ಪರಿಶಿಷ್ಟ ಪಂಗಡದ ಮೀಸಲಾತಿ ವಿಚಾರವಾಗಿ ಕುಕಿ ಮತ್ತು ಮೈಥೇಯಿ ಸಮುದಾಯದ ನಡುವೆ ಮಣಿಪುರದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ತೀವ್ರ ಸ್ವರೂಪ ಪಡೆಯುತ್ತಿರುವ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ರಾಜ್ಯಕ್ಕೆ ಬುಧವಾರ ಭೇಟಿ ನೀಡಿದ್ದಾರೆ.
ತಮ್ಮ ಭೇಟಿಯ ವೇಳೆ, ಕೇಂದ್ರ ಸಚಿವ ಅಮಿತ್ ಶಾ ಅವರು, “ಸಾಧ್ಯವಾದಷ್ಟು ಬೇಗ ಮಣಿಪುರದಲ್ಲಿ ಶಾಂತಿಯನ್ನು ಮರುಸ್ಥಾಪಿಸಲು ಮತ್ತು ಸ್ಥಳಾಂತರಗೊಂಡ ಜನರನ್ನು ಅವರ ಮನೆಗಳಿಗೆ ಕರೆತರಲು ನಾವು ಬದ್ಧರಾಗಿದ್ದೇವೆ” ಎಂದು ತಿಳಿಸಿದ್ದಾರೆ.
ಅಮಿತ್ ಶಾ ಅವರು ಬುಧವಾರ ಮಣಿಪುರದ ಮೊರೆಹ್‌ನಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಮಣಿಪುರದ ಕುಕಿ ಮತ್ತು ಮೈತೇಯಿ ಸಮುದಾಯಗಳ ಶಿಬಿರಗಳಿಗೆ ಭೇಟಿ ನೀಡಿದ ನಂತರ ಅವರು ಪ್ರತಿಕ್ರಿಯಿಸಿದ್ದಾರೆ.
Convened a meeting with civil society organisations in Kangpokpi, Manipur. They are keen to actively participate with the government in reviving harmony among communities in Manipur. pic.twitter.com/1Tv9wO02xZ
— Amit Shah (@AmitShah) May 31, 2023
“ಕಾಂಗ್ಪೊಕ್ಪಿಯಲ್ಲಿನ ಪರಿಹಾರ ಶಿಬಿರಕ್ಕೆ ಭೇಟಿ ನೀಡಿ ಅಲ್ಲಿನ ಕುಕಿ ಸಮುದಾಯದ ಸದಸ್ಯರನ್ನು ಭೇಟಿ ಮಾಡಿದ್ದೇವೆ. ಮಣಿಪುರದಲ್ಲಿ ಆದಷ್ಟು ಬೇಗ ಶಾಂತಿಯನ್ನು ಮರುಸ್ಥಾಪಿಸಲು ಮತ್ತು ಅವರನ್ನು ಮನೆಗಳಿಗೆ ಸುರಕ್ಷಿತವಾಗಿ ಕಳುಹಿಸಲು ನಾವು ಬದ್ಧರಾಗಿದ್ದೇವೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಗೃಹ ಸಚಿವರು ಮಣಿಪುರದ ಕಾಂಗ್‌ಪೋಕ್ಪಿಯಲ್ಲಿ ನಾಗರಿಕ ಸಮಾಜ ಸಂಘಟನೆಗಳೊಂದಿಗೆ ಸಭೆಯನ್ನು ಕರೆದಿದ್ದಾರೆ. “ಮಣಿಪುರದಲ್ಲಿ ಸಮುದಾಯಗಳ ನಡುವೆ ಸಾಮರಸ್ಯವನ್ನು ಪುನರುಜ್ಜೀವನಗೊಳಿಸುವಲ್ಲಿ ಸರ್ಕಾರದೊಂದಿಗೆ ಸಕ್ರಿಯವಾಗಿ ಭಾಗವಹಿಸಲು ಅವರು ಉತ್ಸುಕರಾಗಿದ್ದಾರೆ” ಎಂದು ಹೇಳಿದ್ದಾರೆ.
ಆದರೆ ಮಣಿಪುರದ ಗುಡ್ಡಗಾಡು ಜಿಲ್ಲೆಗಳು ಮತ್ತು ತಪ್ಪಲಿನ ಪ್ರದೇಶಗಳಲ್ಲಿನ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇತ್ತೀಚಿನ ವರದಿಗಳು ಬಂದಿವೆ.
ತೀವ್ರ ಸ್ವರೂಪ ಪಡೆದಿರುವ ಕಲಹದಲ್ಲಿ ವಿದ್ಯಾರ್ಥಿ ನಾಯಕನಿಂದ ಹಿಡಿದು ವಯಸ್ಸಾದ ಮಹಿಳೆಯವರೆಗೆ ಸಾವಿಗೀಡಾಗಿದ್ದಾರೆ. ಆದರೆ ನವೀಕರಿಸಲ್ಪಷ್ಟ ಸಾವಿನ ಸಂಖ್ಯೆಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿಲ್ಲ ಎಂದು ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.
ಭಾನುವಾರ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಬಿರೇನ್ ಸಿಂಗ್, ಪರಿಸ್ಥಿತಿಯನ್ನು ಹತೋಟಿಗೆ ತರುವ ಕಾರ್ಯಾಚರಣೆಯ ಭಾಗವಾಗಿ 40 ಭಯೋತ್ಪಾದಕರನ್ನು ಕೊಲ್ಲಲಾಗಿದೆ ಎಂದು ಹೇಳಿದ್ದರು. ಆದರೆ ಸತ್ತವರ ಗುರುತು ಮತ್ತು ಸಾವು ಸಂಭವಿಸಿದ ಸಮಯವನ್ನು ಬಹಿರಂಗಪಡಿಸಿಲ್ಲ.
ಇತ್ತೀಚಿನ ಸುತ್ತಿನ ಹಿಂಸಾಚಾರದಲ್ಲಿ ಸತ್ತವರ ಪೈಕಿ ಜೇಕಬ್ ಜಮ್ಖೋಥಾಂಗ್ ಟೌತಾಂಗ್ (37) ಎಂಬವರು ಸೇರಿದ್ದಾರೆ. ಮೇ 27 ರಂದು ಸಂಜೆ ಬಿಷ್ಣುಪುರ ಕಣಿವೆ ಜಿಲ್ಲೆಯ ಗಡಿಯಲ್ಲಿರುವ ಚವಾಂಗ್‌ಫೈ ಗ್ರಾಮದಲ್ಲಿ ಅವರನ್ನು ಕೊಲ್ಲಲಾಗಿದೆ.
ಇದನ್ನೂ ಓದಿರಿ: ಜ್ಞಾನವಾಪಿ ಮಸೀದಿ ಸಮಿತಿಯ ಅರ್ಜಿ ವಜಾ; ಅಲಹಾಬಾದ್ ಹೈಕೋರ್ಟ್ ತೀರ್ಪು
ರಾಜ್ಯದಲ್ಲಿ ಮೊದಲು ಹಿಂಸಾಚಾರ ಭುಗಿಲೆದ್ದ ನಂತರ ಗ್ರಾಮದಿಂದ ಮಹಿಳೆಯರು, ಮಕ್ಕಳು ಮತ್ತು ವೃದ್ಧರನ್ನು ಮೇ 3 ರಂದು ಸ್ಥಳಾಂತರ ಮಾಡಲಾಗಿತ್ತು. ಜೇಕಬ್ ಸಹೋದರ ಲುಂಕೋಲೆಟ್ ಪ್ರತಿಕ್ರಿಯಿಸಿ, “ಹಳ್ಳಿಯಲ್ಲಿ ಪುರುಷರು ಮಾತ್ರ ಉಳಿದಿದ್ದಾರೆ” ಎಂದಿದ್ದಾರೆ. ಜೇಕಬ್ ಅವರು ಸರ್ಕಾರಿ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮಕ್ಕಾಗಿ ಕಾಕ್ಚಿಂಗ್ ಜಿಲ್ಲೆಯಲ್ಲಿದ್ದರು, ಆದರೆ ಹಿಂಸಾಚಾರ ಭುಗಿಲೆದ್ದ ನಂತರ ಹಿಂತಿರುಗಿದ್ದರು.
“ನಮ್ಮ ಗ್ರಾಮವು ಮೈತೆಯ್ ಗ್ರಾಮದ ಪಕ್ಕದಲ್ಲಿದೆ, ಇದನ್ನು ಬಯಲು ಪ್ರದೇಶದಿಂದ ಬೇರ್ಪಡಿಸಲಾಗಿದೆ. ಮೇ 27 ರಂದು ಜೇಕಬ್ ಮತ್ತು ಅವರ ಇಬ್ಬರು ಸ್ನೇಹಿತರು ಗ್ರಾಮ ರಕ್ಷಣಾ ಸ್ವಯಂಸೇವಕರಾಗಿ ಕರ್ತವ್ಯದಲ್ಲಿದ್ದರು, ಸಂಜೆ 5 ಗಂಟೆಯ ಸುಮಾರಿಗೆ ಸ್ಫೋಟ ಸಂಭವಿಸಿದ್ದು, ಆತನ ಎದೆಗೆ ಗುಂಡು ಹಾರಿಸಲಾಗಿದೆ ಎಂದು ಆತನ ಜೊತೆಯಲ್ಲಿದ್ದ ಸ್ನೇಹಿತರು ಹೇಳಿದ್ದಾರೆ.”
ತಂಗ್ಮಿನ್ಲುನ್ ಹಾಕಿಪ್ (26) ಎಂಬವರು ಕಾಕ್ಚಿಂಗ್ ಕಣಿವೆ ಜಿಲ್ಲೆಯ ಗಡಿಗೆ ಸಮೀಪವಿರುವ ಥಿಂಗ್‌ಕಾಂಗ್‌ಫೈ ಗ್ರಾಮದಲ್ಲಿ ಸಾವಿಗೀಡಾಗಿದ್ದಾರೆ. ಅವರ ಸೋದರಸಂಬಂಧಿ ಹೊಲಾಲ್ ಹಾಕಿಪ್ ಪ್ರಕಾರ, “ತಡರಾತ್ರಿಯಲ್ಲಿ, ಸಶಸ್ತ್ರ ಹೊಂದಿದ್ದ ಜನರು ಗ್ರಾಮದ ಮೇಲೆ ದಾಳಿ ನಡೆಸಿದರು. ದಾಳಿ ನಡೆಸಿದವರು ನಾಗರಿಕರೋ, ಕಮಾಂಡೋಗಳೋ ಆಗಿರಬಹುದು” ಎಂದು ಆರೋಪಿಸಿದ್ದಾರೆ.


