ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಶನಿವಾರ ಮತ್ತೆ ಹೊಸದಾಗಿ ಹಿಂಸಾಚಾರ ನಡೆದಿದೆ ಎಂದು ವರದಿಯಾಗಿದೆ. ಇಂಫಾಲ್ ಪೂರ್ವ ಜಿಲ್ಲೆಯ ಸನಾಸಾಬಿ ಮತ್ತು ಥಮ್ನಾಪೋಕ್ಪಿ ಗ್ರಾಮಗಳಲ್ಲಿ ಶಸ್ತ್ರಸಜ್ಜಿತ ದಾಳಿಕೋರರೊಂದಿಗಿನ ಗುಂಡಿನ ಚಕಮಕಿ ನಡೆದಿದ್ದು, ದಾಳಿಯಲ್ಲಿ ಹಲವಾರು ನಾಗರಿಕರು ಮತ್ತು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಘಟನೆಯನ್ನು ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಖಂಡಿಸಿದ್ದಾರೆ.
ಬಿಕ್ಕಟ್ಟನ್ನು ಎದುರಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಜಾರಿಗೊಳಿಸಲಾಗಿದೆ ಎಂದು ಒತ್ತಿ ಹೇಳಿರುವ ಮುಖ್ಯಮಂತ್ರಿ, ಶಾಂತಿ ಕಾಪಾಡಲು ಮತ್ತು ಏಕತೆಗಾಗಿ ಕರೆ ನೀಡಿದ್ದಾರೆ. ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಮತ್ತು ಗಾಯಾಳುಗಳಿಗೆ ಅಗತ್ಯವಾದ ವೈದ್ಯಕೀಯ ಆರೈಕೆಯನ್ನು ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಎಕ್ಸ್‌ನಲ್ಲಿ ಬರೆದಿರುವ ಎನ್.ಬಿರೇನ್ ಸಿಂಗ್, “ಇಂಫಾಲ್ ಪೂರ್ವದ ಸನಾಸಾಬಿ ಮತ್ತು ಥಮ್ನಾಪೊಕ್ಪಿಯಲ್ಲಿ ಕುಕಿ ಉಗ್ರಗಾಮಿಗಳು ನಡೆಸಿದ ವಿವೇಚನಾರಹಿತ ಗುಂಡಿನ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇವೆ. ಈ ದಾಳಿಯಿಂದಾಗಿ ನಾಗರಿಕರು ಮತ್ತು ಭದ್ರತಾ ಸಿಬ್ಬಂದಿಗಳು ಗಾಯಗೊಂಡಿದ್ದಾರೆ. ಅಮಾಯಕರ ಜೀವಗಳ ಮೇಲಿನ ಈ ಹೇಡಿತನ ಮತ್ತು ಅಪ್ರಚೋದಿತ ದಾಳಿಯು ಶಾಂತಿ ಮತ್ತು ಸಾಮರಸ್ಯದ ಮೇಲಿನ ದಾಳಿಯಾಗಿದೆ” ಎಂದು ಅವರು ಹೇಳಿದ್ದಾರೆ. ಮಣಿಪುರ
“ಪೀಡಿತ ಪ್ರದೇಶಗಳಿಗೆ ಸಾಕಷ್ಟು ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿದ್ದು, ಗಾಯಾಳುಗಳಿಗೆ ಅಗತ್ಯ ವೈದ್ಯಕೀಯ ನೆರವು ನೀಡಲಾಗುತ್ತಿದೆ. ಇಂತಹ ಸವಾಲುಗಳನ್ನು ಎದುರಿಸಲು ಸರ್ಕಾರವು ಶಾಂತಿ ಮತ್ತು ಏಕತೆಗಾಗಿ ಕರೆ ನೀಡುತ್ತದೆ. ಕೇಂದ್ರ ಪಡೆಗಳು ಮತ್ತು ರಾಜ್ಯ ಪೊಲೀಸರು ಅಂತಹ ಸನ್ನಿವೇಶಗಳೊಂದಿಗೆ ವ್ಯವಹರಿಸುವಾಗ ಸರಿಯಾದ ಸಮನ್ವಯ ಮತ್ತು ತಿಳುವಳಿಕೆಯನ್ನು ಹೊಂದಿರಬೇಕು.” ಎಂದು ಅವರು ಹೇಳಿದ್ದಾರೆ.
ಶುಕ್ರವಾರದಂದು ಮಣಿಪುರ ಪೊಲೀಸರು, ಅಸ್ಸಾಂ ರೈಫಲ್ಸ್, ಅರಣ್ಯ ಇಲಾಖೆ ಮತ್ತು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಒಳಗೊಂಡ ಜಂಟಿ ತಂಡವು ಚುರಾಚಂದ್‌ಪುರ ಜಿಲ್ಲೆಯ ಟಿ.ಲಂಘೋಯಿಮೋಲ್ ಪ್ರದೇಶದಲ್ಲಿ ಅಫೀಮ್ ಬೆಳೆಯನ್ನು ನಾಶ ಕಾರ್ಯಾಚರಣೆ ನಡೆಸಿದೆ. ಅಲ್ಲಿ ಅವರು ಏಳು ಎಕರೆ ಅಫೀಮ್ ತೋಟಗಳನ್ನು ನಾಶಪಡಿಸಿದ್ದಾರೆ ಎಂದು ವರದಿಯಾಗಿದೆ. ಅಫೀಮ್ ಬೆಳೆದವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಅಧಿಕಾರಿಗಳು ಅವರನ್ನು ಗುರುತಿಸಿ ಬಂಧಿಸುವ ಕೆಲಸ ಮಾಡುತ್ತಿದ್ದಾರೆ.
ಹೆಚ್ಚುವರಿಯಾಗಿ, ಭದ್ರತಾ ಪಡೆಗಳು ಬೆಟ್ಟ ಮತ್ತು ಕಣಿವೆ ಜಿಲ್ಲೆಗಳ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆಗಳು ನಡೆಸಿದೆ. NH-37 ಮತ್ತು NH-2 ರ ಉದ್ದಕ್ಕೂ ಅಗತ್ಯ ಸಾಮಗ್ರಿಗಳನ್ನು ಸಾಗಿಸುವ 115 ಮತ್ತು 326 ವಾಹನಗಳ ಸಂಚಾರವನ್ನು ಸಹ ಖಾತ್ರಿಪಡಿಸಲಾಗಿದೆ. “ಎಲ್ಲಾ ಹಿಂಸಾಚಾರ ಪೀಡಿತ ಸ್ಥಳಗಳಲ್ಲಿ ಕಟ್ಟುನಿಟ್ಟಾದ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ವಾಹನಗಳ ಮುಕ್ತ ಮತ್ತು ಸುರಕ್ಷಿತ ಚಲನೆಯನ್ನು ಖಚಿತಪಡಿಸಿಕೊಳ್ಳಲು ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತಾ ಬೆಂಗಾವಲು ಒದಗಿಸಲಾಗಿದೆ” ಎಂದು ಮಣಿಪುರ ಪೊಲೀಸರು ಹೇಳಿದ್ದಾರೆ. ಮಣಿಪುರದ ವಿವಿಧ ಜಿಲ್ಲೆಗಳಲ್ಲಿ ಬೆಟ್ಟ ಮತ್ತು ಕಣಿವೆಯಲ್ಲಿ ಒಟ್ಟು 108 ನಾಕಾ/ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ | ತಂದೆ, ಅಜ್ಜ, ಚಿಕ್ಕಪ್ಪನಿಂದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ
ಉತ್ತರ ಪ್ರದೇಶ | ತಂದೆ, ಅಜ್ಜ, ಚಿಕ್ಕಪ್ಪನಿಂದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ


