ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತರಲೊರಟಿರುವ ಕರ್ನಾಟಕ ಸರ್ಕಾರದ ಕ್ರಮಕ್ಕೆ ಮಹಿಳಾ ರೈತರ ಹಕ್ಕುಗಳ ವೇದಿಕೆ – ಕರ್ನಾಟಕ (ಮಕಾಮ್-ಮಹಿಳಾ ಕಿಸಾನ್ ಅಧಿಕಾರ್ ಮಂಚ್) ತೀವ್ರ ವಿರೋಧ ವ್ಯಕ್ತಪಡಿಸಿದೆ.
ವೇದಿಕೆಯು ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ‘ಭೂ ಸುಧಾರಣೆ ಕಾನೂನಿನಲ್ಲಿ ಕಠಿಣ ನಿಯಮಗಳು ಇದ್ದರೂ ಕೃಷಿಕರಲ್ಲದವರು ವಾಮಮಾರ್ಗ ಬಳಸಿ ಜಮೀನು ಖರೀದಿಸುತ್ತಿದ್ದಾರೆ’ ಎಂಬ ಕಾರಣಕ್ಕೆ ಕಾನೂನಿಗೆ ತಿದ್ದುಪಡಿ ತರಲಾಗುತ್ತದೆ ಎಂಬ ಕಂದಾಯ ಮಂತ್ರಿಗಳಾದ ಆರ್.ಅಶೋಕ್ ಅವರು ಸಮಜಾಯಿಷಿ ಯಾರಿಗೂ ಒಪ್ಪಿಗೆ ಆಗುವಂಥದ್ದಲ್ಲ. ಕಳ್ಳ ಹಾದಿ ಬಳಸುತ್ತಿದ್ದಾರೆಂಬ ಮಾತ್ರಕ್ಕೆ ಆ ಕಳ್ಳ ಹಾದಿಯನ್ನು ರಾಜಮಾರ್ಗ ಮಾಡವು ಸರ್ಕಾರದ ಕ್ರಮ ಸರಿಯಾದುದ್ದಲ್ಲ ಎಂದು ವಿರೋಧ ವ್ಯಕ್ತಪಡಿಸಿದೆ.
ಮಹಿಳಾ ರೈತರ ಹಕ್ಕುಗಳ ವೇದಿಕೆಯು (ಮಕಾಮ್-ಮಹಿಳಾ ಕಿಸಾನ್ ಅಧಿಕಾರ್ ಮಂಚ್) ರಾಷ್ಟ್ರದ ಅನೌಪಚಾರಿಕ ವೇದಿಕೆಯಾಗಿದ್ದು, ಇದು ಸುಮಾರು 24 ರಾಜ್ಯಗಳ ರೈತ ಮಹಿಳೆಯರು, ಮಹಿಳಾ ರೈತರ ಸಾಮೂಹಿಕ ಸಂಘಟನೆಗಳು, ನಾಗರಿಕ ಸಮಾಜ ಸಂಸ್ಥೆಗಳು, ಸಂಶೋಧಕರು ಮತ್ತು ಕಾರ್ಯಕರ್ತರನ್ನು ಒಳಗೊಂಡಿದೆ. ಪ್ರಮುಖವಾಗಿ ಭಾರತದಲ್ಲಿನ ಮಹಿಳಾ ರೈತರ ಗುರುತಿಸುವಿಕೆ, ಸಿಗಬೇಕಾಗಿರುವ ಮಾನ್ಯತೆ ಮತ್ತು ಹಕ್ಕುಗಳನ್ನು ಪಡೆಯುವುದಕ್ಕೋಸ್ಕರ ಶ್ರಮಿಸುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕೃಷಿಕರಲ್ಲದವರು ಯಾವುದೇ ಅಡೆತಡೆಗಳಿಲ್ಲದೆ ಜಮೀನು ಖರೀದಿಸಬಹುದಾದ ಅವಕಾಶ ಕಲ್ಪಿಸಿಲಿಕ್ಕಾಗಿ ಕರ್ನಾಟಕ ಸರ್ಕಾರ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುತ್ತಿರುವುದು ಕೃಷಿಕರಿಗಷ್ಟೇ ಅಲ್ಲ, ಗ್ರಾಮೀಣ ಭೂಹೀನ ಮತ್ತು ಭೂಮಿ ಉಳ್ಳವರ ಹಿತಾಸಕ್ತಿ ಜನರೆಲ್ಲರಿಗೂ ನಿರಾಶೆ, ಸಿಟ್ಟು ಮೂಡಿಸಿದೆ ಎಂದು ಮಹಿಳಾ ರೈತರ ಹಕ್ಕುಗಳ ವೇದಿಕೆ – ಕರ್ನಾಟಕ ಆರೋಪಿಸಿದೆ.
ಕೋವಿಡ್ -19 ಮಹಾಮಾರಿ ಸಂಕ್ರಮಣದ ಸನ್ನಿವೇಶದಲ್ಲಿ ಆರ್ಥಿಕತೆಯ “ಅಗತ್ಯ ಸೇವೆಗಳ ಮೇಲೆ ಕೇಂದ್ರೀಕೃತವಾಗರಬೇಕು. ಕೃಷಿ ಮತ್ತು ಆಹಾರ ಸುರಕ್ಷತೆಯನ್ನು ಆದ್ಯತೆಯ ವಿಷಯವಾಗಿರಬೇಕು. ಇಂತಹ ಸಂದರ್ಭದಲ್ಲಿ ಕೃಷಿ ಭೂಮಿಯನ್ನು ರೈತರಿಂದ ಕಿತ್ತುಕೊಂಡು ಕೃಷಿಯ ದಿಕ್ಕು ಬದಲಿಸಿ, ಕೃಷಿಯೇತರ ಬಳಕೆ ತಿರುಗಿಸುವುದು ಮತ್ತು ಕೃಷಿಯೇತರರಿಗೆ ಸ್ವತಃ ಸರ್ಕಾರ ಮುಂದೆ ನಿಂತು ದಾರಿ ಮಾಡಿಕೊಡುತ್ತಿರುವುದು ಅತ್ಯಂತ ಅವಿವೇಕದ ಸಂಗತಿಯಾಗಿದೆ ಎಂದು ವೇದಿಕೆ ಆರೋಪಿಸಿದೆ.
‘ಯಾವ ಕೈಗಳು ಭೂಮಿಯಲ್ಲಿ ಉಳುಮೆ ಮಾಡುತ್ತವೆಯೋ ಅ ಕೈಗಳ ಕುಟುಂಬವೇ ರೈತ ಕುಟುಂಬ’ ಎನ್ನುವುದು ನಿಜವಾದರೆ, ಮಹಿಳೆಯರಷ್ಟು ಕೈಯನ್ನು ಮಣ್ಣು ಮಾಡಿಕೊಳ್ಳುವವರು ಇನ್ನಾರು ಇಲ್ಲ. ಆದಾಗ್ಯೂ ಮಹಿಳೆಯರು ಎಂದು ಭೂಹೀನರು. ಜಾಗತಿಕವಾಗಿ ಮಹಿಳೆಯರು 66% ಗ್ರಾಮೀಣ ಕೆಲಸವನ್ನು ಮಾಡುತ್ತಾರೆ. ವಿಶ್ವದ 50% ಆಹಾರ ಪೂರೈಕೆಯನ್ನು ಮಾಡುತ್ತಾರೆ. ಕೃಷಿ ಆದಾಯದ 10% ಗಳಿಸುತ್ತಾರೆ ಮತ್ತು ಕೇವಲ 1% ರಷ್ಟು ಆಸ್ತಿಯನ್ನು ಹೊಂದಿದ್ದಾರೆ. ಅಖಿಲ ಭಾರತ ಮಟ್ಟದಲ್ಲಿ ಶೇಕಡಾ 24% ಪುರುಷರು ಭೂಮಿಯನ್ನು ಹೊಂದಿದ್ದಾರೆ, ಕೇವಲ 4% ಗ್ರಾಮೀಣ ಮಹಿಳೆಯರು ಮಾತ್ರ ಭೂಮಿಯನ್ನು ಹೊಂದಿದ್ದಾರೆ. ಈ ಪರಿಸ್ಥಿತಿ ಬದಲಾಗಬೇಕೇಂದು ವೇದಿಕೆ ಒತ್ತಾಯಿಸಿದೆ.
ಮಹಿಳಾ ರೈತರಿಗೆ, ವಿಶೇಷವಾಗಿ ದಲಿತ ಮತ್ತು ಆದಿವಾಸಿ ಮಹಿಳಾ ರೈತರಿಗೆ ಸರ್ಕಾರ ಎಂದಿಗೂ ಆದ್ಯತೆ ನೀಡಿಲ್ಲ. ಈಗ ಇರುವ ಕಾನೂನನ್ನು ದುರ್ಬಲಗೊಳಿಸುವ ಬದಲು, ಅವರಿಗೆ ಭೂಮಿಯನ್ನು ನೀಡಬೇಕು. ಪಶುಗಳನ್ನು ಮೇಯಿಸಲಿಕ್ಕೆ, ಗುಂಪು ಕೃಷಿ, ಸಣ್ಣ ಅರಣ್ಯ ಉತ್ಪನ್ನಗಳ ಸಂಗ್ರಹ ಮತ್ತು ಕೃತಕ ಮೀನುಗಾರಿಕೆಗೆ ಅನುವು ಮಾಡಿಕೊಡಬೇಕು, ಭೂರಹಿತ ಕುಟುಂಬಗಳಿಗೆ 5 ಎಕರೆ ಜಮೀನನ್ನು ಮಹಿಳೆಯನ್ನು ಸೇರಿದಂತೆ ಜಂಟಿ ಪಟ್ಟ ನೀಡಬೇಕು ಎಂದು ವೇದಿಕೆ ಒತ್ತಾಯಿಸಿದೆ.
ಪತ್ರಿಕಾ ಹೇಳಿಕೆಗೆ ಕವಿತಾ ಕುರುಗಂಟಿ, ಜ್ಯೋತಿ ರಾಜ್, ಇಂದಿರಾ ಕೃಷ್ಣಪ್ಪ, ಶಾರದಾ ದಾಬಡೆ, ಮಮತಾ ಯಜಮಾನ್, ಮಧು ಭೂಷಣ, ರಾಜೇಶ್ವರಿ ಜೋಶಿ, ಸುವರ್ಣ ಕುಠಾಳೆ, ಮಹಾನಂದ ತಳವಾರ, ಸ್ವಾಮಿ, ನಿಂಗಮ್ಮ ಸವಣೂರ, ಶಶಿರಾಜ್, ಕವಿತಾ ಶ್ರೀನಿವಾಸನ್, ನೀಲಮ್ಮ ಮುಂತಾದವರು ಸಹಿ ಮಾಡಿದ್ದಾರೆ.
ಇದನ್ನೂ ಓದಿ: ಬಿಜೆಪಿ ಸರಕಾರ ಕೃಷಿ ಉತ್ಪನ್ನ ಮಾರಾಟದಲ್ಲಿಯೂ ಮಾಫಿಯ ಸೃಷ್ಠಿ ಮಾಡುತ್ತಿದೆ: ಕರ್ನಾಟಕ ಪ್ರಾಂತ ರೈತ ಸಂಘ


