ಬಾಕಿ ಇರುವ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಪಿಐ(ಎಂ)-ಎಐಕೆಎಸ್ ನೇತೃತ್ವದಲ್ಲಿ ನಾಸಿಕ್‌ನಿಂದ ಮುಂಬೈಗೆ ಸಾವಿರಾರು ರೈತರು ಮತ್ತು ಬುಡಕಟ್ಟು ನಿವಾಸಿಗಳು ನಡೆಸಿದ ದೀರ್ಘ ಮೆರವಣಿಗೆ ಇಂದು ಜನವರಿ 27 ರಂದು ಮುಂಬೈನ ಮಂತ್ರಾಲಯ ತಲುಪಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಇತರ ಸಚಿವರೊಂದಿಗೆ ನಿಯೋಗ ಸಭೆ ನಡೆಸಲು ಸಜ್ಜಾಗಿದೆ. ಸಿಎಂ ಫಡ್ನವೀಸ್ ಜೊತೆಗೆ, ಸಿಪಿಐ(ಎಂ) ಪಾಲಿಟ್ ಬ್ಯೂರೋ ಸದಸ್ಯ ಡಾ. ಅಶೋಕ್ ಧ್ವಾಲೆ, ಜೆ.ಪಿ. ಗವಿತ್ (ಮಾಜಿ ಶಾಸಕ), ಡಾ. ಅಜಿತ್ ನವಲೆ, ಶಾಸಕ ವಿನೋದ್ ನಿಕೋಲ್ ಮತ್ತು ಇತರರು ಸೇರಿದಂತೆ ಇತರ ಸಂಬಂಧಿತ ಸಚಿವರೊಂದಿಗೆ ಚರ್ಚೆ ನಡೆಸಲಾಗುವುದು.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಿಪಿಐ(ಎಂ), “ರಾಜ್ಯ ಸರ್ಕಾರ ಇಂದು ಮುಂಬೈನ ಮಂತ್ರಾಲಯದಲ್ಲಿ ಮಾತುಕತೆಗಾಗಿ ಸಿಪಿಐ(ಎಂ)-ಎಐಕೆಎಸ್ ನಿಯೋಗವನ್ನು ಆಹ್ವಾನಿಸಿದೆ. ನಿಯೋಗ, ಮುಖ್ಯಮಂತ್ರಿ ಮತ್ತು ಸಂಬಂಧಪಟ್ಟ ಸಚಿವರೊಂದಿಗೆ ಚರ್ಚೆ ನಡೆಸಲಿದೆ” ಎಂದು ಹೇಳಿದೆ.
ಭೂ,ಇ ಹಕ್ಕುಗಳು ಸೇರಿದಂತೆ ಇತರ ಬೇಡಿಕೆಗಳಿಗಾಗಿ ಒತ್ತಾಯಿಸಿ ಸಾವಿರಾರು ರೈತರು ಮತ್ತು ಬುಡಕಟ್ಟು ನಿವಾಸಿಗಳು ಭಾನುವಾರ ನಾಸಿಕ್‌ನಿಂದ ಮುಂಬೈ ಕಡೆಗೆ ಮೆರವಣಿಗೆ ಆರಂಭಿಸಿದರು. ಸಿಪಿಐ(ಎಂ) ಸಂಯೋಜಿತ ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ನೇತೃತ್ವದಲ್ಲಿ ಕೆಂಪು ಧ್ವಜಗಳನ್ನು ಹಿಡಿದುಕೊಂಡ ಪ್ರತಿಭಟನಾಕಾರರು, ನಾಸಿಕ್ ಜಿಲ್ಲೆಯ ದಿಂಡೋರಿ ತಹಸಿಲ್ ಕಚೇರಿಯ ಹೊರಗೆ ನಡೆದ ಪ್ರತಿಭಟನೆಯು ಯಾವುದೇ ನಿರ್ದಿಷ್ಟ ಭರವಸೆಯನ್ನು ಪಡೆಯಲು ವಿಫಲವಾದ ನಂತರ ಭಾನುವಾರ ‘ಲಾಂಗ್ ಮಾರ್ಚ್’ ಅನ್ನು ಪ್ರಾರಂಭಿಸಿದರು.
ನಂತರ ಅವರು ಮುಂಬೈಗೆ ಕಾಲ್ನಡಿಗೆಯಲ್ಲಿ ಮೆರವಣಿಗೆ ನಡೆಸುವ ಮೂಲಕ ತಮ್ಮ ಬೇಡಿಕೆಗಳನ್ನು ನೇರವಾಗಿ ರಾಜ್ಯ ಸರ್ಕಾರಕ್ಕೆ ಕೊಂಡೊಯ್ಯಲು ನಿರ್ಧರಿಸಿದರು. ಅವರ ಪ್ರತಿಭಟನೆಯ ಅವಧಿಗೆ ಅಗತ್ಯವಿರುವ ಆಹಾರ, ಧಾನ್ಯ, ಉರುವಲು ಮತ್ತು ಇತರ ಅಗತ್ಯ ಸಾಮಗ್ರಿಗಳಿಗೆ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಪ್ರಮುಖ ಬೇಡಿಕೆಗಳೇನು?
- ಭೂಮಿ ಹಕ್ಕುಗಳಿಗಾಗಿ 7/12 ಭೂ ದಾಖಲೆಗಳಲ್ಲಿ ಹೆಸರುಗಳನ್ನು ಸೇರಿಸುವುದು
- ಅರಣ್ಯ ಹಕ್ಕುಗಳ ಕಾಯ್ದೆಯ ಅನುಷ್ಠಾನ ಮತ್ತು ವೈಯಕ್ತಿಕ/ಸಮುದಾಯ ಅರಣ್ಯ ಹಕ್ಕು ಪ್ರಮಾಣಪತ್ರಗಳ ವಿತರಣೆ
- ಬುಡಕಟ್ಟು ಪ್ರದೇಶಗಳಲ್ಲಿ ಕೃಷಿಗೆ ನೀರಾವರಿ ಸೌಲಭ್ಯಗಳು ಮತ್ತು ಸಾಲ ಮನ್ನಾ
- 200 ದಿನಗಳ ಬದಲಿಗೆ ಮನರೇಗಾ ಅಡಿಯಲ್ಲಿ 365 ದಿನಗಳ ಕೆಲಸದ ಖಾತರಿ
- ಬುಡಕಟ್ಟು ಪ್ರದೇಶಗಳಲ್ಲಿ ರಸ್ತೆಗಳು, ನೀರು, ವಿದ್ಯುತ್, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳ ಸುಧಾರಣೆ
- ಪೊಲೀಸ್ ದೌರ್ಜನ್ಯ ಮತ್ತು ಸುಳ್ಳು ಪ್ರಕರಣಗಳ ವಿರುದ್ಧ ಕ್ರಮ
- ಜಲ ಜೀವನ್ ಮಿಷನ್ ಅಡಿಯಲ್ಲಿ ದೂರದ ಹಳ್ಳಿಗಳಲ್ಲಿ ನಲ್ಲಿ ನೀರಿನ ಯೋಜನೆಗಳ ಅನುಷ್ಠಾನ.


