ಮಂಗಳೂರು ಬಳಿಯ ಬಜ್ಪೆಯಲ್ಲಿ ಗುರುವಾರ ಕೊಲೆಗೀಡಾ ರೌಡಿ ಶೀಟರ್ ಸುಹಾಶ್ ಶೆಟ್ಟಿ ಕುಟುಂಬಕ್ಕೆ ರಾಜ್ಯ ಬಿಜೆಪಿ 25 ಲಕ್ಷ ರೂ. ಪರಿಹಾರ ನೀಡುವುದಾಗಿ ಶುಕ್ರವಾರ ಘೋಷಿಸಿದೆ. ಕೊಲೆಗಾಡಾದ ರೌಡಿಯ ಮನೆಗೆ ವಿಧಾನಸಭೆಯಲ್ಲಿನ ವಿಪಕ್ಷ ನಾಯಕ ಆರ್. ಅಶೋಕ್ ಜೊತೆ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ NIA ಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ವಿಜಯೇಂದ್ರ ಅವರು, “ಸುಹಾಸ್ ಹತ್ಯೆಗೆ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಮಂಗಳೂರಿನಲ್ಲಿ ನಡೆದ ಈ ಘಟನೆ ಖಂಡನಾರ್ಹ. ಬಿಜೆಪಿಯು ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿದೆ. ಸುಹಾಸ್ ಜೀವಕ್ಕೆ ಬೆದರಿಕೆ ಇದ್ದರೂ ರಕ್ಷಣೆ ಇಲ್ಲದಿರುವುದು ಪೊಲೀಸರ ವೈಫಲ್ಯವಾಗಿದೆ. ಘಟನೆಯಲ್ಲಿ ರಾಜ್ಯ ಸರಕಾರದ, ಗೃಹ ಇಲಾಖೆಯ ಮತ್ತು ಪೊಲೀಸ್ ಇಲಾಖೆಯ ವೈಫಲ್ಯ ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ” ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸರಕಾರದ ನೀತಿಗಳಿಂದ ಹಿಂದೂ ಸಂಘಟನೆಗಳಿಗೆ, ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ಇಲ್ಲದಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ ಸರಕಾರದ ಮೇಲೆ ವಿಶ್ವಾಸವೇ ಇಲ್ಲದಂತಾಗಿದೆ ಎಂದು ಅವರು ಹೇಳಿದ್ದಾರೆ.
“ಸುಹಾಸ್ ಕುಟುಂಬಕ್ಕೆ ಧೈರ್ಯ ತುಂಬಿದ್ದೇವೆ. ಸಾಂತ್ವನ ಹೇಳಿದ್ದೇವೆ. ಕುಟುಂಬದ ಆಧಾರ ಸ್ಥಂಭವೇ ಕಳಚಿ ಬಿದ್ದಿದೆ. ಈ ಸಂದರ್ಭದಲ್ಲಿ ಆ ಬಡ ಕುಟುಂಬದ ಕೊತೆ ನಾವಿದ್ದೇವೆ. ಪಕ್ಷದ ಪರವಾಗಿ 25 ಲಕ್ಷ ರೂ. ಪರಿಹಾರ ಹಣವನ್ನು ಘೋಷಣೆ ಮಾಡುತ್ತಿದ್ದೇವೆ. ಘಟನೆಯ ಗಂಭೀರತೆ, ಕುಟುಂಬದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸರಕಾರವೂ ಪರಿಹಾರ ಘೋಷಣೆ ಮಾಡಬೇಕು”, ಎಂದು ಅವರು ಆಗ್ರಸಿದ್ದಾರೆ.
2022ರ ಜುಲೈ 26ರಂದು ಮಂಗಳೂರಿನಲ್ಲಿ ನಡೆದಿದ್ದ ಮೊಹಮ್ಮದ್ ಫಾಝಿಲ್ ಕೊಲೆ ಪ್ರಕರಣದ ಆರೋಪಿ ರೌಡಿಶೀಟರ್ ಕಾಟಿಪಳ್ಳ-ಕೋಡಿಕೆರೆ ನಿವಾಸಿ ಸುಹಾಸ್ ಶೆಟ್ಟಿ (42) ಎಂಬಾತನನ್ನು 6 ಮಂದಿಯ ತಂಡವೊಂದು ಗುರುವಾರ ಭೀಭತ್ಸವಾಗಿ ಕೊಲೆಗೈದಿದೆ.
ಕೊಲೆಗೀಡಾದ ರೌಡಿ ಸುಹಾಸ್ ಶೆಟ್ಟಿ ವಿರುದ್ಧ ಎರಡು ಕೊಲೆ ಪ್ರಕರಣಗಳೂ ಸೇರಿದಂತೆ ಐದು ಪ್ರಕರಣಗಳು ದಾಖಲಾಗಿದ್ದವು. ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಬೆನ್ನಲ್ಲೇ ಮಂಗಳೂರು ನಗರ ಪೊಲೀಸ್ ಕಮಿಷನರ್ ವ್ಯಾಪ್ತಿಯಲ್ಲಿ ಸೆಕ್ಷನ್ 163 ಜಾರಿಗೊಳಿಸಲಾಗಿದೆ. ಈ ನಡುವೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಐದು ಪ್ರತ್ಯೇಕ ಚೂರಿ ಇರಿತ ಪ್ರಕರಣಗಳು ವರದಿಯಾಗಿದ್ದು, ಸಂತ್ರಸ್ತರೆಲ್ಲರೂ ಮುಸ್ಲಿಮರು ಎಂದು ವರದಿ ಹೇಳಿವೆ. ಮಂಗಳೂರು
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಕೊಲೆ ಆರೋಪಿ, ರೌಡಿಶೀಟರ್ ಸುಹಾಸ್ ಹತ್ಯೆ: ಇಂದು ದ.ಕನ್ನಡ ಜಿಲ್ಲೆ ಬಂದ್‌ಗೆ ಕರೆ
ಕೊಲೆ ಆರೋಪಿ, ರೌಡಿಶೀಟರ್ ಸುಹಾಸ್ ಹತ್ಯೆ: ಇಂದು ದ.ಕನ್ನಡ ಜಿಲ್ಲೆ ಬಂದ್‌ಗೆ ಕರೆ

