ರಾಜ್ಯ ವನ್ಯಜೀವಿ ಬೋರ್ಡ್ ಸದಸ್ಯರೊಬ್ಬರು ವನ್ಯಜೀವಿಗಳ ಸೂಕ್ಷ್ಮ ಪ್ರದೇಶದಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಭಾರೀ ಫಾರ್ಮ್ ಹೌಸ್ ನಿರ್ಮಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಅಂತರಸಂತೆ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ, ರಾಜ್ಯ ವನ್ಯಜೀವಿ ಬೋರ್ಡ್(SBWL) ಸದಸ್ಯ ದಿನೇಶ್ ಕುಮಾರ್ ಸಿಂಘಿ ಎಂಬುವವರು ಫಾರ್ಮ್ ಹೌಸ್ ನಿರ್ಮಿಸುತ್ತಿದ್ದಾರೆ ಎನ್ನಲಾಗಿರುವ ಬಗ್ಗೆ ಉತ್ತರಿಸುವಂತೆ ಭೂಮಾಲಿಕ ಕೆ.ಎಸ್ ನರಸಿಂಹ ಮೂರ್ತಿ ಅವರಿಗೆ ಅರಣ್ಯ ಇಲಾಖೆ ನೋಟಿಸ್ ನೀಡಿದೆ.

ಎನ್ ಬೆಲತೂರ್ ಗ್ರಾಮ, ಎಚ್ ಡಿ ಕೋಟೆ ತಾಲೂಕಿನ ಸರ್ವೆ ಸಂಖ್ಯೆ 142 ಮತ್ತು 144 ರ ಕೆ ಎಸ್ ನರಸಿಂಹ ಮೂರ್ತಿ ಎಂಬವರ ಭೂಮಿಯಲ್ಲಿ ರಾಜ್ಯ ವನ್ಯಜೀವಿ ಸದಸ್ಯ ದಿನೇಶ್ ಕುಮಾರ್ ಸಿಂಘಿ ಅವರು ವಿಶಾಲವಾದ ಫಾರ್ಮ್ ಹೌಸ್ ನಿರ್ಮಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಅಲ್ಲದೇ ಅವುಗಳ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದನ್ನು ಗಮನಿಸಿ ವಲಯ ಅರಣ್ಯಾಧಿಕಾರಿ ಅವರಿಗೆ ಏಳು ದಿನದಲ್ಲಿ ಉತ್ತರಿಸುವಂತೆ ನೋಟಿಸ್ ನೀಡಿದ್ದಾರೆ.
ಈ ನಿರ್ಮಾಣ ಚಟುವಟಿಕೆ ನಡೆಯುತ್ತಿರುವ ಪ್ರದೇಶ ಪರಿಸರ ಸೂಕ್ಷ್ಮ ವಲಯ (ESZ) ಕ್ಕೆ ಸೇರಿದ್ದು, ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಅಲ್ಲಿ ಯಾವುದೇ ಚಟುವಟಿಕೆ ನಡೆಯುಂತಿಲ್ಲ. ಅಲ್ಲದೆ ಆ ಪ್ರದೇಶವು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಬಫರ್‌ಝೂನ್ ವ್ಯಾಪ್ತಿಯಲ್ಲಿದೆ, ಜೊತೆಗೆ ಅದು ಆನೆಗಳ ಆವಾಸ ಸ್ಥಾನವಾಗಿರುವುದರಿಂದ ಆನೆಗಳ ಸಂರಕ್ಷಿತ ಪ್ರದೇಶ ಕೂಡಾ ಆಗಿದೆ ಎನ್ನಲಾಗಿದೆ.
ಕಬಿನಿ ಹಿನ್ನೀರಿನ ಈ ಪ್ರದೇಶದಲ್ಲಿ ನೀರು ನಾಯಿಗಳು ಮರಿ ಹಾಕಿ ಸಲಹುವ ರೀಡ್‌ಗಳನ್ನು ನಾಶಪಡಿಸಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಪ್ರದೇಶದಲ್ಲಿ ಯಾವುದೇ ಹೊಸ ನಿರ್ಮಾಣ ಕಾರ್ಯಗಳನ್ನು ನಡೆಸುವ ಮೊದಲು ಅರಣ್ಯ ಅಧಿಕಾರಿಯಿಂದ ಅನುಮತಿ ಪಡೆಯಬೇಕಾಗುತ್ತದೆ. ದಿನೇಶ್ ಕುಮಾರ್ ಆಗಲಿ ಭೂಮಿ ಮಾಲೀಕರಾಗಲಿ ಅಂತಹ ಅನುಮತಿ ಪಡೆದಿಲ್ಲ.

ಇದೆಲ್ಲವನ್ನೂ ಮೀರಿ ಸ್ವತಃ ರಾಜ್ಯ ವನ್ಯ ಜೀವಿ ಬೋರ್ಡ್ ಇದರ ಸದಸ್ಯರಾದ ದಿನೇಶ್ ಕುಮಾರ್ ಸಿಂಘಿ ನಿರ್ಮಾಣ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಮಾತನಾಡಿದ ಹಿರಿಯ ಪತ್ರಕರ್ತ ಹಾಗೂ ಮಾಜಿ ವನ್ಯಜೀವಿ ಬೋರ್ಡ್ ಸದಸ್ಯರಾದ ಜೋಸೆಫ್ ಹೂವರ್, “ದಿನೇಶ್ ಕುಮಾರ್ ಸಿಂಘಿ ಅವರು ಗಣಿ ಉದ್ಯಮಿಯಾಗಿದ್ದು, ಗಣಿ ಉದ್ಯಮಿಗಳು ವನ್ಯಜೀವಿ ಬೋರ್ಡ್‌ನಲ್ಲಿ ಇರಬಾರದೆಂದು ನಿಯಮವಿದೆ. ಸುಪ್ರೀಂ ಆದೇಶವನ್ನು ಮೀರಿ ಅಲ್ಲಿ ಫಾರ್ಮ್ ನಿರ್ಮಾಣ ಚಟುವಟಿಕೆ ನಡೆಯುತ್ತಿದೆ. ಅಧಿಕಾರ, ಹಣವಿದೆಯೆಂದು ಸ್ಥಳೀಯ ಅರಣ್ಯ ಅಧಿಕಾರಿಯ ನಿರಪೇಕ್ಷಣ ದೃಡೀಕರಣ ಪತ್ರ ಪಡೆಯದೆ ನಿರ್ಮಾಣ ಕಾರ್ಯನಡೆಯುತ್ತಿದೆ. ಇದನ್ನು ವನ್ಯಜೀವಿಗಳ ಹಿತದೃಷ್ಟಿಯಿಂದ ತಡೆಯಬೇಕು” ಎಂದು ಹೇಳಿದ್ದಾರೆ.
ಓದಿ: ಬಡವನ ಮನೆ ಕಿತ್ತೆಸೆದ ಅರಣ್ಯ ಅಧಿಕಾರಿಗಳು: ಸ್ವೀಕರ್ ಕಾಗೇರಿ ಕ್ಷೇತ್ರದಲ್ಲೊಂದು ಅಮಾನವೀಯ ಘಟನೆ


