ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಇಂಡಿಯಾವು ಏಪ್ರಿಲ್-ಜೂನ್ ತ್ರೈಮಾಸಿಕ ಅವಧಿಯಲ್ಲಿ 249.4 ಕೋಟಿ ರೂ. ನಿವ್ವಳ ನಷ್ಟ ಉಂಟಾಗಿದೆ ಎಂದು ವರದಿ ಮಾಡಿದೆ. ಕಳೆದ 15 ವರ್ಷಗಳಲ್ಲಿ ಇದು ಮೊದಲ ತ್ರೈಮಾಸಿಕ ನಷ್ಟವಾಗಿದೆ ಎಂದು ತಿಳಿಸಿದೆ.
ಕೊರೊನಾ ಹರಡುವುದನ್ನು ತಡೆಯಲು ರಾಷ್ಟ್ರವ್ಯಾಪಿ ಲಾಕ್‌ಡೌನ್ ಹೇರಿದ ಹಿನ್ನೆಲೆಯಲ್ಲಿ ದೇಶದ ಕಾರು ಮಾರಾಟ ಕುಗ್ಗಿದೆ. ಆದ್ದರಿಂದ ಐತಿಹಾಸಿಕ ನಷ್ಟಕ್ಕೆ ಗುರಿಯಾಗಿದೆ ಎಂದು ಹೇಳಲಾಗುತ್ತಿದೆ.
ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ 1,435.5 ಕೋಟಿ ರೂ.ಗಳ ನಿವ್ವಳ ಲಾಭವನ್ನು ಗಳಿಸಿದ್ದ ಕಂಪನಿ ಈಗ ನಷ್ಟಕ್ಕೆ ಒಳಗಾಗಿದೆ. ಕಡಿಮೆ ನಿರ್ವಹಣಾ ವೆಚ್ಚಗಳು ಮತ್ತು ಹೂಡಿಕೆ ಮಾಡಿದ ಹೆಚ್ಚುವರಿ ಮೊತ್ತದ ಮೇಲಿನ ನ್ಯಾಯಯುತ ಮೌಲ್ಯದ ಲಾಭದಿಂದ ನಿವ್ವಳ ನಷ್ಟವನ್ನು ಭಾಗಶಃ ಸರಿದೂಗಿಸಲಾಗಿದೆ ಎಂದು ಹೇಳಿದೆ.
ಮಾರುತಿ ಸುಜುಕಿಯು ಏಪ್ರಿಲ್-ಜೂನ್ ಅವಧಿಯಲ್ಲಿ ಕಾರುಗಳ ಮಾರಾಟದಿಂದ 3,677.5 ಕೋಟಿ ರೂ. ವಹಿವಾಟು ನಡೆಸಿದೆ ಎನ್ನಲಾಗಿದೆ. ಇದು ಒಂದು ವರ್ಷದ ಹಿಂದಿನ ಅವಧಿಗೆ ಹೋಲಿಸಿದರೆ 80.37 ರಷ್ಟು ಕುಸಿತವಾಗಿದೆ.
ಮಾರುತಿ ಸುಜುಕಿ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಒಟ್ಟು 76,599 ವಾಹನಗಳನ್ನು ಮಾರಾಟ ಮಾಡಿದೆ. ದೇಶೀಯ ಮಾರುಕಟ್ಟೆಯಲ್ಲಿ 67,027 ವಾಹನಗಳ ಮಾರಾಟ ಮತ್ತು 9,572 ಯುನಿಟ್‌ಗಳ ರಫ್ತು ಇದರಲ್ಲಿ ಸೇರಿದೆ.
ಇದನ್ನೂ ಓದಿ: ರಫೇಲ್ ಒಂದು ಗೇಮ್ ಚೇಂಜರ್, ಚೀನಾದ ಜೆ20 ಇದಕ್ಕೆ ಸಮವಲ್ಲ: ಮಾಜಿ ವಾಯುದಳ ಮುಖ್ಯಸ್ಥ


