ಟಿಕೆಟ್ ಪಡೆಯಲು ಹಣವಿಲ್ಲದ ಕಾರಣ ವ್ಯಕ್ತಿಯೊಬ್ಬರು ರೈಲಿನ ಬೋಗಿಯಡಿ ಅವಿತುಕೊಂಡು ಸುಮಾರು 250 ಕಿಲೋ ಮೀಟರ್ ದೂರ ಪ್ರಯಾಣಿಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ ಎಂದು ನಿನ್ನೆ (ಡಿ.27) ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ, ಇದನ್ನು ರೈಲ್ವೆ ಇಲಾಖೆ ಅಲ್ಲಗಳೆದಿದೆ.
ಮಧ್ಯಪ್ರದೇಶದ ನರ್ಮಾದಾಪುರ್ ಜಿಲ್ಲೆಯ ನಗರವಾದ ಇಟಾರ್ಸಿಯಿಂದ ಜಬಲ್ಪುರ್‌ವರೆಗೆ 250 ಕಿ.ಮೀ ದೂರ ಎಕ್ಸ್‌ಪ್ರೆಸ್ ರೈಲಿನ ಬೋಗಿಯಡಿ ಚಕ್ರಗಳ (ವೀಲ್‌ಗಳ) ನಡುವೆ ವ್ಯಕ್ತಿ ಪ್ರಯಾಣ ಮಾಡಿದ್ದಾರೆ. ಜಬಲ್ಪುರ ನಿಲ್ದಾಣದಲ್ಲಿ ಅವರು ರೈಲಿನಡಿಯಿಂದ ಹೊರ ಬಂದಾಗ ವಿಷಯ ಗೊತ್ತಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿತ್ತು.
ಅದಕ್ಕೆ ಸಂಬಂಧಿಸಿದ್ದು ಎನ್ನಲಾದ ವಿಡಿಯೋವೊಂದು ವೈರಲ್ ಆಗಿತ್ತು. ಡಿಸೆಂಬರ್ 24ರಂದು ದಾನಪುರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿತ್ತು.
ಆದರೆ, ಮಾಧ್ಯಮ ವರದಿಗಳು ಸುಳ್ಳು ಎಂದು ರೈಲ್ವೆ ಇಲಾಖೆ ಹೇಳಿದೆ. ರೈಲಿನ ಆಕ್ಸೆಲ್ ನಿರಂತರ ವೇಗವಾಗಿ ತಿರುಗುತ್ತಿರುತ್ತದೆ. ಹೀಗಿರುವಾಗ ವ್ಯಕ್ತಿಯೊಬ್ಬ ಚಕ್ರಗಳು ಮತ್ತು ಆಕ್ಸೆಲ್ ನಡುವೆ ಕುಳಿತು ಪ್ರಯಾಣಿಸುವುದು ಅಸಾಧ್ಯ. ಚಕ್ರಗಳ ನಡುವೆ ಕುಳಿತು ಪ್ರಯಾಣಿಸಿದ್ದಾರೆ ಎನ್ನಲಾದ ವ್ಯಕ್ತಿ ‘ಮಾನಸಿಕ ಅಸ್ವಸ್ಥ’ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಕೇಂದ್ರ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧೀನದಲ್ಲಿರುವ ಪ್ರೆಸ್ ಇನ್ಫರ್ಮೇಶನ್ ಬ್ಯೂರೋ (ಪಿಐಬಿ) ಕೂಡ ಎಕ್ಸ್‌ನಲ್ಲಿ ಫ್ಯಾಕ್ಟ್‌ಚೆಕ್ ಪೋಸ್ಟ್ ಮಾಡಿ ‘ಮಾಧ್ಯಮಗಳಲ್ಲಿ ಬಂದಿರುವ ವರದಿ’ ದಾರಿ ತಪ್ಪಿಸುವಂತದ್ದು ಎಂದು ಹೇಳಿದೆ.
In a video shared on social media, it's being claimed that a person has traveled 250 kms by sitting on the axle of a train wheel#PIBFactCheck
➡️This claim is baseless & misleading
➡️The wheel set of train keeps rotating continuously & it's not possible to travel sitting on it pic.twitter.com/CV9H7t2XqK
— PIB Fact Check (@PIBFactCheck) December 27, 2024
ವರದಿಗಳ ಪ್ರಕಾರ, ಜಬಲ್ಪುರ ನಿಲ್ದಾಣದಲ್ಲಿ ರೈಲು ನಿಂತಾಗ ವ್ಯಕ್ತಿಯೊಬ್ಬರು ಬೋಗಿಯ ಅಡಿಯಿಂದ ಹೊರ ಬಂದಿದ್ದಾರೆ. ಜನರು ಅವರನ್ನು ಮಾತನಾಡಿಸಿದಾಗ, ಟಿಕೆಟ್ ಪಡೆಯಲು ದುಡ್ಡಿಲ್ಲದ ಕಾರಣ ತಾನು 250 ಕಿ.ಮೀ ದೂರದ ಇಟಾರ್ಸಿಯಿಂದ ಬೋಗಿಯ ಅಡಿ ಕುಳಿತು ಬಂದಿರುವುದಾಗಿ ಹೇಳಿದ್ದಾರೆ. ತಕ್ಷಣ ಆ ವ್ಯಕ್ತಿಯನ್ನು ರೈಲ್ವೆ ಸಿಬ್ಬಂದಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಕುರಿತು ಸಮಗ್ರ ತನಿಖೆ ನಡೆಸಲಾಗುತ್ತಿದ್ದು, ಅಜಾಗರೂಕತೆಯಿಂದ ವರ್ತಿಸಿದ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪಶ್ಚಿಮ ಮಧ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ತೀವ್ರಗೊಂಡ ಬಿಹಾರ ನಾಗರಿಕ ಸೇವಾ ಪರೀಕ್ಷೆಯ ವಿರುದ್ಧದ ಪ್ರತಿಭಟನೆ


