ಮಣಿಪುರ ಜನಾಂಗೀಯ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ವಿಶೇಷ ತನಿಖಾ ತಂಡದ (ಎಸ್‌ಐಟಿ) ನೇತೃತ್ವ ವಹಿಸಲು ಸುಪ್ರೀಂ ನಿರ್ದೇಶನದ ಕೆಲವೇ ದಿನಗಳಲ್ಲಿ ಅಸ್ಸಾಂ-ಮೇಘಾಲಯ ಕೇಡರ್‌ನ ಐಪಿಎಸ್ ಅಧಿಕಾರಿ ಆನಂದ್ ಮಿಶ್ರಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಬಿಹಾರದಿಂದ ಸಾರ್ವತ್ರಿಕ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನೀಡುವುದಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಭರವಸೆ ನೀಡಿದ್ದರು, ಆ ಕಾರಣಕ್ಕೆ ನಾನು ರಾಜೀನಾಮೆ ನೀಡಿದ್ದೆ, ಆದರೆ ಆ ಬಳಿಕ ನನಗೆ ವಂಚಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ.
ಬಿಹಾರದ ಬಕ್ಸರ್ ಮೂಲದ ಆನಂದ್ ಮಿಶ್ರಾ ಮೇ 7ರಂದು ಸ್ವತಂತ್ರ ಅಭ್ಯರ್ಥಿಯಾಗಿ ಬಕ್ಸರ್‌ನಿಂದ ಸಂಸತ್ತಿಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದಾರೆ. ಮಣಿಪುರ ಜನಾಂಗೀಯ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ತನಿಖೆ ನಡೆಸುತ್ತಿದ್ದ ತಂಡದ ನೇತೃತ್ವವನ್ನು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಆನಂದ್ ಮಿಶ್ರಾ ಅವರಿಗೆ ವಹಿಸಿಕೊಡಲಾಗಿತ್ತು.
ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿ ಮಣಿಪುರದ ಹೊರಗಿನ ಅಧಿಕಾರಿಗಳೊಂದಿಗೆ ಎಸ್‌ಐಟಿ ತಂಡವನ್ನು ರಚಿಸುವಂತೆ ತಿಳಿಸಲಾಗಿತ್ತು ಮತ್ತು ತನಿಖೆ ಕೋರ್ಟ್ ಮೇಲ್ವಿಚಾರಣೆಯಲ್ಲಿ ನಡೆಯುತ್ತಿದೆ. ಮೇ 3, 2023 ರಿಂದ, ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ನಡೆದಿತ್ತು. ಈ ವೇಳೆ 220ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಸುಮಾರು 60,000 ಜನರು ಸ್ಥಳಾಂತರಗೊಂಡು ಈಗಲೂ ನಿರಾಶ್ರಿತರ ಶಿಬಿರಗಳಲ್ಲಿ ದಿನ ದೂಡುತ್ತಿದ್ದಾರೆ. ಮೈತೈ ಮತ್ತು ಕುಕಿ ಸಮುದಾಯಗಳ ನಡುವೆ ಭುಗಿಲೆದ್ದ ಈ ಹಿಂಸಾಚಾರ ದೇಶದ ಕಣ್ತೆರೆಯುವಂತೆ ಮಾಡಿತ್ತು. ಜನಸಮೂಹವು ಮಹಿಳೆಯರಿಬ್ಬರನ್ನು ಬೆತ್ತಲೆ ಮೆರವಣಿಗೆ ನಡೆಸಿ ಲೈಂಗಿಕ ದೌರ್ಜನ್ಯ ನಡೆಸಿದ ವಿಡಿಯೋ ವ್ಯಾಪಕ ಟೀಕೆಗೆ ಕಾರಣವಾಗಿತ್ತು. ಬಿಜೆಪಿ ಆಡಳಿತದ ಮಣಿಪುರದಲ್ಲಿನ ಕಲಹದ ಬಗ್ಗೆ ಮೌನ ಮುರಿಯಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಲಾಗಿತ್ತು. ಹಿಂಸಾಚಾರ, ಕಾನೂನು ಮತ್ತು ಸುವ್ಯವಸ್ಥೆ ಕುಸಿತದ ನಡುವೆಯೂ ಮೋದಿ ಆಡಳಿತವು ಎನ್. ಬಿರೇನ್ ಸಿಂಗ್ ಸರ್ಕಾರವನ್ನು ಸಮರ್ಥಿಸುತ್ತಲೇ ಬಂದಿತ್ತು.
ಅಸ್ಸಾಂ ಮುಖ್ಯಮಂತ್ರಿ ಶರ್ಮಾ ಬಿಜೆಪಿ ಟಿಕೆಟ್ ನೀಡುವ ಭರವಸೆ ನೀಡಿದ ಕಾರಣ ಮಣಿಪುರ ಹಿಂಸಾಚಾರದ ಎಸ್‌ಐಟಿಯ ನೇತೃತ್ವ ವಹಿಸಲು ಸೂಚಿಸಿದ ಕೆಲವೇ ದಿನಗಳಲ್ಲಿ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದೆ ಎಂದು ಐಪಿಎಸ್ ಅಧಿಕಾರಿ ಆನಂದ್ ಮಿಶ್ರಾ ಹೇಳಿಕೊಂಡಿದ್ದಾರೆ. ಡಿ.28ರಂದು ಪ್ರಕಟವಾದ ವರದಿಗಳ ಪ್ರಕಾರ, ಮಿಶ್ರಾ ಅವರು ಡಿ.18ರಂದು ತಮ್ಮ ರಾಜೀನಾಮೆಯನ್ನು ಡಿಜಿಪಿ ಮೂಲಕ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿದ್ದಾರೆ. ಈ ಬೆಳವಣಿಗೆ ಅವರನ್ನು ಮಣಿಪುರ ಹಿಂಸಾಚಾರ ಪ್ರಕರಣದ ಎಸ್‌ಐಟಿ ತನಿಖೆಯ ತಂಡದ ನೇತೃತ್ವವನ್ನು ನೀಡಿದ ಬೆನ್ನಲ್ಲಿ ನಡೆದಿತ್ತು.
ಏಪ್ರಿಲ್ 2ರಂದು ಫೇಸ್‌ಬುಕ್‌ನಲ್ಲಿ ವೀಡಿಯೊ ಹೇಳಿಕೆಯಲ್ಲಿ ಮಿಶ್ರಾ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದರು. ದೇಶದ ಹಿತಕ್ಕಾಗಿ ನನ್ನ ಅಭಿಪ್ರಾಯಗಳನ್ನು ಉತ್ತಮವಾಗಿ ಕಾರ್ಯಗತಗೊಳಿಸಲು ನಾನು ದೇಶದ ರಾಜಕೀಯ ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಯತ್ನಿಸುತ್ತಿದ್ದೆ. ನನಗೆ ಟಿಕೆಟ್ ಸಿಗದ ಕಾರಣ ಮತ್ತು ಆ ಮಾರ್ಗವು ಕಾರ್ಯರೂಪಕ್ಕೆ ಬರದ ಕಾರಣ, ನಾನು ಇದನ್ನು ಸ್ವತಂತ್ರವಾಗಿ ಮಾಡುತ್ತೇನೆ ಏಕೆಂದರೆ ದೇಶ ಮತ್ತು ಜನರಿಗಾಗಿ ಕೆಲಸ ಮಾಡುವ ಇಚ್ಛೆ ಇನ್ನೂ ಇದೆ ಎಂದು ಹೇಳಿಕೊಂಡಿದ್ದರು.
2001ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಮಿಶ್ರಾ ಮೇಘಾಲಯದಲ್ಲಿ ನಿಯೋಜಿತರಾಗಿದ್ದಾಗ ಈಶಾನ್ಯದಲ್ಲಿ ಉಗ್ರಗಾಮಿಗಳ ವಿರುದ್ಧ ಕಾರ್ಯಾಚರಣೆ ನಡೆಸಿ ಗಮನ ಸೆಳೆದಿದ್ದರು ಮತ್ತು ಪೊಲೀಸ್ ಇಲಾಖೆಯಲ್ಲಿ ತಮ್ಮದೇ ಆದ ವರ್ಚಸ್ಸನ್ನು ಹೊಂದಿದ್ದರು.
ಮೇ 18ರಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಬಿಹಾರದಲ್ಲಿ ಬಿಜೆಪಿಯ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ, ಆನಂದ್ ಮಿಶ್ರಾ ಬಿಜೆಪಿಯ ಮತಗಳನ್ನು ವಿಭಜಿಸಲು ಪ್ರತಿಪಕ್ಷ ಕಾಂಗ್ರೆಸ್ ಮತ್ತು ಆರ್‌ಜೆಡಿ ಬೆಂಬಲದಿಂದ ಬಕ್ಸರ್‌ನಿಂದ ಕಣಕ್ಕಿಳಿದಿದ್ದಾರೆ ಎಂದು ಆರೋಪಿಸಿದ್ದರು. ಹಿಮಂತ ಬಿಸ್ವಾ ಶರ್ಮಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಮಿಶ್ರಾ, ಹಿಮಂತ ಬಿಸ್ವಾ ಶರ್ಮಾ ಮತ್ತು ಬಿಜೆಪಿ ನನ್ನನ್ನು ಬಿಜೆಪಿಗೆ ಪರಿಚಯಿಸುವುದಾಗಿ ಮತ್ತು ಬಿಜೆಪಿ ಸೇರಿಸಿಕೊಂಡು ಲೋಕಸಭೆ ಚುನಾವಣೆಗೆ ಟಿಕೆಟ್ ಕೊಡುವುದಾಗಿ ಭರವಸೆ ನೀಡಿ ನನ್ನನ್ನು ಐಪಿಎಸ್ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕೇಳಿದರು. ಆದರೆ ಅಂತಿಮವಾಗಿ ಅವರು ದ್ರೋಹ ಮಾಡಿದ್ದಾರೆ, ನನ್ನನ್ನು ಅವರು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡಿಲ್ಲ, ನನಗೆ ಬಿಜೆಪಿ ಟಿಕೆಟ್ ನೀಡಿಲ್ಲ ಎಂದು ಹೇಳಿಕೊಂಡಿದ್ದಾರೆ.
ಇದನ್ನು ಓದಿ: ಲೋಕಸಭೆ ಚುನಾವಣೆ: ಹಿಂಸೆಗೆ ಪ್ರಚೋದಿಸುವ, ಮುಸ್ಲಿಮರ ವಿರುದ್ಧದ ಜಾಹೀರಾತುಗಳನ್ನು ಅನುಮೋದಿಸಿದ್ದ ಮೆಟಾ: ವರದಿ


