ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಪೂರ್ಣಗೊಂಡ ನಂತರ ಅಂತಿಮ ಮತದಾರರ ಪಟ್ಟಿಯಿಂದ ಒಬ್ಬನೇ ಒಬ್ಬ ಕಾನೂನುಬದ್ಧ ಮತದಾರರ ಹೆಸರನ್ನು ಅಳಿಸಿದರೆ, ದೆಹಲಿಯಲ್ಲಿರುವ ಚುನಾವಣಾ ಆಯೋಗದ ಕಚೇರಿಗೆ ಘೇರಾವ್ ಹಾಕುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಡಿ.30) ಎಚ್ಚರಿಕೆ ನೀಡಿದ್ದಾರೆ.
ಬಂಕುರಾ ಜಿಲ್ಲೆಯಲ್ಲಿ ನಡೆದ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ದ ವಾಗ್ದಾಳಿ ನಡೆಸಿದ್ದು, ಎಸ್‌ಐಆರ್ ಕೃತಕ ಬುದ್ಧಿಮತ್ತೆ (ಎಐ) ಸಹಾಯದಿಂದ ನಡೆಸಲಾಗುತ್ತಿರುವ ದೊಡ್ಡ ‘ಹಗರಣ’ ಎಂದಿದ್ದಾರೆ.
“ಎಐ ಬಳಸಿ ಎಸ್‌ಐಆರ್ ನಡೆಸಲಾಗುತ್ತಿದೆ, ಇದು ಒಂದು ದೊಡ್ಡ ಹಗರಣ. ನೀವು (ಅಮಿತ್ ಶಾ) ಮತ್ತು ನಿಮ್ಮ ಮಗ ಮಾತ್ರ ಬದುಕುಳಿಯುತ್ತೀರಿ. ಪಶ್ಚಿಮ ಬಂಗಾಳದ ಬಡ ಜನರನ್ನು ಎಸ್‌ಐಆರ್ ಹೆಸರಿನಲ್ಲಿ ಹಿಂಸಿಸಲಾಗುತ್ತಿದೆ. ಎಸ್‌ಐಆರ್‌ನಿಂದಾಗಿ ಸುಮಾರು 60 ಜನರು ಸಾವನ್ನಪ್ಪಿದ್ದಾರೆ. ದಾಖಲೆ ಪರಿಶೀಲನೆ ವಿಚಾರಣೆಗೆ ವೃದ್ಧರನ್ನು ಕರೆಯಲಾಗುತ್ತಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
“ಒಬ್ಬನೇ ಒಬ್ಬ ಕಾನೂನುಬದ್ಧ ಮತದಾರರ ಹೆಸರನ್ನು ಅಳಿಸಿದರೂ, ಟಿಎಂಸಿ ದೆಹಲಿಯ ಚುನಾವಣಾ ಆಯೋಗದ ಕಚೇರಿಗೆ ಮುತ್ತಿಗೆ ಹಾಕುತ್ತದೆ” ಎಂದು ಎಚ್ಚರಿಕ ನೀಡಿದ್ದಾರೆ.
ಟಿಎಂಸಿ ಸರ್ಕಾರದ ಅಡಿಯಲ್ಲಿ ಬಂಗಾಳ ಭಯೋತ್ಪಾದಕರ ಕೇಂದ್ರವಾಗಿದೆ ಎಂಬ ಅಮಿತ್ ಶಾ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಮಮತಾ ಬ್ಯಾನರ್ಜಿ, “ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರೇ ಇಲ್ಲದಿದ್ದರೆ, ಪಹಲ್ಗಾಮ್ ದಾಳಿ ಹೇಗೆ ಸಂಭವಿಸಿತು? ಪಹಲ್ಗಾಮ್‌ನಲ್ಲಿ ನೀವು ದಾಳಿ ನಡೆಸಿದ್ದಾ? ದೆಹಲಿಯಲ್ಲಿ ನಡೆದ ಘಟನೆಯ ಹಿಂದೆ ಯಾರಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಬಂಗಾಳಿ ವಲಸೆ ಕಾರ್ಮಿಕರ ಮೇಲೆ ನಡೆಯುತ್ತಿರುವ ದಾಳಿಗಳಿಗೆ ಸಂಬಂಧಿಸಿದಂತೆ ಮಮತಾ ಬ್ಯಾನರ್ಜಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಚುನಾವಣೆ ಬಂದಾಗಲೆಲ್ಲಾ ‘ಸೋನಾರ್ ಬಾಂಗ್ಲಾ’ ನಿರ್ಮಿಸುವುದಾಗಿ ಬಿಜೆಪಿ ಭರವಸೆ ನೀಡುತ್ತದೆ. ವಾಸ್ತವದಲ್ಲಿ ಅದು ಆಳುವ ರಾಜ್ಯಗಳಲ್ಲಿ ಬಂಗಾಳಿ ಮಾತನಾಡುವ ಜನರನ್ನು ಥಳಿಸಲಾಗುತ್ತಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಎಸ್‌ಐಆರ್ ಬಳಿಕ ಡಿಸೆಂಬರ್ 16ರಂದು ಪಶ್ಚಿಮ ಬಂಗಾಳದಲ್ಲಿ ಕರಡು ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದ್ದು, 58 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿದೆ. ಒಟ್ಟು 7.6 ಕೋಟಿ ಮತದಾರರ ಪೈಕಿ ಸುಮಾರು 1.66 ಕೋಟಿ ಮತದಾರರ ‘ಪ್ರಾಮಾಣಿಕತೆ’ಯ ಬಗ್ಗೆ ಚುನಾವಣಾ ಆಯೋಗವು ಊಹಾಪೋಹಗಳನ್ನು ಎತ್ತಿದ್ದು, ಅವರ ದಾಖಲೆಗಳನ್ನು ಮತ್ತೊಮ್ಮೆ ಪರಿಶೀಲಿಸಲು ವಿಚಾರಣೆಗೆ ಕರೆಯಲಾಗಿದೆ.
ಪಶ್ಚಿಮ ಬಂಗಾಳದ ಸಿಇಒಗೆ ಬರೆದ ಪತ್ರದಲ್ಲಿ, ಡಬ್ಲ್ಯುಬಿಸಿಎಸ್ (ಕಾರ್ಯನಿರ್ವಾಹಕ) ಅಧಿಕಾರಿಗಳ ಸಂಘವು, ಚುನಾವಣಾ ನೋಂದಣಿ ಅಧಿಕಾರಿಗಳ (ಇಆರ್‌ಒ) ಶಾಸನಬದ್ಧ ಪಾತ್ರವನ್ನು ನಿರ್ಲಕ್ಷಿಸಿ ಕರಡು ಮತದಾರರ ಪಟ್ಟಿಯಲ್ಲಿರುವ ಮತದಾರರನ್ನು ಸ್ವಯಂ ಪ್ರೇರಿತವಾಗಿ ಅಳಿಸಲಾಗಿದೆ ಎಂದು ಆಕ್ಷೇಪಣೆ ಎತ್ತಿದೆ.
ದೊಡ್ಡ ಮಟ್ಟದಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಒಂದೇ ಸಮನೆ ತೆಗದು ಹಾಕಲಾಗಿದೆ. ಈ ಮತದಾರರು ಕಾನೂನಿನ ಪ್ರಕಾರ ಮತ ಚಲಾಯಿಸಲು ಅರ್ಹರಾಗಿರಬಹುದು. ಆದರೆ, ಮತದಾರರ ಪಟ್ಟಿ ತಯಾರಿಸುವ ಅಥವಾ ಪರಿಶೀಲಿಸುವ ಸಮಯದಲ್ಲಿ (ಗಣತಿ ಪ್ರಕ್ರಿಯೆ) ಯಾವುದೋ ಕಾರಣಕ್ಕೆ ಹಾಜರಿರಲಿಕ್ಕಿಲ್ಲ ಅಥವಾ ಭಾಗವಹಿಸಿರಲಿಕ್ಕಿಲ್ಲ. ಇಂತಹ ವ್ಯಕ್ತಿಗಳ ಹಕ್ಕುಗಳನ್ನು ಒಂದೇ ಸಮಯದಲ್ಲಿ ಅಳಿಸಿ ಹಾಕುವುದು ಅನ್ಯಾಯವೆಂದು ಪತ್ರದಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದೆ.


