ಅವತ್ತು ನಮ್ಮ ಸ್ಕೂಲಿನ ವಾರ್ಷಿಕ ಕ್ರೀಡಾ ದಿನ. ನಾನು ಅಪ್ಪ ಅಮ್ಮ ಇಬ್ಬರನ್ನೂ ಬರಲು ಹೇಳಿದ್ದೆ. ಯಾಕಂದ್ರೆ, ನಾನು preliminary ರನ್ನಿಂಗ್ ರೇಸ್‌ಗಳಲ್ಲಿ ಚೆನ್ನಾಗಿ ಓಡಿದ್ದೆ. ನಾನು ನಿಜವಾಗಲೂ ಫೈನಲ್‌ನಲ್ಲಿ ಗೆಲ್ಲುತ್ತೇನೆ ಅಂದುಕೊಂಡಿದ್ದೆ. ನನ್ನ seಟಜಿ ಹೊಗಳಿಕೆ ಕೇಳಿದ ಅಪ್ಪ, ಅಮ್ಮ ನನ್ನನ್ನು ನಂಬಿ, ಮೆಡಲ್ ಗೆಲ್ಲುವುದನ್ನು ನೋಡಲು ರೆಡಿಯಾಗಿ ಬಂದಿದ್ದರು.
ಆದರೆ ರೇಸ್ ಓಡುವಾಗ ಎಡವಿಬಿದ್ದೆ. ಮತ್ತೆ ಏಳುವಷ್ಟರಲ್ಲಿ ರೇಸ್ ಮುಗಿದುಹೋಗಿತ್ತು. ಅಷ್ಟೆಲ್ಲಾ ಕೊಚ್ಚಿಕೊಂಡ ನನಗೆ ಎಷ್ಟು ಅವಮಾನ ಆಗಿತ್ತೆಂದರೆ, ಅದನ್ನು ಮುಚ್ಚಿಕೊಳ್ಳಲು ಮನೆಗೆ ಹೋಗುತ್ತಿದ್ದಾಗ ಅಮ್ಮ ನನಗೆ ಸಮಾಧಾನ ಮಾಡಲು ಪ್ರಯತ್ನಿಸಿದರು. ಅಪ್ಪ ಏನೂ ಹೇಳಲಿಲ್ಲ, ಸಂಜೆ ಹೊತ್ತಿಗೆ ಅಪ್ಪ ಹೊರಗೆ ಹೋಗಿ ನನಗೆ ಒಂದು ಸಣ್ಣ ಕತೆಗಳ ಪುಸ್ತಕ ತಂದು “ನೀನು ಬಿದ್ದು ಗೆಲ್ಲದಿದ್ದರೆ ಏನಾಯಿತು, ಪ್ರೈಜ್ ಬರದಿದ್ದರೆ ಏನಾಯಿತು, ನಿನ್ನ ಪ್ರಯತ್ನಕ್ಕೆ ನನ್ನಿಂದ ನಿನಗೆ ಒಂದು ಮೆಡಲ್ ಎಂದು ಕೊಟ್ಟರು.
ಆಗ ನನಗೆ ಹತ್ತು ವರ್ಷ. ಅದು ನನ್ನ ಮೊದಲ ಕತೆ ಪುಸ್ತಕ. ಆದರೆ ಆಗಲೇ ನನಗೆ ಕತೆಗಳ ಹುಚ್ಚು ಹಿಡಿದಿತ್ತು. ಪ್ರತಿರಾತ್ರಿ ಮಲಗುವುದಕ್ಕೆ ಮೊದಲು ’ಅಪ್ಪ ಕತೆ ಹೇಳು’ ಅಂತ ಪೀಡಿಸ್ತಿದ್ದೆ. ಅಪ್ಪ ಹೇಳುತ್ತಿದ್ದ ಈಸೋಪನ ಕತೆಗಳು ನೆನಪಿದೆ. ಅದರಲ್ಲೆಲ್ಲಾ ನನಗೆ ಬಹಳ ಇಷ್ಟವಾದದ್ದು ’ಸಿಂಹ ಮತ್ತು ಇಲಿ’ಯ ಕತೆ. ಅವತ್ತಿನಿಂದ ಇವತ್ತಿನವರೆಗೆ ಅಪ್ಪನನ್ನು ಪುಸ್ತಕಗಳಿಗಾಗಿ ಕಾಡುತ್ತಲೇ ಇದ್ದೀನಿ – ಕಾಲೇಜಿನಲ್ಲಿದ್ದಾಗ ಪ್ರೀಮಿಯರ್ ಬುಕ್‌ಶಾಪ್‌ಗೆ ಬ್ಲಾಂಕ್‌ಚೆಕ್ ಇಸ್ಕೊಳ್ಳುವುದರಿಂದ ಹಿಡಿದು ಇವತ್ತು ಅವರ ಶೆಲ್ಫ್‌ಗಳಲ್ಲಿ ಇರುವ ಪುಸ್ತಕಗಳನ್ನು ಕದಿಯುವುದರವರೆಗೆ.
ನಾನು ಚಿಕ್ಕವಳಾಗಿದ್ದಾಗ ಅಪ್ಪನನ್ನು ‘owl’ ಎಂದು ಕರೆಯುತ್ತಿದ್ದೆ. ಯಾಕೆಂದ್ರೆ ನಾವೆಲ್ಲಾ ಮಲಗಿದರೂ, ಅವರು ರಾತ್ರಿಯೆಲ್ಲಾ ಓದುತ್ತ ಅಥವಾ ಬರೆಯುತ್ತ ಕೂತಿರುತ್ತಿದ್ದರು.

ನಾನು ಸ್ವಲ್ಪ ದೊಡ್ಡವಳಾದ ಮೇಲೆ ಅಮ್ಮ ನಮ್ಮಿಬ್ಬರನ್ನು ‘owls’ ಎಂದು ಕರೆಯತೊಡಗಿದರು. ನಮ್ಮಿಬ್ಬರ ಪ್ರತಿರಾತ್ರಿಯ ಪುಸ್ತಕಗಳ ಬೇಟೆ ನೋಡಿ ಬೇಸತ್ತ ಅಮ್ಮ ನಮ್ಮಿಬ್ಬರನ್ನೂ ಒಂದು ಕೋಣೆಗೆ ತೊಲಗಿಸಿ ’ಅಪ್ಪ ಮಗಳು ಎಷ್ಟು ಹೊತ್ತು ಬೇಕಾದರೂ ಓದಿಕೊಳ್ಳಿ’ ಅಂದರು. ಇಬ್ಬರಿಗೂ ಖುಷಿಯೋ ಖುಷಿ. But unfortunately this amicable relationship of sharing a bed room with my father did not last too long. ಒಂದು ವಿಚಿತ್ರವೆಂದರೆ, ಅಪ್ಪನಿಗೆ ನಾನು ಯಾವ ಕತೆ ಪುಸ್ತಕ ಓದುತ್ತಿದ್ದೆ ಅನ್ನುವ ಬಗ್ಗೆ ಕಾಳಜಿ ಇತ್ತೇ ಹೊರತು ನಾನು ಸ್ಕೂಲಿನಲ್ಲಿ ಯಾವ ಕ್ಲಾಸ್‌ನಲ್ಲಿದ್ದ ಎನ್ನುವ ಬಗ್ಗೆ ಏನೂ ಗೊತ್ತಿರಲಿಲ್ಲ. ಯಾರಾದರೂ ನಾನು ಯಾವ ಕ್ಲಾಸ್‌ನಲ್ಲಿ ಓದುತ್ತಿದ್ದೀನಿ ಅಂತ ಕೇಳಿದರೆ ತಕ್ಷಣ ಅಪ್ಪ “ಏ…. ಯಾವ ಕ್ಲಾಸೋ ನೀನು” ಅಂತ ನನ್ನನ್ನೇ ಕೇಳಿದ್ದರು.
ನಮಗೆ – ಅಂದರೆ ನನ್ನ ತಂಗಿ ಮತ್ತು ತಮ್ಮ ಸೇರಿಸಿ- ನಮ್ಮ ತಂದೆ, ಬೇರೆಯವರ ತಂದೆಯ ಹಾಗಲ್ಲ ಅಂತ ಗೊತ್ತಿತ್ತು. ಅವರು ಯಾವತ್ತೂ ನಾವು ಪರೀಕ್ಷೆಯಲ್ಲಿ ಎಷ್ಟು ಮಾರ್ಕ್ಸ್ ತಗೋತಿದ್ದೀವಿ ಅನ್ನುವ ಬಗ್ಗೆ ತಲೆ ಕೆಡಿಸಿಕೊಂಡವರಲ್ಲ. ನಮ್ಮ ಬಡಕಲ ದೇಹದ ಮೇಲೆ ಸ್ವಲ್ಪವಾದರೂ ಚರ್ಬಿ ಬರಲಿ ಅಂತ ಅಮ್ಮ “ಸರಿಯಾಗಿ ಊಟ ಮಾಡ್ರೋ” ಅಂತ ನಮ್ಮನ್ನು ಪೀಡಿಸಿದ್ರೆ ಅಪ್ಪ ಅಮ್ಮನನ್ನು ಬಯ್ದು ’”ಯಾಕೆ ಅವನ್ನ ಕಾಡ್ತಿಯಾ, ಮೂರು ದಿನ ಊಟ ಇಲ್ಲದೇ ಇದ್ದರೆ ಅವರಾಗಿ ಮತ್ತೆ ಊಟ ಮಾಡ್ತಾರೆ” ಅನ್ನುತ್ತಿದ್ದರು.
ಆದರೆ ಅಪ್ಪ ಯಾವತ್ತಿಗೂ indifferent ಆಗಿರಲಿಲ್ಲ. He was far from that. ನಾವೆಲ್ಲ ನಮ್ಮ ಪಾಡಿಗೆ ಬೆಳೆಯಬೇಕು. ಜೀವನದ ಸುಖ ಪಡೆಯುವ ಜೊತೆಗೆ ಅದರ ನೋವುಗಳನ್ನು ಅನುಭವಿಸಬೇಕು ಅನ್ನುವುದು ಅವರ ಅಭಿಪ್ರಾಯವಾಗಿತ್ತು ಅನ್ನಿಸುತ್ತೆ. ಇವತ್ತು ನಾವೆಲ್ಲ ದೊಡ್ಡವರಾಗಿದ್ದೇವೆ. ಹಲವು ಬಾರಿ ಎಡವಿದ್ದೇವೆ, ಕಲಿತಿದ್ದೇವೆ. ಆದರೆ, I think to an extent, we have become what appa wanted us to be: good individuals, ಅದಕ್ಕಿಂತ ಹೆಚ್ಚಾಗಿ ಒಳ್ಳೆಯ ಮನುಷ್ಯರಾಗಲು ಯತ್ನಿಸಿದ್ದೇವೆ.
ಆದರೆ ಇನ್ನೊಂದು ವಿಧದಲ್ಲಿ appa is not different at home than outside. ಇವತ್ತು ಅವರಿಗೆ oil pulling ಬಗ್ಗೆ ಆಸಕ್ತಿ ಬಂತೆಂದರೆ ಮನೆಯಲ್ಲೂ ಅಮ್ಮನಿಗೆ “ನೀನೂ ಮಾಡು” ಅನ್ನುತ್ತಾರೆ. ಆಫೀಸಿನಲ್ಲಿ ಎಲ್ಲರ ಮೇಲೆ ಗುರುಗುಟ್ಟುವ ಹಾಗೆ ಮನೆಯಲ್ಲೂ ಅದೇ. ಮೂಡ್ ಚೆನ್ನಾಗಿದ್ದರೆ ’ಮಿಯಾಂವ್’ ಎಂದು ನಗುತ್ತಾರೆ. ಇಲ್ಲದಿದ್ದರೆ ಸಿಡುಕು ಮೋರೆ, ಅವರ ಮೂಡ್ ನೋಡಿಕೊಂಡು ಮಾತಾಡಬೇಕು. ಚೆನ್ನಾಗಿದ್ದರೆ ಎಲ್ಲಾ applicatione sanction ಆಗುತ್ತೆ. ಇಲ್ಲ ಅಂದರೆ ಇನ್ನೊಂದು ದಿನಕ್ಕೆ ಕಾಯಬೇಕು, ಆದರೆ ನನಗೆ ಮಾತ್ರ ಎಂದಿಗೂ ಪುಸ್ತಕಗಳ ಮತ್ತು ಖಾದಿ ಬಟ್ಟೆಗಳ demands ತಕ್ಷಣ sanction ಆಗುತ್ತೆ.
ತಮಾಷೆ ಅಂದರೆ, ಎಲ್ಲರೂ ತಿಳಿದಿದ್ದಾರೆ ಅಪ್ಪ ಯಾವುದಕ್ಕೂ ಹೆದರುವುದಿಲ್ಲ ಅಂತ. ಆದರೆ ಅಪ್ಪ ಹೆದರುತ್ತಾರೆ! ಯಾವ ಮಹಾ ಕಾರ್ಯಕ್ಕೂ ಅಲ್ಲ, ಬರಿ ಲೈಟ್ ಬಲ್ಬ್ ಬದಲಾಯಿಸಕ್ಕೆ! ಅವರಿಗೆ ಎಲೆಕ್ಟ್ರಿಸಿಟಿ ಕಂಡರೆ ಎಷ್ಟು ಸಂಶಯ ಅಂದರೆ ಇಲ್ಲಿಯವರೆಗೆ ಅವರು ಒಂದೇ ಒಂದು ಲೈಟ್ ಬಲ್ಬ್ ಬದಲಾಯಿಸಿದವರಲ್ಲ. ಅಪ್ಪನಿಗೆ ಇವತ್ತಿನ technological developments ಬಗ್ಗೆ ಬಹಳ ಗೊತ್ತಿದ್ದರೂ, ಅದರ ವಿವರಗಳ ಬಗ್ಗೆ patience ಇಲ್ಲ. ಅಂದರೆ ಅವರಿಗೆ ಟಿ.ವಿ. ನೋಡಬೇಕಾದರೆ ನಾವು ಯಾರಾದರೂ ಅಥವಾ ಮನೆ ಕೆಲಸದ ಹುಡುಗಿ ಟಿವಿ ಆನ್ ಮಾಡಿ channel ಸೆಟ್ ಮಾಡಿಕೊಡಬೇಕು. ರಿಮೋಟ್ ಕಂಟ್ರೋಲ್‌ನಲ್ಲಿ offಬಟನ್ ಒತ್ತುವುದು ಬಿಟ್ಟರೆ ಆ ಬಗ್ಗೆ ಬೇರೆ ಏನೂ ಗೊತ್ತಿಲ್ಲ.
ನನ್ನ ಮತ್ತು ಅಪ್ಪನ ಸಂಪರ್ಕ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಅಥವಾ ಇಸಾಬೆಲ್ಲಾ ಆಯಂಡೆ ಬರಹಗಳ ಮೂಲಕ. ಆದರೆ ನನ್ನ ತಂಗಿ ಕವಿತಾ ಮತ್ತು ಅಪ್ಪನ ನಡುವ ಎಲ್ಲ ತರದ witty exchange ಆಗಿರುತ್ತೆ. Almost evcryday ಅವಳು ನನ್ನ ಆಫೀಸಿಗೆ ಫೋನ್ ಮಾಡಿ “ಅಪ್ಪ ಒಂದು ಡೈಲಾಗ್ ಹೊಡೀತು ಇವತ್ತು” ಅಂತ ಪೂರ್ತಿ ಕತೆ ಹೇಳ್ತಾಳೆ. They share an incredible sense of humour and wit.
ಇವತ್ತಿನ ಸಂಚಿಕೆ ಹೀಗಿದೆ: ನನ್ನ ತಂಗಿ ಸ್ವಲ್ಪ ದಿನದ ಹಿಂದೆ ಮದುವೆಯಾದಳು. ಅಪ್ಪ ಕೇಳಿದರಂತೆ “ಏನು ಹೊಟ್ಟೆ ಬಂದಿಲ್ಲ ಇನ್ನೂ?”, ಅದಕ್ಕೆ ತಕ್ಷಣ ಅವಳು “ಯಾಕೆ ತಾತ ಆಗೋಕೆ ಆಸೇನಾ?” ಅಂದಳಂತೆ. ಅಪ್ಪ ತಕ್ಷಣ ಸುಮ್ಮನಾದರಂತೆ. Perhaps because he believes that “children should be seen, not heard!” ನಮ್ಮ ಮೂವರ ಸತತ ಅಳುವನ್ನು ತಾಳ್ಮೆಯಿಂದ ಕೇಳಿದ ಅವರು ಮತ್ತೊಂದು sensationನ ಅಳು ಕೇಳಲು ಸಿದ್ಧರಾಗಿಲ್ಲ ಅನ್ನಿಸುತ್ತೆ
ನನ್ನ ತಮ್ಮ ಇಂದ್ರಜಿತ್, ಈಚೆಗೆ ಎಲ್ಲ ಹುಡುಗರ ತರಹ ತನ್ನ Appearanceನಲ್ಲಿ ಬದಲಾವಣೆ ಬಯಸಿದ. ಆದರೆ ಹುಡುಗನಾದ್ದರಿಂದ ಕುಂಬ ಪ್ರಭೋಗ ಮಾಡಕ್ಕಾಗಲ್ಲ. After all ಎಷ್ಟು ತರಹ hair – Cut ಮಾಡಿಸಿ ಕೋಬಹುದು? ಹಿಂದಿನ ತಿಂಗಳು ಅಜಿತ್ ಫ್ರೆಂಚ್ ಗಡ್ಡ ಬೆಳೆಸಿಕೊಂಡಾಗ ಅಪ್ಪ “You are looking like a poorman’s Agassi” ಅಂದರು.
ಅಪ್ಪ ಮತ್ತು ಅಜಿತು ಸಂಬಂಧಕ್ಕೆ sports ತಳಹದಿ. ಸಂಜೆ ಶುರುವಾಗುವ ವಿಂಬಲ್ಡನ್ ನಿಂದ ಮಧ್ಯರಾತ್ರಿ ಆರಂಭವಾಗುವ ಅಮರಿಕನ್ ಓಪನ್ ಮ್ಯಾಚ್‌ವರೆಗೆ ಒಟ್ಟಿಗೇ ನೋಡಿ ಪರಸ್ಪರರ ಅಭಿಪ್ರಾಯಗಳನ್ನು ಟೀಕಿಸ್ತಿರ್‍ತಾರೆ. ಕ್ರಿಕೆಟ್ ಸೀಸನ್ ಬಂದರಂತೂ ಇಬ್ಬರನ್ನೂ ನಿಲ್ಲಿಸಕ್ಕೆ ಆಗುವುದಿಲ್ಲ. ಇಡೀ ರಾತ್ರಿ ಒಟ್ಟಗೇ ಮ್ಯಾಚ್ ನೋಡ್ತಿದ್ದಾರೆ.
ಅಜಿತು ಮನೆಯಲ್ಲಿ ಕಿರಿಯವನಾದುದರಿಂದ ನಮಗೆಲ್ಲ ಅವನ ಮೇಲೆ ಪ್ರೀತಿ ಜಾಸ್ತಿ. ಅವನಿಗೆ ಆಕ್ಸಿಡೆಂಟ್ ಆಗಿದ್ದಾಗ ಅಪ್ಪ ಬರೆದ ಟೀಕೆಟಿಪ್ಪಣಿ ’ರಾಮು ಎಂಬ ಹುಡುಗ’ ಎಲ್ಲರಿಗೂ ನೆನಪಿದೆ. ಅಜಿತು ಅಪ್ಪನ arroganceನ ಪಡೆದುಕೊಂಡಿದ್ದಾನೆ. ಹಾಗೆಯೇ ಅವನ ಮಾನವೀಯ ಸಂಬಂಧಗಳ ಪ್ರಜ್ಞೆ ಮತ್ತು logical ಧೋರಣೆ ಕೂಡ ಅಪ್ಪನಿಂದ ಬಂದಿದ್ದು. ಅವನು ಅಪ್ಪನ ತರಹ ಬಹಳ ಓದಿದವನಲ್ಲ. ಆದರೆ ಅವನಿಗೆ ಅಪ್ಪನ logical ಮನೋಧರ್ಮ ಮತ್ತು ಮೆಚ್ಯುರಿಟಿ ಇದೆ.
ಒಂದು ರೀತಿಯಲ್ಲಿ ನೋಡಿದರ ನಾವ್ಯಾರೂ ಅಪ್ಪನ ತರಹ ಇಲ್ಲ. ಅವರ ಬೇರೆ ಬೇರೆ characteristics ಹೊಂದಿದ್ದೇವೆ. ಆದರೆ ಅಪ್ಪನ character ಮೂರು ಮುಖಗಳಿಗಿಂತ ಬಹಳಷ್ಟು ಹೆಚ್ಚಿದೆ ಅಂತ ಎಲ್ಲರಿಗಿಂತ ನಾವು ಹೆಚ್ಚು ತೀಕ್ಷ್ಣವಾಗಿ ತಿಳಿದುಕೊಂಡಿದ್ದೇವೆ.

ನಮ್ಮ ಅಮ್ಮ, ನಮ್ಮ ಅಜ್ಜಿಯ ಥರ, ಕರಡಿಯ ಹಾಗೆ. ಬಹುಶಃ ಸ್ವಲ್ಪಮಟ್ಟಿಗೆ ಆಧುನಿಕ ಕರಡಿ ಎನ್ನಬೇಕು. ಎಷ್ಟೊಂದು ಸಲ, ಎಷ್ಟೊಂದು ತರಹ, ಅಪ್ಪನನ್ನು ಮತ್ತು ನಾವು ಮೂವರನ್ನು protect ಮಾಡಿದ್ದಾರೆ, ಬೆಳೆಸಿದ್ದಾರೆ, ಪ್ರೋತ್ಸಾಹಿಸಿದ್ದಾರೆ, ಆಶ್ರಯ ಕೊಟ್ಟಿದ್ದಾರೆ. She has always been there for all of us.
ಬಹಳಷ್ಟು ಅಪ್ಪನ ಸ್ನೇಹಿತರು, ಅಭಿಮಾನಿಗಳು ಅಮ್ಮನನ್ನು ನೋಡೇ ಇಲ್ಲ. ಇದಕ್ಕೆ ಅನೇಕ ಕಾರಣಗಳಿವೆ. ಒಂದು, ಅಮ್ಮ is a very shy person. ಎರಡನೆಯದಾಗಿ She is a success in her own right. ಬರಹಗಾರ್ತಿಯಾಗಿ ಅಲ್ಲ, ಅಥವಾ ಬೌದ್ಧಿಕ ನೆಲೆಯಲ್ಲಿ ಅಲ್ಲ. ಆದರೆ ಒಬ್ಬಳು ಅರ್ಥಮಾಡಿಕೊಳ್ಳುವ ಹೆಂಡತಿಯಾಗಿ, ಅದ್ಭುತ ತಾಯಿಯಾಗಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಯಶಸ್ವಿ business woman ಆಗಿ.
ಅಪ್ಪ ಮತ್ತು ಅಮ್ಮನ ಜಗಳ ಹಾಗೂ ಪ್ರೇಮ ಎರಡೂ unusual ಆದದ್ದು. ಅಪ್ಪನ intellectual ಜಗತ್ತು ಅಮ್ಮನಿಗೆ ಅರ್ಥ ಆಗದೇ ಇರಬಹುದು, ಅಮ್ಮನ ದಿನನಿತ್ಯ ಜೀವನದ ಗೋಳಿನ ಬಗ್ಗೆ ಅಪ್ಪನಿಗೆ ತಾಳ್ಮೆ ಇಲ್ಲದಿರಬಹುದು. ಆದರೆ ಅಮ್ಮನ ಪ್ರತಿದಿನದ ಚಿಂತೆ ಅಪ್ಪನ ರಾಗಿಮುದ್ದೆ ಬಿಸಿ ಇದೆಯೇ ಎಂದು. ಹಾಗೆಯೇ ಅಪ್ಪನ ಯೋಚನೆ ಅಮ್ಮನ ಆರೋಗ್ಯ ಸರಿಯಾಗಿದೆಯೇ ಎಂದು. ಇತ್ತೀಚೆಗೆ ಅಪ್ಪ ಆಯಿಲ್ ಪುಲ್ಲಿಂಗ್ ಬಗ್ಗೆ ಬಹಳ ಆಸಕ್ತಿ ವಹಿಸಿರೋದರಿಂದ ಅವರ ದಿನನಿತ್ಯದ ಪ್ರಶ್ನೆ “ಆಯಿಲ್ ಪುಲ್ಲಿಂಗ್ ಮಾಡಿದೆಯೇನೇ? ಎಲ್ಲಾ ಸರಿ ಇದೆಯಾ?” ಅಂತ. ಇಬ್ಬರಿಗೂ ಬಿ.ಪಿ ಇರೋದರಿಂದ ಅಪ್ಪನ ಎಲ್ಲ ಡಯಟ್ ಪ್ರಯೋಗಗಳು ಅಮ್ಮನ ಮೇಲೆ.
ಇವೆಲ್ಲಾ ಸಣ್ಣ ವಿಷಯಗಳು. ನನ್ನ ಮಟ್ಟಿಗೆ ಅವರಿಬ್ಬರ ಸಂಬಂಧದ ವಿಶೇಷ ಏನೆಂದರೆ, ಅವರಲ್ಲಿ ಪರಸ್ಪರರ ಬಗ್ಗೆ ಇರುವ ಗೌರವ. ಅಪ್ಪ ಅಮ್ಮ ಇಬ್ಬರೂ have given each other space to develop as individuals. ಅವರ ಮೂವರು ಮಕ್ಕಳಾದ ನಮಗೂ ಅದೇ space to developನ ಕೊಟ್ಟಿದ್ದಾರೆ.
ಅಂದಹಾಗೆ ಹೇಳಕ್ಕೆ ಮರೆತೇ ಹೋಗಿದ್ದೆ. ನಮ್ಮ ಅಮ್ಮನ ಹೆಸರು ಇಂದಿರಾ, ಅಪ್ಪನ ಹೆಸರು
ಲಂಕೇಶ್.
(ಈ ಬರಹವನ್ನು ಗಂಗಾಧರ ಕುಷ್ಟಗಿ ಅವರು ಸಂಪಾದಿಸಿರುವ ’ತಲೆಮಾರಿನ ತಳಮಳ’ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ. )



?????