ಬಂಗಾಳಿ ಮಾತನಾಡುವ ವಲಸೆ ಕಾರ್ಮಿಕರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಪ್ರತಿಭಟಿಸಲು ಕೋಲ್ಕತ್ತಾದ ಮೈದಾನ್ ಪ್ರದೇಶದ ಗಾಂಧಿ ಪ್ರತಿಮೆಯ ಬಳಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಿರ್ಮಿಸಿದ್ದ ವೇದಿಕೆಯನ್ನು ಸೇನಾ ಸಿಬ್ಬಂದಿ ಸೋಮವಾರ (ಸೆ.1) ತೆರವುಗೊಳಿಸಿದ್ದಾರೆ.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ, ಸಾಮಾನ್ಯವಾಗಿ ಮೈದಾನ್ ಪ್ರದೇಶದಲ್ಲಿ ಎರಡು ದಿನಗಳ ಅವಧಿಗೆ ಕಾರ್ಯಕ್ರಮಗಳನ್ನು ನಡೆಸಲು ಸೇನೆ (ಸ್ಥಳೀಯ ಮಿಲಿಟರಿ ಪ್ರಾಧಿಕಾರ, ಕೋಲ್ಕತ್ತಾ) ಅನುಮತಿ ನೀಡುತ್ತದೆ. ಮೂರು ದಿನಗಳಿಗಾದರೆ ರಕ್ಷಣಾ ಸಚಿವಾಲಯದ ಅನುಮತಿ ಪಡೆಯಬೇಕು ಎಂದು ರಕ್ಷಣಾ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
“ಎರಡು ದಿನಗಳ ಕಾಲ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಲಾಗಿತ್ತು. ವೇದಿಕೆ ಸುಮಾರು ಒಂದು ತಿಂಗಳಿನಿಂದ ಇದೆ. ತಾತ್ಕಾಲಿಕ ವೇದಿಕೆಯನ್ನು ತೆರವುಗೊಳಿಸುವಂತೆ ಸಂಘಟಕರಿಗೆ ಹಲವಾರು ಬಾರಿ ಹೇಳಲಾಗಿದೆ. ಆದಾಗ್ಯೂ, ಅದನ್ನು ತೆರವುಗೊಳಿಸಿರಲಿಲ್ಲ” ಎಂದು ರಕ್ಷಣಾ ಅಧಿಕಾರಿ ಹೇಳಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ನಗರ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿದ್ದಾರೆ ಎಂದು ವೇದಿಕೆ ತೆರವುಗೊಳಿಸುವ ವೇಳೆ ರಕ್ಷಣಾ ಅಧಿಕಾರಿ ತಿಳಿಸಿದ್ದಾರೆ.
ಟಿಎಂಸಿ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಜೆಪಿ ಸೇನೆಯನ್ನು ತಮ್ಮ ಆಟಿಕೆಯಾಗಿ ಬಳಸುತ್ತಿದೆ ಎಂದು ಆರೋಪಿಸಿದ್ದಾರೆ. ಕೇಸರಿ ಪಕ್ಷದ ಕೈಯಲ್ಲಿ ಆಡಬೇಡಿ ಎಂದು ಸೇನೆಗೆ ಮನವಿ ಮಾಡಿದ್ದಾರೆ.
“ನಾನು ಸೇನೆಯನ್ನು ದೂಷಿಸುವುದಿಲ್ಲ, ಆದರೆ ಬಿಜೆಪಿಯ ಸೇಡಿನ ರಾಜಕೀಯ ಇದರ ಹಿಂದೆ ಇದೆ. ಹಾಗಾಗಿ, ಬಿಜೆಪಿಯ ಡಬಲ್ ಎಂಜಿನ್ ಸರ್ಕಾರವನ್ನು ದೂಷಿಸುತ್ತೇವೆ” ಎಂದಿದ್ದಾರೆ.
“ಅವರು (ಬಿಜೆಪಿ) ಸೈನ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದು ಅನೈತಿಕ, ಪ್ರಜಾಪ್ರಭುತ್ವ ವಿರೋಧಿ” ಎಂದು ವೇದಿಕೆ ತೆರವುಗೊಳಿಸುವ ವೇಳೆ ಸ್ಥಳಕ್ಕೆ ಧಾವಿಸಿದ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
” ಬಿಜೆಪಿಗರು ತಮ್ಮ ಸ್ವಾರ್ಥ ಸಾಧನಗೆ ಸೇನೆಯನ್ನು ದುರುಪಯೋಗಡಿಸಿಕೊಳ್ಳುತ್ತಿದ್ದಾರೆ. ಅವರಿಗೆ ಆಂತರಿಕ ಭದ್ರತೆ ಮತ್ತು ಗಡಿ ಭದ್ರತೆಯ ಬಗ್ಗೆ ಕಾಳಜಿ ಇಲ್ಲ. ನಮಗೆ ಕಾರ್ಯಕ್ರಮಕ್ಕೆ ಅನುಮತಿ ಇತ್ತು. ಅದಕ್ಕಾಗಿ, ನಾವು ಶುಲ್ಕವನ್ನೂ ಪಾವತಿಸಿದ್ದೇವೆ” ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ವೇದಿಕೆಯನ್ನು ಕೆಡವುವ ಮೊದಲು ಸೇನೆಯು ಕೋಲ್ಕತ್ತಾ ಪೊಲೀಸರೊಂದಿಗೆ ಸಮಾಲೋಚಿಸಬೇಕಿತ್ತು. ಅವರು ನನಗೆ ಕರೆ ಮಾಡಬಹುದಿತ್ತು. ಆದರೆ, ಅವರು ಕೆಲವೇ ನಿಮಿಷಗಳಲ್ಲಿ ವೇದಿಕೆಯನ್ನು ಕೆಡವಿದ್ದಾರೆ ಎಂದು ಹೇಳಿದ್ದಾರೆ.
“ನಾನು ಸೈನ್ಯವನ್ನು ದೂಷಿಸುವುದಿಲ್ಲ, ಅವರು ತಟಸ್ಥರಾಗಿರಲು ಮತ್ತು ಬಿಜೆಪಿಯ ಕೈಯಲ್ಲಿ ಆಟವಾಡದಂತೆ ಮನವಿ ಮಾಡುತ್ತೇನೆ” ಎಂದಿದ್ದಾರೆ.
ವೇದಿಕೆ ತೆರವುಗೊಳಿಸಿರುವುದರಲ್ಲಿ ರಾಜಕೀಯ ಉದ್ದೇಶ ಇದೆ. ಕೇಂದ್ರ ಸರ್ಕಾರ ಇಡಿ, ಸಿಬಿಐ ಬಳಿಕ ಸೇನೆಯನ್ನು ದುರುಪಯೋಗಪಡಿಸಿಕೊಳ್ಳುತ್ತುದೆ. ನಮ್ಮ ಪ್ರತಿಭಟನೆಯನ್ನು ರಾಣಿ ರಶ್ಮೋನಿ ರಸ್ತೆಗೆ ಸ್ಥಳಾಂತರಿಸಲಾಗುವುದು ಎಂದು ಟಿಎಂಸಿಯ ಕುನಾಲ್ ಘೋಷ್ ಹೇಳಿದ್ದಾರೆ.
ಮಮತಾ ಬ್ಯಾನರ್ಜಿ ‘ಹತಾಶೆಯಿಂದ’ ಸೇನೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ವಿರುದ್ದ ಆರೋಪ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
“ಅಧಿಕಾರ ಕಳೆದುಕೊಳ್ಳುವ ಭಯದಲ್ಲಿ ರಾತ್ರಿಯಿಡೀ ನಿದ್ದೆ ಇಲ್ಲದೆ ಇರುವಾಗ ಇಂತಹ ಘಟನೆಗಳು ಸಂಭವಿಸುತ್ತವೆ. ಅವರು ದೀರ್ಘಕಾಲದವರೆಗೆ ಅನಿಯಂತ್ರಿತ ಅಧಿಕಾರವನ್ನು ಅನುಭವಿಸಿದ್ದಾರೆ. ಪದಚ್ಯುತಿಯ ಬೆದರಿಕೆ ಸ್ಪಷ್ಟ ಮತ್ತು ಪ್ರಸ್ತುತವಾಗಿರುವಾಗ ಅವರು ಸೇನೆಯ ಮೇಲೆ ತಮ್ಮ ಹತಾಶೆಯನ್ನು ಹೊರಹಾಕುತ್ತಿದ್ದಾರೆ. ಬಿಜೆಪಿ ವಿರುದ್ಧ ಆರೋಪಗಳನ್ನು ಮಾಡುತಿದ್ದಾರೆ” ಎಂದು ಭಟ್ಟಾಚಾರ್ಯ ಹೇಳಿದ್ದಾರೆ.
ಟಿಎಂಸಿಯ ‘ಭಾಷಾ ಆಂದೋಲನ’ ಪ್ರತಿಭಟನೆಯು ಒಂದು ಸಾಮೂಹಿಕ ಒತ್ತಾಯವಾಗಿದೆ ಎಂದು ಸಿಪಿಐ(ಎಂ) ನಾಯಕಿ ಸುಜನ್ ಚಕ್ರವರ್ತಿ ಸಮರ್ಥಿಸಿಕೊಂಡಿದ್ದಾರೆ.
ಕೊಲ್ಕತ್ತಾದ ಮೈದಾನ್ ಪ್ರದೇಶವು ಭಾರತೀಯ ಸೇನೆಯ ನಿಯಂತ್ರಣದಲ್ಲಿದೆ. ಇದರ ಪೂರ್ವ ಕಮಾಂಡ್ ಪ್ರಧಾನ ಕಚೇರಿ ಫೋರ್ಟ್ ವಿಲಿಯಂನಲ್ಲಿ ಹತ್ತಿರದಲ್ಲಿದೆ.


