪತ್ನಿಗೆ ಮುಸ್ಲಿಂ ಪತಿ ಜೀವನಾಂಶ ನಿರಾಕರಿಸುವಂತಿಲ್ಲ: ಕೇರಳ ಹೈಕೋರ್ಟ್

ಎರಡನೇ ಪತ್ನಿಯ ಮೇಲಿನ ಆರ್ಥಿಕ ಜವಾಬ್ದಾರಿ ಕುರಿತ ಮಹತ್ವದ ತೀರ್ಪಿನಲ್ಲಿ, ಮುಸ್ಲಿಂ ಪುರುಷನು ತನ್ನ ಮೊದಲ ಪತ್ನಿಗೆ ಜೀವನಾಂಶ ಪಾವತಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಎಲ್ಲ ಪತ್ನಿಯರನ್ನು ಸಮಾನವಾಗಿ...

ಆಸ್ಪತ್ರೆಗಳು ಕಡ್ಡಾಯವಾಗಿ ದರಪಟ್ಟಿ ಪ್ರದರ್ಶಿಸಬೇಕು, ಹಣ ಪಾವತಿಸದ ಕಾರಣ ತುರ್ತು ಆರೈಕೆ ನಿರಾಕರಿಸುವಂತಿಲ್ಲ : ಕಾನೂನು ಎತ್ತಿ ಹಿಡಿದ ಹೈಕೋರ್ಟ್

ಕೇರಳ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಮತ್ತು ನಿಬಂಧನೆಗಳನ್ನು ಎತ್ತಿಹಿಡಿದ ಹೈಕೋರ್ಟ್‌ನ ಏಕ ಸದಸ್ಯ ಪೀಠದ ಆದೇಶದ ವಿರುದ್ಧ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮತ್ತು ಕೇರಳ ಖಾಸಗಿ ಆಸ್ಪತ್ರೆಗಳ ಸಂಘ ಸಲ್ಲಿಸಿದ್ದ ಮೇಲ್ಮನವಿಗಳನ್ನು...

ಎಸ್‌ಐಆರ್‌ನ ನಿಜವಾದ ಉದ್ದೇಶ ಎನ್‌ಆರ್‌ಸಿ : ಮಮತಾ ಬ್ಯಾನರ್ಜಿ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್‌) ಹಿಂದಿನ ಕೇಂದ್ರ ಸರ್ಕಾರದ ನಿಜವಾದ ಉದ್ದೇಶ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಮಾಡುವುದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ನವೆಂಬರ್...