ಉತ್ತರ ಪ್ರದೇಶದ ಕಾಂಗ್ರೆಸ್ ಮುಖಂಡ ಜಿತಿನ್ ಪ್ರಸಾದ ಬಿಜೆಪಿ ಸೇರಿದ ಸಂದರ್ಭದಲ್ಲಿ ಉಂಟಾಗಿರುವ ಉಹಾಪೋಹಗಳಿಗೆ ರಾಜಸ್ಥಾನದ ಕಾಂಗ್ರೆಸ್ ಮುಖಂಡ ಸಚಿನ್ ಪೈಲಟ್ ತೀಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಇತ್ತೀಚೆಗೆ ಬಿಜೆಪಿ ಸೇರಿದ ಉತ್ತರಪ್ರದೇಶದ ಮಾಜಿ ಸಚಿವೆ ರೀತಾ ಬಹುಗುಣ ಜೋಶಿ “ನಾನು ಸಚಿನ್ ಜೊತೆ ಮಾತನಾಡಿದ್ದೇನೆ. ಆತನು ಸಹ ಬಿಜೆಪಿ ಸೇರಲಿದ್ದಾನೆ” ಎಂದು ಹೇಳಿಕೆ ನೀಡಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಪೈಲಟ್ “ರೀತಾ ಬಹುಗುಣ ಜೋಶಿಯವರು ಸಚಿನ್ ಬಿಜೆಪಿ ಸೇರುತ್ತಾರೆ ಎಂದು ಹೇಳಿದ್ದಾರೆ. ಬಹುಶಃ ಅವರು ಸಚಿನ್ ತೆಂಡೂಲ್ಕರ್ ಜೊತೆ ಮಾತನಾಡಿರಬಹುದು. ಏಕೆಂದರೆ ನನ್ನೊಂದಿಗೆ ಮಾತನಾಡಲು ಅವರಿಗೆ ಧೈರ್ಯವಿಲ್ಲ” ಎಂದು ಕಿಡಿಕಾರಿದ್ದಾರೆ.
ಕಳೆದ ವರ್ಷ ಮಧ್ಯಪ್ರದೇಶದ ಯುವ ನಾಯಕ ಜ್ಯೋತಿರಾಧಿತ್ಯ ಸಿಂಧಿಯಾ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿದ್ದರು. ಈ ವರ್ಷ ಜಿತಿನ್ ಪ್ರಸಾದ್ ಬಿಜೆಪಿ ಸೇರಿದ್ದರು. ಹಾಗಾಗಿ ಸಚಿನ್ ಪೈಲಟ್ ಸಹ ಬಿಜೆಪಿ ಸೇರುತ್ತಾರೆ ಎನ್ನುವ ಊಹಪೋಹಗಳು ಹರಡಿವೆ. ಈ ಹಿನ್ನೆಲೆಯಲ್ಲಿ ಅವರು ಅದನ್ನು ನಿರಾಕರಿಸಿದ್ದಾರೆ.
ಕಳೆದ ವರ್ಷ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಸಚಿನ್ ಪೈಲಟ್ ಬಂಡಾಯವೆದ್ದಿದ್ದರು. ಅವರು ಬಿಜೆಪಿ ಸೇರುತ್ತಾರೆ ಎಂಬ ಚರ್ಚೆಗಳು ಆರಂಭವಾಗಿದ್ದವು. ಆದರೆ ಅವರ ಅಸಮಾಧಾನವನ್ನು ಆಲಿಸಲು ಕಾಂಗ್ರೆಸ್ ಸಮಿತಿಯೊಂದನ್ನು ನೇಮಿಸಿತು. ನಂತರ ಸಚಿನ್ ಪೈಲಟ್ ಕಾಂಗ್ರೆಸ್‌ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಇದನ್ನು ಓದಿ: ಶರದ್ ಪವಾರ್ ಭೇಟಿಯಾದ ಪ್ರಶಾಂತ್ ಕಿಶೋರ್: 2024ರಲ್ಲಿ ಮೋದಿ ವಿರುದ್ಧ ಮೈತ್ರಿಕೂಟಕ್ಕೆ ಸಿದ್ದತೆ?


